ಮಡಿಕೇರಿ | ತಲ್ತರೆಶೆಟ್ಟಳ್ಳಿಯ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ: ಆರೋಪ

Update: 2022-08-17 15:05 GMT

ಮಡಿಕೇರಿ ಆ.17: ತಲ್ತರೆಶೆಟ್ಟಳ್ಳಿ ಗ್ರಾಮದ ಅಭಿವೃದ್ಧಿ ಸಮಿತಿಯೊಂದರ ಸೂಚನೆಯಂತೆ ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರವನ್ನು ಹಾಕಲಾಗಿದ್ದು, ನಾವು ಮಾನಸಿಕವಾಗಿ ತುಂಬಾ ನೊಂದಿದ್ದೇವೆ ಎಂದು ಆರೋಪಿಸಿರುವ ಸೋಮವಾರಪೇಟೆ ತಾಲೂಕಿನ ತಲ್ತರೆಶೆಟ್ಟಳ್ಳಿ ಗ್ರಾಮದ ಅಬ್ಬಿಮಠ ಬಾಚಳ್ಳಿಯ ಎಸ್.ಬಿ.ಶಾಂತಪ್ಪ, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  2018 ರಲ್ಲಿ ಕ್ಷುಲ್ಲಕ ಕಾರಣ ನೀಡಿ ಎಲ್ಲಾ ವಿಧದಲ್ಲೂ ನಮಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ನಮ್ಮ ಮನೆಗೆ ಯಾರೂ ಬರುವಂತ್ತಿಲ್ಲ ಮತ್ತು ನಾವು ಯಾರ ಮನೆಗೂ ಹೋಗುವಂತ್ತಿಲ್ಲ ಎನ್ನುವ ಅಪ್ಪಣೆ ಮಾಡಲಾಗಿದೆ. ಈ ಕಾರಣದಿಂದ ನಮ್ಮ ಮನೆಗೆ ಯಾರೂ ಬರುತ್ತಿಲ್ಲ, ನಾವು ಬೇರೆಯವರ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ನಾನು ಒಬ್ಬ ಕೃಷಿಕನಾಗಿದ್ದು, ನಮ್ಮ ಜಮೀನಿಗೆ ಕೃಷಿ ಕೆಲಸಕ್ಕೆ ಬರಲು ಯಾರನ್ನೂ ಬಿಡುತ್ತಿಲ್ಲ ಎಂದು ಆರೋಪಿಸಿದರು. 

ಇತ್ತೀಚೆಗೆ ನಮ್ಮ ಹೊಸ ಮನೆಯ ಗೃಹ ಪ್ರವೇಶವಾಗಿದ್ದು, ಈ ಕಾರ್ಯಕ್ರಮಕ್ಕೆ ಊರಿನವರನ್ನು ಆಹ್ವಾನಿಸಿದ್ದೆ. ಆದರೆ ಸಾಮಾಜಿಕ ಬಹಿಷ್ಕಾರದ ಹಿನ್ನೆಲೆ 10 ಮಂದಿ ಬಿಟ್ಟರೆ ಉಳಿದವರು ಯಾರೂ ಗೃಹ ಪ್ರವೇಶಕ್ಕೆ ಬಂದಿರುವುದಿಲ್ಲ. ಗೃಹ ಪ್ರವೇಶಕ್ಕೆ ಬಂದ 10 ಮಂದಿಯಲ್ಲಿ 3 ಮಂದಿಗೆ ತಲಾ 5 ಸಾವಿರ ದಂಡ ವಿಧಿಸಲಾಗಿದೆ. ಈ ಬೆಳವಣಿಗೆ ನಮ್ಮನ್ನು ಮಾನಸಿಕವಾಗಿ ಕುಗ್ಗಿಸಿದೆ, ಅಲ್ಲದೆ ನಮ್ಮಲ್ಲಿ ಭೀತಿಯನ್ನು ಮೂಡಿಸಿದೆ. ನಮ್ಮ ಪುತ್ರ ಬೆಳಗಾವಿಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ದೇಶ ರಕ್ಷಕನ ತಂದೆ, ತಾಯಿಗಳಾದ ನಮಗೆ ರಕ್ಷಣೆ ಇಲ್ಲದಾಗಿದೆ. ಕಳೆದ 4 ವರ್ಷಗಳಿಂದ ನಾವು ಮಾನಸಿಕವಾಗಿ ತೀವ್ರ ನೊಂದಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರಪೇಟೆ ತಹಶೀಲ್ದಾರ್ ಹಾಗೂ ಪೊಲೀಸರಿಗೆ ಹಲವು ಬಾರಿ ದೂರು ನೀಡಲಾಗಿದೆ. ಆದರೆ ಇಲ್ಲಿಯವರೆಗೆ ನಮಗೆ ನ್ಯಾಯ ಸಿಗಲಿಲ್ಲ. ನಮಗೆ ಹಾಕಿರುವ ಸಾಮಾಜಿಕ ಬಹಿಷ್ಕಾರ ಮುಂದುವರೆದಿದೆ. ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೆ ಸೋಮವಾರಪೇಟೆ ಪೊಲೀಸರಿಗೆ ವರ್ಗಾಯಿಸಿ ಇತ್ಯರ್ಥ ಪಡಿಸುವಂತೆ ಸೂಚಿಸುತ್ತಾರೆ. ಆದರೆ ಪೊಲೀಸರಿಂದ ನ್ಯಾಯ ದೊರೆತ್ತಿಲ್ಲ ಎಂದು ಶಾಂತಪ್ಪ ಆರೋಪಿಸಿದರು.

ನಮ್ಮ ಮೇಲಿನ ಬಹಿಷ್ಕಾರವನ್ನು ತೆರವುಗೊಳಿಸಿ ಮುಂದಿನ ದಿನಗಳಲ್ಲಿ ಯಾರಿಗೂ ಈ ರೀತಿಯ ಬಹಿಷ್ಕಾರಗಳು ಆಗದಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ ಮಹಾರಾಷ್ಟ್ರ: ಆಸ್ಪತ್ರೆಗೆ ಸಾಗಿಸಲು  ರಸ್ತೆಯೇ ಇಲ್ಲದ ಕಾರಣ ತಾಯಿಯ ಮಡಿಲಲ್ಲೆ ಪ್ರಾಣಬಿಟ್ಟ ನವಜಾತ ಅವಳಿ ಮಕ್ಕಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News