ಗುರು ದತ್ತಾತ್ರೇಯ ಬಾಬಾ ಬುಡಾನ್ ದರ್ಗಾ: ಹಿಂದೂ ಅರ್ಚಕ, ಮುಜಾವರ್ ನೇಮಕಕ್ಕೆ ವ್ಯವಸ್ಥಾಪನ ಸಮಿತಿ ರಚನೆಗೆ ಶಿಫಾರಸು
ಚಿಕ್ಕಮಗಳೂರು, ಆ.18: ಗುರು ದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾದ ಪೂಜಾ ಪದ್ಧತಿಗಳ ವಿವಾದ ಸಂಬಂಧ ನ್ಯಾಯಾಲದ ಆದೇಶದ ಮೇರೆಗೆ ಸರಕಾರ ರಚಿಸಿರುವ ಉಪಸಮಿತಿ ವ್ಯವಸ್ಥಾಪನಾ ಸಮಿತಿ ಮೂಲಕ ಮುಜಾವರ್ ಹಾಗೂ ಹಿಂದೂ ಅರ್ಚಕರ ನೇಮಕಕ್ಕೆ ಶಿಫಾರಸು ಮಾಡಿದ್ದು, ಈ ಶಿಫಾರಸುಗಳನ್ನು ಒಪ್ಪಿ ರಾಜ್ಯ ಸರಕಾರ ವ್ಯವಸ್ಥಾಪಕ ಸಮಿತಿಯ ನೇಮಕ ಸಂಬಂಧ ಆದೇಶ ಹೊರಡಿಸಿದೆ.
ತಾಲೂಕಿನ ಐಡಿ ಪೀಠ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಗುರು ದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾದ ವಿವಾದ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಕ್ತ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಆದೇಶ ನೀಡಿದ್ದು, ಅದರಂತೆ ರಾಜ್ಯ ಸರಕಾರ ಈ ಸಂಬಂಧ ಇತ್ತೀಚೆಗೆ ಸಚಿವ ಸಂಪುಟ ಮಟ್ಟದ ಉಪ ಸಮಿತಿ ರಚಿಸಿತ್ತು. ಈ ಸಮಿತಿಯುವ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಪೂಜಾ ವಿಧಾನ, ಆಚರಣೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಆಹವಾಲು ಆಲಿಸಿ ಕೆಲವು ಶಿಫಾರಸುಗಳನ್ನು ಕೈಗೊಂಡು ಆದೇಶ ಹೊರಡಿಸಿದ್ದು, ಈ ಆದೇಶದ ಪ್ರತಿ 'ವಾರ್ತಾಭಾರತಿ'ಗೆ ಲಭಿಸಿದೆ.
ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ವಿವಾದ ಸಂಬಂಧ ಹಿಂದಿನ ಸರಕಾರದ ಜಸ್ಟೀಸ್ ನಾಗಮೋಹನ್‍ದಾಸ್ ನೇತೃತ್ವದ ಸಮಿತಿಯ ವರದಿಯನ್ನು ಜಾರಿ ಮಾಡಿದ್ದು, ಈ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಹಾಲಿ ರಾಜ್ಯ ಸರಕಾರ ಈ ಸಂಬಂಧ ಸೂಕ್ತ ತೀರ್ಮಾನ ಕೈಗೊಳ್ಳಲು ಆದೇಶಿಸಿತ್ತು. ಅದರಂತೆ ಹಾಲಿ ರಾಜ್ಯ ಸರಕಾರ ಈ ಸಂಬಂಧ ಸಾರ್ವಜನಿಕರ ಅಹವಾಲು ಆಲಿಸಿ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿನ ಪೂಜಾವಿಧಾನ, ಆಚರಣೆ ಸೇರಿದಂತೆ ಅರ್ಚಕರು, ಮಜಾವಾರ್ ನೇಮಕ ಸಂಬಂಧ ಕ್ರಮಕೈಗೊಳ್ಳಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಸಚಿವ ಸಂಪುಟ ಮಟ್ಟದ ಉಪಸಮಿತಿಯನ್ನು ರಚಿಸಿದೆ.
ಈ ಸಮಿತಿ ಇತ್ತೀಚೆಗೆ ಚಿಕ್ಕಮಗಳೂರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಅಹವಾಲು ಸಲ್ಲಿಸಲು ಅವಕಾಶ ನೀಡಿತ್ತು. ಅದರಂತೆ ಹಲವು ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಸಮಿತಿಗೆ ತಮ್ಮ ವಿವಿಧ ದಾಖಲೆಗಳೊಂದಿಗೆ ಅಹವಾಲು ಸಲ್ಲಿಸಿ ಹೇಳಿಕೆಗಳನ್ನು ದಾಖಲಿಸಿದ್ದರು. ಈ ಅಹವಾಲು, ದಾಖಲೆಗಳನ್ನು ಪರಿಶೀಲಿಸಿರುವ ಸಚಿವ ಸಂಪುಟ ಮಟ್ಟದ ಉಪ ಸಮಿತಿ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಕೆಲ ವಿಧಿ ವಿಧಾನಗಳನ್ನು ಆಚರಣೆಗೆ ತರಲು ಶಿಫಾರಸು ಮಾಡಿದೆ.
ಸಮಿತಿ ಮಾಡಿರುವ ಶಿಫಾರಸುಗಳಂತೆ ಪ್ರಸ್ತಾಪಿತ ಸಂಸ್ಥೆಗೆ ಹಿಂದೂ ಮತ್ತು ಮುಸ್ಲಿಮ್ ಎರಡೂ ಧರ್ಮದವರನ್ನೊಳಗೊಂಡ ವ್ಯವಸ್ಥಾಪನಾ ಸಮಿತಿ ರಚಿಸಿ ಗುರು ದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾದಲ್ಲಿನ ಪೂಜಾ ವಿಧಾನಗಳನ್ನು ನೆರವೇರಿಸಲು ಹಿಂದೂ ಅರ್ಚಕ ಹಾಗೂ ಮುಜಾವರ್ ಅವರನ್ನು ಈ ವ್ಯವಸ್ಥಾಪನಾ ಸಮಿತಿ ಮೂಲಕ ನೇಮಕ ಮಾಡಬೇಕು. ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಗುಹೆಯೊಳಗೆ ನಂದಾದೀಪ ಬೆಳಗಿಸಿ, ಅಲ್ಲಿರುವ ಪೀಠ ಹಾಗೂ ಪಾದುಕೆಗಳಿಗೆ ಹಿಂದೂ ಪದ್ಧತಿಯಂತೆ ಪ್ರತಿನಿತ್ಯ ಪೂಜೆ ಮಾಡಲು ಆಗಮ ಶಾಸ್ತ್ರದಲ್ಲಿ ಉತ್ತೀರ್ಣರಾದ ಅರ್ಹ ಹಿಂದೂ ಅರ್ಚಕನನ್ನು ಸಮಿತಿ ನೇಮಕ ಮಾಡಬೇಕು. ದತ್ತ ಜಯಂತಿ, ದತ್ತಮಾಲೆ ಹಾಗೂ ಇತರ ವಿಶೇಷ ಹಿಂದೂ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲು ಈ ವ್ಯವಸ್ಥಾಪನಾ ಸಮಿತಿಯೇ ಕ್ರಮವಹಿಸಬೇಕು. ಅರ್ಚಕನೇ ಪೀಠಾಧಿಪತಿ ಅಥವಾ ಗುರುಗಳನ್ನು ಗುಹೆಯ ಒಳಗೆ ಕರೆದೊಯ್ದು ಪಾದುಕೆಗಳಿಗೆ ಗೌರವ ಮತ್ತಿತರ ಪೂಜಾ ವಿಧಾನಗಳನ್ನು ನೆರವೇರಿಸಲು ಈ ಸಮಿತಿ ನೇತೃತ್ವದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಶಿಫಾರಸು ಮಾಡಿದೆ.
ಇನ್ನು ವ್ಯವಸ್ಥಾಪನಾ ಸಮಿತಿಯಿಂದ ನೇಮಕಗೊಳ್ಳುವ ಮುಜಾವರ್ ಅವರು ಪ್ರತೀ ಸೋಮವಾರ ಹಾಗೂ ಗುರುವಾರದಂದು ನಮಾಜ್ ಬಳಿಕ ದರ್ಗಾಕ್ಕೆ ಲೋಬಾನಾ ಹಾಕುವುದು, ಫತೇಹಾ ಅರ್ಪಿಸಬೇಕು. ಅಲ್ಲದೇ ಪ್ರತಿದಿನ ಸಂಜೆ ವೇಳೆಯಲ್ಲಿ ಮುಜಾವರ್ ಅವರು ಲೋಬಾನಾ, ಫತೇಹಾ ಅರ್ಪಿಸುವುದು, ದರ್ಗಾಕ್ಕೆ ಬರುವ ಭಕ್ತರಿಗೆ ತಬರು ನೀಡುವುದು ಸೇರಿದಂತೆ ಸಮಿತಿಯ ಮೇಲ್ವಿಚರಣೆಯಲ್ಲೇ ಉರೂಸ್ ಆಚರಣೆ, ಗೋರಿಗಳಿಗೆ ಗಂಧ, ಬಟ್ಟೆ ಹಾಕುವುದನ್ನು ಮಾಡಬೇಕೆಂದು ಶಿಫಾರಸು ಮಾಡಿರುವ ಉಪಸಮಿತಿ, ಉರೂಸ್ ಸಂದರ್ಭ ಮುಜಾವರ್ ಅವರಿಗೆ ವ್ಯವಸ್ತಾಪನಾ ಸಮಿತಿಯೇ ಸೂಕ್ತ ಮಾರ್ಗದರ್ಶನ ಮಾಡಬೇಕೆಂದು ಶಿಫಾರಸು ಮಾಡಿದೆ. ಉಪಸಮಿತಿಯ ಈ ಶಿಫಾರಸುಗಳನ್ನು ಜು.1ರಂದು ಸಚಿವ ಸಂಪುಟದ ಮುಂದಿಟ್ಟು, ಚರ್ಚಿಸಲಾಗಿದ್ದು, ಈ ಶಿಫಾರಸುಗಳನ್ನು ಸರಕಾರದ ಒಪ್ಪಿ ಆದೇಶ ಹೊರಡಿಸಿದೆ.
ಇನ್ನು ಸರಕಾರದ ಈ ಆದೇಶಕ್ಕೆ ಜಾತ್ಯತೀತ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಶಾಖಾದ್ರಿಯ ಎಲ್ಲಾ ಅಧಿಕಾರಗಳನ್ನು ಕಸಿದು ಸರ್ಕಾರಿ ಸಮಿತಿಗೆ ವಹಿಸಿರುವುದು ನ್ಯಾಯ ಬಾಹಿರ ಎಂದು ಆರೋಪಿಸಲಾಗಿದೆ.
---------------
ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿನ ಪೂಜಾ ವಿಧಾನಗಳ ಬಗ್ಗೆ ಸಚಿವ ಸಂಪುಟ ಮಟ್ಟದ ಉಪಸಮಿತಿ ಕೈಗೊಂಡಿರುವ ಶಿಫಾರಸುಗಳನ್ನು ಒಪ್ಪಲು ಸಾಧ್ಯವಿಲ್ಲ. ಈ ಶಿಫಾರಸುಗಳ ವಿರುದ್ಧ ನ್ಯಾಯಾಲದ ಮೊರೆ ಹೋಗಲಾಗುವುದು.
- ಗೌಸ್ ಮೊಹಿದ್ದೀನ್ ಶಾಖಾದ್ರಿ