ಸಾವರ್ಕರ್ ಭಾವಚಿತ್ರ ಅಳವಡಿಕೆ ಇನ್ನಷ್ಟು ಜಾಸ್ತಿಯಾಗಲಿದೆ: ಸಚಿವ ಸುನೀಲ್ ಕುಮಾರ್‌

Update: 2022-08-19 14:27 GMT

ಉಡುಪಿ: ರಾಜ್ಯಾದ್ಯಂತ ಸಾವರ್ಕರ್ ಭಾವಚಿತ್ರ ಅಳವಡಿಸುವ ವಿದ್ಯ ಮಾನಗಳು ಇನ್ನಷ್ಟು ಜಾಸ್ತಿ ಆಗುತ್ತದೆ. ಸಾವರ್ಕರ್ ಈ ದೇಶದ ರಾಷ್ಟ್ರೀಯತೆಯ ಪ್ರತೀಕ. ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ, ಮೆರವಣಿಗೆಗಳು, ಕಾರ್ಯಕ್ರಮಗಳು, ಬ್ಯಾನರ್‌ಗಳು, ಪುತ್ಥಳಿಗಳು ಮುಂದಿನ ದಿನಗಳಲ್ಲಿ ವ್ಯಾಪಕವಾಗಲಿದೆ ಎಂದು ರಾಜ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಮಣಿಪಾಲದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಮೊಟ್ಟೆ ಎಸೆದು ಪ್ರತಿಭಟಿಸಲು ಯಾರೂ ಹೇಳಿಕೊಟ್ಟು ಮಾಡಿಸುತ್ತಿರುವುದಲ್ಲ. ಜನರ ಮನಸ್ಸಿನಲ್ಲಿರುವ ಭಾವನೆಗಳು ಸ್ಫೋಟಗೊಂಡಾಗ ಈ ರೀತಿ ಪ್ರತಿಭಟನೆ ಆಗುತ್ತದೆ. ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡುತ್ತಿದ್ದಾರೆ. ಈ ರೀತಿಯ ಅವಹೇಳನ ಸಹಿಸಿಕೊಳ್ಳಲು ಯುವ ಸಮುದಾಯವೂ ಸಿದ್ಧವಿಲ್ಲ ಎಂದರು.

ಸಿದ್ದರಾಮಯ್ಯಗೆ ಹಣೆ ಮೇಲೆ ಕುಂಕುಮ ಇಟ್ಟವರನ್ನು ಕಂಡರೆ ಆಗುವುದಿಲ್ಲ. ಸಾವರ್ಕರ್ ಫೋಟೋ ಕಂಡರೆ ಆಗಲ್ಲ. ತನ್ನ ನಡವಳಿಕೆ, ಹೇಳಿಕೆ, ಆಡಳಿತದಲ್ಲಿ ಪ್ರತ್ಯೇಕತೆಯ ಭಾವನೆ ತೋರಿಸುತ್ತಾರೆ. ಇದನ್ನು ಕರ್ನಾಟಕದ ಜನ ಸಹಿಸುವು ದಿಲ್ಲ ಮತ್ತು ಪ್ರತಿಭಟಿಸುತ್ತಿದ್ದಾರೆ. ಸಾವರ್ಕರ್ ಬಗ್ಗೆ ಹೇಳಿಕೆ ಕೊಡುವಾಗ ಪ್ರತಿಭಟನೆಯನ್ನು ಸಹಿಸುವ ಶಕ್ತಿಯೂ ಇರಬೇಕು. ಏನು ಬೇಕಾದರೂ ಹೇಳಿಕೆ ನೀಡಿದರೆ ಜೀರ್ಣ ಮಾಡಿಕೊಳ್ಳುತ್ತೇನೆ ಎಂಬ ಕಾಲ ಹೊರಟು ಹೋಗಿದೆಂದು ತಿಳಿಸಿದರು.

ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಅಂದರೆ ಇತಿಹಾಸದ ಬಗ್ಗೆ ಅರ್ಧಂಬದ ತಿಳಿದುಕೊಂಡಿದ್ದಾರೆ ಎಂದರ್ಥ. ಸಾವರ್ಕರ್ ಅಂತಸತ್ವ ತಿಳಿದ ವರು ಯಾರು ಅವರನ್ನು ಟೀಕಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರು ಅಂಡಮಾನಿನ ಸೆಲ್ಯೂಲರ್ ಜೈಲಿಗೆ ಹೋಗಿ ನೋಡಿ ಬರಲಿ. ಸಮಾಜವಾದಿ ಎಂದು ಹೇಳಿಕೊಂಡು ಲಕ್ಷಾಂತರ ಜನರನ್ನು ಸೇರಿಸಿ ಹುಟ್ಟುಹಬ್ಬ ಆಚರಿಸುವ ಇವರು, ಸಾವರ್ಕರ್ ಇದ್ದ ಜೈಲನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ ಎಂದು ಅವರು ಸವಾಲು ಹಾಕಿದರು.

‘ನಾವು ಹಿಂಸೆಯನ್ನು ಯಾವತ್ತೂ ಒಪ್ಪಿಲ್ಲ’

ಆರ್‌ಎಸ್‌ಎಸ್‌ನಿಂದ ಸಿದ್ದರಾಮಯ್ಯಗೆ ಜೀವ ಬೆದರಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವ ಸುನೀಲ್ ಕುಮಾರ್, ನಮಗೆ ಹಿಂಸೆಯ ಮೇಲೆ ಯಾವತ್ತು ನಂಬಿಕೆ ಇಲ್ಲ. ನಾವು ಹಿಂಸೆಯನ್ನು ಯಾವತ್ತೂ ಒಪ್ಪಿಲ್ಲ ಎಂದು ತಿಳಿಸಿದರು.

ಸರಕಾರಿ ಶಾಲೆಗಳಲ್ಲಿ ಗಣೇಶೋತ್ಸವಕ್ಕೆ ಆಕ್ಷೇಪ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಸುನೀಲ್ ಕುಮಾರ್, ದೇಶದ ಸಂಪ್ರಾದಾಯ ಪರಂಪರೆಯನ್ನು ನಾವು ಉಳಿಸಿಕೊಳ್ಳುತ್ತೇವೆ. ಅನಗತ್ಯವಾಗಿ ವಿವಾದ ಮಾಡಬೇಡಿ. ಸರಕಾರಿ ಶಾಲೆಯ ಆಟದ ಮೈದಾನಗಳಲ್ಲಿ ಸಹಜವಾಗಿಯೇ ಸಾರ್ವಜನಿಕ ಗಣೇಶ ಉತ್ಸವಗಳು ನಡೆಯುತ್ತವೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ ನಮ್ಮ ಸರಕಾರ ಸಹಿಸಿಕೊಳ್ಳುವುದಿಲ್ಲ. ನಮಾಝ್‌ಗೆ ಶಾಲೆ ಆವರಣದಲ್ಲಿ ಅವಕಾಶ ಕೊಡುವುದಿಲ್ಲ ಎಂದು ಸರಕಾರ ಸ್ಪಷ್ಟವಾಗಿ ಹೇಳಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News