ಸಿದ್ಧರಾಮಯ್ಯರ ಮೇಲೆ ಮೊಟ್ಟೆ ಎಸೆತ ಪ್ರಕರಣ; ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ಹಲ್ಲೆ: ಸೊರಕೆ ಖಂಡನೆ

Update: 2022-08-19 17:33 GMT

ಉಡುಪಿ : ಸಿದ್ದರಾಮಯ್ಯನವರಿಗೆ ಅವಮಾನಕರವಾಗಿ ಕಪ್ಪು ಬಾವುಟ ತೋರಿಸಿ ಮೊಟ್ಟೆ ಎಸೆದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ಹಲ್ಲೆಯಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಟೀಕಿಸಿದ್ದಾರೆ.

ಉಡುಪಿ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿಯ ಘಟನೆ ರಾಜ್ಯದಲ್ಲಿ ಪ್ರಥಮವಾಗಿ ನಡೆಯುತ್ತಿದೆ. ಇದು ತೀವ್ರ ಖಂಡನೀಯ. ಈ ಕೃತ್ಯದಲ್ಲಿ ಭಾಗಿಯಾದವರ ಮೇಲೆ ಕ್ರಮ ಜರುಗಿಸಲೇ ಬೇಕು ಎಂದು ಒತ್ತಾಯಿಸಿದರು.

ಕೊಡಗು ವಿಪತ್ತಿನಿಂದ ತತ್ತರಗೊಂಡಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ವಾಸ್ತವ ವಿಚಾರ ತಿಳಿಯಲು ಸಿದ್ಧರಾಮಯ್ಯ ಹೋಗಿದ್ದರು. ಅದಕ್ಕೆ ಉದ್ದೇಶ ಪೂರ್ವಕ ತಡೆಯೊಡ್ಡಿದ್ದಾರೆ. ಮೊಟ್ಟೆ ಎಸೆಯುವ ಹಾಗೂ ಕರಿಪತಾಕೆ ಹಿಡಿ ಯುವ ಶಕ್ತಿ ಎಲ್ಲ ರಾಜಕೀಯ ಪಕ್ಷಗಳಿಗೂ ಇದೆ. ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿಗೆ ಸರಿಸಮ. ಇವರ ಇಂಟಲಿಜೆನ್ಸ್ ಏನು ಮಾಡುತ್ತಿತ್ತು. ಗೃಹ ಸಚಿವರು ಏನು ಮಾಡುತ್ತಿದ್ದರು ಎಂದು ಅವರು ಪ್ರಶ್ನಿಸಿದರು.

ಪ್ರತಾಪ ಸಿಂಹ ಭಾವನಾತ್ಮಕ ವಿಚಾರ ಮಾತ್ರ ಮಾತನಾಡುತ್ತಾರೆ. ಶಾಶ್ವತ ಪರಿಹಾರದ ಬಗ್ಗೆ ಒಂದೇ ಒಂದು ಕಾರ್ಯಕ್ರಮ ಇಲ್ಲ. ಎರಡು ಮೂರು ತಿಂಗಳಿಗೊಮ್ಮೆ ಕೊಡಗಿಗೆ ಬಂದು ಹೇಳಿಕೆ ಕೊಟ್ಟು ಹೋಗುತ್ತಾರೆ. ಮಂಡ್ಯದಲ್ಲಿ ಸುಮಲತಾ ಕ್ರಷರ್ ನಿಲ್ಲಬೇಕು ಎಂದು ಹೇಳಿದರೆ, ಪ್ರತಾಪ ಸಿಂಹ ಕ್ರಷರ್ ನಡೆಯಬೇಕು ಎಂದು ಒತ್ತಾಯ ಮಾಡುತ್ತಾರೆ. ಕೊಡಗಿನಲ್ಲಿ ನಡೆಯುತ್ತಿರುವ ವಿಪತ್ತುಗಳಿಗೆ ಅಲ್ಲಿನ ಲೋಕಸಭಾ ಸದಸ್ಯರು, ಶಾಸಕರು ಕೂಡ ಕಾರಣ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News