ಬಂಜೆತನ ನಿವಾರಣೆಗೆ ಆಫ್ರಿಕನ್ ವೈದ್ಯರಿಗೆ ಮಾಹೆ ತರಬೇತಿ

Update: 2022-08-20 14:15 GMT

ಮಣಿಪಾಲ: ಆಫ್ರಿಕನ್ ದೇಶಗಳ ವೈದ್ಯರ ತಂಡವೊಂದು ಮಾಹೆ- ಮೆರಿಕ್ ಫೌಂಡೇಷನ್‌ನ ವತಿಯಿಂದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನಲ್ಲಿ ಆಯೋಜಿಸಲಾಗಿದ್ದ ಬಂಜೆತನ ನಿವಾರಣೆಗೆ ತರಬೇತಿ ನೀಡುವ ಐವಿಎಫ್ ಎಂಬ್ರಿಯಾಲಜಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈದ್ಯರು ಗುರುವಾರ ಮಣಿಪಾಲ ಮಾಹೆಯ ಅಧ್ಯಕ್ಷ ಡಾ.ರಂಜನ್ ಪೈ ಅವರಿಂದ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು.

ತರಬೇತಿಯ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಅತ್ಯಾಧುನಿಕ ಇನ್-ವಿಟ್ರೋ ಫರ್ಟಿಲಿಟಿ ತಂತ್ರಜ್ಞಾನವೂ ಸೇರಿದಂತೆ ಬಂಜೆತನ ನಿವಾರಣೆಯ ನಿಟ್ಟಿನಲ್ಲಿ ವೈದ್ಯರ ಮನೋಭಾವವನ್ನು ಬದಲಿಸಿ ಸಬಲೀಕರಣಕ್ಕೆ ಮಾಹೆ ಹಾಗೂ ಮೆರಿಕ್ ಫೌಂಡೇಷನ್ ಹೆಚ್ಚಿನ ಒತ್ತು ನೀಡಿತ್ತು. 

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಈ ಸಂದರ್ಭಲ್ಲಿ ಮಾತನಾಡಿ, ಫಲವತ್ತತೆ ಅಥವಾ ಬಂಜೆತನಕ್ಕೆ ಪುರುಷ ಹಾಗೂ ಮಹಿಳೆ ಸಮಾನವಾಗಿ ಜವಾಬ್ದಾರರಾದರೂ, ಸಮಾಜ ಕೇವಲ ಮಹಿಳೆಯನ್ನು ಮಾತ್ರ ಇದಕ್ಕೆ ಕಾರಣಕರ್ತಳಾಗಿಸಿ ಮಾನಸಿಕ ಹಿಂಸೆಯನ್ನು ಉಂಟುಮಾಡುತ್ತಿದೆ. ಇದು ಆಫ್ರಿಕನ್ ದೇಶಗಳಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ತಿಳಿಸಿದರು.

ಮಣಿಪಾಲದಲ್ಲಿ ತರಬೇತಿ ಪಡೆದ ತಂಡದ ಸದಸ್ಯೆ ಘಾನಾದ ಮೋನಿಕಾ ಬಾವ್ಹಾ ಮಾತನಾಡಿ, ಬಂಜೆತನ ಎಂಬುದು ತನ್ನ ದೇಶದಲ್ಲಿ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ನಮ್ಮಲ್ಲಿರುವ ಸೀಮಿತ ಸೌಲಭ್ಯ ಹಾಗೂ ಅವಕಾಶಗಳಿಂದಾಗಿ ದಂಪತಿಗೆ ಎವಿಎಫ್ ಚಿಕಿತ್ಸೆ ನೀಡುವ ತಜ್ಞತೆ ಇಲ್ಲದೇ ನಾವು ಸಹ ಅಸಹಾಯಕರಾಗಿದ್ದೇವೆ. ಈ ನಿಟ್ಟಿನಲ್ಲಿ ಇಲ್ಲಿ ಪಡೆದ ತರಬೇತಿ ನಮಗೆ ಸಂಕೀರ್ಣ ಸಮಸ್ಯೆಗಳನ್ನೂ ಬಗೆಹರಿಸುವ ವಿಶ್ವಾಸ ಮೂಡಿಸಿದೆ ಎಂದರು.

ಈ ತರಬೇತಿ ಕಾರ್ಯಕ್ರಮವನ್ನು ಮಾಹೆ ಹಾಗೂ ಜರ್ಮನಿ ಮೂಲಕ ಮೆರಿಕ್ ಕಗಾದ ಅಂಗವಾದ ಮೆರಿಕ್ ಫೌಂಡೇಷನ್ ಆಯೋಜಿಸಿದ್ದವು. ಮೆರಿಕ್ ಫೌಂಡೇಷನ್ ಆಫ್ರಿಕನ್ ದೇಶಗಳಲ್ಲಿ ಆರೋಗ್ಯ ಸಂಬಂಧಿ ಸಂಪನ್ಮೂಲ ಹಾಗೂ ಮೂಲಸೌಕರ್ಯಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News