ದೂರವಾಣಿ ಸಂಪರ್ಕ, ಕಾಲುಸಂಕ ನಿರ್ಮಾಣಕ್ಕೆ ಆದ್ಯತೆ: ಕೇಂದ್ರ ಸ್ಥಾಯಿ ಸಮಿತಿ ಮುಂದೆ ಶಿವಮೊಗ್ಗ ಎಂಪಿ ಒತ್ತಾಯ

Update: 2022-08-20 16:07 GMT

ಉಡುಪಿ: ಕೇಂದ್ರ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸ್ಥಾಯಿ ಸಮಿತಿ ಶನಿವಾರ ಬೆಂಗಳೂರಿಗೆ ಭೇಟಿ ನೀಡಿದ್ದು, ಸಮಿತಿಯ ಸಭೆಯಲ್ಲಿ ಹಾಜರಾದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಲುಸಂಕಗಳ ನಿರ್ಮಾಣ, ದೂರವಾಣಿ ಸಂಪರ್ಕ ಹಾಗೂ ಅಂಗನವಾಡಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.

ಈ ಸ್ಥಾಯಿ ಸಮಿತಿಯ ಸದಸ್ಯರಲ್ಲೊಬ್ಬರೂ ಆಗಿರುವ ಬಿ.ವೈ.ರಾಘವೇಂದ್ರ  ಸಮಿತಿ ಸಭೆಯಲ್ಲಿ ಭಾಗವಹಿಸಿ ಕಾಲುಸಂಕ ನಿರ್ಮಾಣವೂ ಸೇರಿದಂತೆ ಅಗತ್ಯ ವಿಷಯಗಳ ಕುರಿತು ಚರ್ಚಿಸಿ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಇಲಾಖೆಗಳ ಮುಖ್ಯಸ್ಥರು, ರಾಜ್ಯ ಲೀಡ್ ಬ್ಯಾಂಕ್‌ಗಳಾದ ಕೆನರಾ ಬ್ಯಾಂಕು, ಯೂನಿಯನ್ ಬ್ಯಾಂಕ್‌ಗಳ ಮುಖ್ಯಸ್ಥರು ಹಾಗೂ ಇತರ ಅಧಿಕಾರಿಗಳೊಂದಿಗೆ ವಿವಿಧ ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಟಾನದ ಬಗ್ಗೆ ಸಹ ಚರ್ಚಿಸಲಾಯಿತು. 

ರಾಜ್ಯದ ವಿವಿಧ ಕೈಗಾರಿಕೋದ್ಯಮಿಗಳೊಂದಿಗೆ ಸಿಎಸ್‌ಆರ್ ಫಂಡ್ ಅನ್ನು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬಳಸುವ ಬಗ್ಗೆ ಸಹ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ಪ್ರತಾಪ್‌ರಾವ್ ಜಾಧವ್, ಸಮಿತಿಯ ಇತರ ಸಂಸತ್ ಸದಸ್ಯರು, ರಾಜ್ಯದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮ ಮತ್ತು ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತಿಕ್  ಹಾಗೂ ಇತರ ಹಿರಿಯ ಅಧಿಕಾರಿ ಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News