ಹಝ್ರತ್ ಮೋಹಾನಿ ಎಂಬ ಸ್ವಾತಂತ್ರ್ಯ ಹೋರಾಟಗಾರ

Update: 2022-08-22 04:27 GMT

ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಗೆ ಸಿಲುಕಿದ್ದ ಭಾರತಕ್ಕೆ ಸ್ವಾತಂತ್ರ್ಯ ಸುಮ್ಮನೆ ಸಿಗಲಿಲ್ಲ. ಈ ನೆಲದ ಹಿಂದೂ, ಮುಸ್ಲಿಮ್, ಕ್ರೈಸ್ತ, ಜೈನ, ಬೌದ್ಧ, ಲಿಂಗಾಯತ ಸೇರಿದಂತೆ ಎಲ್ಲಾ ಸಮುದಾಯಗಳ ಜನತೆ ಜೊತೆ ಸೇರಿ ನಾನಾ ಕಷ್ಟ ನಷ್ಟ ಅನುಭವಿಸಿದ ಪರಿಣಾಮವಾಗಿ ಭಾರತ ಸ್ವತಂತ್ರ ವಾಯಿತು. ಈ ಕೆಟ್ಟ ದಿನಗಳಲ್ಲಿ ಗಾಂಧೀಜಿ, ಅಂಬೇಡ್ಕರ್, ನೆಹರೂ, ಸುಭಾಷ್ ಚಂದ್ರ ಬೋಸ್, ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್, ಮೌಲಾನಾ ಅಬುಲ್ ಕಲಾಮ್ ಆಝಾದ್, ಹಝ್ರತ್ ಮೋಹಾನಿ ಅವರಂಥವರ ಸ್ಫೂರ್ತಿ ಈ ದೇಶವನ್ನು ಮುನ್ನಡೆಸಲಿ.


ಇಪ್ಪತ್ತನೇ ಶತಮಾನದಲ್ಲಿ ಜನಿಸಿ ಇಪ್ಪತ್ತೊಂದನೇ ಶತಮಾನದಲ್ಲಿ ಬದುಕಿನ ಇಳಿ ಸಂಜೆಯನ್ನು ಕಳೆಯುತ್ತಿರುವ ನನಗೆ ಹಾಗೂ ನನ್ನ ಸಮಕಾಲೀನರಿಗೆ ದಟ್ಟ ನಿರಾಸೆಯ ದಿನಗಳಿವು. ನಾವು ಕಂಡ ಸಮತೆಯ ಸಮಾಜದ ಕನಸು ಭಗ್ನಗೊಂಡಿದೆ. ಮಡಕೆಯನ್ನು ಮುಟ್ಟಿದ ದಲಿತ ಶಾಲಾ ಬಾಲಕನನ್ನು ಹಾಡ ಹಗಲೇ ಕೊಲ್ಲುವ ದಿನಗಳಲ್ಲಿ ನಾವು ಬದುಕಿದ್ದೇವೆ. ಗರ್ಭಿಣಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಮಾಡಿ ಆಕೆಯ ಕುಟುಂಬದ ಏಳು ಮಂದಿಯನ್ನು ಕೊಚ್ಚಿ ಕೊಂದು ಹಾಕಿದವರನ್ನು ಸ್ವಾತಂತ್ರ ದಿನದ ಸಂದರ್ಭದಲ್ಲಿ ಕ್ಷಮಾದಾನ ನೀಡಿ ಬಿಡುಗಡೆ ಮಾಡಿರುವುದನ್ನು ಅಸಹಾಯಕರಾಗಿ ನೋಡುವ ಯಾತನೆಯ ದಿನಗಳಿವು.
ಜಾತೀಯತೆ ಮತ್ತು ಅಪರಾಧ ಪ್ರವೃತ್ತಿ ತಡೆಗೆ ಎಲ್ಲರೂ ವಿದ್ಯೆ ಕಲಿಯಬೇಕು, ಅಕ್ಷರ ಸಂಸ್ಕೃತಿ ವ್ಯಾಪಿಸಬೇಕು ಎಂದು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಸೇರಿದಂತೆ ಸ್ವಾತಂತ್ರ ಆಂದೋಲನಗಾರರು ಪ್ರತಿಪಾದಿಸುತ್ತಿದ್ದರು. ಆದರೆ, ಸ್ವಾತಂತ್ರದ ಏಳು ದಶಕಗಳ ನಂತರ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿದ್ದರೂ ಜಾತೀಯತೆ ಕಡಿಮೆಯಾಗಿಲ್ಲ. ಅತ್ಯಾಚಾರದಂಥ ಹೇಯ ಕೃತ್ಯಗಳು ಕೊನೆಗೊಂಡಿಲ್ಲ.ಬದಲಾಗಿ ವಿದ್ಯಾವಂತರೆನಿಸಿಕೊಳ್ಳುವವರೇ ಅಪರಾಧ ಪ್ರಕರಣಗಳಲ್ಲಿ ಸಿಕ್ಕಿ ಬೀಳುತ್ತಿದ್ದಾರೆ. ಪ್ರಾಥಮಿಕ ಶಾಲೆಗಳ ಶಿಕ್ಷಕರು ಮಹಾತ್ಮಾ ಗಾಂಧೀಜಿಯವರನ್ನು ಖಳನಾಯಕ ಎಂದು, ನಾಥೂರಾಮ ಗೋಡ್ಸೆಯನ್ನು ರಾಷ್ಟ್ರ ಭಕ್ತ ಎಂದು ಪಾಠ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ.
ಅತ್ಯಾಚಾರ ಮಾಡಿ ಶಿಕ್ಷೆ ಅನುಭವಿಸುತ್ತಲೇ ಗುಜರಾತ್ ಬಿಜೆಪಿ ಸರಕಾರದ ಕೃಪೆಯಿಂದ ಬಿಡುಗಡೆಯಾಗಿ ಬಂದವರನ್ನು ವಿಶ್ವ ಹಿಂದೂ ಪರಿಷತ್ ಸೇರಿದಂತೆ ಇತರ ಸಂಘಟನೆಗಳು ಹಾರ ಹಾಕಿ ಬರಮಾಡಿಕೊಂಡು ಸತ್ಕರಿಸುವುದನ್ನು ಈಗ ಕಣ್ಣಾರೆ ಕಾಣುತ್ತಿದ್ದೇವೆ.
ಅಪರಾಧವೇ ಅಧಿಕಾರದ ಸಿಂಹಾಸನ ಏರಿ ಕುಳಿತಾಗ ಅಪರಾಧಿಗಳು ಯಾವ ಭಯ ಭೀತಿಯಿಲ್ಲದೇ ಬಿಡುಗಡೆಯಾಗಿ ಬರುತ್ತಾರೆ. ಇದೆಲ್ಲ ಒಂದು ಕಾಲದಲ್ಲಿ ಹೀಗೇಕೆ ಎಂದು ಖಂಡನೆಯ ಸುದ್ದಿಯಾಗುತ್ತಿತ್ತು. ಈಗ ಕೋರ್ಟಿನಾಚೆ ಸಮರ್ಥಿಸುವ ಕಾನೂನು ಪಂಡಿತರೂ ನಮ್ಮ ನಡುವಿದ್ದಾರೆ. ಸನ್ನಡತೆ ಆಧಾರದಲ್ಲಿ ಶಿಕ್ಷೆ ಕಡಿತದ ನೀತಿಯನ್ನು ಅತ್ಯಾಚಾರ ಎಸಗಿ ಕೊಂದವರಿಗೂ ಅನ್ವಯಿಸುವ ಸರಕಾರಗಳು ನಮ್ಮಲ್ಲಿ ಇರುವಾಗ, ಜಾತಿ ಮತ್ತು ಕೋಮು ಆಧಾರದಲ್ಲಿ ತಮ್ಮವರನ್ನು ಸಮರ್ಥಿಸುವ ಜನರೇ ಹೆಚ್ಚಾಗುತ್ತಿರುವ ಸಮಾಜದಲ್ಲಿ ನೊಂದವರ ಆಕ್ರಂದನ ಅರಣ್ಯ ರೋದನವಾಗುತ್ತದೆ.
ಈ ಕೆಟ್ಟ ದಿನಗಳಲ್ಲಿ ಬದುಕುತ್ತಿರುವ ನಾವು ಕಳೆದು ಹೋದ ಒಳ್ಳೆಯ ದಿನಗಳನ್ನು, ಒಳ್ಳೆಯ ಮನುಷ್ಯರನ್ನು ಸ್ಮರಿಸಿಕೊಳ್ಳುವ ಮೂಲಕ ಭಾರವಾದ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕಾಗಿದೆ.
 ಇಂಥ ಕಡು ಕಷ್ಟದ ದಿನಗಳಲ್ಲಿ ನನ್ನ ಭಾರತ ವಿಭಜನೆಯಾದರೂ ಕಾಶಿ ವಿಶ್ವನಾಥನನ್ನು ಬಿಟ್ಟು ಹೋಗಲು ಒಪ್ಪದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಮತ್ತು ಇಂಕ್ವಿಲಾಬ್ ಜಿಂದಾಬಾದ್ ಘೋಷಣೆಯನ್ನು ಭಾರತಕ್ಕೆ ನೀಡಿದ ಹಝ್ರತ್ ಮೋಹಾನಿ ನೆನಪಿಗೆ ಬರುತ್ತಾರೆ.
1875ರಲ್ಲಿ ಜನಿಸಿ 1951 ರವರೆಗೆ ಬದುಕಿದ್ದ ಹಝ್ರತ್ ಮೋಹಾನಿ ಅವರು ಉತ್ತರ ಪ್ರದೇಶದ ಅಸಾಮಾನ್ಯ ಸ್ವಾತಂತ್ರ ಹೋರಾಟಗಾರರು. ಉರ್ದು ಭಾಷೆಯಲ್ಲಿ ಪದ್ಯಗಳನ್ನೂ ಬರೆದ ಮೋಹಾನಿಯವರ ಕಾವ್ಯ ಜನರ ನೋವಿಗೆ ಮಿಡಿಯುವ ಕಾವ್ಯವಾಗಿತ್ತು.ರಾಜಿ ರಹಿತ ಹೋರಾಟ ಗಾರರಾಗಿದ್ದ ಮೋಹಾನಿ ಬಾಲಗಂಗಾಧರ ತಿಲಕರ ಹೋಮ್ ರೂಲ್ ಬೇಡಿಕೆಗೆ ಪ್ರತಿಯಾಗಿ ಸಂಪೂರ್ಣ ಸ್ವರಾಜ್ಯದ ಬೇಡಿಕೆಯನ್ನು ಮುಂದಿಟ್ಟವರು. ಮಹಾತ್ಮಾ ಗಾಂಧಿ ಮತ್ತು ಜಿನ್ನಾ ಇಬ್ಬರ ಜೊತೆಗೂ ಅವರಿಗೆ ಭಿನ್ನಾಭಿಪ್ರಾಯವಿತ್ತು.
ಹಝ್ರತ್ ಮೋಹಾನಿ ಇಸ್ಲಾಮಿಕ್ ದರ್ಶನದ ವಿದ್ವಾಂಸರು ಮತ್ತು ಕಡು ಉಗ್ರ ಎಡಪಂಥೀಯ ಚಿಂತಕರೂ ಆಗಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ.ಉರ್ದು ಪತ್ರಿಕೆಯ ಸಂಪಾದಕರೂ ಆಗಿದ್ದ ಅವರು ಬ್ರಿಟಿಷ್ ಸರಕಾರದಿಂದ ರಾಜದ್ರೋಹದ ಆರೋಪಕ್ಕೆ ಒಳಗಾಗಿ ಕಠಿಣ ಶಿಕ್ಷೆಯನ್ನು ಅನುಭವಿಸಿದರು.
ಕಳೆದ ಶತಮಾನದ 1920ರಲ್ಲಿ ಉತ್ತರ ಪ್ರದೇಶದ ಕಾನ್‌ಪುರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಸ್ಥಾಪನಾ ಸಮ್ಮೇಳನವನ್ನು ಸಂಘಟಿಸಿದವರು ಹಝ್ರತ್ ಮೋಹಾನಿ. ಎಸ್.ಎ.ಡಾಂಗೆ, ಪಿ.ಸಿ.ಜೋಶಿ,ಗಂಗಾಧರ ಅಧಿಕಾರಿ, ಬಿ.ಟಿ.ರಣದಿವೆ ಮುಂತಾದವರು ಪಾಲ್ಗೊಂಡಿದ್ದ ಕಮ್ಯುನಿಸ್ಟ್ ಪಕ್ಷದ ಈ ಮೊದಲ ಅಧಿವೇಶನದಲ್ಲಿ ಹಝ್ರತ್ ಮೊಹಾನಿ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು. ಇಂಕ್ವಿಲಾಬ್ ಜಿಂದಾಬಾದ್( ಕ್ರಾಂತಿಗೆ ಚಿರಾಯುವಾಗಲಿ) ಮೋಹಾನಿಯವರು ರೂಪಿಸಿದ್ದು ಇದೇ ಅಧಿವೇಶನದ ಸಂದರ್ಭದಲ್ಲಿ. ಮುಂದೆ ಈ ಘೋಷಣೆ ಭಾರತದ ಕ್ರಾಂತಿಕಾರಿ ಚಳವಳಿಯ,ಹೋರಾಟಗಾರರ ಘೋಷಣೆಯಾಗಿ ಶತಮಾನ ಕಾಲ ಉಳಿದು ಬಂದಿದೆ.
ಹಝ್ರತ್ ಮೋಹಾನಿ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಇವರ ಪೂರ್ಣ ಹೆಸರು ಸಯ್ಯದ್ ಫಝಉಲ್ ಹಸನ್ ಮೋಹಾನಿ. ತಾನು ನಂಬಿದ್ದ ಇಸ್ಲಾಮ್ ಧರ್ಮವನ್ನು ಮತ್ತು ಕಮ್ಯುನಿಸ್ಟ್ ಸಿದ್ಧಾಂತವನ್ನು ಮತ್ತು ಮಥುರಾದ ಕೃಷ್ಣ ನನ್ನು ಏಕಕಾಲದಲ್ಲಿ ಗೌರವಿಸಿ ಆರಾಧಿಸಿದವರು. ಒಂದು ರೀತಿಯಲ್ಲಿ ನಮ್ಮ ಕನ್ನಡದ ಕವಿ ಸುಬ್ಬಣ್ಣ ಎಕ್ಕುಂಡಿಯವರಿದ್ದಂತೆ. ಎಕ್ಕುಂಡಿ ಅವರು ಮಾರ್ಕ್ಸ್ ಮತ್ತು ಮಧ್ವಾಚಾರ್ಯರ ನ್ನು ಏಕಕಾಲದಲ್ಲಿ ಮೆಚ್ಚಿಕೊಂಡವರು. ಅವರ ನಂಬಿಕೆಯನ್ನು ನಾವು ಪ್ರಶ್ನಿಸುವಂತಿಲ್ಲ.
ಪವಿತ್ರ ಹಜ್ ಯಾತ್ರೆಯನ್ನು ಹನ್ನೊಂದು ಬಾರಿ ಕೈಗೊಂಡ ಹಝ್ರತ್ ಮೋಹಾನಿಯವರು ಮಥುರಾದ ಕೃಷ್ಣ ನನ್ನು ಆರಾಧಿಸುವ ಪದ್ಯಗಳನ್ನೂ ಬರೆದಿದ್ದಾರೆ. ಪ್ರತಿವರ್ಷ ಕೃಷ್ಣ ಜನ್ಮಾಷ್ಟಮಿ ಆಚರಿಸಲು ಮಥುರಾಗೆ ಹೋಗುತ್ತಿದ್ದರು. ರಾಜದ್ರೋಹದ ಆರೋಪದ ಮೇಲೆ ಪುಣೆಯ ಯೆರವಾಡಾ ಜೈಲಿನಲ್ಲಿ ಬಂದಿಯಾಗಿದ್ದಾಗ ಕೃಷ್ಣ ಜನ್ಮಾಷ್ಟಮಿಯಂದು ಮಥುರೆಗೆ ಹೋಗಲು ಹಂಬಲಿಸಿ ಬರೆದ ಅನೇಕ ಪದ್ಯಗಳಿವೆ.
ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದರೂ ಮಹಾತ್ಮಾ ಗಾಂಧೀಜಿ ಯವರ ಬಗ್ಗೆ ಗೌರವವಿದ್ದರೂ ಅವರ 'ಗ್ರಾಮ ಸ್ವರಾಜ್ಯ'ದಂಥ ಪರಿಕಲ್ಪನೆಯ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದ ಹಝ್ರತ್ ಮೋಹಾನಿ 1917 ರಲ್ಲಿ ನಡೆದ ಸೋವಿಯತ್ ರಶ್ಯದ ಕ್ರಾಂತಿಯ ನಾಯಕ ವ್ಲಾದಿಮಿರ್ ಲೆನಿನ್ ಅವರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದರು. ರಶ್ಯದ ರಾಜಧಾನಿ ಮಾಸ್ಕೊಗೆ ಹೋಗಿ ಕ್ರಾಂತಿ ನಾಯಕ ಲೆನಿನ್ ಅವರನ್ನು ಭೇಟಿ ಮಾಡಿಬಂದಿದ್ದರೆಂದು ಅವರ ಸಮಕಾಲೀನರು ಹೇಳುತ್ತಾರೆ.
ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದ ಹಝ್ರತ್ ಮೋಹಾನಿ ಯವರು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಆತ್ಮೀಯರಾಗಿದ್ದರು.ಆದರೆ ಸಂವಿಧಾನದ ಅಂತಿಮ ಕರಡಿಗೆ ಇವರು ಸಹಿ ಹಾಕಲಿಲ್ಲ. ಹೀಗೆ ಸಹಿ ಹಾಕದೇ ಉಳಿದ ಏಕೈಕ ಸದಸ್ಯರೆಂದರೆ ಹಝ್ರತ್ ಮೋಹಾನಿ. ಸ್ವಾತಂತ್ರಾನಂತರ ಭಾರತದ ವಿಭಜನೆಗೆ ಮೋಹಾನಿಯವರ ಒಪ್ಪಿಗೆ ಇರಲಿಲ್ಲ. ಹೀಗಾಗಿ ಇವರು ಸಹಿ ಹಾಕಲಿಲ್ಲ.
ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಗೆ ಸಿಲುಕಿದ್ದ ಭಾರತಕ್ಕೆ ಸ್ವಾತಂತ್ರ ಸುಮ್ಮನೆ ಸಿಗಲಿಲ್ಲ. ಈ ನೆಲದ ಹಿಂದೂ, ಮುಸ್ಲಿಮ್, ಕ್ರೈಸ್ತ, ಜೈನ, ಬೌದ್ಧ, ಲಿಂಗಾಯತ ಸೇರಿದಂತೆ ಎಲ್ಲಾ ಸಮುದಾಯಗಳ ಜನತೆ ಜೊತೆ ಸೇರಿ ನಾನಾ ಕಷ್ಟ ನಷ್ಟ ಅನುಭವಿಸಿದ ಪರಿಣಾಮವಾಗಿ ಭಾರತ ಸ್ವತಂತ್ರವಾಯಿತು.ಈ ಕೆಟ್ಟ ದಿನಗಳಲ್ಲಿ ಗಾಂಧೀಜಿ, ಅಂಬೇಡ್ಕರ್, ನೆಹರೂ, ಸುಭಾಷ್ ಚಂದ್ರ ಬೋಸ್, ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್, ಮೌಲಾನಾ ಅಬುಲ್ ಕಲಾಮ್ ಆಝಾದ್, ಹಝ್ರತ್ ಮೋಹಾನಿ ಅವರಂಥವರ ಸ್ಫೂರ್ತಿ ಈ ದೇಶವನ್ನು ಮುನ್ನಡೆಸಲಿ

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ