ಕಾಂಗ್ರೆಸ್- ಬಿಜೆಪಿ ಸಮಾವೇಶ ಹಿನ್ನೆಲೆ: ಆಗಸ್ಟ್ 24ರಿಂದ 27ರ ವರೆಗೆ ಕೊಡಗು ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ
ಮಡಿಕೇರಿ, ಆ. 22: ಕಾಂಗ್ರೆಸ್- ಬಿಜೆಪಿ ಪಕ್ಷದ ಸಮಾವೇಶ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾದ್ಯಂತ ಆಗಸ್ಟ್ 24ರಿಂದ 27ರ ವರಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ.
ಕೋಮು ಸೌಹಾರ್ದತೆ , ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾದ್ಯಂತ ಆಗಸ್ಟ್ 24ರ ಬೆಳಗ್ಗೆ 6 ಗಂಟೆಯಿಂದ ಆ.27ರಂದು ಸಂಜೆ 6 ಗಂಟೆ ವರೆಗೆ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಆದೇಶ ಹೊರಡಿಸಿದ್ದಾರೆ.
ಆಗಸ್ಟ್ 26 ರಂದು ಕಾಂಗ್ರೆಸ್ ಎಸ್ ಪಿ ಕಚೇರಿಗೆ ಮುತ್ತಿಗೆ ಹಾಗೂ ಬಿಜೆಪಿಯಿಂದ ಜಾಗೃತಿ ಸಮಾವೇಶ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.
(ಪೂರ್ವ ಯೋಜಿತ ಮದುವೆ, ನಾಮಕರಣ, ಗೃಹಪ್ರವೇಶ ಕಾರ್ಯಕ್ರಮ ಹಾಗೂ ಸರ್ಕಾರಿ ಕಾರ್ಯಕ್ರಮ) ಹೊರತುಪಡಿಸಿ ಯಾವುದೇ ಸಭೆ ಸಮಾರಂಭ, ಪ್ರತಿಭಟನೆ, ಮೆರವಣಿಗೆ, ರ‍್ಯಾಲಿ, ಜಾಥಾ, 5 ಮತ್ತು ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ, ವಿಜಯೋತ್ಸವ , ಪಟಾಕಿ ಸಿಡಿಸುವಂತಿಲ್ಲ ಮತ್ತು ಕಪ್ಪು ಬಟ್ಟೆ ಧರಿಸುವಂತಿಲ್ಲ.