ಟ್ರಸ್ಟ್ ಪುನರ್‌ರಚನೆಯಲ್ಲಿನ ಪ್ರಮಾದ ವಿಷಾಧನೀಯ: ಸಚಿವ ಸುನಿಲ್ ಕುಮಾರ್

Update: 2022-08-25 15:25 GMT

ಉಡುಪಿ(Udupi), ಆ.25: ಕೆಲವೇ ವ್ಯಕ್ತಿಗಳಿಗೆ, ತಂಡಕ್ಕೆ ಸೀಮಿತವಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಟ್ರಸ್ಟ್‌ಗಳ ಪುನರ್ ರಚನೆ ಮಾಡಿದ್ದೇವೆ. ಮರಣ ಹೊಂದಿದ ಇಬ್ಬರ ಹೆಸರು ಪಟ್ಟಿಯಲ್ಲಿ ಸೇರಿ ಸಣ್ಣ ಪ್ರಮಾದವಾಗಿದೆ. ಈ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಪಟ್ಟಿ ಸರಿಪಡಿಸುವ ಉದ್ದೇಶದಿಂದ ಆದೇಶ ಹಿಂಪಡೆಯಲಾಗಿದೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್(Sunil Kumar) ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟ್ರಸ್ಟ್‌ಗಳು ಬಹು ವರ್ಷಗಳ ಕಾಲ ನೆನೆಗುದಿಗೆ ಬಿದ್ದಿತ್ತು. ಡಿಸೆಂಬರ್‌ನಲ್ಲಿಯೇ ಈ ಪಟ್ಟಿ ಮಾಡಲಾಗಿತ್ತು. ನಿನ್ನೆ ಸರಕಾರ ಅದಕ್ಕೆ ಅನುಮೋದನೆ ನೀಡಿದೆ. ಸೋಮವಾರದೊಳಗೆ ಎರಡು ಮೂರು ಜನರ ಹೆಸರು ಸೇರಿಸಿಕೊಂಡು ಎಲ್ಲಾ ಟ್ರಸ್ಟ್‌ಗಳ ಪುನರ್ ರಚನೆ ಮಾಡಲಾಗುವುದು. ಇಷ್ಟು ವರ್ಷಗಳ ಕಾಲ ರಾಜ್ಯದ ಯಾವುದೇ ಟ್ರಸ್ಟ್ಗಳ ಪುನರ್ ರಚನೆ ಆಗಿರಲಿಲ್ಲ ಎಂದರು.

ಕೆಲವು ಕುಟುಂಬ, ವ್ಯಕ್ತಿಗಳಿಗೆ, ತಂಡಗಳಿಗೆ ಟ್ರಸ್ಟ್ ಸೀಮಿತವಾಗಿತ್ತು. ಹೊಸ ಪ್ರತಿಭೆಗಳಿಗೆ ಮತ್ತು ಹೊಸ ಆಲೋಚನೆಗಳಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಟ್ರಸ್ಟ್ ಪುನರ್ ರಚನೆ ಮಾಡಲಾಗಿದೆ. ಯಾರಿಗೆ ಟ್ರಸ್ಟ್ ನಲ್ಲಿ ಇರಲು ಆಸಕ್ತಿ ಇಲ್ಲವೋ ಅವರನ್ನು ಕೈ ಬಿಡಲಾಗುವುದು ಎಂದು ಸಚಿವರು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಮಗುವನ್ನು ಹೆಗಲಲ್ಲಿ ಹೊತ್ತು ಸೈಕಲ್‌ ರಿಕ್ಷಾ ತುಳಿಯುವ ಚಾಲಕ

ಗುತ್ತಿಗೆದಾರರ ಸಂಘದ ಕಮಿಷನ್ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ಸುನೀಲ್ ಕುಮಾರ್, ಈ ಕುರಿತ ದೂರನ್ನು ಸಂಬಂಧಪಟ್ಟ ತನಿಖಾ ಇಲಾಖೆಗೆ ನೀಡುವ ಬದಲು ಸಿದ್ದರಾಮಯ್ಯ ಅವರ ಬಳಿ ಕೊಟ್ಟಿದ್ದಾರೆ. ಹಾಗಾದರೆ ಈ ದೂರಿನಲ್ಲಿ ಏನು ಅಡಗಿದೆ? ಮುಖ್ಯಮಂತ್ರಿಗಳೇ ಲೋಕಾಯುಕ್ತಕ್ಕೆ ನೀಡಿ ಹೇಳಿದರೂ ಇವರು ತಯಾರಿಲ್ಲ. ಯಾವುದನ್ನು ಸಿದ್ದರಾಮಯ್ಯ ಹೇಳಬೇಕಾಗಿತ್ತೋ ಅದನ್ನು ಕೆಂಪಣ್ಣ ಮುಖಾಂತರ ಹೇಳಿಸಿದ್ದಾರೆ ಇದು ಕೇವಲ ಚುನಾವಣೆ ವೇಳೆ ಗಾಳಿಯಲ್ಲಿ ಹೊಡೆದಿರುವ ಗುಂಡು ಎಂದು ಟೀಕಿಸಿದರು.

ಸಿದ್ದರಾಮಯ್ಯನ ಕಾಲದಲ್ಲಿ ಈ ರೀತಿ ನೂರಾರು ಆರೋಪ ಬಂದಿತ್ತು. ಆಗ ಸಾಕ್ಷಿ ಎಲ್ಲಿದೆ? ಸಾಕ್ಷಿ ಎಲ್ಲಿದೆ ? ಎಂದು ಸದನದಲ್ಲಿ ನೂರಾರು ಬಾರಿ ಕೇಳಿದ್ದರು. ಹಾಗಾದರೆ ಕೆಂಪಣ್ಣ ಹೇಳಿದ್ದಕ್ಕೆ ಸಾಕ್ಷಿ ಎಲ್ಲಿದೆ. ಲೋಕಾಯುಕ್ತಕ್ಕೆ ದೂರು ಕೊಡಲ್ಲ ಅಂದರೆ ಇದರಲ್ಲಿ ರಾಜಕೀಯ ಅಡಗಿದೆ ಎಂದರ್ಥ. ಲೋಕಾಯುಕ್ತಕ್ಕೆ ಹೋಗಿದ್ದರೆ ಸತ್ಯಾಂಶ ಬಯಲಾಗುತ್ತಿತ್ತು. ಸಿದ್ದರಾಮಯ್ಯನ ಬಳಿ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಕಮಿಷನ್ ಹಣದಲ್ಲಿ ಆರೆಸ್ಸೆಸ್ ಗೆ ಪಾಲು ಇದೆ ಎಂಬ ಬಿ.ಕೆ ಹರಿಪ್ರಸಾದ್ ಆರೋಪ ಬಗ್ಗೆ ಉತ್ತರಿಸಿದ ಸಚಿವರು, ಗೋವಿಂದರಾಜು ಡೈರಿಯಲ್ಲಿ ಕಾಂಗ್ರೆಸ್ ಹೈಕಮಾಂಡಿಗೆ ದುಡ್ಡು ನೀಡುವ ವಿಚಾರ ಉಲ್ಲೇಖಿಸಲಾಗಿತ್ತು. ಇಂದಿರಾ ಕ್ಯಾಂಟೀನ್ ಹಣದಲ್ಲಿ ಹೈಕಮಾಂಡ್ಗೆ ಕಪ್ಪ ಕಾಣಿಕೆ ನೀಡುವ ಬಗ್ಗೆ ಕಾಂಗ್ರೆಸ್ನವರೇ ಆರೋಪಿಸಿದ್ದರು. ಹರಿಪ್ರಸಾದ್ ಹೇಳಿಕೆಗೆ ಯಾವುದೇ ಮಹತ್ವ ಇಲ್ಲ. ನಾವು ಯಾವತ್ತೂ ಹರಿಪ್ರಸಾದ್ ಹೇಳಿಕೆ ಪರಿಗಣಿಸಿಲ್ಲ ಎಂದರು.

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಪಿಡಿಒಗಳಿಗೆ ಹೆಚ್ಚಿನ ಅಧಿಕಾರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಡಳಿತಾತ್ಮಕವಾಗಿ ಪಿಡಿಒಗಳಿಗೆ ಅಧಿಕಾರ ನೀಡಲಾಗುವುದು. ಚುನಾಯಿತ ಜನಪ್ರತಿನಿಧಿಗಳಿಗೆ ಅವರದೇ ಆದ ಗೌರವ ಇದೆ. ಯಾವುದೇ ಚುನಾಯಿತ ಪ್ರತಿನಿಧಿಯ ಅಧಿಕಾರ ಮೊಟಕು ಗೊಳಿಸುವುದಿಲ್ಲ ಎಂದು ತಿಳಿಸಿದರು.

ಇಂದಿನ ಸಚಿವ ಸಂಪುಟದಲ್ಲಿ ಮಲ್ಪೆ ಬಂದರಿಗೆ 49 ಕೋಟಿ ರೂ.ಗೆ ಅನು ಮೋದನೆ ನೀಡಲಾಗಿದೆ. ಕಾರ್ಕಳ, ಕಾಪುವಿನಲ್ಲಿ 1600 ಕೋಟಿ ರೂ. ವೆಚ್ಚದ ಜಲಜೀವನ ಮಿಷನ್ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಡುಪಿ ಜಿಲ್ಲೆಗೆ ರಜತ ಮಹೋತ್ಸವ ಸಂದರ್ಭದಲ್ಲಿ ಎಲ್ಲ ಇಲಾಖೆಗಳ ಮೂಲಕ ಅನುದಾನ ತರುತ್ತೇವೆ.
-ಸುನಿಲ್ ಕುಮಾರ್, ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News