ಕುಂದಾಪುರ: ಸರ್ವಿಸ್ ರಸ್ತೆಯ ಪಕ್ಕದಲ್ಲೇ ಚರಂಡಿ ನಿರ್ಮಾಣ

Update: 2022-08-26 14:37 GMT

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ-66ರ ಅವೈಜ್ಞಾನಿಕ ಚತುಷ್ಪಥ ಕಾಮಗಾರಿಯಿಂದಾಗಿ ಕುಂದಾಪುರದ ವಡೆರ ಹೋಬಳಿಯ ಸರ್ವೀಸ್ ರಸ್ತೆಯ ಇಕ್ಕೆಲಗಳಲ್ಲಿ ಮಳೆ ನೀರು ನಿಂತು ಹೊಳೆಯಂತಾಗಿ ಮಳೆ ಸುರಿದಾಗಲೆಲ್ಲಾ ವಾಹನ ಸವಾರರು ಪರದಾಡಿದ್ದರು. ಇದೀಗ ಕಾಮಗಾರಿ ಗುತ್ತಿಗೆ ಪಡೆದ ನವಯುಗ ಸಂಸ್ಥೆ ಅದೇ ಸ್ಥಳದಲ್ಲಿ ಮತ್ತೊಂದು ಅವಾಂತರ ಮಾಡಿದ್ದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಪಾದಚಾರಿಗಳು ಹಾಗೂ ವಾಹನ ಸವಾರರ ಪ್ರಾಣದೊಂದಿಗೆ ಚೆಲ್ಲಾಟವಾಡುವಂತಿದೆ. 

ಇತ್ತೀಚೆಗೆ ಸುರಿದ ಭಾರೀ ಮಳೆಯಲ್ಲಿ  ವಡೇರಹೋಬಳಿಯ ಸರ್ವಿಸ್ ರಸ್ತೆಗಳಲ್ಲಿ ಕೃತಕ ಕೆರೆ ನಿರ್ಮಾಣಗೊಂಡು ಸಂಚಾರ ದುಸ್ತರವಾಗಿತ್ತು. ಸಾರ್ವಜನಿಕರ ಭಾರಿ ಆಕ್ರೋಶದಿಂದ ಎಚ್ಚೆತ್ತುಕೊಂಡ ನವಯುಗ ಸಂಸ್ಥೆ ಅಧಿಕಾರಿಗಳು  ರಸ್ತೆಗಳನ್ನು ಆವರಿಸಿಕೊಂಡಿದ್ದ ನೀರನ್ನು ಮತ್ತೆ ಅವೈಜ್ಞಾನಿಕ ರೀತಿಯಲ್ಲಿ ಹೊರ ಹಾಕುವ ಕಾಯಕವನ್ನು ಆರಂಭಿಸಿದ್ದಾರೆ. ಅದರಂತೆ  ಮೂರುಕೈ  ಬಳಿಯ ಅನತಿ ದೂರದಿಂದ ಸುಮಾರು 60 ಅಡಿ ದೂರದ ತನಕ ಜೆಸಿಬಿಯನ್ನು ಬಳಸಿ ಸರ್ವಿಸ್ ರಸ್ತೆಯ ಎಡಭಾಗವನ್ನು 4-5 ಅಡಿ ಆಳದ ತನಕ ಅಗೆದು ಅದರ ಮೂಲಕ ನೀರು ಹೊರಗೆ ಹರಿದು ಹೋಗುವಂತೆ ಮಾಡಲು ಪ್ರಯತ್ನಿಸಿದ್ದರು.

ಸರ್ವಿಸ್ ರಸ್ತೆಯನ್ನು ಆವರಿಸಿದ ನೀರು ಅಗೆದು ಹಾಕಿದ ಆಳದ ಚರಂಡಿ  ಹಳ್ಳದಂತಾಗಿದ್ದು ಬಿಟ್ಟರೆ ಅದರಲ್ಲಿ ನೀರು ಹರಿದು ಹೋಗುತ್ತಿಲ್ಲ.  ತಾವೇ ತೋಡಿದ ಹಳ್ಳ ಕೆರೆಯಂತೆ ತುಂಬಿ ಹೋದಾಗ, ಪಂಪ್ ಸೆಟ್ ಬಳಸಿ ನೀರನ್ನು ಹೊರಹಾಕಲು ಪ್ರಯತ್ನಿಸಿದ ನವಯುಗ್ ಅಧಿಕಾರಿಗಳು ಅದರಲ್ಲೂ ಯಶಸ್ಸು ಕಾಣದಾದಾಗ, ಅಪಾಯಕ್ಕೆ ಆಹ್ವಾನ ನೀಡುವ ನೀರು ತುಂಬಿದ ಮೋರಿಯನ್ನು ಹಾಗೆ ಬಿಟ್ಟು ಜಾಗ ಖಾಲಿ ಮಾಡಿದ್ದರು.

ಅಪಾಯಕ್ಕೆ ಆಹ್ವಾನ ನೀಡುವ ರೀತಿಯಲ್ಲಿರುವ ನೀರು ತುಂಬಿರುವ ಮೋರಿಗೆ ಹಲವು ದಿನಗಳಾದರೂ ನವಯುಗ ಕಂಪೆನಿ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಅಗೆದು ಹಾಕಿ ಹೋಗಿರುವ ಆಳದ ಮೋರಿಯಲ್ಲಿ ಇದೀಗ ನೀರು ತುಂಬಿಕೊಂಡಿದ್ದು ಸಣ್ಣ ಚರಂಡಿ ಎಂದು ಭಾವಿಸಿ ಪಾದಚಾರಿಗಳು, ವಾಹನ ಸವಾರರು ಎಡ ಭಾಗಕ್ಕೆ ಸರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.

ನಗರದ ಸರ್ವೀಸ್ ರಸ್ತೆಯಲ್ಲೇ ಅಪಾಯಕಾರಿ ಹಳ್ಳವನ್ನು ಅಗೆದು ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡು ತ್ತಿರುವ ಕಂಪೆನಿಯ ಬಗ್ಗೆ ಸ್ಥಳೀಯರು ಹಲವು ಬಾರಿ ದೂರಿದರೂ ಯಾವುದೇ ಪ್ರಯೋಜನವಾಗಿಲ್ಲ. ಯಾವುದೇ ಅಪಾಯ ಸಂಭವಿಸುವ ಮೊದಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ರಾಷ್ಟ್ರೀಯ ಹೆದ್ದಾರಿಯ ಕುಂದಾಪುರ ಫ್ಲೈಓವರ್ ಮೇಲ್ಭಾಗದಲ್ಲಿ ತಡೆದಂಡೆ ಮೇಲೆ ವಿದ್ಯುತ್ ಪ್ರವಹಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಕುಂದಾಪುರ ಉಪವಿಭಾಗಾಧಿಕಾರಿ ಆದೇಶದ ಬಳಿಕ ಎಚ್ಚೆತ್ತುಕೊಂಡ ನವಯುಗ ಕಂಪೆನಿ ಅಧಿಕಾರಿಗಳು ದುರಸ್ತಿ ಕಾರ್ಯ ನಡೆಸಿ ಶುಕ್ರವಾರ ಪಾಲನಾ ವರದಿ ನೀಡಿದ್ದಾರೆ ಎಂಬ ಮಾಹಿತಿಯಿದೆ.

ಅವ್ಯವಸ್ಥೆಗಳ ಆಗರ......

ರಾಷ್ಟ್ರೀಯ ಹೆದ್ದಾರಿ-66ರ ಅಲ್ಲಲ್ಲಿ ಬೃಹದಾಕಾರದ ಹೊಂಡಗುಂಡಿಗಳು, ರಸ್ತೆಯಲ್ಲಿ ಮಳೆ ನೀರು ನಿಲ್ಲುವುದು, ಕುಂದಾಪುರ ಫ್ಲೈಓವರ್ ಕೆಳಭಾಗದ ಅಂಡರ್ ಪಾಸ್ ಸೋರುವುದು, ದಾರಿದೀಪ, ಹೆದ್ದಾರಿ ಮಧ್ಯಭಾಗದಲ್ಲಿನ ಗಿಡಗಂಟಿಗಳಿಂದ ವಾಹನ ಸವಾರರಿಗೆ ಆಗುತ್ತಿರುವ ಗೊಂದಲ, ಕುಂದಾಪುರ ನಗರ ಪ್ರವೇಶದ ವೇಳೆ ಅಲ್ಲಲ್ಲಿ ತಾತ್ಕಾಲಿಕವಾಗಿ ಮುಚ್ಚಿದ ಡಿವೈಡರ್ ತೆರೆದಿರುವುದು ಸುಗಮ ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದು ಈ ಬಗ್ಗೆ ಸಂಬಂಧ ಪಟ್ಟವರು ತಕ್ಷಣ ಕ್ರಮಕೈಗೊಳ್ಳಬೇಕಿದೆ ಎಂಬುದು ದಿನನಿತ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ವಾಹನ ಚಾಲಕರ ಆಗ್ರಹವಾಗಿದೆ.

"ಸರ್ವೀಸ್ ರಸ್ತೆಯಲ್ಲಿ ನೀರು ತುಂಬಿಕೊಂಡಿರುವ ಅಪಾಯಕಾರಿ ಮೋರಿ ಪ್ರಾಣ ಬಲಿಗಾಗಿ ಕಾದಂತಿದೆ. ಅನಾಹುತ ಸಂಭವಿಸಿದ ನಂತರ ಸಂತಾಪ, ಪರಿಹಾರದ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು  ಮಾತನಾಡುವ ಬದಲು ಮೊದಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು".
 -ವಿಶ್ವಾಸ್, ವಿದ್ಯಾರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News