ಸೌಂದರ್ಯಪ್ರಜ್ಞೆಯಿಂದ ಸೌಹಾರ್ದ ಬದುಕು ಸಾಧ್ಯ: ಡಾ.ಮೋಹನ್ ಆಳ್ವ

Update: 2022-08-28 12:42 GMT

ಉಡುಪಿ : ಸೌಂದರ್ಯ ಪ್ರಜ್ಞೆಯಿಂದ ನಾವು ಕಲೆ, ದೇಶಾಭಿಮಾನ, ಪರಿಸರದ ಕಾಳಜಿಯ ಜೊತೆಗೆ ಸೌಹಾರ್ದತೆಯ ಬದುಕು ನಡೆಸಲು ಸಾಧ್ಯ ಇದೆ. ಸೌಂದರ್ಯ ಪ್ರಜ್ಞೆ ಇಲ್ಲದಿದ್ದರೆ ದೇಶಕ್ಕೆ ಅಪಾಯಕಾರಿ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಹೇಳಿದ್ದಾರೆ.

ಉಡುಪಿ ಪಿ.ಎನ್. ಆಚಾರ್ಯ ಅಭಿಮಾನಿ ಬಳಗದ ವತಿಯಿಂದ ಕುಂಜಿಬೆಟ್ಟು ಶ್ರೀಗಾಯತ್ರೀ ಕಲ್ಯಾಣ ಮಂಟಪ ದಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಚಿತ್ರ ಕಲಾವಿದ ಪಿ.ಎನ್.ಆಚಾರ್ಯರ ಸಮಗ್ರ ಕಲಾಕೃತಿಗಳ ಸಂಪುಟ ಕಲಾಸಿರಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಸೌಂದರ್ಯ ಪ್ರಜ್ಞೆಯುಳ್ಳವರು ಈ ದೇಶದ ದೊಡ್ಡ ಸಂಪತ್ತು. ಚಿತ್ರಕಲಾ ಪ್ರಕಾರಗಳ ದಾಖಲೀಕರಣ ಇಂದಿನ ಅಗತ್ಯವಾಗಿದೆ. ಇದರಿಂದ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ವಿಚಾರಧಾರೆಗಳನ್ನು ಹಸ್ತಾಂತರಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಪಿ.ಎನ್. ಆಚಾರ್ಯ ಅಭಿಮಾನಿ ಬಳಗದ ಅಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಲಾವಿಮರ್ಶಕ, ಕಲಾವಿದ ಡಾ.ಉಪಾಧ್ಯಾಯ ಮೂಡುಬೆಳ್ಳೆ ಕೃತಿ ಪರಿಚಯ ಮಾಡಿದರು. ಡಾ.ಎ.ಪಿ.ಆಚಾರ್ಯ ಶುಭಾಶಂಸನೆಗೈದರು. ಇದೇ ಸಂದರ್ಭದಲ್ಲಿ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು.

ಕೃತಿಕಾರ ಪಿ.ಎನ್.ಆಚಾರ್ಯ, ಕರಾವಳಿ ಚಿತ್ರಕಲಾ ಚಾವಡಿ ಮಂಗಳೂರು ಅಧ್ಯಕ್ಷ ಗಣೇಶ್ ಸೋಮಯಾಜಿ ಉಪಸ್ಥಿತರಿದ್ದರು. ಡಾ.ಗುರುದಾಸ್ ಎಸ್.ಪಿ., ಪ್ರಾಸ್ತಾವಿಕವಾಗಿ ಮಾತನಾಡಿದರು.  ಎನ್.ದಾಮೋದರ ಶರ್ಮಾ ಕಾರ್ಯ ಕ್ರಮ ನಿರೂಪಿಸಿದರು. ಕೆ.ಮುರಳೀಧರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News