ಶೀಘ್ರದಲ್ಲೇ ರಾಜ್ಯದಲ್ಲಿ ಕನ್ನಡ ಕಡ್ಡಾಯ ಕಾನೂನು ಜಾರಿ: ಸಿಎಂ ಬೊಮ್ಮಾಯಿ ಘೋಷಣೆ

Update: 2022-09-15 07:16 GMT

ಬೆಂಗಳೂರು: ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡುವುದಕ್ಕಾಗಿ ಕಾನೂನು ರೂಪಿಸಲು ಇದೇ ಅಧಿವೇಶನದಲ್ಲಿ ಮಸೂದೆಯೊಂದನ್ನು ಮಂಡಿಸು ವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. 

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಕಲಾಪದ ಬಳಿಕ ಎದ್ದು ನಿಂತ ಜೆಡಿಎಸ್ ಸದಸ್ಯ ಅನ್ನದಾನಿ ಸೇರಿದಂತೆ ಇನ್ನಿತರ ಸದಸ್ಯರು, ‘ಕನ್ನಡ ನಾಡಿನಲ್ಲಿ ಹಿಂದಿ ದಿವಸ್ ಆಚರಣೆ ಮೂಲಕ ನಮ್ಮ ಹೆಮ್ಮೆಯ ಕನ್ನಡ ಭಾಷೆ, ಸಂಸ್ಕೃತಿಗೆ ಅನ್ಯಾಯ ಮಾಡಲಾಗುತ್ತಿದೆ. ಅತ್ಯಂತ ಪುರಾತನ ಭಾಷೆಯೂ ಆಗಿರುವ ಕನ್ನಡ ಭಾಷೆಯ ಕಡೆಗಣನೆ ಮಾಡುವುದು ಸರಿಯಲ್ಲ' ಎಂದು ಆಕ್ಷೇಪಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,  ‘ಇದೇ ಮೊದಲ ಬಾರಿಗೆ ಕಾನೂನಿನ ಮೂಲಕ ಕನ್ನಡ ಭಾಷೆ ಮತ್ತು ಕನ್ನಡದ ಜನರಿಗೆ ರಕ್ಷಣೆ ನೀಡುವ ಕೆಲಸ ಮಾಡು ತ್ತಿದ್ದೇವೆ. ಕನ್ನಡವನ್ನು ಬೆಳೆಸುವ ಉದ್ದೇಶದಿಂದ ರಾಜ್ಯದಲ್ಲಿ ನೆಲೆಸಿರುವ ಅನ್ಯಭಾಷಿಕರು ಕನ್ನಡ ಕಲಿತುಕೊಳ್ಳಲು ವ್ಯವಸ್ಥೆ ಮಾಡಲಾಗುವುದು’ ಎಂದರು.

‘ಭಾರತ ಒಂದು ಒಕ್ಕೂಟ ರಾಷ್ಟ್ರ. ಅನೇಕ ಭಾಷೆಗಳು ಮತ್ತು ಸಂಸ್ಕೃತಿಗಳನ್ನು ಒಳಗೊಂಡ ದೇಶ. ಎಲ್ಲ ಮಾತೃಭಾಷೆಗಳೂ ರಾಷ್ಟ್ರೀಯ ಭಾಷೆ ಗಳೇ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಕನ್ನಡದ ರಕ್ಷಣೆ ಮತ್ತು ಬೆಳವಣಿಗೆಗೆ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನೆಲ, ಜಲ, ಭಾಷೆಯ ವಿಚಾರದಲ್ಲಿ ರಾಜಕೀಯವನ್ನು ಮೀರಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ರಾಜ್ಯದಲ್ಲಿ ಕನ್ನಡ ಅಗ್ರಮಾನ್ಯ ಭಾಷೆ ಯಾಗಿ ಬಳಕೆಯಾಗುತ್ತದೆ’ ಎಂದೂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News