ರಾಜಕೀಯ ಮಹತ್ವಾಕಾಂಕ್ಷೆಗಾಗಿ ಆಪ್‌ನಿಂದ ಕೋಮುವಾದಿ ಅಜೆಂಡಾ?
"ಬಿಜೆಪಿಯ ಬಹುತೇಕ ರಾಜಕೀಯ ವಿರೋಧಿಗಳು, ಈ ವಿಷಯದಲ್ಲಿ ಕೇಂದ್ರ ಹಾಗೂ ಗುಜರಾತ್ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವಲ್ಲಿ ಯಾವುದೇ ಅವಕಾಶವನ್ನು ಬಿಟ್ಟುಕೊಡಲಿಲ್ಲವಾದರೂ ಒಂದು ರಾಜಕೀಯ ಪಕ್ಷ ಮಾತ್ರ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳ ಬಿಡುಗಡೆಯ ವಿಷಯದಲ್ಲಿ ವೌನ ತಾಳಿತ್ತು. ತನ್ನ ಅಬಕಾರಿ ನೀತಿಗೆ ಸಂಬಂಧಿಸಿ ಪ್ರಸಕ್ತ ದಿಲ್ಲಿಯಲ್ಲಿ ಬಿಜೆಪಿ ಜೊತೆ ತೀವ್ರ ಸಂಘರ್ಷದಲ್ಲಿ ತೊಡಗಿರುವ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್‌ಆದ್ಮಿ ಪಕ್ಷವು, ಈ ಅಪರಾಧಿಗಳನ್ನು ಬಿಡುಗಡೆಗೊಳಿಸಿರುವ ಗುಜರಾತ್ ಸರಕಾರದ ನಿರ್ಧಾರವನ್ನು ಖಂಡಿಸಲು ಇತರ ಪ್ರತಿಪಕ್ಷಗಳ ಜೊತೆ ಸೇರದಿರುವ ನಿರ್ಧಾರವನ್ನು ಮನಪೂರ್ವಕವಾಗಿ ತೆಗೆದುಕೊಂಡಿತ್ತು".
2002ರ ಗುಜರಾತ್ ಗಲಭೆ ಸಂದರ್ಭ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯ ಕುಟುಂಬಿಕರ ಹತ್ಯೆ ಪ್ರಕರಣದ 11 ಮಂದಿ ಅಪರಾಧಿಗಳನ್ನು ಬಿಡುಗಡೆಗೊಳಿಸಲು ಗುಜರಾತ್ ಸರಕಾರವು ನಿರ್ಧರಿಸಿದಾಗ, ನಿರೀಕ್ಷಿತವೆಂಬಂತೆ ಈ ನಡೆಗೆ ರಾಜಕೀಯ ಪಕ್ಷಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.
ವಾಸ್ತವಿಕವಾಗಿ ಕಾಂಗ್ರೆಸ್, ಟಿಎಂಸಿ, ಬಿಎಸ್‌ಪಿ ಹಾಗೂ ಎಡಪಕ್ಷಗಳು ಯಾವಾಗಲೂ ಸಮಾನ ನಿಲುವನ್ನು ತಳೆಯುವುದಿಲ್ಲ ವಾದರೂ ಈ ಸಲ ಅವು ಇಂತಹ ಬೀಭತ್ಸ ಕೃತ್ಯವನ್ನು ಎಸಗಿದವರನ್ನು ಬಿಡುಗಡೆಗೊಳಿಸಿದ್ದಕ್ಕಾಗಿ ಬಿಜೆಪಿ ನೇತೃತ್ವದ ಗುಜರಾತ್ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಈ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತಾದರೂ, 1992ರ ಜೈಲು ಶಿಕ್ಷೆ ರದ್ದತಿ ನೀತಿಯಡಿ, ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಯಾಗಿ, ಜೈಲಿನಿಂದ ಹೊರಬಂದ ಈ ಅಪರಾಧಿಗಳಿಗೆ ಹಾರಾರ್ಪಣೆ ಮಾಡಿ ಸ್ವಾಗತಿಸಲಾಯಿತು ಹಾಗೂ ಸಿಹಿ ತಿನಿಸಿರುವುದು, ಈ ಕುರಿತ ಆಕ್ರೋಶ ಇನ್ನಷ್ಟು ಉಲ್ಬಣಿಸುವಂತೆ ಮಾಡಿತು.
ಬಿಜೆಪಿಯ ಬಹುತೇಕ ರಾಜಕೀಯ ವಿರೋಧಿಗಳು, ಈ ವಿಷಯದಲ್ಲಿ ಕೇಂದ್ರ ಹಾಗೂ ಗುಜರಾತ್ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವಲ್ಲಿ ಯಾವುದೇ ಅವಕಾಶವನ್ನು ಬಿಟ್ಟುಕೊಡಲಿಲ್ಲವಾದರೂ ಒಂದು ರಾಜಕೀಯ ಪಕ್ಷ ಮಾತ್ರ ಈ ವಿಷಯದಲ್ಲಿ ವೌನ ತಾಳಿತ್ತು. ತನ್ನ ಅಬಕಾರಿ ನೀತಿಗೆ ಸಂಬಂಧಿಸಿ ಪ್ರಸಕ್ತ ದಿಲ್ಲಿಯಲ್ಲಿ ಬಿಜೆಪಿ ಜೊತೆ ತೀವ್ರ ಸಂಘರ್ಷದಲ್ಲಿ ತೊಡಗಿರುವ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್‌ಆದ್ಮಿ ಪಕ್ಷವು, ಈ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿರುವ ಗುಜರಾತ್ ಸರಕಾರದ ನಿರ್ಧಾರವನ್ನು ಖಂಡಿಸಲು ಇತರ ಪ್ರತಿಪಕ್ಷಗಳ ಜೊತೆ ಸೇರದಿರುವ ನಿರ್ಧಾರವನ್ನು ಮನಪೂರ್ವಕವಾಗಿ ತೆಗೆದುಕೊಂಡಿತ್ತು.
ಆಪ್‌ನ ಈ ನಿರ್ಧಾರಕ್ಕೆ ಕಾರಣವನ್ನು ಕಂಡುಹುಡುಕಲು ಹೆಚ್ಚು ಯೋಚಿಸಬೇಕಾದ ಅಗತ್ಯವಿಲ್ಲ. ದಿಲ್ಲಿ ಹಾಗೂ ಪಂಜಾಬ್‌ನಲ್ಲಿ ಪ್ರಮುಖ ರಾಜಕೀಯ ಪಕ್ಷಗಳನ್ನು ಅಧಿಕಾರದಿಂದ ಇಳಿಸಿದ ಬಳಿಕ ಕೇಜ್ರಿವಾಲ್‌ರ ಆಪ್ ಪಕ್ಷವು ಈ ವರ್ಷಾಂತ್ಯದ ವೇಳೆಗೆ ಚುನಾವಣೆಗೆ ತೆರಳಲಿರುವ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ರಾಜ್ಯಗಳ ಮೇಲೆ ತನ್ನ ಕಣ್ಣನ್ನು ನೆಟ್ಟಿದೆ.
ಗುಜರಾತ್‌ನಲ್ಲಿ ಕಳೆದ ವರ್ಷ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳಲ್ಲಿ ಜಯಗಳಿಸುವ ಮೂಲಕ ಗುಜರಾತ್‌ನ ರಾಜಕಾರಣದಲ್ಲಿ ತನ್ನ ಹೆಜ್ಜೆಯನ್ನೂರಿದೆ. ಪಂಜಾಬ್‌ಗೆ ತಾಗಿಕೊಂಡಿರುವ ಹಿಮಾಚಲ ಪ್ರದೇಶದಲ್ಲಿಯೂ ಅದು ಗಮನಾರ್ಹವಾದ ರೀತಿಯಲ್ಲಿ ಬೆಳೆಯತೊಡಗಿದೆ. ಕೇಜ್ರಿವಾಲ್ ಅವರು ಈ ಎರಡೂ ರಾಜ್ಯಗಳಲ್ಲಿ, ಅದರಲ್ಲೂ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಹುರುಪಿನಿಂದ ತನ್ನ ಪಕ್ಷದ ಪ್ರಚಾರದ ನೇತೃತ್ವ ವಹಿಸಿದ್ದಾರೆ.
300 ಯೂನಿಟ್ ಉಚಿತ ವಿದ್ಯುತ್, ಬುಡಕಟ್ಟು ಜನರಿಗೆ ಉತ್ತಮ ಸೌಕರ್ಯಗಳ ಪೂರೈಕೆ, ನಿರುದ್ಯೋಗಿ ಯುವಜನರಿಗೆ ಉದ್ಯೋಗ ಹಾಗೂ 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಮಹಿಳೆಯರಿಗೆ 1 ಸಾವಿರ ರೂ., ಹೀಗೆ ಈ ನಾಲ್ಕು ಖಾತರಿಗಳ ಮೇಲೆ ಕೇಜ್ರಿವಾಲ್ ಅವರ ಚುನಾವಣಾ ಪ್ರಚಾರವು ಕೇಂದ್ರೀಕೃತವಾಗಿತ್ತು. ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆ ಕುರಿತ ಚರ್ಚೆಯಲ್ಲಿ ಶಾಮೀಲಾಗುವ ಮೂಲಕ ಬಹುಸಂಖ್ಯಾತ ಹಿಂದೂ ಸಮುದಾಯದ ಒಂದು ವರ್ಗದಿಂದ ದೂರವಾಗುವುದಕ್ಕೆ ಕೇಜ್ರಿವಾಲ್ ಬಯಸುತ್ತಿಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಕೋಮುಸೂಕ್ಷ್ಮತೆಯಿರುವ ಗುಜರಾತ್‌ನಂತಹ ರಾಜ್ಯದಲ್ಲಿ ಬಿಲ್ಕಿಸ್ ಬಾನು ಪ್ರಕರಣದ ಬಗ್ಗೆ ಚರ್ಚಿಸುವುದು ತನಗೆ ರಾಜಕೀಯವಾಗಿ ಹಾನಿಯುಂಟು ಮಾಡುವ ಅಪಾಯವಿದೆಯೆಂದೇ ಕೇಜ್ರಿವಾಲ್ ಭಾವಿಸಿದ್ದಾರೆ.
ಆಪ್‌ನ ವೌನ ಹೊಸತೇನಲ್ಲ
ಇದೀಗ ಕೇಜ್ರಿವಾಲ್ ಅವರು ತನ್ನ ಪಕ್ಷವನ್ನು ದೇಶದ ಉದ್ದಗಲಕ್ಕೂ ವಿಸ್ತರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ. ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಬಳಸಿಕೊಳ್ಳುವ ಬಿಜೆಪಿಯ ಯುಕ್ತಿಯನ್ನೇ ತಾನು ಕೂಡಾ ಅಳವಡಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಭಾರೀ ಪ್ರಚಾರದೊಂದಿಗೆ ದೇವಾಲಯಗಳಿಗೆ ಕೇಜ್ರಿವಾಲ್ ಹಾಗೂ ಪಕ್ಷದ ಇತರ ನಾಯಕರ ಭೇಟಿ, ಹಿಂದೂಹಬ್ಬಗಳ ಅದ್ದೂರಿ ಆಚರಣೆ, ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಯಾತ್ರಿಕರಿಗೆ ಸರಕಾರಿ ನಿಧಿಯ ನೆರವು ಇತ್ಯಾದಿ ಕ್ರಮಗಳ ಮೂಲಕ ಆಪ್, ಬಹಿರಂಗವಾಗಿ ಹಿಂದೂ ಕಾರ್ಡ್ ಪ್ರಯೋಗಿಸಲಾರಂಭಿಸಿದೆ. ಕೋಮುವಾದಿ ಕಾರ್ಡ್ ಬಳಸುವ ಆರೋಪಗಳನ್ನು ಎದುರಿಸುತ್ತಿರುವ ಆಪ್‌ಗೆ ಈಗ ತಾನು ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ಭಾವನೆಗಳಿಗೆ ಕುಮ್ಮಕ್ಕು ನೀಡುತ್ತಿಲ್ಲವೆಂಬುದನ್ನು ಸ್ಪಷ್ಟಪಡಿಸಲು ಪ್ರಯಾಸ ಪಡಬೇಕಾಗಿ ಬಂದಿದೆ.
ಆದರೆ ಈ ಬಗ್ಗೆ ಪಕ್ಷದ ವಿವರಣೆ ಟೊಳ್ಳಾಗಿರುವಂತೆ ಭಾಸವಾಗುತ್ತದೆ. ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡದೆ ಇರಲು ದುರುದ್ದೇಶಪೂರ್ವಕವಾಗಿ ಆಯ್ದುಕೊಂಡಿದೆ. ಆದರೆ ಆ ಪಕ್ಷದ ನಾಯಕರು ಕೂಡಾ ಮುಸ್ಲಿಮರನ್ನು ಕೆಟ್ಟದಾಗಿ ಬಿಂಬಿಸತೊಡಗಿದ್ದಾರೆ.
ಹಿಂದೂಗಳ ಓಲೈಕೆಯಲ್ಲಿ ಬಿಜೆಪಿಯೊಂದಿಗೆ ಸ್ಪರ್ಧೆಗಿಳಿದಿರುವ ಆಪ್, ಮುಸ್ಲಿಮರನ್ನು ಅನ್ಯರೆಂಬಂತೆ ಬಿಂಬಿಸುವುದರಲ್ಲಿ ಬಿಜೆಪಿಯನ್ನು ಮೀರಿಸಲು ಯತ್ನಿಸುತ್ತಿದೆ. ರೋಹಿಂಗ್ಯಾ ನಿರಾಶ್ರಿತರಿಗೆ ವಸತಿ ಹಾಗೂ ರಕ್ಷಣೆಯನ್ನು ಒದಗಿಸಲಾಗುವುದೆಂದು ಕೇಂದ್ರ ವಸತಿ ಸಚಿವ ಹರ್ದೀಪ್‌ಸಿಂಗ್ ಪುರಿ ಕಳೆದ ವಾರ ಟ್ವೀಟ್ ಮಾಡಿದ್ದರು. ಅವರು ಹಾಗೆ ಹೇಳಿದ್ದೇ ತಡ, ಆಪ್ ದಿಗ್ಗನೆ ಎದ್ದು, ದಿಲ್ಲಿಯಲ್ಲಿ ಅಕ್ರಮ ವಲಸಿಗರನ್ನು ನೆಲೆಗೊಳಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಯತ್ನಿಸುತ್ತಿದೆ ಎಂದು ಆರೋಪಿಸಿತು. ಎಪ್ರಿಲ್ ತಿಂಗಳ ಆರಂಭದಲ್ಲಿ ಜಹಾಂಗೀರ್‌ಪುರದಲ್ಲಿ ಕೋಮುಹಿಂಸಾಚಾರ ಭುಗಿಲೆದ್ದಾಗ ಹಾಗೂ ಬಡ ಮುಸ್ಲಿಮರ ಮನೆಗಳು ದಿಲ್ಲಿ ನಗರಾಡಳಿತದ ಬುಲ್‌ಡೋಜರ್‌ಗಳಿಂದ ನೆಲಸಮಗೊಂಡಾಗ ಆಪ್‌ನ ಚುನಾಯಿತ ನಾಯಕರ್ಯಾರೂ ಅಲ್ಲಿರಲಿಲ್ಲ. ಅದರ ಬದಲಿಗೆ ಆಪ್‌ನ ಪ್ರಗತಿಪರ ನಾಯಕರೆಂದು ತೋರ್ಪಡಿಸಿಕೊಳ್ಳುವ ರಾಘವ್ ಚಡ್ಡಾ ಹಾಗೂ ಅತಿಶಿ ಮರ್ಲೆನಾ ಅವರು, ಬಾಂಗ್ಲಾದೇಶಿಯರು ಹಾಗೂ ರೋಹಿಂಗ್ಯಾಗಳ ಅಕ್ರಮ ವಲಸೆಯನ್ನು ಬಿಜೆಪಿ ಉತ್ತೇಜಿಸುತ್ತಿದೆ ಹಾಗೂ ಅವರನ್ನು ಗಲಭೆಗೆ ದಾಳಗಳಾಗಿ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದರು.
ರಾಷ್ಟ್ರೀಯ ಪರ್ಯಾಯವೇ ಅಥವಾ ಬಿಜೆಪಿಯ ಬಿ ಟೀಮೇ?
ಕೋಮುವಾದದ ಈ ದಾರಿಯನ್ನು ಕೇಜ್ರಿವಾಲ್ ಆಯ್ದುಕೊಂಡಿದ್ದುದು ಇದು ಮೊದಲೇನಲ್ಲ. ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಕೇಂದ್ರ ನಿರ್ಧಾರವನ್ನು ಆಪ್ ಅನುಮೋದಿಸಿತ್ತು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರುದ್ಧ ಸಾವಿರಾರು ಮಂದಿ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದಾಗ ಆಪ್ ನಾಯಕರ ಗೈರುಹಾಜರಿ ಕಂಡುಬಂದಿತ್ತು. ಎರಡು ವರ್ಷಗಳ ಹಿಂದೆ 53 ಮಂದಿ ಮೃತಪಟ್ಟು, 200ಕ್ಕೂ ಅಧಿಕ ಮಂದಿ ಗಾಯಗೊಂಡ ಈಶಾನ್ಯ ದಿಲ್ಲಿ ಹಿಂಸಾಚಾರದ ಸಂದರ್ಭದಲ್ಲಿಯೂ ಆ ಪ್ರದೇಶದಲ್ಲಿ ಆಪ್ ನಾಯಕರ ಪತ್ತೆಯೇ ಇರಲಿಲ್ಲ.
2011ರಲ್ಲಿ ಅಣ್ಣಾಹಝಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಹುಟ್ಟಿದ ಆಪ್ ಪಕ್ಷವು ಸೈದ್ಧಾಂತಿಕವಾಗಿ ಯಾವುದೇ ನೆಲೆಗಟ್ಟನ್ನು ಹೊಂದಿಲ್ಲ. ಸ್ವಚ್ಛ, ಭ್ರಷ್ಟಾಚಾರ ಮುಕ್ತ ಸರಕಾರವನ್ನು ಒದಗಿಸುವ ಭರವಸೆಯೊಂದಿಗೆ ಅದು ಅಧಿಕಾರಕ್ಕೆ ಬಂದಿತ್ತು. ಆದರೆ ಆವಾಗಿನಿಂದ ಅದು ತನ್ನ ಧೋರಣೆಗಳನ್ನು ಬದಲಾಯಿಸುತ್ತಲೇ ಬಂದಿದೆ.
ಭ್ರಷ್ಟಾಚಾರದ ವಿರುದ್ಧ ಅದರ ಅಭಿಯಾನವು ತ್ವರಿತವಾಗಿ ಉಚಿತ ವಿದ್ಯುತ್ ಪೂರೈಕೆ ಹಾಗೂ ಸುಧಾರಿತ ಶಿಕ್ಷಣ ಮೂಲಸೌಕರ್ಯದಂತಹ ಉತ್ತಮ ಪೌರಸೇವೆಗಳಿಗೆ ಒತ್ತು ನೀಡುತ್ತಾ ಬಂದಿದೆ. ಭರ್ಜರಿ ಭರವಸೆಗಳೊಂದಿಗೆ ಬಡವರು ಹಾಗೂ ಕಡೆಗಣಿಸಲ್ಪಟ್ಟ ಜನರನ್ನು ತಲುಪಲು ಆಪ್ ಅನುಸರಿಸುತ್ತಿರುವ ರಾಜಕಾರಣವು ಬಿಜೆಪಿ ಹಾಗೂ ಕಾಂಗ್ರೆಸ್‌ಗಿಂತ ವಿಭಿನ್ನವಾದುದಾಗಿದೆ. ಆದರೆ ಇದು ಬೇರೆಯೇ ಕತೆಯಾಗಿ ಬಿಟ್ಟಿದೆ.
ಕೃಪೆ: thequint