ಒಂದು ಹುಲ್ಲಿನ ಕಥೆ

Update: 2022-09-18 06:38 GMT

ಸರಿಸುಮಾರು 30ರಿಂದ 40 ಮಿಲಿಯನ್ ವರ್ಷಗಳ ಹಿಂದೆ ಚೀನಾದ ಯಾವುದೋ ಮೂಲೆಯಲ್ಲಿ ಹುಟ್ಟಿರಬಹುದು ಎನ್ನಲಾದ ಈ ಹುಲ್ಲು, ಇಂದು ಅಂಟಾರ್ಟಿಕ ಖಂಡದ ಹೊರತಾಗಿ ಎಲ್ಲೆಡೆಯೂ ಕಂಡು ಬರುವ ಒಂದು ಅಗಾಧ ಶಕ್ತಿ. 100 ಕೋಟಿಗೂ ಅಧಿಕ ಜನರು ಇದರ ನೆರವಿನಿಂದ ಮನೆಕಟ್ಟಿ ನೆಲೆಸಿಕೊಂಡಿದ್ದಾರೆ, ಜಗತ್ತಿನ ಶೇ.20ಕ್ಕೂ ಅಧಿಕ ಜನರ ಆರ್ಥಿಕ ಜೀವನದಲ್ಲಿ ಈ ಹುಲ್ಲಿನ ಛಾಯೆ ಒಂದಲ್ಲ ಒಂದು ರೂಪದಲ್ಲಿ ಕಂಡುಬರುತ್ತಿದೆ.

ಜನಸಾಮಾನ್ಯರ ಹುಟ್ಟಿನಲ್ಲಿ ಜೊತೆಯಾಗುವ ತೊಟ್ಟಿಲಿ ನಿಂದ ಹಿಡಿದು ಸಾವಿನಲ್ಲಿ ಹಾಸಿಗೆಯಾಗುವ ಚಟ್ಟದವರೆಗೂ ಬಳಕೆಯಾಗುತ್ತಿರುವ ಈ ಹುಲ್ಲಿನ ಕುರಿತು ಸಂತ ಶಿಶುನಾಳ ಶರೀಫರು ಪದಕಟ್ಟಿ ಹಾಡಿದ್ದರು, ‘ಬಿದಿರು ನಾನಾರಿಗಲ್ಲದವಳು’ ಎಂದು. ಹೌದು, ನಾನು ಹೇಳುತ್ತಿರುವ ಹುಲ್ಲಿನ ಹೆಸರು ಬಿದಿರು. ಇಂದು ಸೆ.18, ‘ಅಂತರ್‌ರಾಷ್ಟ್ರೀಯ ಬಿದಿರು ದಿನ’. ಮಾನವನ ಹಲವು ಸಮಸ್ಯೆಗಳಿಗೆ ಉತ್ತರವಾಗಿ, ಪ್ರಕೃತಿ ತನ್ನನ್ನು ತಾನು ಶ್ರೀಮಂತಗೊಳಿಸಲು ಸೃಷ್ಟಿಸಿದ ಒಂದು ಅದ್ಭುತ ಉತ್ಪನ್ನವೇ ಈ ಬಿದಿರು.

ಪ್ರತೀ ಗಂಟೆಗೆ ಒಂದುವರೆ ಇಂಚಿನಷ್ಟು ಬೆಳೆಯುವ, ಒಂದು ದಿನದಲ್ಲಿಯೇ ಮೂರರಿಂದ ನಾಲ್ಕು ಅಡಿ ಬೆಳೆದು ಕೇವಲ ನಾಲ್ಕು ವರ್ಷಗಳಲ್ಲಿಯೇ ತನ್ನ ಪ್ರೌಢ ಹಂತವನ್ನು ತಲುಪಬಲ್ಲ ಬಿದಿರು, ಸಸ್ಯ ಪ್ರಪಂಚದಲ್ಲಿಯೇ ಒಂದು ವಿಸ್ಮಯ. ಉಳಿದ ಮರಗಳಿಗೆ ಹೋಲಿಸಿದರೆ ಶೇ.35ರಷ್ಟು ಹೆಚ್ಚು ಆಮ್ಲಜನಕವನ್ನು ವಾತಾವರಣಕ್ಕೆ ಪೂರೈಸುವ ಬಿದಿರು ಹುಲ್ಲಿನ ಜಾತಿಗೆ ಸೇರಿದ ಗುಂಪಾಗಿ ಬೆಳೆಯಲು ಬಯಸುವ ಒಂದು ಸಸ್ಯ.

ಇಂದು ಜಗತ್ತಿನಲ್ಲಿ ಸರಿಸುಮಾರು 1,500ಕ್ಕೂ ಹೆಚ್ಚು ತಳಿಗಳನ್ನು ಹೊಂದಿರುವ ಬಿದಿರು, ಚೀನಾ ನಂತರ ಅತೀ ಹೆಚ್ಚು ಕಂಡುಬರುವುದು ಭಾರತದಲ್ಲಿ. ಇವೆರಡು ದೇಶಗಳು ಪ್ರಪಂಚದ ಒಟ್ಟು ಬಿದಿರಿನ ಪ್ರಮಾಣ ಅರ್ಧಕ್ಕಿಂತ ಹೆಚ್ಚನ್ನು ಹೊಂದಿವೆ. ಭಾರತದಲ್ಲಿ ಬಿದಿರಿನ 148 ತಳಿಗಳು ಅಂದಾಜು 15.46 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದೆ. ನಮ್ಮ ಅರಣ್ಯವು ಶೇ.12.8ರಷ್ಟು ಬಿದಿರಿನಿಂದ ಕೂಡಿದೆ ಎಂಬ ಅಂಕಿಅಂಶ ನಮ್ಮ ವನ್ಯ ಸಂಪತ್ತಿನಲ್ಲಿ ಅದರ ಮಹತ್ವವನ್ನು ತಿಳಿಸುತ್ತದೆ.

ನಿಮಗೆ ಗೊತ್ತಿದೆಯೇ, ಥಾಮಸ್ ಎಡಿಸನ್ ತನ್ನ ಇಲೆಕ್ಟ್ರಿಕ್ ಬಲ್ಬ್‌ನ್ನು ಉರಿಸಲು ಟಂಗಸ್ಟ್ಟನ್‌ಗಿಂತ ಮೊದಲು ಬಳಸಿದ ಫಿಲಾಮೆಂಟ್ ಬಿದಿರಿನ ಇದ್ದಿಲಾಗಿತ್ತು. ಸುಮಾರು 1880ರಿಂದ 1890ರವರೆಗೂ ಇದು ಬಳಕೆಯಿತ್ತು. ಚೀನಾದಲ್ಲಿ 7ಸಾವಿರ ವರ್ಷಗಳ ಹಿಂದೆಯೇ ಬಿದಿರಿನ ಉತ್ಪನ್ನಗಳ ಬಳಕೆಯಾಗಿರುವುದು ಪುರಾತತ್ವ ಸಂಶೋಧನೆಯು ಸಾಬೀತುಪಡಿಸಿದೆ. ಪೇಪರ್ ಇಂಡಸ್ಟ್ರಿ, ಬಟ್ಟೆ, ಔಷಧ, ಆಲಂಕಾರಿಕ ವಸ್ತುಗಳು, ಗೃಹಬಳಕೆಯ ಉತ್ಪನ್ನ, ಮನೆ ನಿರ್ಮಾಣದ ವಸ್ತುವಾಗಿ, ಅಷ್ಟೇ ಅಲ್ಲದೆ ಆಹಾರದ ಭಾಗವಾಗಿಯೂ ಇಂದು ಜಗತ್ತಿನ ಮಾರುಕಟ್ಟೆಯಲ್ಲಿ ಬಿದಿರು ಉದ್ಯಮದ ಪಾಲು ಸುಮಾರು 80 ಬಿಲಿಯನ್ ಡಾಲರ್‌ನಷ್ಟು, ಈ ಮೊತ್ತ 2027ರಲ್ಲಿ 100 ಬಿಲಿಯನ್ ಡಾಲರ್ ತಲುಪುತ್ತದೆ ಎಂಬ ಅಂದಾಜಿದೆ.

 ಕಪ್ಪು, ನೀಲಿ, ಕೆಂಪು, ಹಳದಿ, ಹಸಿರು ಹೀಗೆ ಹಲವು ಬಣ್ಣಗಳ ತಳಿಯನ್ನು ಹೊಂದಿರುವ ಬಿದಿರು, ಹಿರೋಷಿಮಾ ಅಣು ದುರಂತದಲ್ಲಿಯೂ ಬದುಕಿ ಹಸಿರನ್ನು ಹೊರಚೆಲ್ಲಿದ ಗಟ್ಟಿಗಿತ್ತಿ. ಬಿದಿರಿನ ಪ್ರತಿಯೊಂದು ತಳಿಯೂ ಭಿನ್ನವಾದ ಜೀವನ ಚಕ್ರವನ್ನು ಹೊಂದಿದ್ದು, ಇದರಲ್ಲಿ 3ರಿಂದ 150 ವರ್ಷಗಳವರೆಗೂ ಬದುಕುವ ಬೇರೆ ಬೇರೆ ಜಾತಿಯಿದೆ. ಸಾವಿನಲ್ಲಿಯೂ ವಿಶೇಷತೆ ಹೊಂದಿರುವ ಬಿದಿರು, ಒಮ್ಮೆ ಹೂಬಿಟ್ಟು ಸಾಯಲು ತೊಡಗಿದರೆ, ಬೇರೆ ಎಲ್ಲೆಡೆ ಇರುವ ಆ ತಳಿಯ ಎಲ್ಲಾ ಬಿದಿರುಗಳು ಹೂಬಿಟ್ಟು ಸಾಯತೊಡಗುತ್ತವೆ ಎಂದರ್ಥ, ಇದು ಎಷ್ಟು ಕರಾರುವಾಕ್ಕು ಎಂದರೆ ವಿಜ್ಞಾನಿಗಳ ಪ್ರಕಾರ ಅವುಗಳ ಡಿಎನ್‌ಎನಲ್ಲಿಯೇ ಈ ಅಂಶ ಸಿದ್ಧವಾಗಿರುತ್ತದೆ ಎಂದು ಅಂದಾಜಿಸ ಲಾಗಿದೆ. ಆದರೂ ಈ ಸಾಮೂಹಿಕ ಸಾವು ರಹಸ್ಯವಾಗಿಯೇ ಇದೆ. ಸಶಕ್ತವಾಗಿ ಬದುಕಲು ಸಂಪೂರ್ಣ ಹೊಸ ಹುಟ್ಟನ್ನು ಪಡೆಯುವ ವಿಧಾನ ಇದಾಗಿರಬಹುದೇ, ಸಂಶೋಧನೆ ಇನ್ನೂ ಜಾರಿಯಲ್ಲಿದೆ.

ಬಿದಿರಿನ ಶಕ್ತಿ ಎಷ್ಟು ಅಗಾಧ ವೆಂದರೆ, ವೈಜ್ಞಾನಿಕವಾಗಿ ಮೈಲ್ಡ್ ಸ್ಟೀಲ್‌ಗಿಂತಲೂ ಗಟ್ಟಿಯಾದದ್ದು ಈ ಬಿದಿರು. ಥಾಯ್ಲೆಂಡ್‌ನಲ್ಲಿ ಅಲ್ಲಿನ ಜನರು ನದಿ ದಾಟಲು 450 ಮೀ. ಉದ್ದದ ಬಿದಿರಿನ ಸೇತುವೆ ಯನ್ನು ನಿರ್ಮಿಸಿದ್ದರು ಎಂದರೆ ನಿಮಗೆ ಅದರ ಸಾಮರ್ಥ್ಯ ಅಂದಾಜಾಗಬಹುದು. ಹಿಂದೆಲ್ಲಾ ಭೂಕಂಪವಾದಾಗ ಜನರು ಬಿದಿರಿನ ಮೆಳೆಯೊಳಗೆ ನುಗ್ಗಿ ಕುಳಿತುಕೊಳ್ಳುತ್ತಿದ್ದರಂತೆ, ಅದು ಸುರಕ್ಷಿತ ಎಂದು. ಈಗಲೂ ಭಾರತದ ಎಷ್ಟೋ ಹಳ್ಳಿಗಳಲ್ಲಿ ಮನೆಯ ಹಂಚಿನ ಛಾವಣಿಯು ಬಿದಿರಿನಿಂದಲೇ ಮಾಡಿರುವುದು.

ಹಲವು ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರವಾಗಿರುವ ಬಿದಿರು, ಪಾಂಡಾಗಳಿಗಂತೂ ಅಚ್ಚುಮೆಚ್ಚು, ಅದರ 99 ಶೇ. ಆಹಾರದ ಮೂಲ ಕೇವಲ ಬಿದಿರು ಮಾತ್ರ, ದಿನಕ್ಕೆ 12ರಿಂದ 38ಕೆಜಿವರೆಗೆ ಬಿದಿರನ್ನು ಪಾಂಡಾ ತಿನ್ನಬಲ್ಲದು. ನಮ್ಮಲ್ಲೂ ಆನೆಗಳಿಗೆ ಇದು ಪ್ರಿಯವಾದ ಆಹಾರ. ಮನುಷ್ಯ ಕೂಡ ಇದರ ಚಿಗುರಾದ ಕಳಲೆಯನ್ನು ವಿವಿಧ ರೀತಿಯ ಖಾದ್ಯ ಮಾಡಿ ಸವಿದಿರುವ ಜೀವಿಯೇ. ಬಿದಿರಿನಿಂದ ಸಮಸ್ಯೆ ಇಲ್ಲವೆಂದಲ್ಲ, ಅದು ನಿಯಂತ್ರಿಸ ಲಾರದಷ್ಟು ಬೆಳೆಯಬಲ್ಲದು. ಇತರ ಸಸ್ಯಗಳಿಗೆ ಅವಕಾಶ ನೀಡದಷ್ಟು ದಟ್ಟವಾಗಬಲ್ಲದು. ಆದರೆ ಇಂದಿನ ಅರಣ್ಯ ನಾಶವಾಗುತ್ತಿರುವ ಸಂದರ್ಭದಲ್ಲಿ ಅದೊಂದು ಸಮಸ್ಯೆ ಅನ್ನಿಸಲಾರದು. ಪ್ರಸಕ್ತ ಏರುತ್ತಿರುವ ಜಾಗತಿಕ ಬಿಸಿಗೆ ಬಿದಿರಿನಿಂದ ಉತ್ತರ ಕಂಡುಕೊಳ್ಳಬಹುದಾಗಿದೆ. ಅದು ತನ್ನ ಸುತ್ತಲಿನ ವಾತಾವರಣವನ್ನು ಹೊರಗಡೆಯ ತಾಪಮಾನಕ್ಕಿಂತ 8ರಿಂದ 10 ಡಿಗ್ರಿಗಳಷ್ಟು ತಣ್ಣಗಾಗಿಸಬಲ್ಲದು. ಮೆಕ್ಸಿಕೋದಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ಒಂದು ಹೆಕ್ಟೇರ್‌ನಷ್ಟು ಪ್ರದೇಶದಲ್ಲಿನ ಬಿದಿರು 22ಟನ್‌ನಷ್ಟು ಕಾರ್ಬನ್ ಡೈ ಆಕ್ಸೈಡ್ ಅನ್ನು ವಾತಾವರಣದಿಂದ ಹೀರಬಲ್ಲದು, ಬೇರೆ ಮರಗಳಿಗಿಂತ ಶೇ.25ರಷ್ಟು ಹೆಚ್ಚು ಮಣ್ಣಿನ ಸವಕಳಿಯನ್ನು ತಡೆಯಬಲ್ಲದು. ಬೇರೆ ಮರಗಳ ಕಾಡನ್ನು ಬೆಳೆಸಲು 15ರಿಂದ 20ವರ್ಷ ಬೇಕಾದರೆ ಯಾವುದೇ ಗೊಬ್ಬರದ ಅಗತ್ಯವಿಲ್ಲದ ಬಿದಿರಿನ ಕಾಡು ಬೆಳೆಸಲು ನಾಲ್ಕರಿಂದ ಐದು ವರ್ಷ ಸಾಕು. ಆದರೂ ನಮ್ಮ ಸರಕಾರಗಳಿಗೆ ಅಕೇಶಿಯಾವೆಂದರೆ ಪ್ರೀತಿ.

‘ಬಡವನ ನಾಟಾ’ ಎಂದೇ ಕರೆಯಲ್ಪಡುವ ಬಿದಿರನ್ನು, ಪೋಷಿಸುವುದು ಮತ್ತು ಅದರ ಉದ್ಯಮವನ್ನು ಮನುಕುಲಕ್ಕೆ ಹೆಚ್ಚು ಉಪಯುಕ್ತವಾಗುವಂತೆ ಬೆಳೆಸುವುದು ಈ ದಿನದ ಉದ್ದೇಶವಾಗಿದೆ. ಬಿದಿರಿನ ಸಂಪತ್ತಿನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಜಾಗತಿಕ ಬಿದಿರು ಆರ್ಥಿಕತೆಯಲ್ಲಿ ಪಡೆಯುತ್ತಿರುವ ಪಾಲು ಕೇವಲ ಶೇ.4 ಆದರೆ ಚೀನಾದ ಪಾಲು ಶೇ.70. ಭಾರತದಂತಹ ದೇಶ ಇನ್ನಾದರೂ ಎಚ್ಚೆತ್ತುಕೊಳ್ಳಲಿ, ತನ್ನ ಅಭಿವೃದ್ಧಿಯನ್ನು ಹೆಚ್ಚು ಸುಸ್ಥಿರವಾಗಿಸಲಿ ಎಂಬುದು ಈ ದಿನಾಚರಣೆಯ ಮೂಲ ಸಂದೇಶವೂ ಹೌದು.

Writer - ಸುಧೀರ್‌ಕುಮಾರ್ ಹಿರೇಮನೆ

contributor

Editor - ಸುಧೀರ್‌ಕುಮಾರ್ ಹಿರೇಮನೆ

contributor

Similar News