ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹೈಕೋರ್ಟಿನಲ್ಲಿ ನಾಟಕ ಪ್ರದರ್ಶನ..!
ಬೆಂಗಳೂರು, ಸೆ.22: ಒಂದು ಶತಮಾನ ಪೂರೈಸಿರುವ ಕರ್ನಾಟಕ ಹೈಕೋರ್ಟಿನ ಕಟ್ಟಡದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಾಟಕ ಪ್ರದರ್ಶನಗೊಳ್ಳುತ್ತಿದ್ದು, ಕಲಾ ಆಸಕ್ತರ ಗಮನ ಸೆಳೆದಿದೆ.
ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಡಾ.ಅಕ್ಕಯ್ ಪದ್ಮಶಾಲಿ ಅವರ ಜೀವನ, ಕಷ್ಟ, ಪ್ರೀತಿ ಕುರಿತು ಪ್ರೇರಣಾತ್ಮಕ ‘ಅಕ್ಕಯ್ ಕರುಣೆಗೊಂದು ಸವಾಲು’ ನಾಟಕವೂ ಸೆ.24ರಂದು ಹೈಕೋರ್ಟಿನ ಕಟ್ಟಡದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರದರ್ಶನಗೊಳ್ಳುತ್ತಿದೆ. ಇದು ಅಕ್ಕಯ್ ಅವರ ಆತ್ಮಕಥನ 'ಅಕ್ಕಯ್' ಭಾಗವಾಗಿದೆ.
ಸಾಹಿತಿ ಬೇಳೂರು ರಘುನಂದನ್ ಅವರು ಅಕ್ಕಯ್ ಬದುಕನ್ನು ನಾಟಕರೂಪದಲ್ಲಿ ತೆರೆದಿಡುತ್ತಿದ್ದಾರೆ. ಕಾಜಾಣ ಮತ್ತು ಸಾತ್ವಿಕರಂಗ ಪಯಣತಂಡದಿಂದ 15 ಮಂದಿಗಳ ತಂಡ ಕೆಲಸ ಮಾಡಿದ್ದು, ಕೃಷ್ಣಮೂರ್ತಿಕವತ್ತಾರ್ ನಾಟಕ ರಚಿಸುತ್ತಿದ್ದಾರೆ. ಮುಖ್ಯವಾಗಿ ಅಕ್ಕಯ್ ಪಾತ್ರಕ್ಕೆ ನಯನ ಸೂಡ ಜೀವ ತುಂಬಿದ್ದಾರೆ.
ಲೈಂಗಿಕ ಅಲ್ಪಸಂಖ್ಯಾತರ ನೋವನ್ನು ಸ್ವತಃ ಅನುಭವಿಸಿರುವ ಅಕ್ಕಯ್ ಪದ್ಮಶಾಲಿ, ತಮ್ಮ ಬಾಲ್ಯದ ದಿನಗಳಿಂದ ಹಿಡಿದು ಹೋರಾಟದ ಪ್ರತಿ ಹಂತದಲ್ಲೂ ಸಮಾಜದ ವಿವಿಧೆಡೆಯಿಂದ ಬಂದ ಎಲ್ಲರೀತಿಯ ಅಪಮಾನ, ಹೀನಾಯ ಆರೋಪಗಳನ್ನು ಎದುರಿಸಿದ ಬಗೆಯನ್ನು ನಾಟಕರೂಪದಲ್ಲಿ ವಿವರಿಸಿದ್ದಾರೆ.
ನಾಟಕ ಪ್ರದರ್ಶನ ಕುರಿತು ‘ವಾರ್ತಾಭಾರತಿ’ವೊಂದಿಗೆ ಮಾತನಾಡಿದ ಅಕ್ಕಯ್, ಬೆಂಗಳೂರಿನ ಹೈಕೋರ್ಟ್ ಕಟ್ಟಡದ ಇತಿಹಾಸ ಪುಟಗಳಲ್ಲಿ ನಾಟಕವೂ ಸೇರ್ಪಡೆಗೊಳ್ಳುತ್ತಿರುವುದು ಸಂತಹ ತಂದಿದೆ. ಲಿಂಗತ್ವ, ಲೈಂಗಿಕ ಸಮಾನತೆ, ಸಮಾಜದೊಂದಿಗೆ ಸಹಬಾಳ್ವೆಯನ್ನು ಕೋರುವ ನಾಟಕ ಹಲವು ಆಯಾಮಗಳನ್ನು ಕಟ್ಟಿಕೊಡುತ್ತಲೇ ಸಿದ್ದಮಾದರಿಯ ಕಟ್ಟೆಗಳನ್ನು ಒಡೆದು ಹೊಸತೊಂದನ್ನು ಕಟ್ಟುವುದು ನಾಟಕದ ವಿಶೇಷ ಎಂದು ನುಡಿದರು.
-ನಾಟಕ-ಅಕ್ಕಯ್
-ವಿನ್ಯಾಸ-ರಂಗರೂಪ-ನಿರ್ದೇಶನ-ಬೇಲೂರುರಘನಂದನ್
-ಸೆ.24.ಮಧ್ಯಾಹ್ನ 1 ಗಂಟೆ (ಉಚಿತ ಪ್ರವೇಶ)
-ಸ್ಥಳ: ಹೈಕೋರ್ಟ್ ಕಟ್ಟಡ
----------------------------------
ನಾಟಕದ ವಿಶೇಷತೆ ಏನು?: ಅಕ್ಕಯ್ ಜೀವನ ಕುರಿತು ನಾಟಕದಲ್ಲಿ ನಮ್ಮಲ್ಲಿ ಒಂದು ತಲ್ಲಣ ತಂದೊಡ್ಡಿ ನಮ್ಮನ್ನು ಮತ್ತಷ್ಟು ವೈಚಾರಿಕವಾಗಿ ಆಲೋಚಿಸಲು ಹಚ್ಚುತ್ತದೆ. ಸಿದ್ಧ ಮಾದರಿಗಳ ಆಚೆ ನಿಂತು ನಮ್ಮ ಸುತ್ತ ನೋಡಲು ಪ್ರೇರೇಪಿಸುತ್ತದೆ. ಜಗತ್ತಿನ ಜೀವ ವೈವಿಧ್ಯತೆಯನ್ನು ಗೌರವಿಸಲು ಹೇಳಿ ಕೊಡುತ್ತದೆ.