ಗುತ್ತಿಗೆದಾರರ ಸಂಘದ ವಿರುದ್ಧ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಸಚಿವ ಮುನಿರತ್ನ; ತಾತ್ಕಾಲಿಕ ಪ್ರತಿಬಂಧಕಾದೇಶ
ಬೆಂಗಳೂರು, ಸೆ.22: ಕಮಿಷನ್ ಆರೋಪದ ಹಿನ್ನೆಲೆಯಲ್ಲಿ ಸಚಿವ ಮುನಿರತ್ನ ಅವರು 50 ಕೋಟಿ ರೂಪಾಯಿಯ ಮಾನಹಾನಿ ಪ್ರಕರಣ ದಾಖಲಿಸಿರುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸೇರಿ 19 ಮಂದಿಯ ವಿರುದ್ಧ ನಗರದ 59ನೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ತಾತ್ಕಾಲಿಕ ಪ್ರತಿಬಂಧಕಾದೇಶ ಹೊರಡಿಸಿದೆ.
ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು ಸಲ್ಲಿಸಿರುವ ಮೂಲ ದಾವೆಯ ವಿಚಾರಣೆಯನ್ನು 59ನೆ ಹೆಚ್ಚುವರಿ ನಗರ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎನ್.ಕೃಷ್ಣಯ್ಯ ಅವರಿದ್ದ ಪೀಠವು ವಿಚಾರಣೆ ನಡೆಸಿ ಆದೇಶ ಮಾಡಿದೆ.
ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಫಿರ್ಯಾದಿಯಾಗಿರುವ ಸಚಿವ ಮುನಿರತ್ನ ವಿರುದ್ಧ ಯಾವುದೇ ತೆರನಾದ ಆರೋಪ, ವಿವಾದಾತ್ಮಕ ಹೇಳಿಕೆ ಪ್ರಕಟ ಮಾಡದಂತೆ ಪ್ರತಿವಾದಿಗಳಾದ ಡಿ.ಕೆಂಪಣ್ಣ, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ, ಉಪಾಧ್ಯಕ್ಷ ವಿ.ಕೃಷ್ಣರೆಡ್ಡಿ, ಕೆ.ಎಸ್.ಶಾಂತೇಗೌಡ ಸೇರಿ ಒಟ್ಟು 19 ಮಂದಿಗೆ ಪ್ರಕಟ, ಪ್ರಸಾರ ಮಾಡದಂತೆ ಮುಂದಿನ ವಿಚಾರಣೆಯವರೆಗೆ ತಾತ್ಕಾಲಿಕ ಪ್ರತಿಬಂಧಕಾದೇಶ ಹೊರಡಿಸಿದೆ. ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಅ.15ಕ್ಕೆ ಮುಂದೂಡಿದೆ.