ಬೆಂಗಳೂರು | 5 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಯೋಗ ಗುರುವಿಗೆ 5 ವರ್ಷ ಜೈಲು ಶಿಕ್ಷೆ
ಬೆಂಗಳೂರು, ಸೆ.23: ಐದು ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ಆರೋಪಿ ಯೋಗ ಗುರುವಿಗೆ ನಗರದ ಒಂದನೆ ತ್ವರಿತಗತಿಯ ನ್ಯಾಯಾಲಯ 5 ವರ್ಷ ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಬೆಂಗಳೂರಿನ ಜಯನಗರದ ಧ್ಯಾನಮಂದಿರದಲ್ಲಿ ಸಾರ್ವಜನಿಕರಿಗೆ ಧ್ಯಾನ ಮತ್ತು ಯೋಗಾಸನಗಳ ತರಬೇತಿ ಕೊಡುತ್ತಿದ್ದ ಯೋಗಗುರು ಸ್ವಾಮಿ ನಿರಂಜನ್ ಎಂಬಾತ ಈ ಶಿಕ್ಷೆಗೆ ಗುರಿಯಾಗಿದ್ದಾನೆ.
ವಿಚಾರಣೆ ನಡೆಸಿದ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎನ್. ರೂಪಾ ಅವರು ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ. ದಂಡ ಕಟ್ಟುವಲ್ಲಿ ವಿಫಲವಾದಲ್ಲಿ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಸಂತ್ರಸ್ತ ಬಾಲಕಿಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಬೆಂಗಳೂರು ನಗರ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಿದೆ.
ಸಂತ್ರಸ್ತೆಯ ತಾಯಿ ಧ್ಯಾನ ಮಂದಿರದಲ್ಲಿ ಸೇವಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. 2018ರ ಆ.4ರಂದು ಶಾಲೆ ಮುಗಿದ ಬಳಿಕ ಬಾಲಕಿಯನ್ನು ತಾಯಿ ಆಶ್ರಮಕ್ಕೆ ಕರೆದುಕೊಂಡು ಬಂದಿದ್ದರು.
ಜೊತೆಗೆ ಅತಿಥಿ ಕೋಣೆಯಲ್ಲಿ ಬಾಲಕಿಯ ಬ್ಯಾಗ್ ಇಟ್ಟಿದ್ದರು. ಬ್ಯಾಗ್‍ನಿಂದ ಪುಸ್ತಕಗಳನ್ನು ತೆಗೆದುಕೊಂಡು ಬಾ ಎಂದು ಮಗುವನ್ನು ತಾಯಿ ಕಳಿಸಿದ್ದರು. ಮಗು ಕೋಣೆಗೆ ಹೋಗುತ್ತಿದ್ದಂತೆ ಒಳಗಡೆ ಇದ್ದ ಆರೋಪಿ, ಬಾಗಿಲನ್ನು ಮುಚ್ಚಿ ಮಗುವನ್ನು ವಿವಸ್ತ್ರಗೊಳಿಸಿ ಗುಪ್ತಾಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಸಂಬಂಧ ಬಾಲಕಿಯ ತಾಯಿ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನನ್ವಯ ಪೊಕ್ಸೋ ಕಾಯಿದೆಯಡಿ ದೂರು ದಾಖಲಿಸಿಕೊಂಡು, ಅಂದಿನ ತನಿಖಾಧಿಕಾರಿಗಳಾದ ರವಿಕುಮಾರ್ ಮತ್ತು ಎಸ್.ವೀರೇಂದ್ರಪ್ರಸಾದ್‍ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಪ್ರಾಸಿಕ್ಯೂಷನ್‍ಪರವಾಗಿ ಪಿ.ಕೃಷ್ಣವೇಣಿ ಬಲವಾದ ವಾದ ಮಂಡಿಸಿದರು. ವಾದ ಮತ್ತು ಸಾಕ್ಷಾಧಾರಗಳನ್ನು ಪರಿಶೀಲಿಸಿದ ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.