ಚುನಾವಣೆಗಳನ್ನು ಗೆದ್ದು ದೇಶವನ್ನು ಹಾಳು ಮಾಡುವುದು ಹೇಗೆ?

Update: 2022-09-24 06:53 GMT

ಒಂದು ರಾಜ್ಯದಲ್ಲಿ ಹಾಗೂ ದೇಶದಲ್ಲಿ ದೀರ್ಘಾವಧಿಯವರೆಗೆ ನಿರಂತರವಾಗಿ ಒಂದೇ ಪಕ್ಷವು ಅಧಿಕಾರದಲ್ಲಿದ್ದರೆ, ಅದು ಆಡಳಿತದಲ್ಲಿ ಅಹಂಕಾರ, ಸಂತೃಪ್ತ ಮನೋಭಾವ ಮತ್ತು ಅಸಮರ್ಥತೆಗೆ ದಾರಿ ಮಾಡಿಕೊಡಬಹುದು. 'ಬಂಗಾಳವು ಇಂದು ಏನು ಯೋಚಿಸುತ್ತದೆಯೋ, ಭಾರತ ಅದನ್ನು ನಾಳೆ ಯೋಚಿಸುತ್ತದೆ' ಎನ್ನುವ ಮಾತಿದೆ. ಅದು ಹಿಂದೆಂದಿಗಿಂತಲೂ ಹೆಚ್ಚು ಇಂದು ಸತ್ಯ ಎನ್ನುವುದು ಮತ್ತೊಮ್ಮೆ ಸಾಬೀತಾಗುತ್ತಿದೆ. ಆದರೆ, ಅದು ಸತ್ಯವಾಗಿರುವುದು ನಕಾರಾತ್ಮಕ ರೀತಿಯಲ್ಲಿ!


ಭಾರತೀಯ ಜನತಾ ಪಕ್ಷ (ಬಿಜೆಪಿ)ದ ನಿಯಂತ್ರಣವನ್ನು ನರೇಂದ್ರ ಮೋದಿ ವಹಿಸಿಕೊಂಡ ಬಳಿಕ, ಪಕ್ಷವು 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಅದು ಸ್ವತಂತ್ರವಾಗಿ ಬಹುಮತಗಳನ್ನು ಪಡೆದುಕೊಂಡಿದೆ. ಹಿಂದೆ ಈ ಸಾಧನೆಯ ಹತ್ತಿರ ಬರುವುದಕ್ಕೂ ಅದಕ್ಕೆ ಸಾಧ್ಯವಾಗಿರಲಿಲ್ಲ. ಒಂದು ಕಾಲದಲ್ಲಿ ಆ ಪಕ್ಷದ ಪ್ರಭಾವ ಉತ್ತರ ಮತ್ತು ಪಶ್ಚಿಮ ಭಾರತಕ್ಕೆ ಮಾತ್ರ ಸೀಮಿತವಾಗಿತ್ತು. ಈಗ ಅದಕ್ಕೆ ಪೂರ್ವ ಮತ್ತು ದಕ್ಷಿಣ ಭಾರತಕ್ಕೂ ತನ್ನ ಪ್ರಭಾವವನ್ನು ಗಣನೀಯವಾಗಿ ವಿಸ್ತರಿಸಲು ಸಾಧ್ಯವಾಗಿದೆ. ಮೋದಿ ರಾಷ್ಟ್ರೀಯ ಅಖಾಡಕ್ಕೆ ಜಿಗಿಯುವ ಮೊದಲು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡನೇ ಅತಿ ದೊಡ್ಡ ಪಕ್ಷವಾಗುತ್ತದೆ, ಅಸ್ಸಾಮ್‌ನಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತದೆ ಮತ್ತು ತೆಲಂಗಾಣದಲ್ಲೂ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತದೆ ಎನ್ನುವುದನ್ನು ಯಾರೂ ಊಹಿಸಿರಲಿಕ್ಕಿಲ್ಲ.

ಆದರೆ, ಬಿಜೆಪಿಯ ಈ ಅಮೋಘ ಚುನಾವಣಾ ಯಶಸ್ಸು ಮಾತ್ರ ಪರಿಣಾಮಕಾರಿ ಆಡಳಿತಕ್ಕೆ ದಾರಿಮಾಡಿಕೊಡಲಿಲ್ಲ. 2014 ಮೇ ತಿಂಗಳಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ, ಭಾರತವು ಆರ್ಥಿಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ ಮತ್ತು ಸಾಂಸ್ಥಿಕವಾಗಿ ದಾರಿ ತಪ್ಪಿತು. ಕೊರೋನ ವೈರಸ್ ಸಾಂಕ್ರಾಮಿಕದ ದಾಳಿಗಿಂತಲೂ ತುಂಬಾ ಮೊದಲೇ, ನೋಟು ನಿಷೇಧ ಮತ್ತು ಜಿಎಸ್‌ಟಿಯ ತಪ್ಪು ಅನುಷ್ಠಾನವು ದೇಶದ ಆರ್ಥಿಕತೆಯನ್ನು ಘಾಸಿಗೊಳಿಸಿತ್ತು. ಸಾಂಕ್ರಾಮಿಕದ ಅವಧಿಯಲ್ಲಿ ಪ್ರಧಾನಿಯವರ ನೀತಿಗಳು ಅದನ್ನು ಮತ್ತಷ್ಟು ಹದಗೆಡಿಸಿದವು.

ಮೋದಿಯವರ ಉಸ್ತುವಾರಿಯಲ್ಲಿ, ಒಂದು ಕಡೆ, ಸಂಪತ್ತು ಅಪಾಯಕಾರಿ ರೀತಿಯಲ್ಲಿ ಅವರ ಕೆಲವೇ ಕೆಲವು ಆಪ್ತ ಬಂಡವಾಳಶಾಹಿಗಳಲ್ಲಿ ಕೇಂದ್ರೀಕೃತವಾಯಿತು. ಇನ್ನೊಂದೆಡೆ, ಕೆಲಸ ಮಾಡುವ ಕಾರ್ಮಿಕರ ಸಂಖ್ಯೆಯಲ್ಲಿ ಕಡಿತ ಉಂಟಾಯಿತು. ಮುಸ್ಲಿಮರ ಮೇಲೆ ಕಳಂಕ ಹೊರಿಸುವ ಕಾರ್ಯದ ಉಸ್ತುವಾರಿಯನ್ನು ಕೇಂದ್ರ ಗೃಹ ಸಚಿವರು ವಹಿಸಿಕೊಂಡರು ಹಾಗೂ ಅದನ್ನು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದ ಮುಖ್ಯಮಂತ್ರಿ ಅತ್ಯಂತ ಉತ್ಸಾಹದಿಂದ ಕಾರ್ಯಗತಗೊಳಿಸುತ್ತಾ ಸಾಗಿದರು. ಅವರ ಕೃತ್ಯಗಳು ಆಗಲೇ ದುರ್ಬಲವಾಗಿದ್ದ ಸಾಮಾಜಿಕ ಹಂದರವನ್ನು ಮತ್ತಷ್ಟು ಘಾಸಿಗೊಳಿಸಿತು. ನಮ್ಮ ಶ್ರೇಷ್ಠ ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ಉಪಕುಲಪತಿಗಳು ಮತ್ತು ನಿರ್ದೇಶಕರನ್ನು ಅರ್ಹತೆಯ ಬದಲು ಸಿದ್ಧಾಂತಗಳ ಆಧಾರದಲ್ಲಿ ನೇಮಿಸಲಾಯಿತು. ಅದು ವಿಜ್ಞಾನ ಮತ್ತು ಜ್ಞಾನ ಸೃಷ್ಟಿಗೆ ಮಾರಕ ಹೊಡೆತವನ್ನು ನೀಡಿತು. ಸ್ವತಂತ್ರವಾಗಿರಬೇಕಾಗಿರುವ ಕೆಲವು ಸರಕಾರಿ ಸಂಸ್ಥೆಗಳು ಹಿಂದುತ್ವ ಸಿದ್ಧಾಂತದ ವಾಹಕಗಳಾದವು. ಇತರ ಸಂಸ್ಥೆಗಳು ಸರಕಾರಕ್ಕೆ ಆಪ್ತವಾಗಿರುವ ಬಂಡವಾಳಶಾಹಿಗಳ ಪರವಾಗಿ ಬಹಿರಂಗವಾಗಿಯೇ ಕೆಲಸ ಮಾಡಲು ಆರಂಭಿಸಿದವು.

ಒಟ್ಟಾರೆಯಾಗಿ, ಮೋದಿ ಸರಕಾರದ ದಾಖಲೆಯು ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ನೇತೃತ್ವದ ಸರಕಾರಗಳಿಗೆ ಹೋಲಿಸಿದರೆ ಗಮನಾರ್ಹವೆನಿಸುವಷ್ಟು ಕಳಪೆಯಾಗಿದೆ. ಆದರೆ, ಆರ್ಥಿಕತೆಯನ್ನು ನಿಭಾಯಿಸುವಲ್ಲಿ ಅಸಮರ್ಥವಾದರೂ, ಸಮಾಜವನ್ನು ಆಳವಾಗಿ ವಿಭಜಿಸಿದರೂ, ಸಾಂವಿಧಾನಿಕ ಸಂಸ್ಥೆಗಳನ್ನು ಪೇಲವಗೊಳಿಸಿದರೂ ಹಾಗೂ ಆ ಮೂಲಕ ಪ್ರಜಾಪ್ರಭುತ್ವವನ್ನು ಆಳವಾಗಿ ದುರ್ಬಲಗೊಳಿಸಿದರೂ, ಈ ಅಂಕಣವನ್ನು ಬರೆಯುವ ಹೊತ್ತಿಗೆ ಮೋದಿಯವರ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಎದುರಾಳಿಗಳೇ ಇಲ್ಲ. ಈ ವರ್ಷದ ಆರಂಭದಲ್ಲಿ ಚುನಾವಣೆ ನಡೆದ ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಗೆದ್ದ ಬಳಿಕ, ಬಿಜೆಪಿಯು 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಕುದುರೆಯಂತೆ ಕಾಣುತ್ತಿದೆ. ಇದಕ್ಕೆ ಕಾರಣಗಳೆಂದರೆ- ಆ ಪಕ್ಷ ಹೊಂದಿರುವ ಆರ್ಥಿಕ ಸಂಪನ್ಮೂಲಗಳು, ಸೈದ್ಧಾಂತಿಕ ಬದ್ಧತೆ, ಸಂಘಟನಾ ಸಾಮರ್ಥ್ಯ ಮತ್ತು ಸರಕಾರಿ ಸಂಸ್ಥೆಗಳ ಮೇಲೆ ಹೊಂದಿರುವ ನಿಯಂತ್ರಣ. ಇದು ಒಂದೆಡೆಯಾದರೆ, ರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾಸಾರ್ಹ ಪ್ರತಿಪಕ್ಷದ ಕೊರತೆ ಇನ್ನೊಂದು ಕಾರಣ.

ಆಡಳಿತಾತ್ಮಕ ದಾಖಲೆ ಕಳಪೆಯಾಗಿದ್ದರೂ, ನಿರಂತರವಾಗಿ ಚುನಾವಣಾ ಯಶಸ್ಸು ಪಡೆಯುವ ವಿದ್ಯಮಾನವು ಆಧುನಿಕ ಜಗತ್ತಿನಲ್ಲಿ ಅಸಾಮಾನ್ಯ ಎನ್ನುವಂತಿಲ್ಲ. ರಶ್ಯದ ವ್ಲಾದಿಮಿರ್ ಪುಟಿನ್, ಟರ್ಕಿಯ ರಿಸೆಪ್ ತಯ್ಯಿಪ್ ಎರ್ದೊಗಾನ್ ಮತ್ತು ಝಿಂಬಾಬ್ವೆಯ ರಾಬರ್ಟ್ ಮುಗಾಬೆ ತಮ್ಮ ದೇಶಗಳ ಆರ್ಥಿಕತೆ, ಸ್ವಾಯತ್ತ ಸಂಸ್ಥೆಗಳು, ಸಾಮಾಜಿಕ ಹಂದರ ಮತ್ತು ಅಂತರ್‌ರಾಷ್ಟ್ರೀಯ ಪ್ರತಿಷ್ಠೆಯನ್ನು ಹಾಳುಗೆಡವಿದ ಹೊರತಾಗಿಯೂ ಸುದೀರ್ಘ ಕಾಲ ಅಧಿಕಾರದಲ್ಲಿ ಮುಂದುವರಿದಿದ್ದಾರೆ.
ಭಾರತದ ಓರ್ವ ಇತಿಹಾಸಕಾರನಾಗಿ, ಜನರ ಗಮನಕ್ಕೆ ಹೆಚ್ಚು ಬಾರದ ಸಂಗತಿಯೊಂದನ್ನು ಇಲ್ಲಿ ಪ್ರಸ್ತಾಪಿಸಲು ನಾನು ಬಯಸುತ್ತೇನೆ. ಹಿಂದೆ ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸು ಮತ್ತು ಸಿಪಿಎಮ್ ಏನು ಮಾಡಿತ್ತೋ, ಅದನ್ನು ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಮಾಡುತ್ತಿದ್ದಾರೆ ಎಂದು ನನಗನಿಸುತ್ತದೆ. ಎಡ ರಂಗ (ಲೆಫ್ಟ್ ಫ್ರಂಟ್)ವು ಪಶ್ಚಿಮ ಬಂಗಾಳದಲ್ಲಿ 34 ವರ್ಷ ಅಧಿಕಾರ ನಡೆಸಿತು. ಸಿಪಿಎಮ್ ಪಕ್ಷವು ಎಡ ರಂಗದ ಪ್ರಮುಖ ಘಟಕ ಪಕ್ಷವಾಗಿತ್ತು. ಈ 34 ವರ್ಷಗಳ ಪೈಕಿ, ಜ್ಯೋತಿ ಬಸು 23 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರು ಅಂತಹ ಪರಿಣಾಮಕಾರಿ ಮುಖ್ಯಮಂತ್ರಿಯೇನೂ ಆಗಿರಲಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಮೋದಿ ಅವರ ಬಿಜೆಪಿಯಂತೆ, ಪಶ್ಚಿಮ ಬಂಗಾಳದಲ್ಲಿ ಬಸು ಅವರ ಸಿಪಿಎಮ್ ಚುನಾವಣೆಗಳನ್ನು ಗೆಲ್ಲುವುದರಲ್ಲಿ ನಿಸ್ಸೀಮವಾಗಿತ್ತು, ಆದರೆ ಆಡಳಿತದಲ್ಲಿ ಅಸಮರ್ಥವಾಗಿತ್ತು.

ಜ್ಯೋತಿ ಬಸು ಮೊದಲ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದು 1977ರಲ್ಲಿ. ರಾಜ್ಯವು ಆ ವೇಳೆಗಾಗಲೇ ಪ್ರಬಲ ಕೈಗಾರಿಕಾ ನೆಲೆ, ಭವ್ಯ ವಿಶ್ವವಿದ್ಯಾನಿಲಯಗಳು, ಸುಂದರ ಕರಾವಳಿಗಳು ಮತ್ತು ಜೀವಂತಿಕೆಯ ಸಾಂಸ್ಕೃತಿಕ ಬದುಕನ್ನು ಹೊಂದಿತ್ತು. ರಾಜ್ಯದ ಸರಕಾರವನ್ನು ಅಂದು ಜಾಣತನದಿಂದ ಸರಿಯಾಗಿ ಮುನ್ನಡೆಸಿದ್ದರೆ, ಪಶ್ಚಿಮ ಬಂಗಾಳವು ಇಂದು ಭಾರತದ ಅತಿ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯಗಳ ಪೈಕಿ ಒಂದಾಗಿರುತ್ತಿತ್ತು. ಆದರೆ, ಬಸು ಮತ್ತು ಅವರ ಸಿಪಿಎಮ್ ಕಾಮ್ರೇಡ್‌ಗಳು ಕಾರ್ಖಾನೆಗಳ ನಿರ್ಧಾರಗಳಲ್ಲಿ ಹಸ್ತಕ್ಷೇಪ ನಡೆಸುವ ಅಧಿಕಾರವನ್ನು ಕಾರ್ಮಿಕ ಸಂಘಟನೆಗಳಿಗೆ ನೀಡಿದರು; ಸರಕಾರ ಮತ್ತು ವಿಶ್ವವಿದ್ಯಾನಿಲಯಗಳ ಹುದ್ದೆಗಳಿಗೆ ನಡೆಯುವ ನೇಮಕಾತಿಗಳನ್ನು ತಮಗೆ ಬೇಕಾದಂತೆ ನಡೆಸಲು ಅಲೀಮುದ್ದೀನ್ ರಸ್ತೆಯಲ್ಲಿರುವ ಪಕ್ಷದ ಧಣಿಗಳಿಗೆ ಅವಕಾಶ ನೀಡಿದರು; ಬಂಡವಾಳ ಹೂಡಿಕೆದಾರರನ್ನು ರಕ್ಕಸರಂತೆ ಬಿಂಬಿಸಿದರು ಮತ್ತು ಉದ್ಯಮಿಗಳು ಉಸಿರುಗಟ್ಟುವಂತೆ ಮಾಡಿದರು. ಈ ಎಲ್ಲಾ ಕಾರಣಗಳಿಂದಾಗಿ, ಈ ಸುದೀರ್ಘ ಅವಧಿಯಲ್ಲಿ ರಾಜ್ಯದ ಆರ್ಥಿಕತೆಯು ಸ್ಥಗಿತಗೊಂಡಿತು.

ಪಶ್ಚಿಮ ಬಂಗಾಳದಲ್ಲಿ ಆಳವಾಗಿ ಬೇರೂರಿದ್ದ ಕಂಪೆನಿಗಳು ಭಾರತದ ಇತರ ಭಾಗಗಳಿಗೆ ವಲಸೆ ಹೋದವು. ಸಿಪಿಎಮ್ ಪಕ್ಷದ ಧಣಿಗಳು ಬೌದ್ಧಿಕ ಪ್ರತಿಭಾ ಪಲಾಯನಕ್ಕೂ ನಾಂದಿ ಹಾಡಿದರು. ಗ್ರಾಮೀಣ ಜನಜೀವನವನ್ನು ಸುಧಾರಿಸುವ ಮಾತುಗಳನ್ನು ಧಾರಾಳವಾಗಿ ಆಡಿದರೂ, ಎಡ ರಂಗವು ಆ ಕ್ಷೇತ್ರದಲ್ಲೂ ಹೆಚ್ಚಿನದೇನನ್ನೂ ಮಾಡಲಿಲ್ಲ. ಅದೇ ವೇಳೆ, ಒಂದು ಕಾಲದಲ್ಲಿ ಹಿಂದುಳಿದ, ಐತಿಹಾಸಿಕವಾಗಿ ಭೂಮಾಲಕರ ದಬ್ಬಾಳಿಕೆಗೆ ಒಳಗಾಗಿದ್ದ ಮತ್ತು ಬೆಟ್ಟ ಗುಡ್ಡಗಳಿಂದ ಕೂಡಿರುವ ಹಿಮಾಚಲಪ್ರದೇಶದಂತಹ ದುರ್ಗಮ ರಾಜ್ಯವು, ಇಂದು ಶಿಕ್ಷಣ, ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಲ್ಲಿ ಪಶ್ಚಿಮ ಬಂಗಾಳಕ್ಕಿಂತ ತುಂಬಾ ಹೆಚ್ಚಿನ ಪ್ರಗತಿ ಸಾಧಿಸಿದೆ.

ಇಲ್ಲಿ ಇನ್ನೊಂದು ವಿಷಯವನ್ನು ಗಮನಿಸಬೇಕು. ಕೇರಳದಲ್ಲಿಯೂ ಸಿಪಿಎಮ್ ಈಗ ಸರಕಾರ ನಡೆಸುತ್ತಿದೆ ಹಾಗೂ ಹಿಂದಿನಿಂದಲೂ ಆಗಾಗ ಸರಕಾರಗಳನ್ನು ನಡೆಸಿಕೊಂಡು ಬಂದಿದೆ. ಆದರೆ, ಪಶ್ಚಿಮ ಬಂಗಾಳದ ಸಿಪಿಎಮ್ ಮತ್ತು ಕೇರಳದ ಸಿಪಿಎಮ್ ಪರಸ್ಪರ ಸಂಬಂಧವೇ ಇಲ್ಲವೆನ್ನಬಹುದಾದಷ್ಟು ಭಿನ್ನವಾಗಿವೆ. ಕೇರಳದ ಸಿಪಿಎಮ್ ಜಾತಿ ಮತ್ತು ಲಿಂಗ ಸಮಾನತೆಗಾಗಿನ ಸಾಮಾಜಿಕ ಚಳವಳಿಗಳಿಂದ ಪ್ರಭಾವಿತಗೊಂಡಿದೆ. ಅದು ಅಧಿಕಾರಕ್ಕೆ ಬಂದಾಗಲೆಲ್ಲ ಶಿಕ್ಷಣ ಮತ್ತು ಆರೋಗ್ಯದ ಮೇಲೆ ಅತಿ ಹೆಚ್ಚಿನ ಗಮನವನ್ನು ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಮ್‌ಗಳು ಪರ್ಯಾಯವಾಗಿ ಸರಕಾರಗಳನ್ನು ರಚಿಸುತ್ತಾ ಬಂದಿರುವುದು ಬಹುಷಃ ಇದಕ್ಕೆ ಕಾರಣವಾಗಿರಬಹುದು. ಕೇರಳದ ಸಿಪಿಎಮ್ ಮಾನವ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳು ಅಪಾರವಾಗಿವೆ. ಇದು ಕೇರಳದ ಕಮ್ಯುನಿಸ್ಟರು ಹೆಮ್ಮೆ ಪಟ್ಟುಕೊಳ್ಳುವಂಥ ವಿಷಯವಾಗಿದೆ.

ಆದರೆ, ಪಶ್ಚಿಮ ಬಂಗಾಳದ ಕಮ್ಯುನಿಸ್ಟರು ಹೆಮ್ಮೆ ಪಟ್ಟುಕೊಳ್ಳಲು ಕಾರಣಗಳಿಲ್ಲ. ಹಾಗಿದ್ದರೂ ರಾಜ್ಯದಲ್ಲಿ ಸಿಪಿಎಮ್ ಚುನಾವಣೆಗಳನ್ನು ಗೆಲ್ಲುತ್ತಾ ಸಾಗಿತು, ಹೇಗೆ? ಒಂದು ಕಾರಣವೆಂದರೆ, ಪಕ್ಷಕ್ಕೆ ತುಂಬಾ ಸಂಖ್ಯೆಯಲ್ಲಿ ಕಾರ್ಯಕರ್ತರಿದ್ದರು ಮತ್ತು ಅವರು ವ್ಯಾಪಕವಾಗಿ ಹಂಚಿಹೋಗಿದ್ದರು. ಬೇರೆ ಪಕ್ಷಗಳ ಕಾರ್ಯಕರ್ತರಿಗೆ ಹೋಲಿಸಿದರೆ, ಸಿಪಿಎಮ್ ಕಾರ್ಯಕರ್ತರು ತಮ್ಮ ಪಕ್ಷಕ್ಕೆ ಹೆಚ್ಚಿನ ನಿಷ್ಠೆ ಹೊಂದಿದ್ದರು. ಜ್ಯೋತಿ ಬಸು ಪಕ್ಷದ ಸಾರ್ವಜನಿಕ ಮುಖವಾಗಿದ್ದರು. ನಗರ ಪ್ರದೇಶದಿಂದ ಬಂದವರಾದ ಅವರ ನಯವಿನಯವು ಕೋಲ್ಕತಾದ ಮಧ್ಯಮ ವರ್ಗವನ್ನು ಸೆಳೆಯಿತು. ಅದೇ ವೇಳೆ, ಪ್ರಮೋದ್ ದಾಸ್‌ಗುಪ್ತ ಮತ್ತು ಅನಿಲ್ ಬಿಸ್ವಾಸ್ ಮುಂತಾದ ತೀವ್ರವಾದಿ ನಾಯಕರು ಜಿಲ್ಲಾ ಮಟ್ಟಗಳಲ್ಲಿ ಪಕ್ಷದ ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸಿದರು.

ಸಿಪಿಎಮ್‌ನ ಸುದೀರ್ಘ ಚುನಾವಣಾ ಯಶಸ್ಸಿಗೆ ಇನ್ನೊಂದು ಪ್ರಮುಖ ಕಾರಣವೆಂದರೆ, 'ಕಾರ್ಮಿಕ ವರ್ಗದ ಅಂತರ್‌ರಾಷ್ಟ್ರೀಯ ಬಂಧುತ್ವ'ಕ್ಕೆ ಸಿಪಿಎಮ್ ಬದ್ಧತೆ ಹೊಂದಿರುವ ಹೊರತಾಗಿಯೂ, ಅದು ತನ್ನನ್ನು ಬಂಗಾಳಿ ಸ್ವಾಭಿಮಾನವನ್ನು ಎತ್ತಿಹಿಡಿಯುವ ಪಕ್ಷವಾಗಿ ಬಿಂಬಿಸಿಕೊಂಡಿತ್ತು. 'ಸೆಂಟರ್ ಕೋಮ್ ದಿಯೇ ಚೇ' (ಕೇಂದ್ರ ಸರಕಾರವು ನಮ್ಮ ಹಕ್ಕಿಗಿಂತ ಕಡಿಮೆ ಪಾಲನ್ನು ನೀಡಿದೆ) ಎನ್ನುವುದು, ಮುಖ್ಯವಾಗಿ ಚುನಾವಣೆಯ ಸಂದರ್ಭಗಳಲ್ಲಿ ಅದರ ಘೋಷಣೆಯಾಗಿತ್ತು. ಆಗ ರಾಜ್ಯದಲ್ಲಿ ಅದರ ಪ್ರಮುಖ ಎದುರಾಳಿಯಾಗಿದ್ದದ್ದು ಕಾಂಗ್ರೆಸ್ ಪಕ್ಷದ ರಾಜ್ಯ ಘಟಕ. ಕೇಂದ್ರದಲ್ಲಿ ಕಾಂಗ್ರೆಸ್ ಸುದೀರ್ಘ ಕಾಲ ಅಧಿಕಾರದಲ್ಲಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. (ಚೋದ್ಯದ ಸಂಗತಿಯೆಂದರೆ, ರಾಜ್ಯದಲ್ಲಿ ಈಗ ಪ್ರಬಲ ಪಕ್ಷವಾಗಿರುವ ಟಿಎಮ್‌ಸಿ ಕೂಡ ಕೇಂದ್ರದಲ್ಲಿ ಪ್ರಬಲ ಪಕ್ಷವಾಗಿರುವ ಬಿಜೆಪಿಯನ್ನು ಇದೇ ಬಂಗಾಳಿ ಪ್ರಾದೇಶಿಕ ಸ್ವಾಭಿಮಾನದ ಹೆಸರಿನಲ್ಲಿ ಹತ್ತಿಕ್ಕುತ್ತಿದೆ.)

ದೀರ್ಘಾವಧಿ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯನ್ನು ಸಾಧಿಸಲು ಕೇಂದ್ರದಲ್ಲಿ ಮೋದಿ ಸರಕಾರಕ್ಕೆ ಸಾಧ್ಯವಾಗಿಲ್ಲ (ಪಶ್ಚಿಮ ಬಂಗಾಳದ ಬಸು ಸರಕಾರಕ್ಕೂ ಅದು ಸಾಧ್ಯವಾಗಿರಲಿಲ್ಲ). ಆದರೂ ಈ ಎರಡೂ ಸರಕಾರಗಳು ನಿರ್ದಿಷ್ಟ ಗುಂಪುಗಳನ್ನು ಗುರಿಯಾಗಿಸಿ ರೂಪಿಸಿದ ಕಲ್ಯಾಣ ಯೋಜನೆಗಳಲ್ಲಿ ಕೊಂಚ ಮಟ್ಟಿನ ಯಶಸ್ಸನ್ನು ಪಡೆದಿವೆ. ಪಶ್ಚಿಮ ಬಂಗಾಳದಲ್ಲಿ ಬಸು ಅವರ ಎಡ ರಂಗ ಸರಕಾರವು 'ಆಪರೇಶನ್ ಬರ್ಗ' ಎಂಬ ಹೆಸರಿನ ಯೋಜನೆಯ ಅಡಿಯಲ್ಲಿ ಜನರಿಗೆ ಭೂಹಕ್ಕುಗಳನ್ನು ನೀಡಿದ್ದರೆ, ಬಿಜೆಪಿಯು ಅಡುಗೆ ಅನಿಲ ಮತ್ತು ಉಚಿತ ಪಡಿತರ ವಿತರಣೆ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿದೆ. ಸರಕಾರಗಳು ಈ ಯೋಜನೆಗಳ ಯಶಸ್ಸನ್ನು ಚುನಾವಣಾ ಸಂದರ್ಭಗಳಲ್ಲಿ ಯಥೇಚ್ಛವಾಗಿ ಬಳಸಿಕೊಂಡಿವೆ.

ಹಿಂದಿನ ಪಶ್ಚಿಮ ಬಂಗಾಳ ಮತ್ತು ಇಂದಿನ ಭಾರತದ ನಡುವಿನ ಈ ರಾಜಕೀಯ ಸಾಮ್ಯತೆಗಳನ್ನು ಗಮನಿಸಲೇಬೇಕಾಗಿದೆ. ಆದರೆ, ಇಲ್ಲಿ ಕೆಲವೊಂದು ಪ್ರಮುಖ ವ್ಯತ್ಯಾಸಗಳೂ ಇವೆ. ರಾಷ್ಟ್ರ ರಾಜಧಾನಿಯ ಬಗ್ಗೆ ರಾಜ್ಯವೊಂದು ಹೊಂದಿರುವ ದ್ವೇಷ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಧಾರ್ಮಿಕ ಬಹುಸಂಖ್ಯಾತರು ಹೊಂದಿರುವ ದ್ವೇಷದ ನಡುವೆ ಅಗಾಧ ವ್ಯತ್ಯಾಸವಿದೆ ಎನ್ನುವುದು ಸ್ಪಷ್ಟ. ಮೊದಲಿನ ವರ್ಗದ ದ್ವೇಷವು ಸಾಮಾಜಿಕ ಹಂದರಕ್ಕೆ ಎರಡನೇ ವರ್ಗದ ದ್ವೇಷದಷ್ಟು ಮಾರಕವಲ್ಲ.

ಜ್ಯೋತಿ ಬಸು ಓರ್ವ ಪರಿಣಾಮಹೀನ ಆಡಳಿತಗಾರರಾಗಿದ್ದರು. ಆದರೆ, ಅವರು ನರೇಂದ್ರ ಮೋದಿಯವರಂತೆ ತನ್ನ ಸುತ್ತ ಅತಿರಂಜಿತ ವ್ಯಕ್ತಿತ್ವವೊಂದನ್ನು ನಿರ್ಮಿಸಲು ಹೋಗಲಿಲ್ಲ. ಬಸು ಅವರಲ್ಲಿ ಕನಿಷ್ಠ ಸೌಜನ್ಯ ಮತ್ತು ಸಾಕಷ್ಟು ಮಟ್ಟದ ಔಚಿತ್ಯ ಪ್ರಜ್ಞೆಯಿತ್ತು. ಅದು ನಮ್ಮ ಹಾಲಿ ಪ್ರಧಾನಿಯವರಲ್ಲಿ ಚೂರೂ ಇಲ್ಲ. ಅಲ್ಪಸಂಖ್ಯಾತರ ರಕ್ಷಣೆಗೆ ಬಸು ಹೊಂದಿದಷ್ಟು ಬದ್ಧತೆಯನ್ನು ಹೊಂದಲು ಮೋದಿ ಅವರಿಗೆ ಯಾವತ್ತೂ ಸಾಧ್ಯವಾಗಲಾರದು. ಅಂತಿಮವಾಗಿ, ಒಂದು ರಾಜ್ಯದ ಬೆಳವಣಿಗೆಯನ್ನು ತಡೆಹಿಡಿದರೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಸಂಕಟಕ್ಕೆ ಒಳಗಾಗುತ್ತಾರೆ. ಆದರೆ, ಒಂದು ಇಡೀ ದೇಶದ ಬೆಳವಣಿಗೆಯನ್ನು ತಡೆಹಿಡಿದರೆ ಅಗಾಧ ಪ್ರಮಾಣದ ಜನರು ಯಾತನೆಗೊಳಗಾಗುತ್ತಾರೆ.

ಇನ್ನೊಂದು ಪ್ರಮುಖ ವ್ಯತ್ಯಾಸವೆಂದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ, ಅಂದರೆ ಮೋದಿಯ ಬಿಜೆಪಿಯು ತನ್ನ ರಾಜಕೀಯ ಎದುರಾಳಿಗಳಿಗೆ ಕಿರುಕುಳ ನೀಡಲು ತನ್ನ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡಿದೆ. 'ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟಗೊಂಡಿರುವ ವರದಿಯೊಂದು ಹೇಳುವಂತೆ, 2014ರ ಬಳಿಕ ಸಿಬಿಐ ಬಂಧಿಸಿರುವ ಅಥವಾ ದಾಳಿ ಮಾಡಿರುವ ರಾಜಕಾರಣಿಗಳ ಪೈಕಿ ಶೇ. 95 ಮಂದಿ ಪ್ರತಿಪಕ್ಷಗಳಿಗೆ ಸೇರಿದವರು. ಅದೂ ಅಲ್ಲದೆ, ಮೋದಿ ಮತ್ತು ಅಮಿತ್ ಶಾ ನೇತೃತ್ವದ ಕೇಂದ್ರ ಸರಕಾರವು ರಹಸ್ಯ ಚುನಾವಣಾ ಬಾಂಡ್ ಯೋಜನೆಯ ಮೂಲಕ ಹಾಗೂ ಸ್ವತಂತ್ರ ಟಿವಿ ಚಾನೆಲ್‌ಗಳನ್ನು ಬೆದರಿಸುವ ಮೂಲಕ ಮತ್ತು ಸತ್ಯವನ್ನು ಹೇಳುವ ಪತ್ರಕರ್ತರನ್ನು ಬಂಧಿಸುವ ಮೂಲಕ ರಾಜಕೀಯ ಪ್ರಕ್ರಿಯೆಯನ್ನು ತಮ್ಮ ಪರವಾಗಿ ತಿರುಚುತ್ತಿದ್ದಾರೆ.
ಈ ಭಿನ್ನತೆಗಳ ಹೊರತಾಗಿಯೂ, ವಿಧಾನಗಳು ಮತ್ತು ಫಲಿತಾಂಶಗಳಲ್ಲಿ ಅವುಗಳ ನಡುವಿನ ಸಾಮ್ಯತೆಗಳು ಗಮನಾರ್ಹ. ಸಾಲು ಸಾಲಾಗಿ ಹಲವು ಬಾರಿ ವಿಧಾನಸಭಾ ಚುನಾವಣೆಗಳನ್ನು ಗೆದ್ದ ಪಕ್ಷವು ಉತ್ತಮ ಆಡಳಿತ ಅಥವಾ ಸಾಮಾಜಿಕ ನೆಮ್ಮದಿಯನ್ನು ನೀಡುತ್ತದೆ ಎನ್ನುವ ಖಾತ್ರಿಯಿಲ್ಲ ಎನ್ನುವುದನ್ನು ಪಶ್ಚಿಮ ಬಂಗಾಳದ ಆಧುನಿಕ ಇತಿಹಾಸವು ಸ್ಪಷ್ಟವಾಗಿ ಹೇಳುತ್ತದೆ. ಬಿಜೆಪಿಯು ನಿರಂತರವಾಗಿ ಚುನಾವಣೆಗಳನ್ನು ಗೆಲ್ಲುತ್ತಾ, ದೇಶವನ್ನು ಇನ್ನಷ್ಟು ಹಳ್ಳಹಿಡಿಸಿದರೆ, ಅದು ಆಧುನಿಕ ಭಾರತದ ಕತೆಯೂ ಆಗಬಹುದು.

ಒಂದು ರಾಜ್ಯದಲ್ಲಿ ಹಾಗೂ ದೇಶದಲ್ಲಿ ದೀರ್ಘಾವಧಿಯವರೆಗೆ ನಿರಂತರವಾಗಿ ಒಂದೇ ಪಕ್ಷವು ಅಧಿಕಾರದಲ್ಲಿದ್ದರೆ, ಅದು ಆಡಳಿತದಲ್ಲಿ ಅಹಂಕಾರ, ಸಂತೃಪ್ತ ಮನೋಭಾವ ಮತ್ತು ಅಸಮರ್ಥತೆಗೆ ದಾರಿ ಮಾಡಿಕೊಡಬಹುದು. 'ಬಂಗಾಳವು ಇಂದು ಏನು ಯೋಚಿಸುತ್ತದೆಯೋ, ಭಾರತ ಅದನ್ನು ನಾಳೆ ಯೋಚಿಸುತ್ತದೆ' ಎನ್ನುವ ಮಾತಿದೆ. ಅದು ಹಿಂದೆಂದಿಗಿಂತಲೂ ಹೆಚ್ಚು ಇಂದು ಸತ್ಯ ಎನ್ನುವುದು ಮತ್ತೊಮ್ಮೆ ಸಾಬೀತಾಗುತ್ತಿದೆ. ಆದರೆ, ಅದು ಸತ್ಯವಾಗಿರುವುದು ನಕಾರಾತ್ಮಕ ರೀತಿಯಲ್ಲಿ!

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News