ಶೇ.100 ಕಮಿಷನ್ ಯೋಜನೆ ಶೀಘ್ರ ಜಾರಿ!
‘‘ತನಿಖೆ ನಡೆಸಿಯೇ ಸಿದ್ಧ...ತನಿಖೆ ನಡೆಸಿ ಎಲ್ಲರನ್ನು ದೇಶದ್ರೋಹದ ಕಾಯ್ದೆಯಲ್ಲಿ ಬಂಧಿಸಲಿದ್ದೇನೆ’’ ಬೊಮ್ಮಯ್ಯನವರು ಘೋಷಿಸಿದ್ದು ಕೇಳಿ ಪತ್ರಕರ್ತ ಎಂಜಲು ಕಾಸಿ ಪತ್ರಿಕಾ ಕಚೇರಿಯಲ್ಲಿ ಕೂತಲ್ಲೇ ರೋಮಾಂಚನ ಗೊಂಡ. ಸರಿ...ಇನ್ನು ಶೇ. 40 ಕಮಿಷನ್ ಪಡೆದವರಿಗೆಲ್ಲ ಜೈಲೇ ಗತಿ ಎಂದು ಸಂಭ್ರಮಿಸಿ ಬೊಮ್ಮಯ್ಯರನ್ನು ಸಂದರ್ಶಿಸುವುದಕ್ಕೆ ಓಡೋಡಿಕೊಂಡು ಹೋದ.
‘‘ಸಾರ್... ತನಿಖೆಗೆ ಯಾವಾಗ ಆದೇಶ ನೀಡುತ್ತೀರಿ?’’ ಕಾಸಿ ಕೇಳಿದ.
‘‘ಪ್ರಕರಣವನ್ನು ಎನ್‌ಐಎ ಅವರಿಗೆ ತನಿಖೆಗೆ ಒಪ್ಪಿಸಲು ಚಿಂತನೆ ನಡೆಸುತ್ತಿದ್ದೇವೆ....’’ ಬೊಮ್ಮಯ್ಯ ಉಗ್ರಾವತಾರ ತಾಳಿ ನುಡಿದರು.
ಈಗ ಬೆಚ್ಚಿ ಬೀಳುವ ಸರದಿ ಕಾಸಿಯದ್ದು. ‘‘ಸಾರ್....ಶೇ. 40 ಕಮಿಷನ್ ತನಿಖೆ ಎನ್‌ಐಗೆ ಒಪ್ಪಿಸಿದ್ದೀರಾ? ಗ್ರೇಟ್ ಸರ್’’ ಬೊಮ್ಮಯ್ಯರನ್ನು ಅಭಿನಂದಿಸಿದ.
‘‘ಮತ್ತೇನ್ರೀ....ಶೇ. 40 ಕಮಿಷನ್ ಎಂದ್ರೇ ಸುಮ್ಮನೇನ.... ಅದನ್ನು ತಮಾಷೆ ಮಾಡುವುದು ಎಂದರೆ ನಾಡನ್ನು, ದೇಶವನ್ನು ತಮಾಷೆ ಮಾಡಿದಂತೆ....ಅವರೆಲ್ಲ ದೇಶದ್ರೋಹಿಗಳು....’’ ಬೊಮ್ಮಯ್ಯರು ಹೇಳಿದರು.
‘‘ಸಾರ್...ಈಗ ನೀವು ತನಿಖೆ ಮಾಡಲು ಹೊರಟಿರುವುದು....’’
‘‘ಅದೇ ಕಣ್ರೀ....ಶೇ. 40 ಕಮಿಷನ್‌ನ್ನು ತಮಾಷೆ ಮಾಡಿ ‘ಪೇಸಿಎಂ’ ಪೋಸ್ಟರ್ ಅಂಟಿಸಿ ಈ ನಾಡಿನ ಮಾನ ಮರ್ಯಾದೆಯನ್ನು ಬೀದಿ ಪಾಲು ಮಾಡಿದವರ ವಿರುದ್ಧ ತನಿಖೆ ನಡೆಸುತ್ತೇವೆ....’’ ಬೊಮ್ಮಯ್ಯನವರು ಈಗ ನಿಜ ವಿಷಯ ಬಹಿರಂಗ ಪಡಿಸಿದರು. ಕಾಸಿ ಒಮ್ಮೆಲೆ ಭೂಮಿಗಿಳಿದ. ‘‘ಅಂದ್ರೆ...ಪೇಸಿಎಂ ಟ್ರೋಲ್‌ನ್ನು ತನಿಖೆ ಮಾಡುತ್ತಾ ಇದ್ದೀರಾ?’’ ಕಾಸಿ ನಿರಾಸೆಯಿಂದ ಕೇಳಿದ.
‘‘ಹೌದ್ರೀ ಮತ್ತೆ. ಇಂದು ಶೇ. 40 ಕಮಿಷನ್‌ನಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಬಿರುಸಿನಿಂದ ನಡೆಯುತ್ತಿವೆ. ಎಲ್ಲ ಸಚಿವರ ಮನೆ, ಬಂಗಲೆಗಳು ಒಂದರ ಮೇಲೆ ಒಂದು ಏಳುವಂತಾಗಿವೆ. ಇದರಿಂದ ಜನರಿಗೆ ಉದ್ಯೋಗ ಸಿಕ್ಕಿದೆ. ಇದರಿಂದ ಹೊಟ್ಟೆ ಉರಿ ಆದವರು ಇದೀಗ ತಮಾಷೆ ಮಾಡುತ್ತಿದ್ದಾರೆ....ಅವರೆಲ್ಲ ದೇಶದ್ರೋಹಿಗಳು. ಇದನ್ನು ಎನ್‌ಐಎ ಮೂಲಕ ತನಿಖೆ ನಡೆಸಿ ಪೇಸಿಎಂ ಪೋಸ್ಟರ್ ಅಂಟಿಸಿದವರನ್ನೆಲ್ಲ ಬಂಧಿಸಿ ಯುಎಪಿಎ ಕಾಯ್ದೆಯಡಿ ಶಾಶ್ವತ ಜೈಲಿಗೆ ತಳ್ಳಲಿದ್ದೇವೆ....’’
‘‘ಸಾರ್...ಇದನ್ನು ಪೊಲೀಸರು ತನಿಖೆ ನಡೆಸಿದರೆ ಆಗಲ್ವೆ? ಎನ್‌ಐಎ ಅವರ ಅಗತ್ಯ ಇದೆಯಾ?’’ ಕಾಸಿ ಅನುಮಾನ ದಿಂದ ಕೇಳಿದ.
‘‘ನೋಡ್ರೀ...ಈ ಪೋಸ್ಟರ್ ಪ್ರಿಂಟ್ ಮಾಡಿಸಿರುವುದು ಪಾಕಿಸ್ತಾನದ ಮುದ್ರಣಾಲಯದಲ್ಲಿ ಎನ್ನುವ ಸಂಶಯ ಬಂದಿದೆ. ಈ ಬಗ್ಗೆ ಐಬಿ ಮೂಲದಿಂದ, ಗೂಢಚರ ಮೂಲ ದಿಂದ, ರಾ ಮೂಲದಿಂದ, ಎಫ್‌ಬಿಐ ಮೂಲದಿಂದ, ಐಎಸ್‌ಐ ಮೂಲದಿಂದ ನಮ್ಮ ಕೆಲವು ಪತ್ರಕರ್ತರಿಗೆ ಮಾಹಿತಿ ದೊರಕಿದೆಯಂತೆ. ಪೋಸ್ಟರ್‌ನ್ನು ಅಂಟಿಸಲು ಬಳಸಿದ ಗಮ್ ಅನ್ನು ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ನವರು ತಯಾರಿ ಮಾಡಿ ಪೂರೈಸಿದ್ದಾರೆ ಎನ್ನುವ ಬಗ್ಗೆಯೂ ಬೇರೆ ಬೇರೆ ಮೂಲಗಳಿಂದ ಮಾಹಿತಿ ಬಂದಿದೆ. ದೇಶದ ಆಂತರಿಕ ಭದ್ರತೆಯ ಮೇಲೆ ದಾಳಿ ನಡೆಸುವ ಉದ್ದೇಶವೂ ಸಂಚುಕೋರರಲ್ಲಿ ಇರುವಂತಿದೆ. ಆದುದರಿಂದ ತಕ್ಷಣ ಎನ್‌ಐಎಗೆ ಇದರ ತನಿಖೆಯನ್ನು ಒಪ್ಪಿಸಬೇಕು ಎಂದಿದ್ದೇವೆ....’’ ಬೊಮ್ಮಯ್ಯ ಅವರು ಕಾರಣ ವಿವರಿಸಿದರು.
‘‘ಶೇ. 40 ಕಮಿಷನ್‌ನ ಹಿಂದೆ ಯಾರ ಕೈವಾಡ ಇದೆ ಎನ್ನುವುದರ ಬಗ್ಗೆ ತನಿಖೆ ನಡೆಸುವುದಿಲ್ಲವೆ ಸಾರ್?’’ ಕಾಸಿ ಕೇಳಿದ.
‘‘ನೋಡಿ...ಶೇ. 40 ಕಮಿಷನ್ ಮೂಲಕ ಸರಕಾರ ನಾಡನ್ನು ಅಭಿವೃದ್ಧ್ದಿಯ ಉತ್ತುಂಗಕ್ಕೆ ಕೊಂಡೊಯ್ಯಲು ಹೊರಟಿದೆ. ಈಗಾಗಲೇ ಜನಸಾಮಾನ್ಯರು ತಾಮುಂದು ನಾಮುಂದು ಎಂದು ಸಂಭ್ರಮದಿಂದ ಶೇ. 40 ಕಮಿಷನ್ ನೀಡಲು ಮುಂದಾಗಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಮೇಲೇರುತ್ತಿರುವುದರ ಸಂಕೇತ ಇದು. ಶೇ. 40 ಕಮಿಷನ್‌ನನ್ನು ವಿರೋಧಿಸುವುದು ಎಂದರೆ ದೇಶ ಆರ್ಥಿಕವಾಗಿ ಚೇತರಿಸುತ್ತಿರುವುದನ್ನು ವಿರೋಧಿಸುವುದು ಎಂದರ್ಥ. ವಿರೋಧ ಪಕ್ಷಗಳು ಶೇ. 40 ಕಮಿಷನ್ ತಮಗೆ ಸಿಗುತ್ತಿಲ್ಲವಲ್ಲ ಎಂದು ಹೊಟ್ಟೆ ಉರಿಯಿಂದ ಇದರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿವೆ. ಮುಂದಿನ ದಿನಗಳಲ್ಲಿ ಶೇ. 40 ಕಮಿಷನ್‌ನನ್ನು ಶೇ. 75 ಕಮಿಷನ್‌ಗೆ ಕೊಂಡೊಯ್ಯುವುದು ನಮ್ಮ ಉದ್ದೇಶವಾಗಿದೆ. ಇದರಲ್ಲಿ ಶೇ. 40 ಕಮಿಷನ್ ನಾವು ಇಟ್ಟುಕೊಂಡು ಉಳಿದ ಕಮಿಷನ್‌ನ್ನು ದೇಶ ನಿರ್ಮಾಣಕ್ಕಾಗಿ ಪ್ರಧಾನಿ ಮೋದಿಯವರಿಗೆ ಕಳುಹಿಸಿಕೊಡಲಿದ್ದೇವೆ. ಈ ಮೂಲಕ ಪ್ರಧಾನಿಯ ಕೈ ಬಲ ಪಡಿಸುವುದು ನಮ್ಮ ಗುರಿಯಾಗಿದೆ....’’
‘‘ಸಾರ್...ಶೇ. 100 ಕಮಿಷನ್ ಉದ್ದೇಶವೇನಾದರೂ ಇದೆಯಾ?’’
‘‘ಶೇ.75 ಕಮಿಷನ್ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಶೇ.100 ಕಮಿಷನ್ ಜಾರಿಗೆ ಬರುವಂತೆ ಮಾಡುತ್ತೇವೆ.....ಈ ಮೂಲಕ ಹಣ ಗುತ್ತಿಗೆದಾರರ ಪಾಲಾಗದೆ ನೇರವಾಗಿ ಸರಕಾರದೊಳಗಿರುವ ನಮ್ಮ ಪಾಲಾಗುತ್ತದೆ. ದೇಶ ಶ್ರೀಮಂತವಾಗುತ್ತದೆ’’
‘‘ಶೇ. 100 ಕಮಿಷನ್ ಬಗ್ಗೆ ವಿವರಣೆ ನೀಡುತ್ತೀರಾ ಸಾರ್?’’ ಕಾಸಿ ಕುತೂಹಲದಿಂದ ಕೇಳಿದ.
‘‘ಅದೇರಿ. ಈಗ ಒಂದು ಸೇತುವೆ ನಿರ್ಮಾಣಕ್ಕೆ ಸರಕಾರ ಹತ್ತು ಕೋಟಿ ರೂಪಾಯಿ ಮೀಸಲಿಡುತ್ತದೆ. ಆ ಹತ್ತು ಕೋಟಿಯನ್ನು ಗುತ್ತಿಗೆದಾರರಿಗೆ ನೀಡದೆ, ಆ ಇಲಾಖೆಯ ಸಚಿವರೇ ಜೇಬಿಗೆ ಇಳಿಸುವುದು....’’
‘‘ಮತ್ತೆ ಸೇತುವೆ?’’ ಕಾಸಿ ಆತಂಕದಿಂದ ಕೇಳಿದ.
‘‘ಸೇತುವೆಗೇನಾಗಬೇಕು? ಅದನ್ನು ದಾಖಲೆಗಳಲ್ಲಿ ತೋರಿಸಿದರೆ ಆಯಿತು’’ ಬೊಮ್ಮಯ್ಯನವರು ಯೋಜನೆಯ ನೀಲನಕ್ಷೆಯನ್ನು ಹರಡಿದರು.
‘‘ಹಾಗಾದರೆ ಸೇತುವೆ ಇಲ್ಲದೆ ಜನ ನದಿ ದಾಟುವುದು ಹೇಗೆ?’’ ಕಾಸಿ ಮತ್ತೆ ಗೊಂದಲಗೊಂಡ.
‘‘ಅದೇರಿ....ನದಿ ಇಲ್ಲದೆ ಇರುವಲ್ಲಿ ಸೇತುವೆ ಕಟ್ಟುವ ಯೋಜನೆ ಹಾಕಬೇಕು’’ ಎನ್ನುತ್ತಾ ಹಲ್ಲುಕಿರಿದು ನಕ್ಕರು.
‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ಕಾಸಿ ನಿಟ್ಟುಸಿರಿಟ್ಟು ‘‘ಬರುತ್ತೇನೆ ಸಾರ್’’ ಎಂದು ಅಲ್ಲಿಂದ ಹೊರಟ.
*ಚೇಳಯ್ಯ
chelayya@gmail.com