ಕುರಿಯಪ್ಪರ ನಿಜ ಕನಸುಗಳು....!
ಉದ್ದಂಡ ಕುರಿಯಪ್ಪನವರು ವೈದ್ಯರ ಮುಂದೆ ಸಮಸ್ಯೆ ಹೇಳಲು ಕುಳಿತಿದ್ದರು. ‘‘ಹೇಳಿ, ಏನು ಸಮಸ್ಯೆ?’’ ವೈದ್ಯರು ಕೇಳಿದರು.
‘‘ಕನಸು ಬೀಳುವುದು ಸರ್....’’ ಕುರಿಯಪ್ಪ ಹಣೆ ಒರೆಸಿಕೊಳ್ಳುತ್ತಾ ಉತ್ತರಿಸಿದರು.
‘‘ಕನಸು ಎಲ್ಲರಿಗೂ ಬೀಳುತ್ತದೆ. ಅದರಲ್ಲೇನುಂಟು....’’ ವೈದ್ಯರು ಪ್ರಶ್ನಿಸಿದರು.
‘‘ಆದರೆ ನನಗೆ ರಾತ್ರಿ ಮಾತ್ರ ಅಲ್ಲ, ಹಗಲಲ್ಲೂ ಕನಸು ಬೀಳುವುದು ಸಾರ್....ಕುಳಿತಲ್ಲಿ ನಿಂತಲ್ಲಿ ಕನಸು....ಬರೇ ಕನಸು ಅಲ್ಲ ಸಾರ್....ನಿಜ ಕನಸು...’’ ಕುರಿಯಪ್ಪ ತನ್ನ ಗಡ್ಡ ನೀವಿಕೊಂಡು ಬಡಬಡಿಸಿದರು.
‘‘ಕನಸಿನಲ್ಲಿ ಎಂತ ಕಾಣುತ್ತದೆ....?’’ ವೈದ್ಯರು ಕುತೂಹಲದಿಂದ ಕೇಳಿದರು.
‘‘ಅದೇ ಸಾರ್....ಕುದುರೆಯ ಸದ್ದು....ಯಾರೋ ಕುದುರೆಯ ಮೇಲೆ ಬಂದು ಹಿಂಬಾಲಿಸಿದಂತೆ....’’ ‘‘ಬರೇ ಕುದುರೆಯ....ಕುದುರೆಯ ಮೇಲೆ ಯಾರಾದರೂ ಕೂತಿರ್ತಾರಾ?’’ ವೈದ್ಯರು ಕೇಳಿದರು.
‘‘ಇಷ್ಟುದ್ದದ ಕತ್ತಿ ಕೈಯಲ್ಲಿ ಉಂಟು ಸಾರ್....ಎಲ್ಲಿ ಹೋದರೂ ಆ ಕತ್ತಿಯನ್ನು ತೋರಿಸಿ ಈಗ ನಿನ್ನನ್ನು ಕತ್ತರಿಸುತ್ತೇನೆ....ಈಗ ನಿನ್ನನ್ನು ಮತಾಂತರ ಮಾಡುತ್ತೇನೆ ಎಂದು ಕುದುರೆ ಸವಾರ ಬೆದರಿಸುತ್ತಿರುತ್ತಾನೆ....ಎಲ್ಲಿ ಹೋದರೂ ಅವನ ಕಾಟ ಸಾರ್’’ ಕುರಿಯಪ್ಪ ಕುಳಿತಲ್ಲೇ ಬಿಕ್ಕಳಿಸ ತೊಡಗಿದರು.
‘‘...ಸುಮ್ಮಗೆ ಯಾರಾದರೂ ಕನಸಿನಲ್ಲಿ ಬಂದು ಕತ್ತಿ ತೋರಿಸುತ್ತಾರಾ?’’ ವೈದ್ಯರು ಪ್ರಶ್ನಿಸಿದರು.
‘‘ನನ್ನ ಹಿರಿಯರು ಬ್ರಿಟಿಷರ ಜೊತೆಗೆ ಕೈ ಜೋಡಿಸಿದ್ದರಂತೆ...ಅದಕ್ಕೆ ಈಗ ಕನಸಿನಲ್ಲಿ ಬಂದು ಕತ್ತಿ ತೋರಿಸುವುದು ನ್ಯಾಯವಾ ಸಾರ್...’’ ಕುರಿಯಪ್ಪರು ಕೇಳಿದರು.
‘‘ಅವನ ಮುಖ ಪರಿಚಯ ಉಂಟಾ?’’ ವೈದ್ಯರು ಕೇಳಿದರು.
‘‘ಉಂಟು ಸಾರ್...ಒಂದು ಆ್ಯಂಗಲ್‌ನಲ್ಲಿ ನೋಡಿದರೆ ನನಗೆ ಸಿದ್ದರಾಮಯ್ಯರ ಥರ ಕಾಣ್ತಾರೆ....’’
‘‘ಹೇ ಅವರಿಗೆ ಕುದುರೆ ಮೇಲೆ ಕೂತು ಅಭ್ಯಾಸ ಇಲ್ಲ....ಬೇರೆ ಯಾರೋ ಆಗಿರಬೇಕು...’’
‘‘ಸಾರ್ ಇನ್ನೊಂದು ಆ್ಯಂಗಲ್‌ನಲ್ಲಿ ನೋಡಿದರೆ ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಅವರೆಲ್ಲರ ಥರ ಕಾಣ್ತಾರೆ....’’ ಕುರಿಯಪ್ಪ ನೆನಪಿಸಿಕೊಂಡು ಹೇಳಿದರು.
‘‘ಅವರೆಲ್ಲ ಯಾರ್ರೀ....’’ ವೈದ್ಯರು ಗೊಂದಲದಿಂದ ಕೇಳಿದರು.
‘‘ಅವರೆಲ್ಲ ದೇಸ ದ್ರೋಯಿಗಳು ಸಾರ್....ಅವರೇ ಕುದುರೆ ಮೇಲೆ ಕೂತು ಕೊಡಗಿನ ಮೇಲೆ ದಂಡೆತ್ತಿ ಬರುತ್ತಾರೆ ಸಾರ್...’’ ಕುರಿಯಪ್ಪ ಕುಂಯಿ ಗುಡತೊಡಗಿದರು.
‘‘ಕೊಡಗಿಗೂ ನಿಮ್ಮ ಕನಸಿಗೂ ಏನು ಸಂಬಂಧ ರೀ...ಬಿಡಿಸಿ ಹೇಳ್ರೀ....’’ ವೈದ್ಯರು ಮತ್ತೆ ಪ್ರಶ್ನಿಸಿದರು.
‘‘ಸಂಬಂಧ ಇದೆ ಸಾರ್...ಕೊಡಗಿನ ಮೇಲೆ ದಂಡೆತ್ತಿ ಬಂದು ಕೊಡಗಿನ ಲಕ್ಷಾಂತರ ಜನರನ್ನು ಕೊಂದು, ಉಳಿದವರನ್ನು ಮತಾಂತರಿಸಿದವನು ಸಾರ್...ಇದೀಗ ಕೊಡಗಿನ ಏಕೈಕ ಸಂತಾನವಾಗಿ ನಾನೊಬ್ಬನೇ ಉಳಿದಿದ್ದೇನೆ ಸಾರ್....ಅವನು ಈಗ ನನ್ನನ್ನು ಹುಡುಕಿಕೊಂಡು ಬರುತ್ತಿದ್ದಾನೆ ಸಾರ್...’’
‘‘ನಿಮ್ಮ ಕನಸಿನಲ್ಲಿ ಬಂದವನು ಇಡೀ ಕೊಡಗಿನ ಜನರನ್ನೆಲ್ಲ ಸಾಯಿಸಿದನೆ? ಭಯಂಕರ ಕನಸು ಕಣ್ರೀ...ನೀವು ಹೇಗೆ ತಪ್ಪಿಸಿಕೊಂಡಿರಿ....?’’ ವೈದ್ಯರು ಅಚ್ಚರಿಯಿಂದ ಕೇಳಿದರು.
‘‘ಸಾರ್...ಕೊಡಗಿನ ಜನರನ್ನೆಲ್ಲ ಕೊಂದು ಹಾಕುವುದು, ಉಳಿದವರನ್ನೆಲ್ಲ ಮತಾಂತರ ಮಾಡುವುದನ್ನು ನಾನು ಕಣ್ಣಾರೆ ನೋಡಿದೆ ಸಾರ್....ನಾನು ವೀರಾವೇಷದಿಂದ ವೇಷ ಮರೆಸಿ ಅಲ್ಲಿಂದ ಪಲಾಯನ ಮಾಡಿ ಬ್ರಿಟಿಷರ ಕುದುರೆ ಲಾಯದಲ್ಲಿ ಬಚ್ಚಿಟ್ಟುಕೊಂಡೆ....ದೇಶಭಕ್ತರಾದ ಬ್ರಿಟಿಷರು ನನ್ನನ್ನು ಕುದುರೆ ಲಾಯದಿಂದ ಎತ್ತಿ ತಂದು ಅವರ ಆನೆ ಸಾಕುವ ದೊಡ್ಡಿಯಲ್ಲಿ ಲದ್ದಿ ಬಾಚುವ ಕೆಲಸಕ್ಕಿಟ್ಟು ಊಟ ಹಾಕಿದರು ಸಾರ್....ಅವರ ಋಣ ನನ್ನ ಮೇಲಿದೆ ಸಾರ್...ಬ್ರಿಟಿಷರು ಇಲ್ಲದೇ ಇದ್ದರೆ ಆತ ನನ್ನನ್ನು ಕೊಂದು ಹಾಕಿ ಬಿಡುತ್ತಿದ್ದ ....ಈಗ ಕೊಡಗಿನಲ್ಲಿ ಜನರೇ ಇರುತ್ತಿರಲಿಲ್ಲ....ನನ್ನಿಂದಾಗಿ ಇಡೀ ಕೊಡವ ಜನಾಂಗ ಉಳಿದುಕೊಂಡಿದೆ ಸಾರ್....ಆತನಿಂದ ಬಚಾವಾಗಿ ಉಳಿದುಕೊಂಡಿರುವ ಕರ್ನಾಟಕದ ಪಾಲಿನ ಏಕೈಕ ಕೊಡವ ಕುಡಿ ಸಾರ್ ನಾನು....’’
‘‘ತುಂಬಾ ಚೆನ್ನಾಗಿ ನಾಟಕ ಮಾಡ್ತೀರಿ....ಹೊಟ್ಟೆಪಾಡಿಗೆ ಏನು ಕೆಲಸ ಮಾಡ್ತಾ ಇದ್ದೀರಿ?’’ ‘‘ಅದೇ ಸಾರ್ ನಾಟಕ ಮಾಡ್ತಾ ಇದ್ದೇನೆ...’’
‘‘ಓಹೋ ...ಕೆಲಸವೇ ನಾಟಕ ಮಾಡುವುದಾ....ಯಾವ ನಾಟಕ ಕಂಪೆನಿಯಲ್ಲಿ....?’’
‘‘ಮೊದಲು ಕೊಡಗಿನಲ್ಲೇ ನನ್ನದೇ ಸ್ವಂತ ಕಂಪೆನಿಯೊಂದನ್ನು ಮಾಡಿ ಸಣ್ಣ ಪುಟ್ಟ ನಾಟಕ ಮಾಡಿಕೊಂಡು ಬದುಕಿಕೊಳ್ಳುತ್ತಿದ್ದೆ....ನನ್ನ ಪ್ರತಿಭೆ ನೋಡಿ ರಾಜ್ಯ ಮಟ್ಟದ ಭಾಜಪಾ ಕಂಪೆನಿ ಕರೆಸಿಕೊಂಡಿತು. ‘ಬ್ರಿಟಿಷರ ಕಾಲದ ಒಂದು ಪಾತ್ರ ಇದೆ. ಅದನ್ನು ನೀವೇ ಮಾಡಬೇಕು’ ಎಂದು ಹೇಳಿತು. ಅದನ್ನು ನಾನು ಪರಿಣಾಮಕಾರಿಯಾಗಿ ನಿರ್ವಹಿಸಿದ ಕಾರಣ ಈಗ, ಮೈಸೂರಿನ ‘ರಾಂಗ್ ಆಯಣ’ ಕಂಪೆನಿಯ ಸರಸಂಘ ಸಂಚಾಲಕನಾಗಿ ಕೆಲಸ ಮಾಡುತ್ತಾ ಇದ್ದೇನೆ....’’ ಕುರಿಯಪ್ಪನವರು ತಮ್ಮ ಸುದೀರ್ಘ ನಾಟಕ ಪಯಣವನ್ನು ವಿವರಿಸಿದರು. ರೋಗ ಗಂಭೀರವಾಗಿದೆ ಎನ್ನುವುದು ವೈದ್ಯರಿಗೆ ಅರ್ಥವಾಯಿತು.
‘‘ನಿಮ್ಮ ಜೊತೆಗೆ ಮನೆಯವರು ಯಾರಾದರೂ ಬಂದಿದ್ದಾರಾ...?’’ ಕೇಳಿದರು.
‘‘ಬಂದಿದ್ದಾರೆ....ಇಬ್ಬರು ಮಕ್ಕಳನ್ನು ಜೊತೆಗೆ ಕರೆದುಕೊಂಡು ಬಂದಿದ್ದೇನೆ....’’ ಕುರಿಯಪ್ಪ ಹೇಳಿದರು.
‘‘ಎಲ್ಲಿದ್ದಾರೆ....?’’
‘‘ಹೊರಗಡೆ ಬಾಗಿಲು ಕಾಯುತ್ತಿದ್ದಾರೆ. ಒಬ್ಬನ ಹೆಸರು ನಂಜೇಗೌಡ...ಇನ್ನೊಬ್ಬನ ಹೆಸರು ಉರಿ ಗೌಡ....ಸದ್ಯಕ್ಕೆ ನನಗೆ ಬೀಳುವ ಕನಸುಗಳಿಂದ ಇವರೇ ನನ್ನನ್ನು ರಕ್ಷಿಸುತ್ತಿರುವುದು....’’ ಕುರಿಯಪ್ಪನವರು ಬಾಗಿಲ ಕಡೆಗೆ ಕೈ ತೋರಿಸಿದರು.
‘‘ಹೌದೇ...ಇದು ಬಹಳ ವಿಚಿತ್ರವಾಗಿದೆ....’’ ವೈದ್ಯರು ತಲೆ ತುರಿಸಿಕೊಂಡರು.
‘‘ಸಾರ್, ಹೇಳಿದರೆ ನಂಬುವುದಿಲ್ಲ. ಬೇಕಾದರೆ ಅವರಲ್ಲೇ ಕೇಳಿ....’’ ವೈದ್ಯರು ಅಚ್ಚರಿಯಿಂದ ಹೊರಗಡೆ ಇಣುಕಿದರು. ಅಲ್ಲಿ ಯಾರೂ ಇರಲಿಲ್ಲ. ‘‘ಅಲ್ಲಿ ಯಾರೂ ಇಲ್ಲ ಕಣ್ರೀ...’’ ವೈದ್ಯರು ಹೇಳಿದರು.
‘‘ಹೇ... ನೀವು ಇತಿಹಾಸವನ್ನು ಸರಿಯಾಗಿ ಓದಿಲ್ಲ. ಅದಕ್ಕೆ ನಿಮಗೆ ಕಾಣುತ್ತಿಲ್ಲ. ವಾಟ್ಸಪ್ ವಿಶ್ವವಿದ್ಯಾಲಯದ ಕುಲಪತಿಯಾಗಿರುವ ಸುಳ್ಳಿನ ಬೆಲೆಯ ಚಕ್ರವರ್ತಿ ಮತ್ತು ವಕ್ರತೀರ್ಥ ಎನ್ನುವ ಇಬ್ಬರು ವಿಧ್ವಂಸರು ಜೊತೆ ಸೇರಿ ಮಂತ್ರ ನೀರನ್ನು ಪ್ರೋಕ್ಷಿಸಿ ಅಗ್ನಿಕುಂಡದಿಂದ ಈ ಇಬ್ಬರನ್ನು ಹುಟ್ಟಿಸಿ ನನಗೆ ಕೊಟ್ಟರು. ನನಗೆ ಬೀಳುವ ಕನಸುಗಳಿಂದ ಅವರಿಬ್ಬರು ನನ್ನನ್ನು ರಕ್ಷಿಸುತ್ತಿದ್ದಾರೆ....’’ ಕುರಿಯಪ್ಪ ಒತ್ತಿ ಹೇಳಿದರು.
ವೈದ್ಯರಿಗೆ ಎಲ್ಲವೂ ಅರ್ಥವಾಯಿತು. ‘‘ನಂಜೇಗೌಡನೂ ಇಲ್ಲ, ಉರಿಗೌಡನೂ ಇಲ್ಲ. ಎಲ್ಲ ನಿಮ್ಮ ಎದೆಯ ಒಳಗೆ ಇರುವ ನಂಜು ಮತ್ತು ಉರಿಯ ಕಾರಣದಿಂದ ನಿಮಗೆ ಆ್ಯಸಿಡಿಟಿ ಹೆಚ್ಚಾಗಿ ಈ ಕನಸು ಬೀಳುತ್ತಿದೆ. ನಂಜು, ಉರಿ ಕಡಿಮೆಯಾದರೆ ಎಲ್ಲ ಸರಿಯಾಗುತ್ತದೆ. ಮಾತ್ರೆ ಬರೆದುಕೊಡುತ್ತೇನೆ. ಯಾವುದಕ್ಕೂ ಒಮ್ಮೆ ಕೊಡಗಿಗೆ ಹೋಗಿ ಕೊಡಗಿನ ಕಾವೇರಿ ನದಿಯಲ್ಲಿ ಮುಳುಗಿ ಬನ್ನಿ. ಮಾಡಿದ ಪಾಪ ತೊಳೆದು ಹೋಗಿ ಎಲ್ಲವೂ ಸರಿಯಾದರೆ, ಕನಸು ಬೀಳುವುದು ನಿಂತೀತು’’ ಎಂದವರೇ ವೈದ್ಯರು ಒಂದು ತಿಂಗಳ ಮಾತ್ರೆ ಬರೆದು ಕೊಟ್ಟರು.
ಚೇಳಯ್ಯ chelayya@gmail.com