ಬರೇ ಸ್ವೀಟ್ ಮಾತ್ರ ಕಳುಹಿಸಿಕೊಟ್ಟಿದ್ದಾರೆ ಸಾರ್....!
ಪತ್ರಿಕಾ ಕಚೇರಿಯಲ್ಲಿ ಕುಳಿತಿದ್ದ ಪತ್ರಕರ್ತ ಎಂಜಲು ಕಾಸಿ ಅದು ೧೨೧ನೇ ಬಾರಿ ಬಾಗಿಲ ಕಡೆಗೆ ನೋಡುತ್ತಿರುವುದು. ದೀಪಾವಳಿ ಹಬ್ಬ ಮುಗಿದು ಎರಡು ದಿನ ಕಳೆದರೂ ಬರುವುದು ಬರಲೇ ಇಲ್ಲ ಎಂದು ಕೈ ಕೈ ಹಿಸುಕಿಕೊಂಡು, ತಾನೇ ಬೊಮ್ಮಣ್ಣರ ಬಳಿ ಕೇಳಿದರೆ ಹೇಗೆ? ಎಂದು ನೇರವಾಗಿ ವಿಧಾನಸೌಧ ಕಡೆಗೆ ಹೊರಟ.
ಕಾಸಿಯನ್ನು ನೋಡಿದ್ದೇ ಬೊಮ್ಮಣ್ಣನವರು ‘‘ಕಾಸಿಯವರೇ....ಏನು...ದೀಪಾವಳಿ ಈ ಬಾರಿ ಭರ್ಜರಿಯಾಗಿರಬೇಕಲ್ಲ....’’ ಎಂದು ಕಣ್ಣು ಹೊಡೆದರು.
ಪತ್ರಕರ್ತ ಎಂಜಲುಕಾಸಿಗೆ ಏನು ಹೇಳಬೇಕೆಂದು ತೋಚಲಿಲ್ಲ . ‘‘ಪರವಾಗಿಲ್ಲ ಸಾರ್....’’ ಎಂದು ನುಲಿದ.
‘‘ಸ್ವೀಟ್ ಪೆಟ್ಟಿಗೆ ಕಳುಹಿಸಿದ್ದೇನೆ....ಬಂದಿರಬೇಕಲ್ಲ....’’ ಎಂದು ಮತ್ತೊಮ್ಮೆ ಕಣ್ಣು ಹೊಡೆದರು.
‘‘ಸ್ವೀಟ್ ಪೆಟ್ಟಿಗೆ ಬಂದಿದೆ ಸಾರ್....ಜೊತೆಗೆ ಇನ್ನೇನೋ ಕಳುಹಿಸಿದ್ದೀರಿ ಎನ್ನುವುದು ವದಂತಿ....ಅದು ಬಂದಿಲ್ಲ...’’ ಮುಜುಗರದಿಂದ ಸತ್ಯ ಬಹಿರಂಗ ಪಡಿಸಿದ.
‘‘ಎಲ್ಲರಿಗೂ ಅವರವರ ೪೦ ಪರ್ಸೆಂಟ್ ಕಮಿಷನ್ ಕಟ್ ಮಾಡಿ....ನಿಮಗೆ ತಲುಪಿಸುವುದನ್ನು ತಲುಪಿಸಲು ಹೇಳಿದ್ದೇನೆ....ತಲುಪಿರಬೇಕಲ್ಲ....’’ ಬೊಮ್ಮಣ್ಣ ಕೇಳಿದರು.
‘‘ಅವರು ನೂರು ಪರ್ಸೆಂಟ್ ಕಟ್ ಮಾಡಿ....ಬರೇ ಸ್ವೀಟ್ ಮಾತ್ರ ಕಳುಹಿಸಿಕೊಟ್ಟಿದ್ದಾರೆ ಸಾರ್....’’ ಕಾಸಿ ಗದ್ಗದ ಕಂಠದಿಂದ ಹೇಳಿದ.
ಬೊಮ್ಮಣ್ಣನವರು ತಕ್ಷಣ ತಮ್ಮ ಆಪ್ತರನ್ನು ಕರೆದರು ‘‘ನೋಡ್ರೀ....ಇವರಿಗೆ ಬರೇ ಸ್ವೀಟ್ ಮಾತ್ರ ಸಿಕ್ಕಿದೆಯಂತೆ. ಇನ್ನೊಮ್ಮೆ ಪತ್ರಕರ್ತರೇ ‘ಪೇಸಿಎಂ’ ಆಂದೋಲನ ಶುರು ಮಾಡಿದರೆ ಕಷ್ಟ....ಏನಾಯಿತು ನೋಡ್ರೀ....’’
‘‘ಹಾಗಲ್ಲ ಸಾರ್....ಆಯ್ದ ಅತ್ಯುತ್ತಮ ಪತ್ರಕರ್ತರಿಗಷ್ಟೇ ಕೊಟ್ಟಿದ್ದೇವೆ....’’ ಆಪ್ತ ಹಲ್ಲುಕಿರಿದು ಹೇಳಿದ.
‘‘ನಾನು ಕೂಡ ಆಯ್ದ ಅತ್ಯುತ್ತಮ ಪತ್ರಕರ್ತ ಸಾರ್....’’ ಬೊಮ್ಮಣ್ಣನವರಲ್ಲಿ ಅಂಗಲಾಚಿದ.
‘‘ಆದರೆ ಅದು ಸಾಬೀತಾಗಬೇಕಲ್ಲ....ಮುಖ್ಯವಾಗಿ ನಮ್ಮ ಹೆಡ್ಡಾಫೀಸ್ ಕೇಶವ ಕೃಪಾದವರಿಗೆ ಗೊತ್ತಾಗಬೇಕು....’’ಬೊಮ್ಮಣ್ಣ ಅಸಹಾಯಕತೆ ವ್ಯಕ್ತಪಡಿಸಿದರು.
‘‘ಸಾರ್...ನನ್ನೆಲ್ಲ ವರದಿಗಳನ್ನು ನಾನು ಅವರಿಗೆ ಕಳುಹಿಸಿಯೇ ಬಳಿಕ ಸಂಪಾದಕರಿಗೆ ತೋರಿಸುವುದು. ಸಾರ್....’’
‘‘ನೋಡ್ರೀ...ಪಾಪ...ಅವರೆಲ್ಲ ವರದಿಗಳು ಕೇಶವ ಕೃಪಾಕ್ಕೆ ಹೋಗಿಯೇ ಪ್ರಕಟವಾಗುವುದಂತೆ...’’ ಬೊಮ್ಮಣ್ಣ ಆಪ್ತರ ಕಡೆ ನೋಡಿದರು.
‘‘ಹಾಗಲ್ಲ ಸಾರ್...ನೇರವಾಗಿ ಕೇಶವ ಕೃಪಾದವರೇ ಬರೆದುಕೊಟ್ಟ ವರದಿಗಳನ್ನು ಪ್ರಕಟಿಸಿದವರನ್ನ ಷ್ಟೇ ಆಯ್ದ ಅತ್ಯುತ್ತಮ ಪತ್ರಕರ್ತ ಎಂದು ಗುರುತಿಸಲಾಗಿದೆ...’’ ಆಪ್ತ ಸ್ಪಷ್ಟೀಕರಣ ನೀಡಿದ.
‘‘ಸಾರ್....ಪ್ರತೀ ದಿನ ನ ಮ್ಮ ಪತ್ರಿಕೆಯಲ್ಲಿ ಮೋದಿಯವರ ಹೆಸರು ೨೦೦೧ ಒಂದು ಬಾರಿ ಬರುವಂತೆ ನೋಡಿಕೊಳ್ಳುತ್ತಿದ್ದೇನೆ ಸಾರ್....ನಮ್ಮ ಪತ್ರಿಕೆ ಮುದ್ರಣವಾಗುವಾಗ ಮೆಶಿನ್ ಕೂಡ ‘ಮೋದಿ ಮೋದಿ ಮೋದಿ’ ಎಂದೇ ಸದ್ದು ಮಾಡುತ್ತದೆ ಸಾರ್....ಇದನ್ನು ಕೇಶವ ಕೃಪಾದವರಿಗೂ ಕೇಳಿಸಿದ್ದೇವೆ....’’ ಕಾಸಿ ತಾನು ಅತ್ಯುತ್ತಮ ಪತ್ರಕರ್ತ ಎನ್ನುವುದನ್ನು ಸಾಬೀತು ಮಾಡಲು ಪ್ರಯತ್ನಿಸ ತೊಡಗಿದ.
‘‘ಅದಷ್ಟೇ ಸಾಕಾಗಲ್ಲ ಸಾರ್....’’ ಅಪ್ತ ಹೇಳಿದ.
‘‘ಸಾರ್...ನಾನು ಪೆನ್ನಿನಲ್ಲಿ ಕೇಸರಿ ಇಂಕ್ ಹಾಕಿ ಬರೆಯುವುದು....’’ ಕಾಸಿ ಇನ್ನಷ್ಟು ವಿವರಿಸಿದ.
‘‘ಮಾರ್ಕೆಟ್‌ನಲ್ಲಿ ಬೇರೆ ಕಲರ್ ಇಂಕ್ ಸಿಗದೇ ಇರುವ ಹಾಗೆ ಮಾಡಿದ್ದೇವೆ....ಅದೇನು ದೊಡ್ಡ ವಿಷಯ ಅಲ್ಲ....’’ ಆಪ್ತ ಹೇಳಿದ.
‘‘ಸಾರ್....ನಾನು ಬರೆದ ವರದಿಗಳಿಂದ ಎರಡು ಮೂರು ಕೋಮುಗಲಭೆಗಳು ಸಂಭವಿಸಿವೆ’’ ಕಾಸಿ ಈಗ ಮೆಲ್ಲ ಗುಟ್ಟು ಬಿಚ್ಚಿಟ್ಟ.
ಬೊಮ್ಮಣ್ಣ ಚುರುಕಾದರು ‘‘ನೋಡ್ರೀ....ಅವರೇನೋ ಹೇಳುತ್ತಿದ್ದಾರೆ...’’
‘‘ಸಾರ್....ನಮ್ಮ ಪಟ್ಟಿಯಲ್ಲಿ ಹತ್ತು ಹನ್ನೆರಡು ಕೋಮುಗಲಭೆಗಳನ್ನು ಸೃಷ್ಟಿಸಿದ ವರದಿಗಾರರು ಇದ್ದಾರೆ. ಹೃದಯಾಘಾತವಾದುದನ್ನು ಕೊಲೆ ಎಂದು ಬರೆದು ಚುನಾವಣೆಯಲ್ಲಿ ಗೆಲ್ಲಿಸಿದವರಿದ್ದಾರೆ....ಈಗಾಗಲೇ ಅವರೆಲ್ಲ ಕೊಟ್ಟದ್ದು ಸಾಕಾಗಲಿಲ್ಲ ಎಂದು ಸಿಟ್ಟಿನಲ್ಲಿದ್ದಾರೆ....’’ ಆಪ್ತ ಅಸಹಾಯಕತೆ ಪ್ರದರ್ಶಿಸಿದ.
‘‘ಸಾರ್...ನಾನು ಭಾರತದಲ್ಲಿರುವ ಹಲವು ಭಯೋತ್ಪಾದಕ ಸಂಘಟನೆಗಳ ಸ್ಫೋಟ ಸಂಚುಗಳನ್ನು ಬಯಲುಗೊಳಿಸಿದ್ದೇನೆ....’’ ಕಾಸಿ ತನ್ನ ಇನ್ನಷ್ಟು ಸಾಧನೆಗಳನ್ನು ತೆರೆದಿಟ್ಟ.
‘‘ಅದೇನು ಮಹಾ....ಕರ್ನಾಟಕದಲ್ಲೇ ಅಂತರ್‌ರಾಷ್ಟ್ರೀಯ ಮಟ್ಟದ ಭಯೋತ್ಪಾದಕ ಸಂಘಟನೆಗಳ ಕೇಂದ್ರಗಳನ್ನು ಕಂಡು ಹಿಡಿದ ಪತ್ರಕರ್ತರು ಇದ್ದಾರೆ...ಅವರೆಲ್ಲ ಚಿನ್ನದ ಉಂಗುರದ ಜೊತೆಗೆ ಕತ್ತಿಗೆ ಚಿನ್ನದ ಚೈನು ಕೇಳುತ್ತಿದ್ದಾರೆ.....ಎಲ್ಲಕ್ಕಿಂತ ಮುಖ್ಯವಾಗಿ....’’ ಆಪ್ತ ರಾಗ ಎಳೆದ.
‘‘ಎಲ್ಲಕ್ಕಿಂತ ಮುಖ್ಯವಾಗಿ....’’ ಕಾಸಿ ಕೇಳಿದ.
‘‘ಎಲ್ಲಕ್ಕಿಂತ ಮುಖ್ಯವಾಗಿ ಪತ್ರಕರ್ತರು ಸಸ್ಯಾಹಾರಿಗಳಾಗಿರಬೇಕು....ಪ್ರಾಣಿ ಹಿಂಸೆ ಮಾಡದ ಸಸ್ಯಾಹಾರಿ ಪತ್ರಕರ್ತರಿಗಷ್ಟೇ ಹಂಚಲು ಕೇಶವ ಕೃಪಾದಿಂದ ಆದೇಶ ಬಂದಿದೆ.
ಈಗ ಬೊಮ್ಮಣ್ಣ ಕೂಡ ತಲೆ ಅಲ್ಲಾಡಿಸಿದರು ‘‘ಪತ್ರಿಕೆಯ ಕೆಲಸವೆಂದರೆ ದೇವರ ಕೆಲಸ. ದೇವರ ಕೆಲಸ ಮಾಡುವಾಗ ಯಾರಾದರೂ ಮಾಂಸಾಹಾರ ಸೇವಿಸುತ್ತಾರಾ? ಛೆ ಛೆ....ಪತ್ರಕರ್ತರು ಸದಾ ಸಸ್ಯಾಹಾರ ಸೇವಿಸುತ್ತಾ ತಮ್ಮ ಪತ್ರಿಕಾ ಧರ್ಮವನ್ನು ಮೇಲೆತ್ತಬೇಕು. ಅಂತಹ ಪತ್ರಕರ್ತರನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಬಾರಿ ಸ್ವೀಟ್ ಬಾಕ್ಸ್ ಜೊತೆಗೆ ಕವರ್ ಕೊಟ್ಟಿದ್ದೇವೆ.....ನೀವು ಹೇಗೂ ಬಂದಿದ್ದೀರಿ....ಅಲ್ಲಿ ಉಪ್ಪಿಟ್ಟು-ಕೇಸರಿ ಬಾತ್ ವ್ಯವಸ್ಥೆ ಮಾಡಿದ್ದೇವೆ. ತಿಂದು ಬಿಟ್ಟು ಹೋಗಿ....’’ ಎನ್ನುತ್ತಾ ಕಾಸಿಗೆ ಬಾಯ್ ಬಾಯ್ ಟಾಟಾ ಹೇಳಿದರು.
ಚೇಳಯ್ಯ chelayya@gmail.com