‘‘ನನಗೆ ಕೇಳಿಸ್ತು....ನಿಮಗೆ ಕೇಳಿಸ್ತಾ?’’
‘‘ನಿಮಗೆ ಆ ವೀಡಿಯೋ ಕಳುಹಿಸಿದ್ದೆ. ಸಿಕ್ತಾ....?’’
‘‘ಅವತ್ತೇ ಸಿಕ್ತು. ಅವರಿಗೂ ಆಗಲೇ ಕಳುಹಿಸಿದೆ...’’
‘‘ವೀಡಿಯೋದಲ್ಲಿ ನನಗೆ ಸ್ಪಷ್ಟ ಕೇಳಿಸ್ತು....ನಿಮಗೆ ಕೇಳಿಸ್ತಾ?’’
‘‘ನನಗೆ ಅರ್ಧ ಕೇಳಿಸ್ತು...ನಿಮಗೆ ಪೂರ್ತಿ ಕೇಳಿಸ್ತ...?’’
‘‘ಹೌದು....ನನಗೆ ಪೂರ್ತಿ ಕೇಳಿಸ್ತು...ಅವರ ಕತೆ ಎಂತ? ಅವರಿಗೆ ಕೇಳಿಸ್ತಾ?’’
‘‘ಅವರಿಗೆ ಕೇಳಿಸಲಿಲ್ಲ ಅಂದ್ರು....’’
‘‘ಸ್ವಲ್ಪವೂ ಕೇಳಿಸಲಿಲ್ಲವಾ ಅವರಿಗೆ? ಅವರನ್ನು ನನ್ನ ಬಳಿಗೆ ಕಳುಹಿಸಿ. ಅವರಿಗೆ ನಾನು ಕೇಳಿಸುವ ಹಾಗೆ ಮಾಡ್ತೇನೆ....’’
‘‘ನೀವು ಕಳುಹಿಸಿದ ವೀಡಿಯೊವನ್ನೇ ಅವರಿಗೆ ಕಳುಹಿಸಿದ್ದು. ಆದರೆ ಅವರಿಗೆ ಕೇಳಿಸಲಿಲ್ಲವಂತೆ....ತುಂಬಾ ಟ್ರೈ ಮಾಡಿದರಂತೆ....ಆದರೂ ಕೇಳಿಸಲಿಲ್ಲವಂತೆ...’’
‘‘ಛೇ... ನನಗೆ ಅಷ್ಟು ಚೆನ್ನಾಗಿ ಕೇಳಿಸಿದೆ....ಅವರಿಗೆ ಕೇಳಿಸಲಿಲ್ಲವಂತ? ಕೇಳುವುದಕ್ಕೆ ಒಂದು ಕ್ರಮ ಉಂಟು. ಹಾಗೆ ಕೇಳಿದರೆ ಅವರಿಗೂ ಕೇಳುತ್ತದೆ....ಅವರಿಗೆ ಹೇಳಿ...ಅದರಲ್ಲಿ ಸ್ಪಷ್ಟವಾಗಿ ಘೋಷಣೆ ಕೂಗಿದ್ದಾರೆ....ಅಂತ. ಅವರಿಗೆ ಕೇಳಿಲ್ಲ ಎಂದು ಘೋಷಣೆ ಕೂಗಿದ್ದು ಸುಳ್ಳಾಗುತ್ತದಾ?ಅವರಿಗೆ ನನ್ನ ಮೇಲೆ ನಂಬಿಕೆ ಇಲ್ಲವ?’’
‘‘ಅಲ್ಲ, ಅವರು ಹೇಳುವುದು....ಕೂಗಿದ್ದರೆ ನನಗೆ ಕೇಳಿಸಬೇಕಿತ್ತಲ್ಲ ಅಂತ?’’
‘‘ಹಾಗಾದರೆ ನನಗೆ ಕೇಳಿಸಿದ್ದು ಸುಳ್ಳಾ....? ಸರಕಾರ ಸುಮ್ಮನೆ ತನಿಖೆಗೆ ಕಳುಹಿಸುತ್ತದ? ಸರಕಾರ ಅವರದೇ ಅಲ್ಲವಾ? ಸರಕಾರಕ್ಕೆ ಕೇಳಿಸಿದೆ, ಅದಕ್ಕೆ ತನಿಖೆಗೆ ಕಳುಹಿಸಿದೆ? ನನಗೆ ಕೇಳಿಸಿದ್ದು ಸುಳ್ಳು ಅಂತ ಇರಲಿ. ಸರಕಾರಕ್ಕೆ ಕೇಳಿಸಿದ್ದರ ಬಗ್ಗೆ ಅವರು ಏನು ಹೇಳುತ್ತಾರಂತೆ?’’
‘‘ಹಾಗಲ್ಲ, ಕೇಳದೆ ಇದ್ದುದನ್ನು ಕೇಳುತ್ತದೆ ಎಂದು ಹೇಳಿ ತನಿಖೆ ಮಾಡುವುದು ಎಷ್ಟು ಸರಿ....? ಅಂತ ಅವರ ವಾದ....’’
‘‘ನೋಡಿ...ಕೆಲವೊಮ್ಮೆ ಕೇಳಿದ್ದೆಲ್ಲ ನಿಜ ಆಗಿರುವುದಿಲ್ಲ. ಹಾಗೆಯೇ ಕೇಳದೆ ಇರುವುದೆಲ್ಲ ಸುಳ್ಳು ಎಂದೂ ಅಲ್ಲ....ಅವರು ಮೊದಲು ಆ ಘೋಷಣೆ ಮನಸ್ಸಿನಲ್ಲಿ ತಂದುಕೊಂಡು ಮತ್ತೆ ಕೇಳಲಿ....ಅವರು ಯೋಗ ಮಾಡುವುದಿಲ್ಲವ?’’
‘‘ಇಲ್ಲ....’’
‘‘ಹೋ ಹಾಗೆ....ಅವರನ್ನು ಪಕ್ಕದ ಶಾಖೆಯ ಬೈಠಕ್ಗೆ ಕಳುಹಿಸಿ. ಅಲ್ಲಿ ಪ್ರತಿದಿನ ಯೋಗ ಮಾಡಿದರೆ ಮನಸ್ಸು ಶಾಂತವಾಗಿ ನಿಯಂತ್ರಣಕ್ಕೆ ಬರುತ್ತದೆ. ಮನಸ್ಸಿನ ಮೇಲೆ ನಿಯಂತ್ರಣ ಸಿಕ್ಕಿದರೆ ಎಂತ ಬೇಕಾದರೂ ಕೇಳುತ್ತದೆ....ಅವರು ಬೆಳಗ್ಗಿನ ಹೊತ್ತು ಅರ್ಧಗಂಟೆ ಯೋಗ ಮಾಡಿ, ದೀರ್ಘವಾಗಿ ಉಸಿರು ಮೇಲೆ ತೆಗೆದುಕೊಂಡು ಹೊರಗೆ ಬಿಡಲಿ. ಹಾಗೆ ಹತ್ತು ಸಾರಿ ಮಾಡಿದ ಬಳಿಕ ಐದು ನಿಮಿಷ ಪಾಕಿಸ್ತಾನ ದೇಶವನ್ನು ಕಣ್ಣಿಗೆ ತಂದು ಕೊಳ್ಳಬೇಕು. ಆಮೇಲೆ ಮನಸ್ಸಿನಲ್ಲೇ ನೂರು ಬಾರಿ ಆ ದೇಶಕ್ಕೆ ಜಿಂದಾಬಾದ್ ಎಂದು ಕೂಗ ಬೇಕು. ಮತ್ತೆ ವೀಡಿಯೊವನ್ನು ಬಿಟ್ಟಗಣ್ಣಿನಿಂದ ನೋಡಲಿ. ಈಗ ಮೆಲ್ಲಗೆ ಕಿವಿ ಇಟ್ಟರೆ....ಅವರಿಗೆ ಕೇಳದೆ ಇದ್ದರೆ ಮತ್ತೆ ಹೇಳಿ....’’
‘‘ಒಂದು ವೀಡಿಯೊದೊಳಗಿರುವ ಘೋಷಣೆಯನ್ನು ಕೇಳಲು ಇಷ್ಟೆಲ್ಲ ಮಾಡಬೇಕಾ? ಎಂದು ಅವರು ಕೇಳುತ್ತಿದ್ದಾರೆ....’’
‘‘ದೇಶದ ಪ್ರಶ್ನೆ ಬಂದಾಗ ನಾವು ಅದನ್ನೆಲ್ಲ ಮಾಡಬೇಕಾಗುತ್ತದೆ. ದೇಶದ ಒಳಿತಿಗಾಗಿ ನಾವು ಕೇಳುವ ಗುಣವನ್ನು ಬೆಳೆಸಿಕೊಳ್ಳಬೇಕು....ಜಿಂದಾಬಾದ್ ಎಂದು ಘೋಷಣೆಯನ್ನು ಕೂಗಿದವರು ಧರಿಸಿರುವ ವಸ್ತ್ರ, ಅವರ ಗಡ್ಡ, ಅವರ ವೇಷ ಭೂಷಣ ಇವೆಲ್ಲವನ್ನು ಗಮನಿಸಿ ಬಳಿಕ ನಾವು ಅವರು ಏನು ಹೇಳುತ್ತಿದ್ದಾರೆ ಎನ್ನುವುದನ್ನು ಕೇಳಬೇಕು. ವೀಡಿಯೊ ಇರುವುದು ಘೋಷಣೆಗಳನ್ನು ಕೇಳುವುದಕ್ಕೆ ಮಾತ್ರ ಅಲ್ಲ....ಆ ಘೋಷಣೆ ಕೂಗಿದವರ ವೇಷ ಭೂಷಣಗಳು ಅಷ್ಟು ಸ್ಪಷ್ಟ ಇರುವಾಗ ಅವರಿಗೆ ಘೋಷಣೆಯ ಬಗ್ಗೆ ಅನುಮಾನ ಯಾಕೆ?’’
‘‘ಆದರೆ ನನಗೂ ಅರ್ಧವೇ ಕೇಳಿದ್ದು....’’
‘‘ಅರ್ಧ ಕೇಳಿದ್ದರೆ ಸಾಕಾಗುವುದಿಲ್ಲವೆ? ಉಳಿದರ್ಧವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಎಫ್ಎಸ್ಎಲ್ ತನಿಖೆಯಾಗಲಿ....’’
‘‘ತನಿಖೆಯಲ್ಲಿ ಕೇಳಲಿಲ್ಲ ಎಂದು ಬಂದರೆ....’’
‘‘ಹೇ...ಅವರಿಗೆ ಕೇಳಿಯೇ ಕೇಳುತ್ತದೆ...ಅದು ಕೇಂದ್ರ ಸರಕಾರದ ಅಂಡರ್ನಲ್ಲಿ ಇರುವುದಲ್ಲವಾ? ರಾಷ್ಟ್ರೀಯವಾದದ ತಳಹದಿಯಲ್ಲಿ ತನಿಖೆ ನಡೆದರೆ ಕೇಳಲೇ ಬೇಕು...ಒಂದು ವೇಳೆ ಅವರಿಗೆ ಕೇಳಲಿಲ್ಲ ಎಂದರೆ ಏನಾಯಿತು? ಮತ್ತೆ ಎನ್ಐಎ ತನಿಖಾ ಸಂಸ್ಥೆ ಇರುವುದು ಯಾಕೆ? ಅಲ್ಲಿ ಕೇಳಲಿಲ್ಲ ಎಂದರೆ ಎಐಎ ಅವರಿಗೆ ಕೇಳಿಯೇ ಕೇಳುತ್ತದೆ....’’
‘‘ಹೌದಾ...’’
‘‘ಹೌದು. ಒಮ್ಮೆ ಈ ಎಫ್ಎಸ್ಎಲ್ ತನಿಖೆಯ ವರದಿ ಹೊರಗೆ ಬರಲಿ. ಆ ಮೇಲೆ ಅವರಿದ್ದಾರಲ್ಲ...ಅವರು ಗುಟ್ಟಾಗಿ ಮನಸ್ಸಿನಲ್ಲೇ ಪಾಕಿಸ್ತಾನ ಜಿಂದಾಬಾದ್ ಕೂಗುತ್ತಾರ ಎನ್ನುವುದನ್ನು ತನಿಖೆ ಮಾಡುವುದಕ್ಕೆ ಅವಕಾಶ ಸಿಕ್ಕಿದಂತಾಗುತ್ತದೆ. ಅವರು ಮನಸ್ಸಿನಲ್ಲಿ ಗುಟ್ಟಾಗಿ ಕೂಗಿದ್ದಾರೆ ಎಂದು ಟಿವಿಯವರು ಬೊಬ್ಬೆ ಹೊಡೆದರೆ ನಮ್ಮ ಗೃಹ ಸಚಿವರು ತಕ್ಷಣ ತನಿಖೆಗೆ ಆರ್ಡರ್ ಮಾಡುತ್ತಾರೆ. ಆರ್ಡರ್ ಮಾಡದೇ ಇದ್ದರೆ ಶ್ರೀಗಳ ಮೂಲಕ ಹೇಳಿಸಿದರೆ ಆಯಿತು. ಅವರೆಲ್ಲರಿಗೆ ಮಂಪರು ಪರೀಕ್ಷೆ ಕಡ್ಡಾಯ ಮಾಡಬೇಕು. ಮಂಪರು ಪರೀಕ್ಷೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದ್ದು ಗೊತ್ತಾದರೆ ಅವರ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಕಿತ್ತುಕೊಳ್ಳಬೇಕು...ಸದ್ಯಕ್ಕೆ ವೀಡಿಯೋ ಒಂದು ತನಿಖೆಯಾಗಿ ರಿಪೋರ್ಟ್ ಹೊರಗೆ ಬರಲಿ....’’
‘‘ಅದಲ್ಲ....ನಾವು ಹೀಗೆ ಮಾಡಿದರೆ ಹೇಗೆ?’’
‘‘ಹೀಗೆ ಅಂದರೆ....’’
‘‘ವೀಡಿಯೊವನ್ನು ತನಿಖೆ ಮಾಡುವ ಬದಲು ನಿಮ್ಮ ಕಿವಿಯನ್ನು ತಜ್ಞರಿಗೆ ತೋರಿಸಿದರೆ....?’’
‘‘ನನ್ನ ಕಿವಿಗೆ ಏನೂ ಸಮಸ್ಯೆ ಇಲ್ಲ....’’
‘‘ಹಾಗಾದರೆ ಒಮ್ಮೆ ನೀವು ಮಾನಸಿಕ ತಜ್ಞರನ್ನು ಭೇಟಿ ಮಾಡಬಹುದಲ್ಲ....ಸ್ಕಿಜೋಫ್ರೇನಿಯಾ ಎನ್ನುವ ರೋಗ ಪೀಡಿತರಿಗೆ ಏನೇನೆಲ್ಲ ಕೇಳಿಸಿದ ಹಾಗೆ ಆಗುತ್ತದೆಯಂತೆ....’’
‘‘ಹೇ ತಮಾಷೆ ಮಾಡುತ್ತಿದ್ದೀರಿ....ಆದರೆ ವಿಷಯ ಸ್ವಲ್ಪ ಹೌದು ಮಾರಾಯ್ರೆ....ಇತ್ತೀಚೆಗೆ ನನಗೆ ಆ ಅವರ ಜಾತಿಯವರನ್ನು ನೋಡಿದಾಗಲೆಲ್ಲ ಕಿವಿಗೆ ಏನೇನೆಲ್ಲ ಘೋಷಣೆ ಕೇಳುವುದು....ನಿಮಗೆ ಗೊತ್ತಿರುವ ಡಾಕ್ಟರ್ ಇದ್ದರೆ ಹೇಳಿ....ಒಮ್ಮೆ ಕಿವಿಯನ್ನೂ ತಲೆಯನ್ನೂ ಒಟ್ಟಿಗೆ ತೋರಿಸಬೇಕು ಅಂತ ಉಂಟು....’’
‘‘ಹಾಗೇನೂ ಇಲ್ಲ....ಲೋಕಸಭಾ ಚುನಾವಣೆ ಮುಗಿಯಲಿ. ನಿಮ್ಮ ಈ ಕೇಳುವ ಸಮಸ್ಯೆಯೂ ಮುಗಿಯುತ್ತದೆ...ಅಲ್ಲಿಯವರೆಗೆ ನಿಮ್ಮ ಕಿವಿಗೆ ಸ್ವಲ್ಪ ವಿಶ್ರಾಂತಿ ಕೊಡಿ. ಬರುತ್ತೇನೆ....ನಮಸ್ಕಾರ....’’