ತಾತನಿಂದ ಮೊಮ್ಮಗನಿಗೆ ಹೀಗೊಂದು ಪತ್ರ....!
ಪೆನ್ ಡ್ರೈವ್ ಸ್ವರೂಪಿಯಾದ ಮುದ್ದು ಮೊಮ್ಮಗನಿಗೆ, ನಿನ್ನ ಹಾಸನದ ತಾತ ಮಾಡುವ ಆಶೀರ್ವಾದಗಳು. ನೀನು ಕ್ಷೇಮವೆಂದು ತಿಳಿದಿದ್ದೇನೆ. ಚುನಾವಣೆಯ ಮರುದಿನದಿಂದ ನಾಪತ್ತೆಯಾಗಿರುವುದು ನನಗೂ ತನಿಖಾಧಿಕಾರಿಗಳ ಮೂಲಕ ಗೊತ್ತಾಗಿದೆ. ನೀನು ನಾಪತ್ತೆಯಾದ ದಿನದಿಂದ ಇಲ್ಲಿ ಮನೆಯಲ್ಲಿ ತಾಯಿ, ತಂದೆ, ನಿನ್ನ ಚಿಕ್ಕಪ್ಪ, ಚಿಕ್ಕಮ್ಮ ಎಲ್ಲರೂ ನೆಮ್ಮದಿಯಾಗಿದ್ದಾರೆ. ಅವರ ಆರೋಗ್ಯ ಮೊದಲಿಗಿಂ ತಚೇತರಿಕೆಯಾಗಿದೆ. ಆದುದರಿಂದ, ನೀನು ಎಲ್ಲಿದ್ದರೂ ದಯವಿಟ್ಟು ಮನೆಗೆ ಮಾತ್ರ ವಾಪಸ್ ಬರಬೇಡ. ಇನ್ನಷ್ಟು ಪೆನ್ ಡ್ರೈವ್ಗಳು ಬೇಕಾದರೆ ತಿಳಿಸು, ನಾವು ಅದನ್ನು ಪೂರೈಸುವ ವ್ಯವಸ್ಥೆ ಮಾಡುತ್ತೇವೆ.
ರಾಜ್ಯ ರಾಜಕೀಯದಲ್ಲಿ ನೀನು ಗುರುತಿಸಿಕೊಳ್ಳಬೇಕು ಎನ್ನುವುದು ನನ್ನ ಬಹು ದೊಡ್ಡ ಕನಸಾಗಿತ್ತು. ಇದೀಗ ನೀನು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದೀಯ. ನಾವು ಇಷ್ಟು ಸುದ್ದಿ ಮಾಡುವುದಕ್ಕೆ ರೈತರ ನೇಗಿಲು ಹಿಡಿದುಕೊಂಡು, ಹಲವು ದಶಕಗಳ ಕಾಲ ನಾಡಿನ ಮಣ್ಣನ್ನು ಉತ್ತು, ಬಿತ್ತಬೇಕಾಗಿತ್ತು. ನೀನು ಪೆನ್ಡೈವ್ ಮೂಲಕವೇ ಕ್ಷಣಾರ್ಧದಲ್ಲಿ ಇದೆಲ್ಲವನ್ನೂ ಸಾಧಿಸಿದ್ದೀಯ ಎನ್ನುವುದು ಕೇಳಿ ನನಗೆ ಸಂತೋಷವಾಯಿತು. ರಾಜಕೀಯವಾಗಿಬೆಳೆಯಬೇಕಾದರೆ ಆಧುನಿಕ ತಂತ್ರಜ್ಞಾನಗಳನ್ನು ಸಮರ್ಥವಾಗಿ ಹೇಗೆ ಬಳಸಬೇಕು ಎನ್ನುವುದಕ್ಕೆ ನೀನು ನನ್ನ ಪಕ್ಷದ ತಳಮಟ್ಟದ ಕಾರ್ಯಕರ್ತರಿಗೆ ಮಾದರಿಯಾಗಿ ದ್ದೀಯ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ನಾನು ಗುರುತಿಸಲು ಈ ದೇಶದ ಪ್ರಧಾನಿಯಾಗಬೇಕಾಯಿತು. ಆದರೆ ಇಂದು ನೀನು ಅದೇನೂ ಆಗದೆಯೇ ವಿದೇಶದಲ್ಲಿ ಅವಿತುಕೊಂಡು ಅಂತರರಾಷ್ಟ್ರೀಯ ಮಟ್ಟದ ವ್ಯಕ್ತಿಯಾಗಿ ಗುರುತಿಸ ಲ್ಪಟ್ಟಿದ್ದೀಯ. ಹಾಸನದಲ್ಲಿ ನೀನು ಸಾಧಿಸಿದ ಸಾಧನೆಗಳನ್ನು ವಿದೇಶಗಳಲ್ಲೂ ಮುಂದುವರಿಸಿ, ಅಲ್ಲಿಯೂ ಖ್ಯಾತನಾಮನಾಗಿ ನನ್ನ ಹೆಸರನ್ನೂ, ಹಾಸನದ ಹೆಸರನ್ನೂ ಜಗತ್ತಿಗೇಪರಿಚಯಿಸುತ್ತೀಯ ಎನ್ನುವುದು ನನ್ನ ಭರವಸೆ. ನನ್ನ ಭರವಸೆಯನ್ನು ಹುಸಿ ಮಾಡಬಾರದು. ಆ ಬಳಿಕವೇ ಹಾಸನಕ್ಕೆ ಬರಬೇಕು.
ನೀನು ಇಲ್ಲದ ಈ ಹೊತ್ತಿನಲ್ಲಿ ಇಲ್ಲಿ ನಿನ್ನ ಚಿಕ್ಕಪ್ಪ ಕುಂ ಮತ್ತು ಅವನ ಮಗ ನಿಕ್ (ಸಾಂಕೇತಿಕ ಭಾಷೆಯಲ್ಲಿ ಬರೆದಿದ್ದೀನೆ. ನನ್ನ ಪತ್ರವನ್ನು ಕದ್ದು ಓದುವ ಸಾಧ್ಯತೆಗಳಿವೆ ಎನ್ನುವ ಕಾರಣದಿಂದ) ಮೊದಲಿಗಿಂತ ಹೆಚ್ಚು ಸಂಭ್ರಮದಲ್ಲಿ ಓಡಾಡುತ್ತಿದ್ದಾರೆ. ಯಾಕೆ ಎನ್ನುವುದು ನಿನಗೇ ಗೊತ್ತಿರಬಹುದು. ಚುನಾವಣಾ ಫಲಿತಾಂಶದ ಬಳಿಕ ನೀನೇನಾದರೂ ಗೆದ್ದ ವಿಷಯ ಸಿಕ್ಕಿದರೆ ತಕ್ಷಣ ನಿನಗೆ ಸಾಂಕೇತಿಕ ಭಾಷೆಯಲ್ಲಿ ಸಂದೇಶವನ್ನು ಕಳುಹಿಸುತ್ತೇನೆ. ಇಲ್ಲಿ ನಾನೇನು ಮಾತನಾಡಿದರೂ ಅದನ್ನು ನನ್ನ ಸಣ್ಣ ಮಗ ಮತ್ತು ಅವನ ಮಕ್ಕಳು ಕದ್ದು ಕೇಳುವ ವ್ಯವಸ್ಥೆ ಮಾಡಿದ್ದಾರೆ ಎನ್ನುವ ಅನುಮಾನ ನನಗಿದೆ. ಆದುದರಿಂದ ನನ್ನ ಎಡ ಗಣ್ಣಿನಲ್ಲಿ ಕಣ್ಣೀರು ಬಂದರೆ ನೀನು ಗೆದ್ದಿದ್ದಿ ಎಂದೂ ಬಲಗಣ್ಣಿನಲ್ಲಿ ಕಣ್ಣೀರು ಬಂದರೆ ನೀನು ಸೋತಿದ್ದೀ ಎಂದು ತಿಳಿದುಕೊಳ್ಳ ತಕ್ಕದ್ದು. ನಿನ್ನ ಗೆದ್ದ ಸುದ್ದಿ ಸಿಕ್ಕಿದಾಕ್ಷಣ ಹೇಗೆ ಪ್ರತಿಕ್ರಿಯಿಸಬೇಕು ಎಂದು ನಾನು ಪ್ರತ್ಯೇಕವಾಗಿ ಬರೆದು ಕಳುಹಿಸುತ್ತೇನೆ. ಅದನ್ನು ಮಾಧ್ಯಮಗಳ ಮುಂದೆ ಓದಬೇಕು. ಚುನಾವಣೆಯಲ್ಲಿ ಸೋತದ್ದೇ ಆದರೆ, ನಿನಗೆ ಜೈಲಿನಲ್ಲಿ ಬೇಕಾದ ಎಲ್ಲ ಸುವ್ಯವಸ್ಥೆಗಳನ್ನು ಮಾಡಲು ನಾನು ಪ್ರಧಾನಿ ಮೋದಿಯವರ ಜೊತೆಗೆ ಮಾತುಕತೆ ನಡೆಸುತ್ತೇನೆ. ಗೆದ್ದದ್ದೇ ಆದರೆ ಕೇಂದ್ರ ಸರಕಾರದಲ್ಲಿ ಪೆನ್ ಡೈವ್ ಸಚಿವಾಲಯವೊಂದನ್ನು ಸ್ಥಾಪಿಸಲು ಒತ್ತಾಯಿಸಿ ಅದಕ್ಕೆ
ನಿನ್ನನ್ನು ಸಚಿವನಾಗಿಸಲು ಬೇಡಿಕೆ ಇಡುತ್ತೇನೆ. ನಿನ್ನ ತಂದೆಯ ಬಂಧನವಾಗದ ಹಾಗೆ ನಾನು ಮನೆಯ ಕೋಳಿ ಗೂಡಿನಲ್ಲಿ ಮುಚ್ಚಿಟ್ಟರೂ ಮನೆಯವರೇ ಯಾರೋ ಪೊಲೀಸರಿಗೆ ಮಾಹಿತಿ ನೀಡಿ ಅವನನ್ನು ಬಂಧಿಸುವ ಹಾಗೆ ಮಾಡಿದ್ದಾರೆ. ಅದುಯಾರು ಎನ್ನುವುದು ನಿನಗೆ ವಿವರಿಸಬೇಕಾದ ಅಗತ್ಯವಿಲ್ಲ. ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ. ಇದರ ಬಗ್ಗೆ ನೀನು ಚಿಂತೆ ಮಾಡಬೇಡ. ಈಗಾಗಲೇ ಸಾರ್ವಜನಿಕವಾಗಿ ನಾನು ಎರಡು ಬಾರಿ ಕಣ್ಣೀರು ಹಾಕಿದ್ದೇನೆ. ನೀನು ಗೆದ್ದದ್ದೇ ಆದರೆ ನೈತಿಕತೆಗೆ ಸಿಕ್ಕಿದ ಜಯ ಎಂದು ಇನ್ನೊಮ್ಮೆ ಸಾರ್ವಜನಿಕವಾಗಿ ಕಣ್ಣೀರು ಹಾಕಲು ವ್ಯವಸ್ಥೆ ಮಾಡಿಟ್ಟಿದ್ದೇನೆ. ಈ ಬಾರಿಯ ಕಣ್ಣೀರಿನಲ್ಲಿ ಇಡೀ ಹಾಸನ ಕೊಚ್ಚಿಕೊಂಡು ಹೋಗಬೇಕು. . ಅಷ್ಟೂ ಕಣ್ಣೀರನ್ನು ಶೇಖರಿಸಿ ಇಟ್ಟಿದ್ದೇನೆ. ನಿನಗೆ ನಿನಗೆ ನಾನು ಕಣ್ಣೀರಿನ ಮಹತ್ವವನ್ನು ಬಹಳಷ್ಟು ಬಾರಿ ವಿವರಿಸಿದ್ದೇನೆ. ನಿನ್ನ ಚಿಕ್ಕಪ್ಪನ ಮಗ ನಿಕ್ ಈಗಾಗಲೇ ಹಲವು ಬಾರಿ ಕಣ್ಣೀರು ಹಾಕಿ ತಮಾಷೆಗೀಡು ಆಗಿದ್ದಾನೆ. ಕಣ್ಣೀರು ಹಾಕುವುದು ಮಕ್ಕಳಾಟಿಕೆಯ ರಾಜಕೀಯ ಎಂದು ಅವನು ತಿಳಿದುಕೊಂಡಂತಿದೆ. ಚುನಾವಣೆಯಲ್ಲಿ ಗೆದ್ದದ್ದೇ ಆದರೆ 'ಪೆನ್‌ಡ್ರೈವ್‌ಗೆ ಸಿಕ್ಕಿದ ಜಯ' ಎಂದು ಹೇಳಿ ನೀನು ಕಣ್ಣೀರು ಹಾಕಬೇಕಾಗಬಹುದು. ಅದಕ್ಕೆ ಸಿದ್ಧನಾಗಿರು.
ಉಳಿದಂತೆ ಮೋದೀಜಿಯವರ ಕೃಪೆಯಿಂದ ನಾವೆಲ್ಲರೂ ಕ್ಷೇಮ, ಪ್ರಧಾನಿ ಮೋದಿಯವರು ಸದ್ಯ ದೇವರಾಗಿ ಭಡ್ತಿಯನ್ನು ಪಡೆದಿದ್ದಾರೆ. ಈ ಎಲ್ಲ ವಿಪತ್ತಿನಿಂದ ನೀನು ಪಾರಾದರೆ ಹಾಸನದಲ್ಲಿ ಮೋದಿ ದೇವರಿಗೆ ಒಂದು ಗುಡಿಯನ್ನು ಕಟ್ಟಿ, ಪ್ರಸಾದ ಹಂಚುವ ವ್ಯವಸ್ಥೆ ಮಾಡುತ್ತೇನೆ ಎಂದು ಹರಕೆ ಹೊತ್ತಿದ್ದೇನೆ. ಸದ್ಯಕ್ಕೆ ನನಗೆ ಫೋನ್ ಮಾಡುವ ದುಸ್ಸಾಹಸ ಮಾಡಬೇಡ. ಅದನ್ನು ಕದ್ದು ಕೇಳಲು ನಿನ್ನ ಚಿಕ್ಕಪ್ಪ ಹೊಂಚು ಹಾಕಿ ಬಾಗಿಲ ಮರೆಯಲ್ಲೇ ಕೂತಿದ್ದಾನೆ.
ಕೇರಳದ ಮಂತ್ರವಾದಿ ಮಂತ್ರಿಸಿದ ಹತ್ತು ನಿಂಬೆ ಹಣ್ಣು ಮತ್ತು ಒಂದು ತಾಯತವನ್ನು ಕಳುಹಿಸಿಕೊಟ್ಟಿದ್ದೇನೆ. ಅದು ನಿನಗೆ ತಲುಪಿರಬಹುದೆಂದು ತಿಳಿದಿದ್ದೇನೆ. ಆ ತಾಯತ ಸಿದ್ದಪಡಿಸಿದಾಕ್ಷಣ ನಿನ್ನ ತಂದೆಗೆ ಜಾಮೀನು ಸಿಕ್ಕಿದೆ. ಭಯಂಕರ ಶಕ್ತಿಯಿರುವ ತಾಯತ ಅದು. ಜೋಪಾನವಾಗಿ ನಿನ್ನ ಸೊಂಟದ ಕೆಳಗೆ ಕಟ್ಟಿಕೋ.
ಇತೀ ನಿನ್ನ ಮುದ್ದಿನ ತಾತ
* ಚೇಳಯ್ಯ
chelayya@gmail.com