ಶಾಲೆಯ ಮಕ್ಕಳಿಗೆ ಹುಲ್ಲು ತಿನ್ನಿಸಲು ಹೊರಟಿದ್ದೀರಾ?
‘‘ಶಾಲೆಗಳಿಗೆ ವಿಶೇಷ ಅನುದಾನ....ಪ್ರತೀ ಶಾಲೆಗಳಿಗೆ ಮೂರೂ ಹೊತ್ತು ಆಹಾರ....ರಾಜ್ಯಾದ್ಯಂತ ಶಾಲೆಗಳಿಗೆ ಮಾಸಾಂತ್ಯಕ್ಕೊಮ್ಮೆ ಭೇಟಿ....’’ ಮು.ಮಂ. ಬೊಮ್ಮಣ್ಣನವವರು ಬೆಂಗಳೂರಿನಲ್ಲಿ ನಿಂತು ಘೋಷಿಸುತ್ತಿದ್ದಂತೆಯೇ, ಸರಕಾರಿ ಶಾಲೆಯ ಮಕ್ಕಳೆಲ್ಲ ಹಿರಿಹಿರಿ ಹಿಗ್ಗತೊಡಗಿದರು. ಉಚಿತ ಸೈಕಲ್, ಉಚಿತ ಶೂ, ಉಚಿತ ಯುನಿಫಾರ್ಮ್, ಉಚಿತ ಪಠ್ಯ ಪುಸ್ತಕ ಎಲ್ಲವೂ ಬಂದೇ ಬಿಟ್ಟಿತು ಎಂದು ವಿದ್ಯಾರ್ಥಿಗಳ ಪೋಷಕರು ನಿಟ್ಟುಸಿರು ಬಿಟ್ಟರು. ಸರಕಾರಿ ಶಾಲೆಯಲ್ಲಿ ಕಲಿತು ಪತ್ರಕರ್ತನಾಗಿದ್ದ ಎಂಜಲು ಕಾಸಿಗೂ ಸುದ್ದಿ ಕೇಳಿ ಸಂತೋಷವಾಯಿತು. ನೇರವಾಗಿ ಬೊಮ್ಮಣ್ಣನವರ ಮುಂದೆ ನಿಂತು ‘‘ಸಾರ್....ಶಾಲೆಗಳ ಬಗ್ಗೆ ಏಕಾಏಕಿ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು?’’
‘‘ಶಾಲೆ ಎಂದರೆ ರಾಜಕಾರಣಿಗಳ ಆಶ್ರಯಧಾಮ. ಅದರಿಂದಲೇ ನಾವೆಲ್ಲ ಇಂದು ಇಷ್ಟು ದೊಡ್ಡ ಸ್ಥಾನವನ್ನು ಪಡೆಯುವಂತಾಯಿತು’’ ಬೊಮ್ಮಣ್ಣ ಅವರು ಶಾಲೆಗಳ ಬಗ್ಗೆ ಇರುವ ತಮ್ಮ ಅಭಿಮಾನವನ್ನು ಹೊರಗೆಡಹಿಸಿದರು.
‘‘ಸಾರ್...ಶಾಲೆಗಳಿಗೆ ಮಧ್ಯಾಹ್ನ ಹೊಸ ಅಡುಗೆಯ ಕೊಡುಗೆ ಏನಾದರೂ ಇದೆಯ?’’ ಮೊಟ್ಟೆ, ಹಾಲಿನ ಜೊತೆಗೆ ಕೋಳಿ ಪೀಸ್ ಹಾಕ್ತಾರಾ ಎಂದು ಕಾಸಿ ಎಂಜಲು ಸುರಿಸಿದ.
‘‘ಹೌದು...ಸರಕಾರ ಆ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದೆ. ಬೆಳಗ್ಗೆ ಎಲ್ಲ ಶಾಲೆಗಳಿಗೆ ಸರಕಾರದ ವತಿಯಿಂದ ಹಸಿ ಹುಲ್ಲು ಒದಗಿಸಲಿದ್ದೇವೆ. ಮಧ್ಯಾಹ್ನ ವಿಶೇಷ ಅಕ್ಕಿ ಹಿಂಡಿ... ಸಂಜೆಯ ಹೊತ್ತಿಗೆ ಬಿಸಿ ಬಿಸಿ ಅಕ್ಕಚ್ಚು ಜೊತೆಗೆ ಒಣ ಹುಲ್ಲು....’’ ಬೊಮ್ಮಣ್ಣ ಹೇಳುತ್ತಿದ್ದರೆ ಕಾಸಿ ಕಂಗಾಲಾಗಿ ಬಿಟ್ಟ.
‘‘ಸಾರ್...ಶಾಲೆಯ ಮಕ್ಕಳಿಗೆ ಹುಲ್ಲು ತಿನ್ನಿಸಲು ಹೊರಟಿದ್ದೀರಾ?’’
‘‘ಗೋಮಾತೆಯರಿಗೆ ಹುಲ್ಲು ಅಲ್ಲದೆ ಮೊಟ್ಟೆ ತಿನ್ನಿಸಲು ಸಾಧ್ಯವೆ? ಅದು ಪ್ಯೂರ್ ವೆಜ್ ಅಲ್ಲವೆ?’’ ಬೊಮ್ಮಣ್ಣ ಮರು ಪ್ರಶ್ನಿಸಿದರು.
‘‘ಸಾರ್...ಶಾಲೆಗಳಲ್ಲಿ ವಿದ್ಯಾರ್ಥಿಗಳ ವಿಷಯ....’’ ಕಾಸಿ ತಡವರಿಸಿದ.
‘‘ರೀ...ನಾನು ಗೋಶಾಲೆಗಳ ವಿಷಯದ ಬಗ್ಗೆ ಮಾತನಾಡುತ್ತಿದ್ದೇನೆ.....’’ ಬೊಮ್ಮಣ್ಣ ಸ್ಪಷ್ಟಪಡಿಸಿದರು.
ಆಕಾಶದಲ್ಲಿದ್ದ ಕಾಸಿ ಒಮ್ಮೆಗೆ ಭೂಮಿಗೆ ಬಿದ್ದ. ‘‘ಸಾರ್...ಸರಕಾರಿ ಶಾಲೆಗಳ ಬಗ್ಗೆ ....’’
‘‘ನೋಡಿ.... ಪ್ರತೀ ಸರಕಾರಿ ಶಾಲೆಗಳನ್ನೂ ಗೋಶಾಲೆಗಳಿಗೆ ಸದ್ಬಳಕೆ ಹೇಗೆ ಮಾಡಬಹುದು ಎನ್ನುವುದರ ಬಗ್ಗೆಯೂ ನಾವು ಯೋಜನೆ ರೂಪಿಸಿದ್ದೇವೆ. ಸರಕಾರಿ ಶಾಲೆಗೊಂದರಂತೆ ಒಂದು ಸಣ್ಣ ಗೋಶಾಲೆಗಳನ್ನು ವ್ಯವಸ್ಥೆ ಮಾಡಿದ್ದೇವೆ. ಪ್ರತೀ ಶಾಲೆಗಳಲ್ಲಿ ಶಿಕ್ಷಕರು ಮತ್ತು ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಈ ಗೋವುಗಳನ್ನು ಸಾಕುವ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು....’’ ಬೊಮ್ಮಣ್ಣ ಯೋಜನೆಗಳನ್ನು ಮುಂದಿಟ್ಟರು.
‘‘ಸರಕಾರಿ ಶಾಲೆಗಳಲ್ಲಿ ಸುಧಾರಣೆ ತರುವ ವಿಷಯ ಏನಾಯಿತು ಸಾರ್....’’ ಕಾಸಿ ನಿರಾಸೆಯಿಂದ ಕೇಳಿದ.
‘‘ಅದೇರಿ....ಎಲ್ಲ ಸರಕಾರಿ ಶಾಲೆಗಳಲ್ಲಿ ಗುರುಕುಲ ಶಿಕ್ಷಣವನ್ನು ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಹಿಂದೆಲ್ಲ ಗುರುಕುಲ ಶಿಕ್ಷಣದಲ್ಲಿ ದನ ಕಾಯುವ ಕೆಲಸ ಪ್ರಮುಖವಾಗಿತ್ತು. ವಿದ್ಯಾರ್ಥಿಗಳು ಗುರುಕುಲ ಶಿಕ್ಷಣದಲ್ಲಿ ಗೋವುಗಳನ್ನು ಮೇಯಿಸಿ ಬರುವುದು ಕಡ್ಡಾಯವಾಗಿತ್ತು. ಎಲ್ಲ ಸರಕಾರಿ ಶಾಲೆಗಳಲ್ಲಿ ಗೋಶಾಲೆಯ ಅನುಪಯುಕ್ತ ಗೋವುಗಳನ್ನು ಮೇಯಿಸಿ ಬರುವ ಕೆಲಸವನ್ನು ವಿದ್ಯಾರ್ಥಿಗಳಿಗೆ ನೀಡಲಿದ್ದೇವೆ....’’ ಬೊಮ್ಮಣ್ಣ ವಿವರಿಸಿದರು.
‘‘ಮತ್ತೆ ವಿದ್ಯಾರ್ಥಿಗಳ ಕಲಿಕೆ...?’’ ಕಾಸಿ ಪ್ರಶ್ನಿಸಿದ.
‘‘ಈಗಾಗಲೇ ಸಂಶೋಧನೆಯಿಂದ ಗೋವುಗಳ ಸಾಮೀಪ್ಯದಿಂದ ವಿದ್ಯಾರ್ಥಿಗಳ ಬುದ್ಧಿಮತ್ತೆ ಹೆಚ್ಚುತ್ತದೆ ಎನ್ನುವುದು ಸಾಬೀತಾಗಿದೆ. ಹಾಗೆಯೇ ಗೋವುಗಳು ಆಮ್ಲಜನಕ ಸೇವಿಸಿ ಆಮ್ಲಜನಕ ಹೊರ ಬಿಡುವುದರಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಭಾರೀ ಸುಧಾರಣೆ ಯಾಗುತ್ತದೆ. ಗೋವುಗಳನ್ನು ಸಾಕಿ ಬೆಳೆಸುವ ಶಿಕ್ಷಣವನ್ನೂ ವಿದ್ಯಾರ್ಥಿಗಳು ಉಚಿತವಾಗಿ ಪಡೆದಂತಾಗುತ್ತದೆ. ....’’
‘‘ಸರಕಾರಿ ಶಾಲೆಗಳ ಮೂಲಸೌಕರ್ಯಗಳಿಗಾಗಿ ಅನುದಾನ....’’
‘‘ನೋಡಿ...ಗೋವುಗಳ ಸೆಗಣಿ, ಮೂತ್ರಗಳನ್ನು ಸಂಗ್ರಹಿಸಿ ಅವುಗಳನ್ನು ಮಾರಿ ಬರುವ ಎಲ್ಲ ಹಣವನ್ನೂ ಆಯಾ ಶಾಲೆಗಳಿಗೇ ನೀಡಲಾಗುತ್ತದೆ. ಗೋಶಾಲೆಗಳಿಂದ ಬರುವ ಆದಾಯಗಳಿಂದ ಸರಕಾರಿ ಶಾಲೆಗಳು ತಮ್ಮ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು....ಹಾಗೆಯೇ ಎಲ್ಲ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಪೋಷಕರಿಂದ ಗೋಶಾಲೆಗಳಿಗಾಗಿ ತೆರಿಗೆಯನ್ನು ವಸೂಲಿ ಮಾಡಲಿದ್ದೇವೆ....ಗೋವುಗಳಿಗೆ ಕಾಯಿಲೆ ಬಂದಾಗ ಅದಕ್ಕೆ ಬೇಕಾದ ಔಷಧ ಖರ್ಚುಗಳನ್ನೆಲ್ಲ ಆಯಾ ಶಾಲಾ ಅಭಿವೃದ್ಧಿ ಮಂಡಳಿಗಳೇ ಭರಿಸಬೇಕು....’’ ಬೊಮ್ಮಣ್ಣ ತಮ್ಮ ದೂರಾಲೋಚನೆಯನ್ನು ತೆರೆದಿಟ್ಟರು.
‘‘ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ....’’ ಕಾಸಿ ಆತಂಕವನ್ನು ಮುಂದಿಟ್ಟ.
‘‘ಹೌದು...ಇದು ಸಂತೋಷದ ವಿಷಯ. ಜನರು ಆರ್ಥಿಕವಾಗಿ ಮೇಲೆ ಬರುತ್ತಿದ್ದಾರೆ. ಅವರೆಲ್ಲ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಖಾಲಿಯಾಗಿರುವ ಸರಕಾರಿ ಶಾಲೆಗಳನ್ನೆಲ್ಲ ಪೂರ್ಣ ಪ್ರಮಾಣದಲ್ಲಿ ಗೋಶಾಲೆಗಳಾಗಿ ಪರಿವರ್ತಿಸಲು ಇದರಿಂದ ಅನುಕೂಲವಾಗುತ್ತದೆ. ಸರಕಾರಿ ಶಾಲೆಗಳಿಂದ ಇನ್ನಷ್ಟು ಮಕ್ಕಳು ಹೊರ ಹೋಗುವುದಕ್ಕಾಗಿ ಸರಕಾರ ಸರ್ವ ವ್ಯವಸ್ಥೆ ಮಾಡಿದೆ. ಮುಂದಿನ ದಿನಗಳಲ್ಲಿ ಎಲ್ಲ ಸರಕಾರಿ ಶಾಲೆಗಳನ್ನು ಗೋಶಾಲೆಗಳನ್ನಾಗಿ ಮಾರ್ಪಡಿಸಿ ಎಲ್ಲ ಸರಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಗುರುಕುಲ ಶಿಕ್ಷಣ ವ್ಯವಸ್ಥೆಯಡಿಯಲ್ಲಿ ಸೆಗಣಿ ಬಾಚುವ ಶಿಕ್ಷಣ ಕಲಿಸಿ ಅದರಲ್ಲಿ ಸ್ನಾತಕೋತ್ತರ ಪದವಿಗಳನ್ನು ಕೊಡುವ ಉದ್ದೇಶವಿದೆ. ರಾಜ್ಯದ ಶೂದ್ರ ಹಾಗೂ ದಲಿತ ಮಕ್ಕಳು ಈ ಗುರುಕುಲ ಶಿಕ್ಷಣದ ಸಕಲ ಪ್ರಯೋಜನ ಪಡೆಯಬೇಕು. ಯಾಕೆಂದರೆ, ಶತಮಾನಗಳ ಹಿಂದೆ ಅವರನ್ನು ಗುರುಕುಲ ಶಿಕ್ಷಣದಿಂದ ಹೊರಗಿಡಲಾಗಿತ್ತು. ಅವರಿಗೆ ನ್ಯಾಯ ಕೊಡುವುದು ನಮ್ಮ ಕರ್ತವ್ಯ. ಆದುದರಿಂದ ಈ ಗುರುಕುಲ ಶಿಕ್ಷಣದಲ್ಲಿ ದಲಿತರಿಗೆ ಮತ್ತು ಶೂದ್ರರಿಗೆ ಶೇ. ೧೦೦ ಮೀಸಲಾತಿ ನೀಡಲಾಗುತ್ತದೆ....’’
ಕಾಸಿಗೆ ಎಲ್ಲವೂ ಅರ್ಥವಾಯಿತು. ತನ್ನ ಮನೆಯಲ್ಲಿರುವ ಮಗುವಿಗೆ ಖಾಸಗಿ ಶಾಲೆಯೇ ಗತಿಯೆಂದು ಕೊಂಡು ‘‘ಸಾರ್...ಸರಕಾರಿ ಶಾಲೆಗಳ ಕುರಿತ ನಿಮ್ಮ ದೂರದೃಷ್ಟಿ ಅದ್ಭುತ ...’’ ಎನ್ನುತ್ತಾ ಅಲ್ಲಿಂದ ಕಾಲ್ಕಿತ್ತ.
*ಚೇಳಯ್ಯ
chelayya@gmail.com