ಮೈಸೂರಿನಲ್ಲೂ ‘PAYCM’ ಪೋಸ್ಟರ್​ ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತರು

Update: 2022-09-25 11:22 GMT

ಮೈಸೂರು: ರಾಜ್ಯ ರಾಜಧಾನಿಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿರುವ 'PAYCM' ಕ್ಯೂಆರ್ ಕೋಡ್ ಪೋಸ್ಟರ್ ಅಭಿಯಾನ ಮುಂದುವರಿದಿದ್ದು,  ಮೈಸೂರಿನಲ್ಲೂ ಪೋಸ್ಟರ್​ ಅಂಟಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ನಗರದಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, 'ರಾಜ್ಯ ಸರ್ಕಾರ ಭ್ರಷ್ಟಾಚಾರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ  ತೊಡಗಿದ್ದು, ಮುಖ್ಯಮಂತ್ರಿಗಳಾದಿಯಾಗಿ ಎಲ್ಲರೂ ಕಮೀಷನ್ ದಂಧೆಗೆ ಇಳಿದಿದ್ದಾರೆ. ಹಾಗಾಗಿ ಸಾರ್ವಜನಿಜರಿಗೆ ಇವರ ದುರಾಡಳಿತ ತಿಳಿಯಲಿ ಎಂದು ಪೇ ಸಿಎಂ ಕ್ಯೂಆರ್ ಕೋಡ್ ಪೋಸ್ಟರ್ ಅನ್ನು ಎಲ್ಲಾ ಕಡೆ ಅಂಟಿಸುತಿದ್ದೇವೆ' ಎಂದು ಹೇಳಿದರು.

'ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿಲ್ಲ ಎನ್ನುವುದಾದರೆ ಏಕೆ ನ್ಯಾಯಾಂಗ ತನಿಖೆಗೆ ವಹಿಸುತ್ತಿಲ್ಲ, ಹಲವಾರು ಭ್ರಷ್ಟಾಚಾರದ ಕುರಿತು ಕಾಂಗ್ರಸ್ ದಾಖಲೆ ನೀಡಿದ್ದರೂ ಏಕೆ ಕ್ರಮ ಗೈಗೊಳ್ಳುತ್ತಿಲ್ಲ' ಎಂದು ಇದೇ ವೇಳೆ ಪ್ರಶ್ನಿಸಿದರು.

ಬಳಿಕ ಕಾಂಗ್ರೆಸ್ ಕಚೇರಿ ಮುಂಭಾಗದ ರೈಲು ನಿಲ್ದಾಣದ ರಸ್ತೆಯ ಗೋಡೆಗಳಿಗೆ ಪೇ ಸಿಎಂ ಕ್ಯೂ ಆರ್ ಕೋಡ್ ಪೋಸ್ಟರ್ ಅಂಟಿಸಿದರು.

ಸ್ಥಳಕ್ಕೆ ಜಮಾಯಿಸಿದ ಪೊಲೀಸರು: ಕಾಂಗ್ರೆಸ್ ನವರು ಪೇ ಸಿಎಂ ಪೋಸ್ಟರ್ ಅಂಟಿಸುವ ವಿಷಯ ತಿಳಿದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಚೇರಿಮುಂದೆ ಜಮಾಯಿಸಿದರು. ಎಸಿಪಿ ನೇತೃತ್ವದಲ್ಲಿ ಇಬ್ಬರು ಇನ್ಸ್ ಪೆಕ್ಟರ್ ನಾಲ್ವರು ಪಿಎಸ್ಐ ಗಳೊಂದಿಗೆ ಜಮಾಯಿಸಿದ ಪೊಲೀಸರು ಪೋಸ್ಟರ್ ಅಂಟಿಸಿರುವುದನ್ನು ಕಿತ್ತುಹಾಕಿ,   ಬಳಿಕ ಕಾಂಗ್ರೆಸ್ ಕಚೇರಿ ಮುಂದೆಯೇ ಹೆಚ್ಚನ ಬಂದೊಬಸ್ತ್ ಮಾಡಿದ್ದಾರೆ.

ಪೋಸ್ಟರ್ ಅಂಟಿಸುವ ವೇಳೆ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಾಧ್ಯಮ‌ ವಕ್ತಾರ ಮಹೇಶ್, ಕಾಂಗ್ರೆಸ್ ಮುಖಂಡರುಗಳಾದ ಬಿ.ಎಂ.ರಾಮು, ಶಿವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News