ಕನ್ನಡ ನಾಡನ್ನು ಎಲ್ಲಾ ರಂಗದಲ್ಲಿಯೂ ಸರ್ವ ಶ್ರೇಷ್ಠವಾಗಿಸಬೇಕು: ಸಿಎಂ ಬೊಮ್ಮಾಯಿ

Update: 2022-09-26 09:28 GMT

ಮೈಸೂರು, ಸೆಪ್ಟೆಂಬರ್ 26:  ಕನ್ನಡ ನಾಡನ್ನು ಎಲ್ಲಾ ರಂಗದಲ್ಲಿಯೂ ಸರ್ವ ಶ್ರೇಷ್ಠವಾಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಚಾಮುಂಡಿ ಬೆಟ್ಟದಲ್ಲಿ  ನಾಡದೇವತೆ   ಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆಯೊಂದಿಗೆ 2022ರ ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ  ರಾಷ್ಟ್ರಪತಿಗಳಾದ ಮತಿ ದ್ರೌಪದಿ ಮುರ್ಮು ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು.

ಗತವೈಭವವನ್ನು ನೆನೆಪಿಸುವ  ಅದ್ದೂರಿ ದಸರಾ: ಈ ಬಾರಿ ದಸರಾ ಹಲವಾರು ವಿಶೇಷತೆಗಳಿಂದ ಕೂಡಿವೆ. ಕಳೆದ 2 ವರ್ಷಗಳಿಗಿಂತ ಅರ್ಥಪೂರ್ಣವಾಗಿ, ಗತವೈಭವವನ್ನು ನೆನೆಪಿಸುವ ರೀತಿಯಲ್ಲಿ ಅದ್ದೂರಿಯಾಗಿ ನಾವೆಲ್ಲರೂ ಒಟ್ಟಾಗಿ ಆಚರಣೆ ಮಾಡುತ್ತಿದ್ದೇವೆ. 

ದಸರಾ ನಾಡ ಹಬ್ಬ. ನಮ್ಮ ನಾಡಿನ ದುಡಿಯುವ ವರ್ಗದ ಕಾರ್ಮಿಕರು, ರೈತರು, ಸಾಮಾನ್ಯ ಜನರು ಮನೆ, ಮನೆಯಲ್ಲಿ ದಸರಾ ಆಚರಿಸಲಾಗುತ್ತಿದೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದು ನಾಡಿನ ಅಭಿವೃದ್ಧಿ, ಸಮೃದ್ಧಿ, ಸುಭಿಕ್ಷೆಯಿಂದ ಇಡಲು ನಾವು ಪ್ರಾರ್ಥಿಸಬೇಕು. ಸದಾ ಕಾಲ ಆ ದೇವಿ ನಮ್ಮ ಪ್ರಾರ್ಥನೆಗೆ ಓಗೊಟ್ಟು ಕಾಲಕಾಲಕ್ಕೆ ಮಳೆ, ಬೆಳೆ ಕೊಟ್ಟು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಎಲ್ಲಾ ಶಕ್ತಿ ಯ ಆಶೀರ್ವಾದ ನೀಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಚಾಮುಂಡಿ ಬೆಟ್ಟದಲ್ಲಿ ಸ್ಥಾಪನೆಯಾಗಿರುವ ತಾಯಿಯ ಶಕ್ತಿ ಪೀಠ ಇಡೀ ನಾಡಿಗೆ ಶಕ್ತಿ ನೀಡುತ್ತಿದೆ. ಅದರ ಫಲವಾಗಿ ಮೈಸೂರು ಮಹಾರಾಜರ ಕಾಲದಿಂದ ಈ ದೇವಿಯ ಪೂಜೆಯನ್ನು ಪ್ರಜಾಪ್ರಭುತ್ವ ಬಂದ ನಂತರವೂ ಮುಂದುವರೆಸಲಾಗುತ್ತಿರುವುದು ಒಂದು ವೈಶಿಷ್ಟ್ಯ ಎಂದರು.

ಗತಕಾಲದ ವೈಭವದ ಜೊತೆಗೆ  ಪ್ರಸ್ತುತ ಕಾಲದ ಕನ್ನಡ ನಾಡಿನ ಶ್ರೇಯೋಭಿವೃದ್ಧಿ ಅಷ್ಟೇ ಮುಖ್ಯ. ಇಂದಿನ ಹತ್ತು ಹಲವಾರು ನೈಸರ್ಗಿಕ ಸವಾಲುಗಳನ್ನು, ನಾವು ಸಮರ್ಥವಾಗಿ ಎದುರಿಸಿ ಜನಕಲ್ಯಾಣದ ಕಡೆ ದಾಪುಗಾಲು ಹಾಕುತ್ತಿದ್ದೇವೆ ಎಂದು ತಿಳಿಸಿದರು. 

ನಾಡ ದೇವಿ ಚಾಮುಂಡೇಶ್ವರಿಯ ಅಗ್ರಪೂಜೆಯೊಂದಿಗೆ 2022ರ ದಸರಾ ಮಹೋತ್ಸವದ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು   ಕಾರ್ಯಕ್ರಮ ನೆರವೇರಿಸಿರುವುದು ಸಂತೋಷದ ಹಾಗೂ ಅತ್ಯಂತ  ಅಪರೂಪದ ಘಟನೆ. ಇತ್ತೀಚಿನ ದಿನಗಳಲ್ಲಿ ರಾಷ್ಟಪತಿ ಯೊಬ್ಬರು ದಸರಾ ಉದ್ಘಾಟನೆ ಮಾಡಿರುವ ಉದಾಹರಣೆ ಇಲ್ಲ. ಅವರಿಗೆ ಆಹ್ವಾನ ನೀಡಿದ ಕೂಡಲೇ  ಒಪ್ಪಿಗೆ ಸೂಚಿಸಿ, ರಾಷ್ಟಪತಿಯಾದ ನಂತರ ಭೇಟಿ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ ಎಂದರು.  

ಅದರಲ್ಲಿಯೂ ತಾಯಿ ಚಾಮುಂಡೇಶ್ವರಿ ಪೂಜೆ ಮಾಡುವ ಸೌಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ ಎಂದು ತಿಳಿಸಿದ್ದಾರೆ. ಇಷ್ಟು ಶ್ರದ್ಧೆ ಭಕ್ತಿ ಇರುವ ಅವರು ರಾಷ್ಟದ ಶ್ರೇಯಸ್ಸಿಗೆ ನಮನ ಸಲ್ಲಿಸಿದ್ದಾರೆ ಎಂದರು. 

ದುಷ್ಟರ ನಾಶ, ಶಿಷ್ಟರ ರಕ್ಷಣೆ: ದುಷ್ಟರ ಸಂಹಾರ, ಶಿಷ್ಟರ ಪರಿಪಾಲನೆ ಮೊದಲಿನಿಂದಲೂ ಬಂದಿದೆ.   ಆದರೆ ನಮ್ಮೊಳಗಿನ ಅವಗುಣಗಳ ನಿಗ್ರಹವನ್ನು ಆತ್ಮಸಾಕ್ಷಿಯಾಗಿ ನಾವೇ  ಮಾಡಿಕೊಳ್ಳುವುದು ಹಾಗೂ ನಮ್ಮ ಆತ್ಮಶುದ್ದೀಕರಣ ಮಾಡುವ, ದುಷ್ಟ ವಿಚಾರಗಳನ್ನು  ದೂರವಿಡುವ , ಉತ್ತಮ ವಿಚಾರಗಳಿಗೆ ಪುರಸ್ಕಾರ ನೀಡಿ ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡುವ ಪವಿತ್ರ ದಿನ ಎಂದರು. 

ಕೇಂದ್ರನ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ  ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಮೈಸೂರು  ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಸಚಿವ ಸುನಿಲ್ ಕುಮಾರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ  ರಾಮದಾಸ್, ತನ್ವೀರ್ ಸೇಠ್, ನಾಗೇಂದ್ರ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News