ಕಾಂಗ್ರೆಸ್‌ನ ‘ಭಾರತ್ ಜೋಡೊ’ ಸಂಘಪರಿವಾರದ ಫ್ಯಾಶಿಸಂಗೆ ಸವಾಲಾಗಬಹುದೇ?
ಈ ಸಂದರ್ಭದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯನ್ನು ಹಾಗೂ ಅದರ ಇತಿ-ಮಿತಿಗಳನ್ನು ಬೆಂಬಲ ಹಾಗೂ ತಿರಸ್ಕಾರಗಳ ಬೈನರಿಗಳಾಚೆ ಇಟ್ಟು ವಿಶ್ಲೇಷಿಸಬೇಕಿದೆ. ಜೋಡೊ ಯಾತ್ರೆಯನ್ನು ಬೆಂಬಲಿಸಲು ಕಾಂಗ್ರೆಸಿಗರು ಕೊಡುವ ಮಾನದಂಡಗಳನ್ನು ಹಾಗೂ ತಿರಸ್ಕರಿಸಲು ಸಂಘಪರಿವಾರಿಗರು ಒದಗಿಸುವ ಮಾನದಂಡಗಳೆರಡನ್ನೂ ಪಕ್ಕಕ್ಕಿಡಬೇಕಿದೆ. ಇಂದು ದೇಶ ಎದುರಿಸುತ್ತಿರುವ ಬ್ರಾಹ್ಮಣವಾದಿ ಹಿಂದುತ್ವ ಹಾಗೂ ಕಾರ್ಪೊರೇಟ್ ಬಂಡವಾಳಶಾಹಿ ಫ್ಯಾಶಿಸಂ ಅನ್ನು ಸೋಲಿಸಲು ಅತ್ಯಗತ್ಯವಾಗಿರುವ ಪರ್ಯಾಯದ ಜನಸಮರಕ್ಕೆ ಈ ಭಾರತ್ ಜೋಡೊ ಎಷ್ಟು ಪೂರಕ ಅಥವಾ ಮಾರಕ ಎಂಬುದಷ್ಟೇ ಭಾರತ್ ಜೋಡೊವನ್ನು ವಿಶ್ಲೇಷಿಸುವ ಪ್ರಮುಖ ಮಾನದಂಡವಾಗಬೇಕಿದೆ.
ಭಾಗ-1
ಭಾರತಕ್ಕೆ ಇಂದು ಅತ್ಯಗತ್ಯವಾಗಿರುವ ಪ್ರೀತಿ, ಸಾಮಾಜಿಕ ಒಳಗೊಳ್ಳುವಿಕೆ, ಒಕ್ಕೂಟ ತತ್ವಗಳ ಆಶಯಗಳನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ‘ಭಾರತ್ ಜೋಡೊ’ ಪಾದಯಾತ್ರೆಯು ಇನ್ನೇನು ಕರ್ನಾಟಕವನ್ನು ಪ್ರವೇಶಿಸಲಿದೆ. ಕೇರಳದಲ್ಲಿ ಅದಕ್ಕೆ ಅಪಾರ ಜನಸ್ಪಂದನೆ ಸಿಕ್ಕಿದೆ. ಅಲ್ಲದೆ ಜನರನ್ನು ಮುಟ್ಟದ ಹಾಗೂ ಮುಟ್ಟಿಸಿಕೊಳ್ಳದ ಭಾರತದ ರಾಜಕೀಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಜನಸಾಮಾನ್ಯರೊಡನೆ ಬೆರೆಯುತ್ತಿರುವ ರೀತಿಗೆ ವ್ಯಾಪಕ ಮೆಚ್ಚುಗೆ ಸಿಗುತ್ತಿದೆ. ಇದು ಕಾಂಗ್ರೆಸ್ ವಲಯಗಳಿಗಿಂತ ಹೆಚ್ಚಾಗಿ ಕಾಂಗ್ರೆಸ್ ಒಂದು ನೈಜ ಪರ್ಯಾಯವಾಗಲಿ ಅಂದು ಆಶಿಸುತ್ತಿರುವ ಪ್ರಗತಿಪರರಲ್ಲಿ ಒಂದು ಹೊಸ ಉತ್ಸಾಹಕ್ಕೆ ಕಾರಣವಾಗಿದೆ. ಭಾರತ್ ಜೋಡೊ ಕಾರ್ಯಕ್ರಮಕ್ಕೆ ನಾಗರಿಕ ಸಮಾಜದ ಬೆಂಬಲವನ್ನೂ ಕಾಂಗ್ರೆಸ್ ಕೋರಿರುವುದರಿಂದ ಪ್ರಗತಿಪರ ವಲಯದ ವ್ಯಕ್ತಿಗಳು ಮತ್ತು ಸಂಘಟನೆಗಳು ಕಾಂಗ್ರೆಸ್ ಬಗ್ಗೆ ತಮಗಿದ್ದ ಮೂಲಭೂತ ರಾಜಕೀಯ ತಕರಾರುಗಳನ್ನೆಲ್ಲಾ ಪಕ್ಕಕ್ಕಿಟ್ಟು ‘ಜೋಡೊ’ ಜೊತೆ, ಕೆಲವರು ಬೇಷರತ್ತಾಗಿ, ಕೆಲವರು ಷರತ್ತಿನ ಆಧಾರದಲ್ಲಿ, ಒಟ್ಟಿನಲ್ಲಿ ‘ಕೈಜೋಡಿಸುತ್ತಿದ್ದಾರೆ’. ಚುನಾವಣಾ ಲೆಕ್ಕಾಚಾರವಿದ್ದರೆ ತಪ್ಪೇನು?
ಭಾರತ್ ಜೋಡೊ ಯಾತ್ರೆಯ ಹಿಂದೆ ಇರುವುದು ಚುನಾವಣಾ ಲೆಕ್ಕಾಚಾರಕ್ಕೆ ಮೀರಿದ ಆಶಯಗಳು ಎಂಬ ಬಗ್ಗೆ ಪ್ರಗತಿಪರರ ಆಶಯಗಳು ಮತ್ತು ನಿರೀಕ್ಷೆಗಳು ಏನೇ ಇದ್ದರೂ ಕಾಂಗ್ರೆಸ್‌ನ ನಾಯಕತ್ವ ಮಾತ್ರ ಅದರ ಬಗ್ಗೆ ಸ್ಪಷ್ಟವಾಗಿದೆ. ಈ ದೇಶದ ಅತ್ಯಂತ ಹಳೆಯ ಹಾಗೂ ಬಿಜೆಪಿ ಬಿಟ್ಟರೆ (ಬಿಜೆಪಿಗೆ ಶೇ.36ರಷ್ಟು ಜನಬೆಂಬಲ-2019ರ ಚುನಾವಣೆಯಲ್ಲಿ) ಅತಿ ಹೆಚ್ಚು ಜನಬೆಂಬಲವನ್ನು (ಶೇ.19) ಪಡೆದಿರುವ ಕಾಂಗ್ರೆಸ್ ಪಕ್ಷ ಚುನಾವಣಾ ದೃಷ್ಟಿಯಿಂದಲೇ ಇದ್ದರೂ ತಡವಾಗಿಯಾದರೂ ಜನರನ್ನು ದೊಡ್ಡಮಟ್ಟದಲ್ಲಿ ತಲುಪುವ ಪ್ರಯತ್ನ ಮಾಡುತ್ತಿರುವುದು ಸ್ವಾಗತಾರ್ಹ ಎಂಬುದು ಕಾಂಗ್ರೆಸ್‌ನ ಕಟು ವಿಮರ್ಶಕರೂ ಅಭಿಪ್ರಾಯ ಪಡುತ್ತಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ಸಹಾನುಭೂತಿ ಇರುವ ರಾಜಕೀಯ ವಿಶ್ಲೇಷಕರೇ ಬರೆಯುತ್ತಿರುವಂತೆ ಇದು ಕಾಂಗ್ರೆಸ್‌ನ ಪುನರುತ್ಥಾನ ಮಾಡುವ ಯಾತ್ರೆಯಲ್ಲ. ಬದಲಿಗೆ ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ಉಳಿದುಕೊಳ್ಳಲು ಮಾಡುತ್ತಿರುವ ಯಾತ್ರೆ ಆಗಿದೆ. ಆದ್ದರಿಂದಲೇ ಯಾತ್ರೆಯನ್ನು ಬರಲಿರುವ 2024ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈಗಿನಕ್ಕಿಂತ ಹೆಚ್ಚಿನ ಸೀಟುಗಳನ್ನು ಮತ್ತು ವೋಟುಗಳನ್ನು ಪಡೆದುಕೊಳ್ಳಲು ಸಾಧ್ಯವಿರುವ ರಾಜ್ಯಗಳನ್ನೇ ಪ್ರಧಾನವಾಗಿ ಹಾದುಹೋಗುವಂತೆ ರೂಪಿಸಲಾಗಿದೆ.
ತಮಿಳುನಾಡನ್ನೂ ಒಳಗೊಂಡಂತೆ ದೇಶದ ಪೂರ್ವ ಭಾಗದ (ತೆಲಂಗಾಣ, ಆಂಧ್ರ, ಒಡಿಶಾ, ಪ. ಬಂಗಾಳ) ರಾಜ್ಯಗಳಲ್ಲಿ 2014, 2019ರ ಚುನಾವಣೆಗಳಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೀನಾಯವಾಗಿತ್ತು. ಅದರ ಬದಲಿಗೆ ಯಾತ್ರೆ ಹಾದುಹೋಗುವ ರಾಜ್ಯಗಳಲ್ಲಿ ಕಾಂಗ್ರೆಸ್ ಸೋತ ಸಂದರ್ಭದಲ್ಲೂ ಪ್ರತಿಸ್ಪರ್ಧೆ ಒಡ್ಡುವಷ್ಟು ವೋಟುಗಳಿವೆ. ಅದರ ಜೊತೆಗೆ ಈ ಚುನಾವಣೆಯಲ್ಲಿ ಬಿಜೆಪಿಯ ಬಗ್ಗೆ ಬೇಸರಿಸಿಕೊಂಡಿರುವ ಶೇ.10-15 ಮತದಾರರನ್ನು ಒಲಿಸಿಕೊಂಡರೆ, ಈ ಬಾರಿ ನೂರರ ಸಮೀಪವಾಗುವಷ್ಟಾದರೂ ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್‌ನ ಗುರಿ. ಅದೇ ಭಾರತ್ ಜೋಡೊ ಉದ್ದೇಶ. ಭಾರತ್ ಜೋಡೊವಿನ ತಂತ್ರ-ಯೋಜನೆಗಳು ಕೂಡಾ ಪ್ರಧಾನವಾಗಿ ಈ ಹೆಚ್ಚುವರಿ ಮತದಾರರನ್ನೇ ಉದ್ದೇಶಿಸಿದೆ. ಭಾರತ್ ಜೋಡೊವಿನ ಕ್ಯಾಲೆಂಡರ್ ಕೂಡ ಇದಕ್ಕೆ ತಕ್ಕ ಹಾಗೆ ಸಿದ್ಧವಾಗಿದೆ. ಇದು ಕಾಂಗ್ರೆಸ್ ಪಕ್ಷ ತಡವಾಗಿಯಾದರೂ ಇಂದಿನ ಕಾಲಸಂದರ್ಭಕ್ಕೆ ತಕ್ಕಹಾಗೆ ಎಚ್ಚೆತ್ತುಕೊಂಡು ತನ್ನ ರಾಜಕೀಯಕ್ಕೆ ಬೇಕಾದ ಕಾರ್ಯತಂತ್ರಗಳನ್ನು ನೇಯುತ್ತಿರುವುದನ್ನು ಸೂಚಿಸುತ್ತಿದೆ ಹಾಗೂ ತನ್ನದೇ ಚುನಾವಣಾ ರಾಜಕಾರಣಕ್ಕೆ ಬೇಕಾದ ಘೋಷಣೆಗಳನ್ನು ರೂಪಿಸಿದ್ದರೂ, ಅದು ಬಿಜೆಪಿಯ ದ್ವೇಷ ರಾಜಕೀಯಕ್ಕೆ ಬದಲಾದ ಪ್ರೀತಿಯ ಘೋಷಣೆ ಆಗಿದೆ. ಇದರಿಂದ ಒಂದೋ ಪ್ರೀತಿಯ ರಾಜಕೀಯ ಜನರನ್ನು ತಲುಪಿದರೆ ಒಳ್ಳೆಯದೇ ಆಗುತ್ತದೆ. ಕಾಂಗ್ರೆಸ್‌ಗೂ, ಸಮಾಜಕ್ಕೂ ಅಥವಾ ಇದರಿಂದ ನಿರೀಕ್ಷೆಯಷ್ಟು ಯಶ ಸಿಗದಿದ್ದರೆ, ಕಾಂಗ್ರೆಸ್‌ಗೆ ಹೆಚ್ಚಿನ ಚುನಾವಣಾ ಪ್ರಯೋಜನವಾಗಲಾರದೆ ಹೋಗಬಹುದು. ಹೀಗಾಗಿ ಇದನ್ನು ಕಾಂಗ್ರೆಸ್ ವಿರೋಧಿಗಳೂ ಸಕ್ರಿಯವಾಗಿ ವಿರೋಧಿಸಲು ಯಾವುದೇ ಕಾರಣವಿಲ್ಲ.
ಪ್ರಗತಿಪರರ ಉತ್ಪ್ರೇಕ್ಷಿತ ನಿರೀಕ್ಷೆಗಳ ಅಪಾಯ
ಆದರೆ ಜೋಡೊವನ್ನು ಬೆಂಬಲಿಸುತ್ತಿರುವ ಕಾಂಗ್ರೆಸೇತರ ಪ್ರಗತಿಪರರ ಆಶಯಗಳು ಕಾಂಗ್ರೆಸ್‌ನ ಸೀಮಿತ ಗುರಿಗಳಿಗಿಂತ ಹಿರಿದಾದದ್ದು. ಹೀಗಾಗಿ ಸಹಜವಾಗಿ ಅವರ ಜೋಡೊ ಇಂದ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿಯೇ ಅದನ್ನು ಬೆಂಬಲಿಸುತ್ತಿರುವ ಕೆಲವು ಪ್ರಗತಿಪರ ಮುತ್ಸದ್ದಿಗಳು ‘‘ಈ ಭಾರತ್ ಜೋಡೊ ಮೇಲೆ ಪ್ರಜೆಯನ್ನು ತಂತ್ರದೊಡನೆ ಜೋಡಿಸಿ ಪ್ರಜಾತಂತ್ರವಾಗಿಸುವ, ಗಣವನ್ನು ರಾಜ್ಯದೊಡನೆ ಜೋಡಿಸಿ ನೈಜ ಗಣರಾಜ್ಯವಾಗಿಸುವ, ಕರ್ಮವನ್ನು ಮರ್ಮದೊಂದಿಗೆ ಜೋಡಿಸಿ ಸಾರ್ಥಕಗೊಳಿಸುವ..’’ ಇನ್ನಿತ್ಯಾದಿ ಪ್ರಾಸಬದ್ಧ ಆದರೆ ತ್ರಾಸದಾಯಕ ಉದ್ದೇಶಗಳನ್ನು ಆರೋಪಿಸುತ್ತಿದ್ದಾರೆ. ಸಂಘಪರಿವಾರ ಮತ್ತು ಬಿಜೆಪಿ ಸರಕಾರ ಕಳೆದ ಎಂಟು ವರ್ಷಗಳಿಂದ ಭಾರತದ ಸಮಾಜಿಕ ಹಂದರದ ಮೇಲೆ ಮಾಡುತ್ತಿರುವ ನಿರಂತರ ದಾಳಿ, ಸಮಾಜದಲ್ಲಿ ಹೆಚ್ಚುತ್ತಿರುವ ಕೋಮು ಧ್ರುವೀಕರಣ, ಕಂಡುಕೇಳರಿಯದ ದ್ವೇಷ ರಾಜಕಾರಣ, ಆರ್ಥಿಕ ಬಿಕ್ಕಟ್ಟುಗಳು, ಪ್ರಜಾತಾಂತ್ರಿಕ ಸಂಸ್ಥೆಗಳ ಸಾರ್ವತ್ರಿಕ ಅಧಃಪತನ ಹಾಗೂ ಸದ್ಯಕ್ಕೆ ಇವುಗಳಿಂದ ವಿಮೋಚನೆ ಪಡೆಯುವ ಯಾವ ದಾರಿಯೂ ಕಾಣದಿರುವ ಸಂದರ್ಭಗಳಿಂದಾಗಿ ಪ್ರಗತಿಪರರು ಜೋಡೊ ಇವೆಲ್ಲಕ್ಕೂ ಪರಿಹಾರದ ದಾರಿ ಕಾಣಿಸಬಹುದು ಎಂಬ ಆಸೆಗಣ್ಣನ್ನು ಹೊಂದಿದ್ದಾರೆ.
ಆದ್ದರಿಂದ ಈ ಯಾತ್ರೆಯನ್ನು ಕೇವಲ ಕಾಂಗ್ರೆಸ್‌ನ ಚುನಾವಣಾ ಉದ್ದೇಶದ ಯಾತ್ರೆಯಾಗಿ ನೋಡಬಾರದೆಂದು ಬಯಸುತ್ತಾರೆ. ತಮ್ಮ ಬೆಂಬಲದ ಉದ್ದೇಶ ಕಾಂಗ್ರೆಸ್‌ನ ಚುನಾವಣಾ ಉದ್ದೇಶಗಳಿಗೂ ಮೀರಿ ಸಂದರ್ಭದ ರಾಜಕೀಯ ಅನಿವಾರ್ಯತೆಯಾಗಿದೆಯೆಂದು ಪ್ರತಿಪಾದಿಸುತ್ತಿದ್ದಾರೆ. ಹೀಗಾಗಿ ಈ ಯಾತ್ರೆಯ ಬಗ್ಗೆ ಯಾವುದೇ ವಿಮರ್ಶಾತ್ಮಕ ವಿಶ್ಲೇಷಣೆಯನ್ನು ಕಾಂಗ್ರೆಸಿಗರಿಗಿಂತ ಇವರೇ ಹೆಚ್ಚಾಗಿ ಖಂಡಿಸುತ್ತಿದ್ದಾರೆ. ಕೆಲವರಂತೂ ಜೋಡೊವನ್ನು ಬೆಂಬಲಿಸುತ್ತಾ 70ರ ದಶಕದಲ್ಲಿ ಅಮಾಯಕ ಜನರು ಇಂದಿರಾಗಾಂಧಿಯನ್ನು ಹೇಗೆ ಆರಾಧಿಸುತ್ತಿದ್ದರೋ ಆ ರೀತಿ ರಾಹುಲ್ ಗಾಂಧಿಯನ್ನು ಆರಾಧಿಸಲು ತೊಡಗಿದ್ದಾರೆ. ಅವರ ಹಾವಭಾವ, ನಗು ..ಪ್ರತಿಯೊಂದರಲ್ಲೂ ದೇಶದ ಭವಿಷ್ಯವನ್ನು ಕಾಣತೊಡಗಿದ್ದಾರೆ. ಇನ್ನು ಕೆಲವು ಬುದ್ಧಿಜೀವಿಗಳು ಜೋಡೊವನ್ನು ಬೆಂಬಲಿಸುವ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ನ ಎಲ್ಲಾ ಮಾರಕ ಆರ್ಥಿಕ ನೀತಿಗಳನ್ನೂ, ಎಲ್ಲಾ ಪ್ರಮಾದಗಳನ್ನು ಬೆಂಬಲಿಸಲು ಪ್ರಾರಂಭಿಸಿದ್ದಾರೆ.
ಆ ಪ್ರಕ್ರಿಯೆಯಲ್ಲಿ ಇತಿಹಾಸವನ್ನೂ ಕಾಂಗ್ರೆಸ್‌ನ ವಿರುದ್ಧ ಬಿಜೆಪಿಯ ಸಂಚೆಂದು ನೋಡಲು ಪ್ರಾರಂಭಿಸಿದ್ದಾರೆ. ಹೀಗಾಗಿ ಯೋಗೇಂದ್ರ ಯಾದವ್ ರೀತಿಯ ಬುದ್ಧಿಜೀವಿಗಳು ಹೇಳುತ್ತಿರುವಂತೆ, ‘‘ಭಾರತ ಜೋಡೊ ದೇಶವನ್ನು ಉಳಿಸುವ ಘಳಿಗೆ ಇದು. ಈಗಿಲ್ಲವೆಂದರೆ ಇನ್ಯಾವಾಗ? ಇದು ಕೇವಲ ಕಾಂಗ್ರೆಸ್‌ನ ಕಾರ್ಯಕ್ರಮವಲ್ಲ’’ ಎಂಬ ಸಮರ್ಥನೆಗಳು ವಾಸ್ತವಕ್ಕೆ ವಿರುದ್ಧವಾಗಿರುವ ಮತ್ತು ಭವಿಷ್ಯದಲ್ಲೂ ಅಪಾಯಕಾರಿಯಾಗುವ ಸೂಚನೆಗಳನ್ನು ನೀಡುತ್ತಿದೆ. ಏಕೆಂದರೆ ಸ್ವಾತಂತ್ರ್ಯಾನಂತರದಲ್ಲಿ ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲೇ ಪ್ರಜೆಯು ತಂತ್ರದಿಂದ, ಗಣವು ರಾಜ್ಯದಿಂದ, ಧರ್ಮವು ನೈತಿಕತೆಯಿಂದ ದೂರವಾಗುವ ಪ್ರಕ್ರಿಯೆ ಪ್ರಾರಂಭವಾಗಿತ್ತು. ಬಿಜೆಪಿ ಮತ್ತು ಸಂಘಪರಿವಾರ ಈ ವಿಭಜನೆಯನ್ನು ಹತ್ತು ಹಲವು ಆಯಾಮಗಳಿಗೆ ಇನ್ನಷ್ಟು ವೇಗವಾಗಿ ಮತ್ತು ಉಗ್ರವಾಗಿ ಮತ್ತು ಆಳವಾಗಿ ವಿಸ್ತರಿಸಿದೆ. ಹೀಗಾಗಿ ಇವೆಲ್ಲವನ್ನೂ ಮತ್ತೆ ಜೋಡಿಸುವ ಕಾರ್ಯಕ್ರಮಗಳು ಕಾಂಗ್ರೆಸ್ ಈ ಜೋಡೊ ಯಾತ್ರೆಯವರೆಗೂ ಕಾಯಬೇಕಿರಲಿಲ್ಲ ಅಥವಾ ಈ ಜೋಡೊ ಯಾತ್ರೆಯೊಂದಿಗೆ ಆ ಉದ್ದೇಶಗಳು ಈಡೇರುವುದೂ ಇಲ್ಲ. ಮುಗಿಯಲೂ ಬಾರದು. ಚಾರಿತ್ರಿಕ ಹಿನ್ನೆಲೆಯಲ್ಲಿ ನೋಡುವುದಾದರೆ ಇಂತಹ ಅಸಹಾಯಕ ಹಾಗೂ ಉತ್ಪ್ರೇಕ್ಷಿತ ಬೆಂಬಲಗಳು ಬಹಳಷ್ಟು ಬಾರಿ ಸಿನಿಕತನದಲ್ಲಿ ಪರ್ಯಾವಸಾನಗೊಂಡಿವೆ. ಭಾರತ್ ಜೋಡೊ ವಿಶ್ಲೇಷಣೆಯ
ಜನಪರ ಮಾನದಂಡಗಳೇನು?
ಆದ್ದರಿಂದ ಈ ಸಂದರ್ಭದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯನ್ನು ಹಾಗೂ ಅದರ ಇತಿ-ಮಿತಿಗಳನ್ನು ಬೆಂಬಲ ಹಾಗೂ ತಿರಸ್ಕಾರ ಗಳ ಬೈನರಿಗಳಾಚೆ ಇಟ್ಟು ವಿಶ್ಲೇಷಿಸಬೇಕಿದೆ. ಜೋಡೊ ಯಾತ್ರೆಯನ್ನು ಬೆಂಬಲಿಸಲು ಕಾಂಗ್ರೆಸಿಗರು ಕೊಡುವ ಮಾನದಂಡಗಳನ್ನು ಹಾಗೂ ತಿರಸ್ಕರಿಸಲು ಸಂಘಪರಿವಾರಿಗರು ಒದಗಿಸುವ ಮಾನದಂಡಗಳೆರಡನ್ನೂ ಪಕ್ಕಕ್ಕಿಡಬೇಕಿದೆ. ಇಂದು ದೇಶ ಎದುರಿಸುತ್ತಿರುವ ಬ್ರಾಹ್ಮಣವಾದಿ ಹಿಂದುತ್ವ ಹಾಗೂ ಕಾರ್ಪೊರೇಟ್ ಬಂಡವಾಳಶಾಹಿ ಫ್ಯಾಶಿಸಂ ಅನ್ನು ಸೋಲಿಸಲು ಅತ್ಯಗತ್ಯವಾಗಿರುವ ಪರ್ಯಾಯದ ಜನಸಮರಕ್ಕೆ ಈ ಭಾರತ್ ಜೋಡೊ ಎಷ್ಟು ಪೂರಕ ಅಥವಾ ಮಾರಕ ಎಂಬುದಷ್ಟೇ ಭಾರತ್ ಜೋಡೊವನ್ನು ವಿಶ್ಲೇಷಿಸುವ ಪ್ರಮುಖ ಮಾನದಂಡವಾಗಬೇಕಿದೆ. ಹಾಗಿದ್ದಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೊಗೆ ಷರತ್ತು ಬದ್ಧ ಬೆಂಬಲವೋ ಹಾಗೂ ಬೇಷರತ್ ಬೆಂಬಲವೋ ನೀಡುವುದರಿಂದ ಭಾರತದಲ್ಲಿ ಫ್ಯಾಶಿಸಂ ವಿರೋಧಿ ಜನಸಮರ ಗಟ್ಟಿಗೊಳ್ಳುವುದೇ? ಮೊದಲನೆಯದಾಗಿ ಈ ಶರತ್ತುಬದ್ಧ ಬೆಂಬಲ ಮತ್ತು ಬೇಷರತ್ ಬೆಂಬಲದ ನಡುವೆ ಹೆಚ್ಚಿನ ಮತ್ತು ಮೌಲಿಕ ವ್ಯತ್ಯಾಸವಿಲ್ಲ. ಬೇಷರತ್ ಬೆಂಬಲಿಗರು ಕಾಂಗ್ರೆಸ್ ಕೊಡುವ ಭರವಸೆಗಳನ್ನೆಲ್ಲಾ ಪಾಲಿಸುತ್ತಲೇ ಬಂದಿದೆ ಎಂದು ನಂಬಲು ಬಯಸುತ್ತಾರೆ.
ಶರತ್ತು ಬದ್ಧ ಬೆಂಬಲಿಗರು ಈ ಹಿಂದೆ ಕಾಂಗ್ರೆಸ್ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲವಾದರೂ ಮುಂದೆ ಅದು ಈಡೇರಿಸಬಹುದು ಎಂಬ ನಿರೀಕ್ಷೆಯನ್ನು ಹುಟ್ಟುಹಾಕಬಯಸುತ್ತಾರೆ. ಹೀಗಾಗಿ ಅವೆರಡನ್ನು ಹೊರತುಪಡಿಸಿ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಇವಾಗಿವೆ- ದೇಶ ಎದುರಿಸುತ್ತಿರುವ ಇಂದಿನ ಫ್ಯಾಶಿಸ್ಟ್ ಅಪಾಯದ ಸ್ವರೂಪವೇನು? ಫ್ಯಾಶಿಸ್ಟರು ಸಮಾಜದಲ್ಲಿ ಬಲಗೊಳ್ಳಲು ಮತ್ತು ಅಧಿಕಾರ ಹಿಡಿಯಲು ಕಾಂಗ್ರೆಸ್‌ನ ರಾಜಕೀಯ ಸಿದ್ಧಾಂತದ ಮತ್ತು ವರ್ಗ ಹಿತಾಸಕ್ತಿಯ ಕೊಡುಗೆ ಎಷ್ಟು? ಇಂದು ಅದು ಬದಲಾಗಿದೆಯೇ? ಇತಿಹಾಸದಲ್ಲಿ ಅದು ಶರತ್ತುಗಳಿಗೆ ದ್ರೋಹ ಬಗೆದದ್ದು ಕೇವಲ ಅಧಿಕಾರದ ಕಾರಣಕ್ಕಾಗಿಯೇ ಅಥವಾ ಕಾಂಗ್ರೆಸ್‌ನ ರಾಜಕೀಯ-ಸಾಮಾಜಿಕ-ಆರ್ಥಿಕ ನೀತಿಗಳಲ್ಲೇ ಫ್ಯಾಶಿಸಂನ ಬೇರುಗಳಿವೆಯೇ? ಫ್ಯಾಶಿಸಂ ಅನ್ನುಚುನಾವಣೆಯ ಮೂಲಕ ಸೋಲಿಸಲು ಸಾಧ್ಯವೇ?
ಸಂಘಪರಿವಾರ-ಬ್ರಾಹ್ಮಣವಾದ, ಬಂಡವಾಳವಾದ ಅತ್ಯುಗ್ರ ಸರ್ವಾಧಿಕಾರ
ಅಂಬೇಡ್ಕರ್ ಹೇಳುವಂತೆ ಈ ದೇಶದ ಪ್ರಧಾನ ಶತ್ರುಗಳು ಬ್ರಾಹ್ಮಣವಾದ ಮತ್ತು ಬಂಡವಾಳವಾದ. ಭಾರತಕ್ಕೆ ಇಂದು ಎದುರಾಗಿರುವ ಫ್ಯಾಶಿಸಂ ಬಂಡವಾಳವಾದ ಮತ್ತು ಬ್ರಾಹ್ಮಣಶಾಹಿಯ ಅತಿ ನಗ್ನ, ಅತ್ಯುಗ್ರ ಬಹಿರಂಗ ಸರ್ವಾಧಿಕಾರ. ಅದರ ಅತಿ ಆಕ್ರಮಣಕಾರಿ ಸ್ವರೂಪ ಬಿಜೆಪಿಯಾದರೂ, ಇತರ ಎಲ್ಲಾ ಪಕ್ಷಗಳೂ ಸಹ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿಯನ್ನು ಪೋಷಿಸಿವೆ ಮತ್ತು ಪೋಷಿಸಲ್ಪಟ್ಟಿವೆ. ಸ್ವಾತಂತ್ರಾನಂತರದಲ್ಲೂ ಪಕ್ಷಾತೀತವಾಗಿ ಪಡೆದ ಪೋಷಣೆಯಿಂದಾಗಿ ಈ ಬ್ರಾಹ್ಮಣೀಯ ಫ್ಯಾಶಿಸಂ ಎಲ್ಲಾ ಜಾತಿ-ಸಮುದಾಯಗಳಲ್ಲೂ ಬೇರುಬಿಟ್ಟುಕೊಂಡಿವೆ. ನವ ವರ್ಣಾಶ್ರಮ ಚೌಕಟ್ಟಿನಲ್ಲಿ ಅದರ ಮೇಲ್‌ಸ್ತರಗಳನ್ನು ಅಲ್ಲಲ್ಲಿ ಒಳಗೊಳ್ಳುತ್ತಾ ಸುಭದ್ರ ಸಾಮಾಜಿಕ ನೆಲೆಯನ್ನು ಪಡೆದುಕೊಂಡಿದೆ. ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಈ ಬ್ರಾಹ್ಮಣ್ಯವನ್ನು ಹಿಂದೂತ್ವ ಮತ್ತು ಹಿಂದೂ ರಾಷ್ಟ್ರದ ಅಜೆಂಡಾಗಳಲ್ಲಿ ಪ್ಯಾಕೇಜು ಮಾಡಿ ಇತರ ಧರ್ಮೀಯರನ್ನು ಅನ್ಯಗೊಳಿಸಿ, ಶೋಷಿತ ಜಾತಿಗಳನ್ನು ಅಧೀನಗೊಳಿಸಿಕೊಳ್ಳುವ ಸಾಮಾಜಿಕ ಇಂಜಿನಿಯರಿಂಗ್ ನಡೆಸಿದೆ. ವತ್ತೊಂದೆಡೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳನ್ನು ಒಳಗೊಂಡಂತೆ ಎಲ್ಲಾ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಸೈದ್ಧಾಂತಿಕವಾಗಿ ಹಿಂದೂಕರಿಸಿದೆ. ಒಂದು ಹಿಂದುತ್ವವಾದಿ ‘ಡೀಪ್ ಸ್ಟೇಟ್’ ಸರಕಾರ ನಡೆಸಿದೆ.