ಪಿಎಸ್ಸೈ ಹಗರಣ: ಅಮೃತ್ ಪೌಲ್ ವಿರುದ್ಧ 1,406 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
Update: 2022-09-28 17:22 GMT
ಬೆಂಗಳೂರು, ಸೆ.28: ಪಿಎಸ್ಸೈ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರ ವಿರುದ್ಧದ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಹೆಚ್ಚುವರಿ 1,406 ಪುಟಗಳ ಆರೋಪ ಪಟ್ಟಿಯನ್ನು 1ನೆ ಎಸಿಎಂಎಂ ಕೋರ್ಟ್ ಗೆ ಸಲ್ಲಿಸಿದೆ.
38 ಸಾಕ್ಷಿದಾರರ ಹೇಳಿಕೆ ಸಂಗ್ರಹಿಸಿದ್ದ ತನಿಖಾ ತಂಡವು 78 ದಾಖಲೆಗಳ ಸಹಿತ ಆರೋಪ ಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅಮೃತ್ ಪೌಲ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಅಮೃತ್ ಪೌಲ್, ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದರು. ಹಣದ ವರ್ಗಾವಣೆ, ಅಕ್ರಮದಲ್ಲಿ ಅವರ ಪಾತ್ರ, ಅಭ್ಯರ್ಥಿಗಳಿಂದ ಪಡೆದ ಹಣದಿಂದ ಆಸ್ತಿ ಖರೀದಿಸಿರುವ ಮಾಹಿತಿ ಈ ಪಟ್ಟಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.