ಕೃಷಿ ಭೂಮಿ ಕೃಷಿಯೇತರ ಉದ್ದೇಶಕ್ಕೆ ಬಳಕೆಗೆ ಅವಕಾಶ: ಸಚಿವ ಆರ್.ಅಶೋಕ್

Update: 2022-09-29 13:25 GMT

ಬೆಂಗಳೂರು, ಸೆ. 29: ‘ಕಂದಾಯ ನಿವೇಶನಗಳು ಹಾಗೂ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸುವ ‘ಭೂಪರಿವರ್ತನೆ ತಿದ್ದುಪಡಿ ಮಸೂದೆ'ಅಧ್ಯಾದೇಶ(ಸುಗ್ರೀವಾಜ್ಞೆ)ದ ಮೂಲಕ ಜಾರಿಗೊಳಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕಂದಾಯ ನಿವೇಶನಗಳನ್ನು ಭೂಪರಿವರ್ತನೆ ವ್ಯಾಪ್ತಿಗೆ ತರಲು ‘ಕರ್ನಾಟಕ ಭೂ ಕಂದಾಯ ಕಾಯ್ದೆ' 1964ರ ಸೆಕ್ಷನ್ 95ಕ್ಕೆ ತಿದ್ದುಪಡಿ ತರುವುರಿಂದ ಭೂ ಪರಿವರ್ತನೆಗೆ ಇದ್ದ ಆತಂಕಗಳು ನಿವಾರಣೆಗೊಳ್ಳಲಿವೆ. ಸದ್ಯದಲ್ಲೆ ಅಧಿವೇಶನ ಇಲ್ಲದ ಕಾರಣ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಲಾಗಿದೆ' ಎಂದು ಅವರು ಹೇಳಿದರು.

‘ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಭೂಪರಿವರ್ತನೆ ಮಾಡಿಸಿಕೊಳ್ಳಲು ಅರ್ಜಿ ನೀಡಿದ 7 ದಿನಗಳಲ್ಲಿ ಅರ್ಜಿಯನ್ನು ಇತ್ಯರ್ಥಗೊಳಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಪರಿವರ್ತನೆಗೆ ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಅವರ ಉದ್ದೇಶಗಳಿಗೆ ಅನುಮತಿ ಸಿಗಲಿದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ' ಎಂದು ಅವರು ತಿಳಿಸಿದರು.

‘ಯೋಜನಾ ಪ್ರಾಧಿಕಾರದ ವ್ಯಾಪ್ತಿಯ ಪ್ರದೇಶಗಳಲ್ಲಿ ಸರಳವಾಗಿ ಕೃಷಿ ಭೂಮಿ, ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲು ಭೂ ಪರಿವರ್ತನೆಗೆ ನೆರವಾಗಲಿದೆ. ಮುಂಬರಲಿರುವ ಬೆಳಗಾವಿ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ನಿರ್ಧರಿಸಲಾಗಿದೆ. ಇದರಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸಹಕಾರಿ' ಎಂದು ಅವರು ನುಡಿದರು.

‘ಕಂದಾಯ ನಿವೇಶನಗಳನ್ನು ಖರೀದಿಸಿದವರು ಮತ್ತು ಇಂತಹ ನಿವೇಶನಗಳಲ್ಲಿ ಕಟ್ಟಡ ನಿರ್ಮಿಸಿಕೊಂಡ 30 ಲಕ್ಷದಷ್ಟು ಜನರಿದ್ದಾರೆ. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳದ ಇಂತಹ ನಿವೇಶನಗಳ ಭೂ ದಂಡ ಶುಲ್ಕದೊಂದಿಗೆ ಭೂ ಪರಿವರ್ತನೆ ಸಾಧ್ಯವಾದರೆ ಜನರಿಗೆ ಅನುಕೂಲ ಆಗಲಿದೆ' ಎಂದು ಅವರು ತಿಳಿಸಿದರು.

ಇದೀಗ ಕಂದಾಯ ನಿವೇಶನಗಳಲ್ಲಿ ಮನೆ ನಿರ್ಮಿಸಲು ಬ್ಯಾಂಕ್ ಸಾಲ ದೊರೆಯುವುದಿಲ್ಲ. ಈಗ ಕಂದಾಯ ನಿವೇಶನಗಳ ಭೂ ಪರಿವರ್ತನೆಗೆ ಅವಕಾಶ ನೀಡಿದರೆ, ನಿವೇಶನ ಮತ್ತು ಕಟ್ಟಡಗಳ ಮಾಲಕರಿಗೆ ಬ್ಯಾಂಕ್ ಸಾಲ ಪಡೆಯಲು ಅವಕಾಶವಾಗುತ್ತದೆ. ಹೀಗಾಗಿ ಕಂದಾಯನಿವೇಶನಗಳನ್ನು ಭೂ ಪರಿವರ್ತನೆ ಮಾಡಿಸಿಕೊಳ್ಳಲು ಅನುಮತಿ ನೀಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ' ಎಂದು ಅವರು ಹೇಳಿದರು.

ಇತ್ಯರ್ಥಕ್ಕೆ ಕಾಲಾವಕಾಶ: ‘ಭೂ ಪರಿವರ್ತನೆ ಕೋರಿ ಅರ್ಜಿ ಸಲ್ಲಿಸುವವರಿಂದ ಪ್ರಮಾಣ ಪತ್ರ ಪಡೆದು ಒಂದು ವಾರದಲ್ಲಿ ಭೂ ಪರಿವರ್ತನೆ ಕಾರ್ಯವನ್ನು ಮಾಡಿಕೊಡಲಾಗುತ್ತದೆ. ಒಂದು ವೇಳೆ ಸದರಿ ಭೂಮಿ ದಲಿತರಿಗೆ ಸಂಬಂಧಿಸಿದ್ದು ಎಂಬುದರಿಂದ ಹಿಡಿದು ಯಾವುದೇ ತೊಡಕುಗಳಿದ್ದರೆ ತಕ್ಷಣವೇ ಗೊತ್ತಾಗುತ್ತದೆ. ಹೀಗಾಗಿ ತೊಡಕುಗಳಿಲ್ಲದ ಅರ್ಜಿಯ ಆಧಾರದ ಮೇಲೆ ಒಂದು ವಾರದಲ್ಲಿ ಭೂ ಪರಿವರ್ತನೆ ಕಾರ್ಯ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಕೆಯಾದರೆ, 30 ದಿನಗಳಲ್ಲಿ ಅರ್ಜಿ ಇತ್ಯರ್ಥವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಕಾರ್ಯ ವಿಳಂಬವಾದರೂ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ತನ್ನಿಂದ ತಾನೇ ಭೂ ಪರಿವರ್ತನೆ ಕಾರ್ಯ ನಡೆಯಲಿದೆ. ಇಲಾಖೆಯ ಹಲವು ಯೋಜನೆಗಳು ಜನರಿಗೆ ಸುಲಭವಾಗಿ ತಲುಪಿಸುವ ಉದ್ದೇಶದಿಂದ ಮೇಲ್ಕಂಡ ತೀರ್ಮಾನ ಮಾಡಲಾಗಿದೆ' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News