ಪ್ರಾಣಿಗಳ ಮೇಲೆ ದೌರ್ಜನ್ಯವೆಸಗಿದರೆ ಜೈಲು ಶಿಕ್ಷೆ: ಎಚ್ಚರಿಕೆ

Update: 2022-09-29 13:39 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.29: ರಾಜ್ಯ ವ್ಯಾಪಿ ಪ್ರಾಣಿಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದರೆ, ತಪ್ಪಿತಸ್ಥರಿಗೆ ಜೈಲು ಶಿಕ್ಷೆ ವಿಧಿಸುವುದಾಗಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಎಚ್ಚರಿಕೆ ನೀಡಿದೆ. 

ರಾಜ್ಯಾದ್ಯಂತ ಪ್ರಾಣಿಗಳ ಮೇಲೆ ದೌರ್ಜನ್ಯ ಮತ್ತು ಕ್ರೌರ್ಯಗಳು ನಡೆಸುತ್ತಿರುವ ಪ್ರಕರಣಗಳು ಸಾಮಾಜಿಕ ಜಾಲತಾಣಗಳ ಮೂಲಕ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಗೆ ವರದಿಯಾಗುತ್ತಿದೆ.

ಬೀದಿ ನಾಯಿಗಳ ಆರೈಕೆದಾರರು, ಪೀಡರ್ಸ್‍ಗಳಿಗೆ ಕಿರುಕುಳ ಮತ್ತು ಅನ್ಯಾಯಕ್ಕೆ ಒಳಗಾಗುತ್ತಿರುವ ಬಗ್ಗೆ ವಿವಿಧ ದೂರುಗಳು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಗೆ ಸ್ವೀಕೃತಗೊಂಡಿವೆ. ಇತ್ತೀಚೆಗೆ ಬೆಳಗಾವಿ, ಬಳ್ಳಾರಿ ಮತ್ತು ವಿಜಯಪುರ ಜಿಲ್ಲಾಗಳಲ್ಲಿ ಈ ರೀತಿಯ ಪ್ರಕರಣಗಳು ದಾಖಲಾಗಿದೆ.

ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1960ರ ಪ್ರಕಾರ ಪ್ರಾಣಿಗಳಿಗೆ ನೋವು, ತೊಂದರೆ, ದೌರ್ಜನ್ಯ ಮಾಡುವುದು ನಿಷಿದ್ಧ.ಈ ಸಂಬಂಧ  ಭಾರತೀಯ ದಂಡ ಸಂಹಿತೆ ಅನುಚ್ಛೇದ 428 ಮತ್ತು 429ರ ಪ್ರಕಾರ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು.

ಪ್ರಾಣಿಗಳ ಮೇಲಿನ ಎಲ್ಲ ದೌರ್ಜನ್ಯಗಳನ್ನು ದಾಖಲು ಮಾಡಿ, ನಿಯಮಾನುಸಾರ ಕ್ರಮ ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಬೇಕು. ಈ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ಸಾರ್ವಜನಿಕರು ಪೊಲೀಸ್ ಸಹಾಯವಾಣಿ 112 ಅಥವಾ ಪಶುಸಂಗೋಪನಾ ಸಹಾಯವಾಣಿ ಸಂಖ್ಯೆ 8277100200ಗೆ ಸಂಪರ್ಕಿಸುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News