‘ಭಾರತ ಐಕ್ಯತಾ ಯಾತ್ರೆ'ಯಲ್ಲಿ ಪಾಲ್ಗೊಳ್ಳುವಂತೆ ಡಿಕೆಶಿ ಮನವಿ
ಬೆಂಗಳೂರು, ಸೆ.29: ಐತಿಹಾಸಿಕ ಭಾರತ ಐಕ್ಯತಾ ಯಾತ್ರೆ ನಾಳೆ(ಸೆ.30) ಕರ್ನಾಟಕವನ್ನು ಪ್ರವೇಶಿಸಲಿದ್ದು, ರಾಜ್ಯದಾದ್ಯಂತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಜನ-ಮನ ಒಂದಾಗದೆ ಜಗತ್ತಿನಲ್ಲಿ ಯಾವುದೇ ದೊಡ್ಡ ಬದಲಾವಣೆ ಸಂಭವಿಸಿಲ್ಲ. ಕೇವಲ 5 ವರ್ಷಕ್ಕೊಮ್ಮೆ ಮತ ಹಾಕಿದರೆ ಸಾಲದು. ರಾಜಕಾರಣಿಗಳಾಗಲಿ ಅಥವಾ ಮತದಾರರಾಗಲಿ, ನಮ್ಮ ಕಾಲದ ಸಮಸ್ಯೆಗಳಿಗೆ ಪ್ರತಿದಿನ ಸ್ಪಂದಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದ್ದಾರೆ.
ನೀವು ಬದಲಾವಣೆಯನ್ನು ಕಾಣಬೇಕಾದರೆ, ನೀವು ಬದಲಾವಣೆಗೆ ಮುಂದಾಗಬೇಕು, ಬದಲಾವಣೆಗಾಗಿ ಈ ಚಳವಳಿಯಲ್ಲಿ ಹೆಜ್ಜೆ ಹಾಕಿ, 1947ರಲ್ಲಿ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಭಾರತವನ್ನು ಒಗ್ಗೂಡಿಸಿತು. ಇಂದು, 75 ವರ್ಷಗಳ ನಂತರ, ಬದಲಾವಣೆಗಾಗಿ ಏಕತೆಯ ಪ್ರತಿಜ್ಞೆಯನ್ನು ಮಾಡಿದ್ದೇವೆ. ಈ ಯಾತ್ರೆಯು ಬದಲಾವಣೆಯ ಮೊದಲ ಹೆಜ್ಜೆಯಾಗಿದೆ ಎಂದು ಶಿವಕುಮಾರ್ ಹೇಳಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯ ನಿರಂಕುಶ ಅಧಿಕಾರ, ದ್ವೇಷ ರಾಜಕಾರಣದ ವಿರುದ್ಧ ಧ್ವನಿ ಎತ್ತುತ್ತಿದೆ. ಬಿಜೆಪಿಯ ರಾಜಕೀಯ ನಡೆಯಲ್ಲಿ ಜನರ ಬಗ್ಗೆಯಾಗಲಿ, ಅವರ ಸಮಸ್ಯೆಗಳ ಬಗ್ಗೆಯಾಗಲಿ ಮಾತೇ ಇಲ್ಲವಾಗಿದೆ. ಬೆಲೆ ಏರಿಕೆ, ನಿರುದ್ಯೋಗ, ಕೋಮು ಸೌಹಾರ್ದತೆ, ಮಹಿಳಾ ಸುರಕ್ಷತೆ ಅಥವಾ ಆರ್ಥಿಕ ಅಭಿವೃದ್ಧಿಯಂತಹ ಪ್ರಮುಖ ವಿಷಯಗಳ ಬಗ್ಗೆ ಸರಕಾರವು ಮಾತೇ ಆಡುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.
40 ಪರ್ಸೆಂಟ್ ಭ್ರಷ್ಟಾಚಾರದೊಂದಿಗೆ ನಾವು ಬದುಕಬೇಕಾಗಿಲ್ಲ, ಸಾರ್ವಕಾಲಿಕ ಐತಿಹಾಸಿಕ ನಿರುದ್ಯೋಗದಿಂದ ಕೊರಗಬೇಕಿಲ್ಲ. ನಮ್ಮ ಪ್ರೀತಿಯ ನಾಡು ಎಲ್ಲರಿಗೂ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ನೀವು ನಂಬಲು ಪ್ರಾರಂಭಿಸುತ್ತೀರಿ. ಇತರ ಪಕ್ಷಗಳಲ್ಲಿರುವ ನನ್ನ ಸ್ನೇಹಿತರನ್ನು ಒಳಗೊಂಡಂತೆ ಎಲ್ಲರನ್ನೂ ಈ ಯಾತ್ರೆಯಲ್ಲಿ ಹೆಜ್ಜೆಹಾಕಲು ಆಹ್ವಾನಿಸುತ್ತಿದ್ದೇನೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಇದರಿಂದಾಗಿ ‘ಅಧಿಕಾರವೆಂದರೆ ಆಳುವುದಲ್ಲ, ಜನರ ಸೇವೆ ಮಾಡುವುದು' ಎಂದು ಅರಿತುಕೊಳ್ಳಲು ಸಾಧ್ಯವಾಗಲಿದೆ. ಹವಾಮಾನ ಹೇಗಿದ್ದರೂ ದಿನಕ್ಕೆ 20ಕಿ.ಮೀ. ನಡೆಯಲಿದ್ದೇವೆ. ಎಲ್ಲ ವರ್ಗದ ಜನರನ್ನು ನಾವು ಭೇಟಿ ಮಾಡಲಿದ್ದೇವೆ, ಅವರ ದುಃಖವನ್ನು ಆಲಿಸಲಿದ್ದೇವೆ. ಉಚಿತ ಸಿಲಿಂಡರ್ ಕೊಟ್ಟು ರಿಫಿಲ್‍ಗಾಗಿ ದುಬಾರಿ ಹಣ ತೆರಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿರುವ ಮಹಿಳೆಯರನ್ನು ನಾವು ಭೇಟಿಯಾಗಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಈ ಯಾತ್ರೆಯನ್ನು ಎಲ್ಲಿ ಮತ್ತು ಯಾವಾಗ ಸೇರಬಹುದು ಎಂದು ತಿಳಿಯಲು https://www.bharathaikyatayatre.in/ ವೆಬ್‍ಸೈಟ್‍ಗೆ ಭೇಟಿ ಕೊಡಿ ಎಂದು ಶಿವಕುಮಾರ್ ಮನವಿ ಮಾಡಿದ್ದಾರೆ.