ಆರೆಸ್ಸೆಸ್ ನಿಷೇಧ ಮಾಡಿ ಎನ್ನುವುದು ದುರ್ದೈವ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ, ಸೆ.30: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೆಸ್ಸೆಸ್(RSS) ನಿಷೇಧ ಮಾಡಿ ಎಂದು ಹೇಳುವುದೇ ದುರ್ದೈವದ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಪಿ.ಎಫ್.ಐ.(PFI) ಯಾಕೆ ನಿಷೇಧಿಸಿದ್ದೀರಿ ಎಂದು ಕೇಳಲು ಕಾಂಗ್ರೆಸ್ ಗೆ ಯಾವ ಆಧಾರಗಳಿಲ್ಲ. ಏಕೆಂದರೆ ಅವರೇ ಪಿ.ಎಫ್.ಐ. ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿದ್ದರು. ಈಗ ಅದನ್ನು ಮರೆಮಾಚಲು ಆರೆಸ್ಸೆಸ್ ನಿಷೇಧಿಸಲು ಹೇಳುತ್ತಾರೆ. ಅದನ್ನು ಯಾಕೆ ನಿಷೇಧಿಸಬೇಕೆಂದು ಹೇಳುವುದಿಲ್ಲ. ಆರೆಸ್ಸೆಸ್ ನವರು ದೀನ ದಲಿತರು, ಅನಾಥರಿಗೆ ಹಲವಾರು ಸಂಸ್ಥೆಗಳನ್ನು ಕಟ್ಟಿದ್ದಾರೆ. ಪ್ರವಾಹ ಮುಂತಾದ ಸಂಕಷ್ಟದ ಸಂದರ್ಭದಲ್ಲಿ ಮುಂದೆ ನಿಂತು ಕೆಲಸ ಮಾಡುತ್ತಾರೆ. ಅದು ದೇಶ ಪ್ರೇಮದ ಜಾಗೃತಿ ಮೂಡಿಸುತ್ತಿರುವ ಸಂಘಟನೆ. ಅದನ್ನು ನಿಷೇಧ ಮಾಡಿ ಎಂದು ಹೇಳುವುದೇ ದುರ್ದೈವದ ಸಂಗತಿ. ಈ ಮಟ್ಟಕ್ಕೆ ಸಿದ್ದರಾಮಯ್ಯ ಅವರು ಇಳಿಯಬಾರದಿತ್ತು ಎಂದರು.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಅದು ಅವರ ಪಕ್ಷದ ಆಂತರಿಕ ವಿಚಾರ. ಈ ಬಗ್ಗೆ ನನ್ನ ವ್ಯಾಖ್ಯಾನ ಇಲ್ಲ. ಪ್ರಥಮ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವುದರಿಂದ ಹೀಗಾಗುತ್ತಿರಬಹುದು ಎಂದರು.
ಇದನ್ನೂ ಓದಿ: 'ಭಾರತ್ ಜೋಡೋ ಯಾತ್ರೆ': ರಾಹುಲ್ ಗಾಂಧಿಯನ್ನು ಬರಮಾಡಿಕೊಂಡ ಸಿದ್ದರಾಮಯ್ಯ