ಗುಲ್ಬರ್ಗಾ-ವಿಜಯಪುರದಲ್ಲಿ ಜವಳಿ ಪಾರ್ಕ್: ಮುಖ್ಯಮಂತ್ರಿ ಬೊಮ್ಮಾಯಿ

Update: 2022-09-30 15:15 GMT

ವಿಜಯಪುರ, ಸೆ.30: ರಾಜ್ಯದ ಎರಡು ಜವಳಿ ಪಾರ್ಕ್‍ಗಳನ್ನು ಕಲಬುರಗಿ ಮತ್ತು ವಿಜಯಪುರದಲ್ಲಿ ಸ್ಥಾಪಿಸಲು ಅನುದಾನ ನೀಡಿ ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಒಂದು ಸಾವಿರ ಎಕರೆಯಲ್ಲಿ ನಿರ್ಮಾಣವಾಗಲಿರುವ ಈ ಜವಳಿ ಪಾರ್ಕ್‍ನಿಂದ ಸುಮಾರು 25 ಸಾವಿರ ಯುವಕರಿಗೆ ಉದ್ಯೋಗ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶುಕ್ರವಾರ ಇಲ್ಲಿನ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಜೆ.ಎಸ್.ಎಸ್ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿರುವ ‘ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ’ಗೊಳಿಸಿ ಮಾತನಾಡಿದ ಅವರು, 400ಕೋಟಿ ರೂ.ಅಭಿವೃದ್ಧಿ ಯೋಜನೆಗಳಿಗೆ ಇಂದು ಚಾಲನೆ ನೀಡಲಾಗಿದೆ.

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಮೀಸಲಿರಿಸಲಾಗಿದೆ. ದ್ರಾಕ್ಷಿ ಬೆಳೆಯ ಅಭಿವೃದ್ಧಿ ಹಾಗೂ ಸಂಸ್ಕರಣೆಗಾಗಿ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿಗೆ 35 ಕೋಟಿ ರೂ.ಗಳನ್ನು ನೀಡಲಾಗಿದೆ. ಅಲ್ಲದೆ, ಶೀತಲ ಸಂಗ್ರಹಾಗಾರದ ಸಾಮಥ್ರ್ಯವನ್ನು ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಉತ್ತರ ಮತ್ತು ದಕ್ಷಿಣ ಟೂರಿಸಂ ಸರ್ಕೀಟ್ ಗಳನ್ನು ಮಾಡಲಾಗಿದೆ. ಉತ್ತರ ಸರ್ಕೀಟ್ ನಲ್ಲಿ ಹಂಪಿ, ಬಾದಾಮಿ, ಪಟ್ಟದಕಲ್ಲು ಮತ್ತು ವಿಜಯಪುರ ಜಿಲ್ಲೆಗಳಿವೆ. ಇದಕ್ಕೆ ಪೂರಕವಾದ ಸಕಲ ವ್ಯವಸ್ಥೆಗಳನ್ನು ಕಲ್ಪಿಸಿ ದೇಶ ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. 

ಪ್ರವಾಸೋದ್ಯಮ ಅಭಿವೃದ್ಧಿಯಿಂದ ವಿಜಯನಗರ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಯುವಕರಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಿದಂತಾಗುತ್ತದೆ. ಈ ಐದು ಕೊಡುಗೆಗಳನ್ನು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ನೀಡಲಾಗುವುದು. ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ವಿಮಾನ ನಿಲ್ದಾಣ ಉದ್ಘಾಟನೆ: ಮುಂದಿನ ಮೂರು ತಿಂಗಳಲ್ಲಿ ವಿಜಯಪುರದ ವಿಮಾನ ನಿಲ್ದಾಣದ ಅಭಿವೃದ್ಧಿಗೆ 125 ಕೋಟಿ ರೂ. ಅನುದಾನಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿ, ಮುಂದಿನ ಫೆಬ್ರವರಿಯೊಳಗೆ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿಯವರಿಂದ ಉದ್ಘಾಟಿಸಲಾಗುವುದು. ವಿಮಾಣನಿಲ್ದಾಣಕ್ಕೆ ಬಸವೇಶ್ವರರ ಹೆಸರನ್ನು ನೀಡಲು ಕೇಂದ್ರದಿಂದ ಅನುಮತಿ ಪಡೆಯಲಾಗುವುದು. ಸಾರ್ವಜನಿಕ ಆಸ್ಪತ್ರೆ ಆಗುವ ಬೇಡಿಕೆಯಿದ್ದು, ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಪಿಪಿಪಿ ಮಾದರಿಯಲ್ಲಿ ಸರಕಾರಿ ವೈದ್ಯಕೀಯ ಆಸ್ಪತ್ರೆ ಮಂಜೂರು ಮಾಡಲಾಗುವುದು ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ, ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹಾದ್ ಜೋಶಿ, ಸಚಿವರಾದ ಸಿ.ಸಿ.ಪಾಟೀಲ್, ಆನಂದ್ ಸಿಂಗ್, ಗೋವಿಂದ ಕಾರಜೋಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News