ಮಂಡ್ಯ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ
Update: 2022-09-30 17:20 GMT
ಮಂಡ್ಯ, ಸೆ.30: ಗುರುವಾರ ತಡರಾತ್ರಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ, ಪಾಂಡವಪುರ ತಾಲೂಕಿನ ನೀಲನಹಳ್ಳಿ ಗೇಟ್ ಬಳಿ ನಡೆದಿದೆ.
ಪಾಂಡುಪುರ ತಾಲೂಕು ಲಕ್ಷ್ಮೀಸಾಗರ ಗ್ರಾಮದ ಧನು ಅಲಿಯಾಸ್ ಧನಂಜಯ್ ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ.
ಗುರುವಾರ ತಡರಾತ್ರಿ ಡಾಬಾದಲ್ಲಿ ಊಟ ಮುಗಿಸಿ ಮನೆಗೆ ತೆರಳುತ್ತಿದ್ದ ಧನಂಜಯ್ ನನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು ಕುತ್ತಿಗೆ, ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರವಾದ ಗಾಯದಿಂದ ನಲುಗಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಧನಂಜಯ್ ಕೆಲ ಆರೋಪಗಳ ಮೇಲೆ ರೌಡಿಶೀಟರ್ ಆಗಿ ಜೈಲಿಗೆ ಸೇರಿದ್ದರು. ಇತ್ತಿಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಘಟನೆಗೆ ಹಳೇ ವೈಷಮ್ಯವೇ ಕಾರಣ ಎಂದು ಪೊಲೀಸರು ಅಂದಾಜಿದ್ದು, ಮೇಲುಕೋಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.