ಧರ್ಮದ ಹೆಸರಿನಲ್ಲಿ 40% ಕಮಿಷನ್ ಲೂಟಿ ಹೊಡೆಯುತ್ತಿರುವ ಕಳ್ಳರ ಸರ್ಕಾರ: ರಾಹುಲ್ ಗಾಂಧಿ ವಾಗ್ದಾಳಿ
ಮೈಸೂರು,ಅ.1: ದೇಶ ಭಕ್ತಿ, ಧರ್ಮದ ಹೆಸರಿನಲ್ಲಿ 40% ಕಮಿಷನ್ ಲೂಟಿ ಹೊಡೆಯುತ್ತಿರುವ ಇದೊಂದು ಕಳ್ಳರ ಸರ್ಕಾರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಭಾತರ ಜೋಡೊ ಪಾದಯಾತ್ರೆಯ ಎರಡನೇ ದಿನವಾದ ಶನಿವಾರ ಬೇಗೂರಿನಿಂದ ನಂಜನಗೂಡು ಮೂಲಕ ತಾಂಡವಪುರ ಗ್ರಾಮಕ್ಕೆ ಆಗಮಿಸಿದ ಅವರು ವರುಣಾ ಕ್ಷೇತ್ರದ ಚಿಕ್ಕಯ್ಯನ ಚತ್ರ ಗ್ರಾಮದ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ದೇಶ ಭಕ್ತಿ ಧರ್ಮ ದ ಹೆಸರಿನಲ್ಲಿ ಮೂರನೇ ವ್ಯಕ್ತಿ ನಿಮ್ಮ ಮನೆಗೆ ಬಂದು ಕುಟುಂಬವನ್ನು ಹೊಡೆಯುವ ಕೆಲಸ ಮಾಡುತಿದ್ದಾರೆ. ನಿಮ್ಮ ಬಳಿ 40% ಹಣ ಪಡೆದು ಕಳ್ಳತನ ಮಾಡುತ್ತಿದ್ದಾರೆ. ಈ ಸಂಬಂಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿ ಮತ್ತು ಮುಖ್ಯಮಂತ್ರಿಗೆ ಪತ್ರದ ಮೂಲಕನವಿ ಮಾಡಿದರೂ ಯಾವೊಂದು ಕ್ರಮವನ್ನು ಕೈಗೊಂಡಿಲ್ಲ, ಹಾಗಿದ್ದ ಮೇಲೆ ಈ 40% ಹಣ ಯಾರ ಜೇಬು ಸೇರುತ್ತಿದೆ ಎಂದು ಸ್ಪಷ್ಟಪಡಿಸಲಿ ಎಂದು ಗುಡುಗಿದರು.
ಇದನ್ನೂ ಓದಿ: 'ಪೇಸಿಎಂ ಆ್ಯಕ್ಷನ್ ಕಮಿಟಿ': ಬಿಜೆಪಿ ನಾಯಕರ ಕಾಲ್ಪನಿಕ ವಾಟ್ಸ್ ಆ್ಯಪ್ ಗ್ರೂಪ್ ರಚನೆ; ವಿಡಿಯೋ ವೈರಲ್
ರಾಜ್ಯ ಸರ್ಕಾರ ಪಿ.ಎಸ್.ಐ. ಹಗರಣ, ಕೆ.ಪಿ.ಎಸ್ಸಿ, ಹಗರಣ, ವಿಶ್ವ ವಿದ್ಯಾನಿಲಯದ ಸಹಾಯಕ ಪ್ರಾಧ್ಯಪ ಹುದ್ದೆ ಸೇರಿದಂತೆ ಹಲವಾರು ಹಗರಣಗಳಲ್ಲಿ ತೊಡಗಿದೆ. ಈ ಹಗರಣದ ಕುರಿತು ತನಿಖೆ ನಡೆಸಿ ಎಂದರೆ ತನಿಖೆ ನಡೆಸಲು ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲ, ಈ ಹಗರಣದ ಎಲ್ಲಾ ಹಣ ಒಂದು ಸಂಘಟನೆಯ ಕೈ ಸೇರುತ್ತಿದೆ ಎಂದು ಆರೋಪಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ರೈತರು, ಕಾರ್ಮಿಕರು, ಬಡವರು ಸಂಕಷ್ಟಕ್ಕೊಳಗಾದರು. ಎಲ್ಲಾ ಬೆಲೆಯನ್ನು ಏರಿಸುವ ಮೂಲಕ ಕೆಲವೇ ಕೆಲವು ವ್ಯಕ್ತಿಗಳನ್ನು ಶ್ರೀಮಂತರು ಮಾಡಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಬೆಲೆ 400 ರೂ. ಇತ್ತು ಈಗ 1050 ರೂ. ಗಳಾಗಿದೆ. ಹಾಗಿದ್ದ ಮೇಲೆ ಉಳಿದ 600 ರೂ. ಹಣ ಯಾರು ಜೇಬು ಸೇರುತ್ತಿದೆ? ಪೆಟ್ರೋಲ್ ಬೆಲೆಯೂ ಗಗನಕ್ಕೇರಿದೆ. ಇದರ ಹೆಚ್ಚುವರಿ ಹಣ ಯಾರ ಜೇಬು ಸೇರುತ್ತಿದೆ ಎಂದು ಪ್ರಶ್ನಿಸಿದರು.
ಕೊರೋನ ಸಮಯದಲ್ಲಿ ಲಕ್ಷಾಂತರ ಜನರು ಸಾವಿಗೀಡಾದರು. ಅವರಿಗೆ ಸೌಜನ್ಯಕ್ಕಾದರೂ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಲಿಲ್ಲ, ಕೊರೋನ ಹೆಸರಿನಲ್ಲಿ ಕೆಲವು ಮಂದಿ ಶ್ರೀಮಂತರ ಜೇಬು ತುಂಬಿಸಿದರು ಎಂದು ಕಿಡಿಕಾರಿದರು.
ರೈತರು ಸಂಕಷ್ಟಕಗಕೀಡಾಗಿರು ಸಮಯದಲ್ಲಿ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರೈತರ ಮೇಲೆ ಗದಾಪ್ರಹಾರ ಮಾಡಿದರು. ರೈತರ ಖಾತೆಗ ಹಣ ನೀಡುತ್ತೇನೆ ಎಂದು ಮೋಸ ಮಾಡಿದರು. ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿ ವಂಚಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ 13 ಸಾವಿರ ಶಿಕ್ಷಣ ಸಂಸ್ಥೆಗಲ್ಲಿ ಲಂಚ ಪಡೆದು ಆಡಳಿತ ನಡೆಸುತ್ತಿದೆ. ಇದೊಂದು ಜನರನ್ನು ಸುಲಿಗೆ ಮಾಡುತ್ತಿರುವ ಕಳ್ಳ ಸರ್ಕಾರ. ಈ ಸರ್ಕಾರದ ಬಗ್ಗೆ ನೀವು ಎಚ್ಚರಿಕೆಯಿಂದ ಇರಬೇಕಿದೆ. ರಾಜ್ಯ ಮತ್ತು ದೇಶದ ಭ್ರಷ್ಟಾಚಾರವನ್ನು ತಿಳಿಸಲು ನಾನು ಕನ್ಯಾಕುಮಾರಿಯಿಂದ ಕಾಶ್ಮೀರದ ವರಗೂ ಪಾದಯಾತ್ರೆ ಮಾಡುತ್ತಿದ್ದೇನೆ ಎಂದು ಹೇಳಿದರು.
ನಾನು ಪಾದಯಾತ್ರೆ ಮಾಡುತ್ತಿರುವ ಎಲ್ಲಾ ಕಡೆ ಅಪಾರ ಜನಸ್ತೋಮದ ಬೆಂಬಲ ವ್ಯಕ್ತವಾಗುತ್ತಿದೆ. ಇಲ್ಲಿ ಸೇರುತ್ತಿರುವ ಜನರನ್ನು ಕಂಡು ನನಗೆ ಸಂತೋಷವಾಗಿದೆ. ಪ್ರತಿ ದಿನ ನಿಮ್ಮ ಉತ್ಸಾಹದಿಂದ 25-30 ಕೀ.ಮಿ. ನಡೆಯತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿರೋಧ ಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಸಚಿವ ಡಾ.ಎಚ್‌ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳಾದ ಆರ್.ಧ್ರುವನಾರಾಯಣ, ಸಲೀಂ ಆಹಮದ್, ಈಶ್ವರ್ ಖಂಡ್ರೆ, ಶಾಕ ಡಾ.ಯತೀಂದ್ರ ಸಿದ್ಧರಾಮಯ್ಯ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆವಿಜಯಕುಮಾರ್ ಉಪಸ್ಥಿತರಿದ್ದರು.