PFI ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿದ್ದ ಸಿದ್ದರಾಮಯ್ಯ: ಸಚಿವ ಆರ್.ಅಶೋಕ್

Update: 2022-10-03 12:20 GMT

ಬೆಂಗಳೂರು, ಅ. 3: ‘ರಾಜ್ಯ ಪೊಲೀಸ್ ಮಹಾನಿರ್ದೇಶಕರ(ಡಿಜಿಪಿ)ಅಭಿಪ್ರಾಯವನ್ನು ಗಾಳಿಗೆ ತೂರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ1600ಕ್ಕೂ ಅಧಿಕ ಮಂದಿ ಪಿಎಫ್‍ಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂಪಡೆದಿದ್ದರು. ಆದರೆ, ಅವರು‘ನಾನು ಪಿಎಫ್‍ಐ ನಿಷೇಧಿಸಲು ಆಗ್ರಹಿಸಿದ್ದೆ' ಎಂದು ಸುಳ್ಳು ಹೇಳುತ್ತಿದ್ದಾರೆ' ಎಂದು ಕಂದಾಯ ಸಚಿವ ಆರ್.ಅಶೋಕ್ ಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ‘ಸಿದ್ದರಾಮಯ್ಯ ಪಿಎಫ್‍ಐ ಭಾಗ್ಯ’ ಭಿತ್ತಿಚಿತ್ರ ಬಿಡುಗಡೆ ಮಾಡಿ, ಪಿಎಫ್‍ಐ ಕಾರ್ಯಕರ್ತರ ಮೇಲಿನ ಪ್ರಕರಣ ಹಿಂಪಡೆದ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘2012ರ ಡಿಸೆಂಬರ್ 10ರಂದು ಶಾಸಕರಾಗಿದ್ದ ತನ್ವೀರ್ ಸೇಠ್ ಪತ್ರ ಬರೆದು ಪಿಎಫ್‍ಐ ಕಾರ್ಯಕರ್ತರು ಅಮಾಯಕರು, ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ. ಕೇಸ್ ಹಿಂಪಡೆಯಬೇಕೆಂದು ಮನವಿ ಮಾಡಿದ್ದರು. ಡಿಜಿಪಿ‘ಯಾವುದೇ ಕಾರಣಕ್ಕೂ ಪ್ರಕರಣ ವಾಪಸ್ ಪಡೆಯಬಾರದು' ಎಂದು ಅಭಿಪ್ರಾಯ ನೀಡಿದ್ದರು. ಆದರೆ, ಅಂದಿನ ಸಂಪುಟ ಉಪ ಸಮಿತಿ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತ್ತು' ಎಂದು ತಿಳಿಸಿದರು.

‘ಪಿಎಫ್‍ಐ ಕಾರ್ಯಕರ್ತರಿಗೆ ವಿಧ್ವಂಸಕ ಕೃತ್ಯಗಳನ್ನು ಹೇಗೆ ನಡೆಸಬೇಕೆಂದು ಕೊಡಗು, ಮೈಸೂರು, ಮಂಗಳೂರಿನಲ್ಲಿ ತರಬೇತಿ ನೀಡಲಾಗಿದೆ. ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಹೇಗೆ ನಡೆಸಲಾಗಿದೆ ಎಂದು ಎಲ್ಲರಿಗೂ ಗೊತ್ತು. ಪಿಎಫ್‍ಐ ಮೇಲಿನ ಪ್ರಕರಣಗಳನ್ನು ಹಿಂಪಡೆದ ಸಿದ್ದರಾಮಯ್ಯ ಅವರೇ‘ಪಿಎಫ್‍ಐ ನಿಷೇಧಿಸಲು ಆಗ್ರಹಿಸಿದ್ದೆ' ಎಂದು ಹೇಳುತ್ತಿದ್ದಾರೆ. ಹೀಗಾಗಿ ಅವರು ಕೂಡಲೇ ಕ್ಷಮೆ ಕೋರಬೇಕು' ಎಂದು ಅಶೋಕ್ ಆಗ್ರಹಿಸಿದರು.

‘ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ನಡೆದ ಕೋಮು ಗಲಭೆ ಪ್ರಕರಣದಲ್ಲಿ ಕ್ರಮವಾಗಿ ದಾಖಲಾಗಿದ್ದ 117 ಹಾಗೂ 21 ಮೊಕದ್ದಮೆಗಳನ್ನು ಹಿಂಪಡೆಯುವಂತೆ ಶಾಸಕ ತನ್ವೀರ್ ಸೇಠ್ ಅವರು ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಮನವಿ ಮಾಡಿದ್ದರು. ಶಿವಮೊಗ್ಗದೊಡ್ಡಪೇಟೆ, ವಿನೋಬನಗರ, ಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಸುಮಾರು 1400 ಹಾಗೂ ಹಾಸನದಲ್ಲಿ 300 ಮಂದಿ ಪಿಎಫ್‍ಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ' ಎಂದು ವಿವರ ನೀಡಿದರು.

ಗಂಟು-ಮೂಟೆ ಕಟ್ಟಿಕೊಂಡು ಹೋಗಲು ಸಿದ್ಧ:‘ಎಐಸಿಸಿ ಮುಖಂಡ ರಾಹುಲ್ ಗಾಂಧಿ ಕೈಗೊಂಡಿರುವ‘ಭಾರತ್ ಜೋಡೋ ಯಾತ್ರೆ' ರಾಜ್ಯದಲ್ಲಿ ಕುಂಟುತ್ತಾ ಸಾಗಿದೆ. ಅದಷ್ಟು ಬೇಗ ಯಾತ್ರೆ ಮುಗಿಸಿ ಗಂಟು-ಮೂಟೆ ಕಟ್ಟಿಕೊಂಡು ಹೋಗಲು ಕಾಂಗ್ರೆಸ್‍ನವರು ಸನ್ನದ್ಧರಾಗಿದ್ದಾರೆ. ಇದರಿಂದ ರಾಜ್ಯದ ಜನತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ' ಎಂದು ಅಶೋಕ್ ಲೇವಡಿ ಮಾಡಿದರು.

ಆಯುಧ ಪೂಜೆ ಬಳಿಕ ಕಾರ್ಯಾಚರಣೆ: ‘ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಆಯುಧ ಪೂಜೆ ಇರುವುದರಿಂದ ಜೆಸಿಬಿ ಚಾಲಕರು ಸೇರಿದಂತೆ ಸಿಬ್ಬಂದಿ ಊರಿಗೆ ತೆರಳಿದ್ದಾರೆ. ಹಬ್ಬದ ಬಳಿಕ ಮತ್ತೊಂದು ಸುತ್ತಿನ ತೆರವು ಕಾರ್ಯಚರಣೆ ನಡೆಯಲಿದೆ. ಒತ್ತುವರಿದಾರರು ಎಷ್ಟೇ ದೊಡ್ಡವರಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ' ಎಂದು ಅಶೋಕ್ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News