ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಭಾವಿ ಸಿದ್ಧತೆಗಳು ನಡೆಸದ ಸರಕಾರ: ಮಹೇಶ್ ಜೋಶಿ ಅಸಮಾಧಾನ

Update: 2022-10-03 14:14 GMT

ಬೆಂಗಳೂರು, ಅ. 3: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ನ.11ರಿಂದ 13ರವರೆಗೂ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಘೋಷಣೆ ಮಾಡಿದ್ದರೂ, ಇದುವರೆಗೂ ಯಾವುದೇ ಪೂರ್ವಭಾವಿ ಸಿದ್ಧತೆಗಳನ್ನು ನಡೆಸಲು ಸರಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ಕಸಾಪದ ಅಧ್ಯಕ್ಷ ಮಹೇಶ್ ಜೋಶಿ ಬೇಸರ ವ್ಯಕ್ತಪಡಿಸಿದ್ದಾರೆ.

ಸೋಮವಾರ ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಮ್ಮೇಳನದ ನಡೆಸಲು ನಿರ್ಧರಿಸಿದ್ದ ದಿನಾಂಕಕ್ಕೆ ಇನ್ನೂ ಒಂದು ತಿಂಗಳು ಏಳು ದಿನಗಳು ಮಾತ್ರ ಬಾಕಿ ಇದ್ದು, ಸಮ್ಮೇಳನವು ನಡೆಯಬೇಕಾಗಿದ್ದ ಸ್ಥಳ ವಿವಾದವು ಕೋರ್ಟ್ ಅಂಗಳದಲ್ಲಿದೆ ಎಂದು ಸರಕಾರ ಹೇಳುತ್ತಿದೆ. ಹಾಗಾಗಿ ಸಮ್ಮೇಳನದ ವಿಚಾರದಲ್ಲಿ ಸರಕಾರ ಮತ್ತು ಜಿಲ್ಲಾಡಳಿತದ ನಡತೆಯ ಬಗ್ಗೆ ನಮಗೆ ತೀವ್ರ ಅಸಮಾಧಾನ ಉಂಟಾಗಿದೆ’ ಎಂದರು. 

‘ಸಮ್ಮೇಳನದ ಪೂರ್ವದಲ್ಲಿ ಸಮ್ಮೇಳನದ ಲಾಂಛನ ಬಿಡುಗಡೆ ಆಗಬೇಕು. ಸ್ವಾಗತ ಸಮಿತಿ ಸೇರಿದಂತೆ ಇಪ್ಪತ್ತು ಸಮಿತಿಗಳು ರಚನೆ ಆಗಬೇಕು. ವಸತಿ ವ್ಯವಸ್ಥೆ, ಪ್ರತಿನಿಧಿಗಳ ನೋಂದಣಿ ಆಗಬೇಕು. ಮುಖ್ಯಮಂತ್ರಿ ಮತ್ತು ಕಸಾಪ ಅಧ್ಯಕ್ಷನಾದ ನಾನು ಹಾವೇರಿ ಜಿಲ್ಲೆಯವರಾಗಿದ್ದೇವೆ. ತವರು ಜಿಲ್ಲೆಯಲ್ಲಿ ಸಮ್ಮೇಳನ ನಡೆಸುವ ಬಗ್ಗೆ ಸಾಕಷ್ಟು ಉತ್ಸುಕತೆಯನ್ನು ಹೊಂದಿದ್ದೆ. ಆದರೆ ನಮಗೆ ಸೂಕ್ತ ಸಹಕಾರ ಸಿಗುತ್ತಿಲ್ಲ. ಸಮ್ಮೇಳನ ನಡೆಸಲು ಮೊದಲು ಇದ್ದ ಉತ್ಸಾಹ ಈಗ ಕಡಿಮೆ ಆಗುತ್ತಿದೆ’ ಎಂದರು.

ನಮ್ಮ ವ್ಯವಸ್ಥೆ ನಾವು ಮಾಡಿಕೊಂಡಿದ್ದೇವೆ. ಆದರೆ, ಸರಕಾರದಿಂದ ಆಗಬೇಕಾದ ವ್ಯವಸ್ಥೆ ಇನ್ನೂ ಆಗಿಲ್ಲ. ಹಾಗಾಗಿ ಕಾಸಪ ಅಧ್ಯಕ್ಷನಾಗಿ ನಾನು ಸಮ್ಮೇಳನ ಯಾವಾಗ ಎನ್ನುವುದನ್ನು ನಿಶ್ಚಿತವಾಗಿ ಹೇಳಲು ಆಗೋದಿಲ್ಲ. ಸಮ್ಮೇಳನ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಈವರೆಗೆ ಸಾಕಷ್ಟು ಕಾಗದಗಳನ್ನು ಬರೆದಿದ್ದೇನೆ. ಕಾಗದಗಳನ್ನು ಬರೆದರೆ ಯಾರೋ ಒಬ್ಬ ಅಂಡರ್ ಸೆಕ್ರೆಟರಿ ಉತ್ತರ ಕೊಡುತ್ತಾನೆ. ಮುಖ್ಯಮಂತ್ರಿ ಮನೆ ಕಾಯುವ ಅಧ್ಯಕ್ಷ ನಾನಾಗುವುದಿಲ್ಲ ಎಂದರು.

ಅಧ್ಯಕ್ಷರನ್ನೇ ಕಡೆಗಣಿಸಿದ ಸರಕಾರ: ‘ಈ ಬಾರಿಯ ದಸರಾದಲ್ಲೂ ಕಸಾಪ ಅಧ್ಯಕ್ಷರನ್ನು ಪಕ್ಕಕ್ಕೆ ತಳ್ಳಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿಯೂ ಕಡೆಗಣಿಸಲಾಗಿದೆ. ನಾನು ಮಹೇಶ ಜೋಶಿಯಾಗಿ ಏನನ್ನೂ ಕೇಳುತ್ತಿಲ್ಲ. ಕಸಾಪದ ಅಧ್ಯಕ್ಷನಾಗಿ ಕೇಳುತ್ತಿದ್ದೇನೆ. ಸಮ್ಮೇಳನಕ್ಕೆ ಬಜೆಟ್‍ನಲ್ಲಿ 20ಕೋಟಿ ರೂ. ಕೊಟ್ಟಿದ್ದೇವೆ ಎಂದು ಸಿಎಂ ಹೇಳುತ್ತಿದ್ದಾರೆ. ಇವತ್ತಿನವರೆಗೂ ಜಿಲ್ಲಾಡಳಿತಕ್ಕೆ ಒಂದು ಪೈಸೆಯೂ ಹಣ ಬಂದಿಲ್ಲ. ಸಿಎಂ ನಿಗದಿತ ದಿನಾಂಕಕ್ಕೆ ಸಮ್ಮೇಳನ ಮಾಡುತ್ತೇವೆ ಎನ್ನುತ್ತಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವರು ಸಮ್ಮೇಳನದ ದಿನಾಂಕ ಮುಂದೂಡುತ್ತೇವೆ ಎನ್ನುತ್ತಿದ್ದಾರೆ. ಕಸಾಪ ಅಧ್ಯಕ್ಷನಾಗಿ ಸಮ್ಮೇಳನದ ಬಗ್ಗೆ ನನಗೆ ನಿಶ್ಚಿತತೆ ಇಲ್ಲದಾಗಿದೆ. ಹಾಗಾಗಿ ಸಮ್ಮೇಳನಕ್ಕಾಗಿ ಒಬ್ಬ ಅಧಿಕಾರಿ ಅಥವಾ ಮಂತ್ರಿಯನ್ನು ನೇಮಕ ಮಾಡುಬೇಕು'

-ಡಾ.ಮಹೇಶ್ ಜೋಶಿ, ಕಸಾಪದ ಅಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News