ಆಕ್ಸ್‌ಫರ್ಡ್, ಹಾರ್ವರ್ಡ್‌ಗಳಲ್ಲಿ ಹೆಚ್ಚಿದ ದಲಿತ ವಿದ್ಯಾರ್ಥಿಗಳು

Update: 2022-10-04 07:12 GMT

ಅಮೆರಿಕದಲ್ಲಿರುವ ವಿದೇಶಿ ವಿದ್ಯಾರ್ಥಿಗಳ ಪೈಕಿ ಈಗ ಗರಿಷ್ಠ ಸಂಖ್ಯೆಯಲ್ಲಿರುವವರು ಭಾರತೀಯ ವಿದ್ಯಾರ್ಥಿಗಳು. ಚೀನಾ ಎರಡನೇ ಸ್ಥಾನದಲ್ಲಿದೆ. ಅಮೆರಿಕವು ಭಾರತೀಯರಿಗೆ ೮೨,೦೦೦ಕ್ಕೂ ಅಧಿಕ ವಿದ್ಯಾರ್ಥಿ ವೀಸಾಗಳನ್ನು ನೀಡಿದೆ ಎಂದು ದಿಲ್ಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ಕಳೆದ ತಿಂಗಳು ಹೇಳಿತ್ತು. ಅದೊಂದು ದಾಖಲೆಯಾಗಿದೆ. ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಉಸ್ತುವಾರಿ ಅಧಿಕಾರಿ ಪ್ಯಾಟ್ರೀಶಿಯ ಲಸೀನಾ ಈ ಪ್ರವೃತ್ತಿಯನ್ನು ಶ್ಲಾಘಿಸಿದ್ದಾರೆ. ೨೦೨೦-೨೧ರ ಶೈಕ್ಷಣಿಕ ವರ್ಷದಲ್ಲಿ ಅಮೆರಿಕದಲ್ಲಿ ಭಾರತದ ೧,೬೭,೫೮೨ ವಿದ್ಯಾರ್ಥಿಗಳಿದ್ದರು ಎಂದು ರಾಯಭಾರ ಕಚೇರಿ ಹೇಳಿದೆ. ಕೋವಿಡ್-೧೯ ನಿರ್ಬಂಧಗಳು ತೆರವುಗೊಳ್ಳುತ್ತಿರುವಂತೆಯೇ, ವಿದ್ಯಾರ್ಥಿಗಳು ಅಮೆರಿಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿರುವಂತೆ ಕಂಡುಬರುತ್ತಿದೆ.

ಅಮೆರಿಕ, ಬ್ರಿಟನ್, ಆಸ್ಟ್ರೇಲಿಯ, ಕೆನಡ, ನ್ಯೂಝಿಲ್ಯಾಂಡ್ ಮತ್ತು ವಿವಿಧ ಯುರೋಪ್ ದೇಶಗಳಿಗೆ ಹೋಗುತ್ತಿರುವ ವಿದ್ಯಾರ್ಥಿಗಳ ಸಾಮಾಜಿಕ ವರ್ಗೀಕರಣಕ್ಕೆ ಸಂಬಂಧಿಸಿದ ಅಂಕಿಅಂಶಗಳು ನಮ್ಮಲ್ಲಿಲ್ಲ. ಆದರೆ, ನನ್ನ ಟ್ವಿಟರ್ ಟೈಮ್‌ಲೈನ್‌ನಲ್ಲಿ, ಕಲಿಯಲು ಪಾಶ್ಚಿಮಾತ್ಯ ದೇಶಗಳತ್ತ ಮುಖಮಾಡಿರುವ ದಮನಿತ ಸಮುದಾಯಗಳ, ಅದರಲ್ಲೂ ಮುಖ್ಯವಾಗಿ ಪರಿಶಿಷ್ಟ ಜಾತಿಗಳಿಗೆ ಸೇರಿದ ವಿದ್ಯಾರ್ಥಿಗಳ ಹೇಳಿಕೆಗಳೇ ತುಂಬಿವೆ.

ಹೊಸ ಪ್ರವೃತ್ತಿ

ಸವರ್ಣ ಹಿಂದೂಗಳಿಗೆ ಹೋಲಿಸಿದರೆ, ಪಾಶ್ಚಿಮಾತ್ಯ ದೇಶಗಳಲ್ಲಿರುವ ದಮನಿತ ವರ್ಗಗಳ ವಿದ್ಯಾರ್ಥಿಗಳ ಸಂಖ್ಯೆ ಈಗಲೂ ತುಂಬಾ ಕಡಿಮೆಯೇ ಆಗಿರಬಹುದು. ಆದರೆ, ಇದನ್ನು ವಿನೂತನ ಪ್ರವೃತ್ತಿ ಎಂಬುದಾಗಿ ನಾನು ಪರಿಗಣಿಸುತ್ತೇನೆ. ಯಾಕೆಂದರೆ, ಈ ಸಂಖ್ಯೆ ಮುಂದಿನ ವರ್ಷಗಳಲ್ಲಿ ಹೆಚ್ಚಬಹುದು.

‘‘ನಾನು ಭೇಟಿ ನೀಡುವ ದೇಶಗಳಲ್ಲಿ, ಪ್ರತಿಯೊಂದು ಸ್ಥಳದಲ್ಲೂ ‘ಅಂಬೇಡ್ಕರ್‌ರ ಮಕ್ಕಳನ್ನು’ ಕಾಣುತ್ತಿದ್ದೇನೆ’’ ಎಂಬುದಾಗಿ ವಿಚಾರವಾದಿ ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ. ಸ್ಕಾಲರ್ ಆಗಿರುವ ಸೂರಜ್ ಯೆಂಗ್ಡೆ ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ. ‘‘ಹತ್ತು ವರ್ಷ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಿನ ಅವಧಿಯಲ್ಲಿ, ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ಬಹುಜನರ ಉಪಸ್ಥಿತಿಯನ್ನು ನಾವು ನೋಡುತ್ತೇವೆ’’ ಎಂದು ಅವರು ಹೇಳುತ್ತಾರೆ. ವಿವಿಧ ದೇಶಗಳಲ್ಲಿ ಘಟಕಗಳನ್ನು ಹೊಂದಿರುವ ‘ಡಾ. ಅಂಬೇಡ್ಕರ್ ಅಂತರ್‌ರಾಷ್ಟ್ರೀಯ ವಿದ್ಯಾರ್ಥಿಗಳ ಅಸೋಸಿಯೇಶನ್’ಅನ್ನು ಸ್ಥಾಪಿಸುವ ತನ್ನ ಯೋಜನೆಯ ಬಗ್ಗೆಯೂ ಅವರು ಹೇಳಿದ್ದಾರೆ.

ಅಧ್ಯಯನಕ್ಕಾಗಿ ವಿದೇಶಗಳಿಗೆ ಹೋಗುವುದು ಭಾರತೀಯರಿಗೆ ಹೊಸ ಸಂಗತಿಯೇನಲ್ಲ. ಸ್ವಾತಂತ್ರ್ಯ ಪೂರ್ವದ ದಿನಗಳಲ್ಲೂ, ಹಲವು ಭಾರತೀಯರು ತಮ್ಮ ಮಕ್ಕಳನ್ನು, ಮುಖ್ಯವಾಗಿ ಗಂಡು ಮಕ್ಕಳನ್ನು ಪಾಶ್ಚಾತ್ಯ ಜಗತ್ತಿಗೆ, ಅದರಲ್ಲೂ ಮುಖ್ಯವಾಗಿ ಬ್ರಿಟನ್ ಮತ್ತು ಅಮೆರಿಕಕ್ಕೆ ಅಧ್ಯಯನಕ್ಕಾಗಿ ಕಳುಹಿಸಿದ್ದರು.

‘ಫಾರೀನ್ ರಿಟರ್ನ್ಡ್’ (ಈಗ ‘ಸೆಟಲ್ಡ್ ಅಬ್ರಾಡ್’) ಎನ್ನುವುದು ಭಾರತೀಯ ಕುಲೀನರಿಗೆ ಯಾವತ್ತೂ ಹೆಮ್ಮೆಯ ಸಂಗತಿಯಾಗಿತ್ತು. ಬಿ.ಆರ್. ಅಂಬೇಡ್ಕರ್‌ರಂಥ ಕೆಲವೇ ಕೆಲವರನ್ನು ಹೊರತುಪಡಿಸಿದರೆ, ತಮ್ಮ ಮಕ್ಕಳನ್ನು ವಿದೇಶಗಳಿಗೆ ವ್ಯಾಸಂಗಕ್ಕಾಗಿ ಹೆಚ್ಚಾಗಿ ಕಳುಹಿಸುತ್ತಿದ್ದವರು ಪಾಳೇಗಾರರು, ರಾಜರು, ನವಾಬರು, ಬ್ರಿಟಿಷ್ ಸರಕಾರದ ಉನ್ನತ ಅಧಿಕಾರಿಗಳು, ವಕೀಲರು ಮತ್ತು ಉದ್ಯಮಿಗಳು. ಅಂಬೇಡ್ಕರ್‌ರನ್ನು ವಿದೇಶಕ್ಕೆ ಕಳುಹಿಸುವ ಏರ್ಪಾಡುಗಳನ್ನು ಮಾಡಿದವರು ಬರೋಡದ ಮರಾಠಾ ದೊರೆ. ವಿದೇಶದಿಂದ ಹಿಂದಿರುಗಿದ ಬಳಿಕ, ಬರೋಡ ರಾಜ್ಯದಲ್ಲಿ ಸೇವೆ ಸಲ್ಲಿಸಬೇಕೆನ್ನುವ ಶರತ್ತಿನೊಂದಿಗೆ ಕಳುಹಿಸಿದ್ದರು.

ಕಾಂಗ್ರೆಸ್‌ನ ಹೆಚ್ಚಿನ ನಾಯಕರು ಹಾಗೂ, ಒಂದು ರೀತಿಯಲ್ಲಿ, ಇಡೀ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದವರು ಮೇಲ್ವರ್ಗದ ಸಮುದಾಯಗಳಿಂದ ಬಂದವರು. ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಪಶ್ಚಿಮದ ದೇಶಗಳಿಗೆ ಕಳುಹಿಸುವ ಅವರ ಪರಂಪರೆಯು ೧೯೪೭ರ ಬಳಿಕವೂ ಮುಂದುವರಿಯಿತು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಜನರ ಓಡಾಟವು ಸ್ವಾತಂತ್ರ್ಯದ ಬಳಿಕ ಹೆಚ್ಚಿತು ಹಾಗೂ ಕುಲೀನರು ಮತ್ತು ಪ್ರಭಾವಿಗಳ ಹೊಸ ವರ್ಗವೊಂದು ರೂಪುಗೊಂಡಿತು. ಶಿಕ್ಷಕರು, ಸರಕಾರಿ ಉನ್ನತ ಅಧಿಕಾರಿಗಳು ಮತ್ತು ಬಿಳಿ ಕಾಲರ್ ನೌಕರರು ಈ ವರ್ಗಕ್ಕೆ ಸೇರ್ಪಡೆಗೊಂಡರು. ಈ ವರ್ಗಕ್ಕೆ ಯುರೋಪ್ ಮತ್ತು ಉತ್ತರ ಅಮೆರಿಕ ಕನಸಿನ ಶೈಕ್ಷಣಿಕ ಗುರಿಗಳಾದವು.

ಭಾರತೀಯ ಕುಲೀನ ಸಾಮಾಜಿಕ ಗುಂಪುಗಳು ಶಿಕ್ಷಣ ಮತ್ತು ಕೆಲಸಕ್ಕಾಗಿ ಪಾಶ್ಚಿಮಾತ್ಯ ದೇಶಗಳಿಗೆ ವಲಸೆ ಹೋಗಿರುವುದು ಸಾಮಾಜಿಕವಾಗಿ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಹಿಂದಿನಿಂದಲೂ ಸಂಗ್ರಹಗೊಳ್ಳುತ್ತಾ ಬಂದ ಸಾಂಸ್ಕೃತಿಕ ಮತ್ತು ಸಾಮಾಜಿಕ ಬಂಡವಾಳದಿಂದಾಗಿ ಉನ್ನತ ಜಾತಿಗಳ ಕುಲೀನರಿಗೆ ಪಾಶ್ಚಿಮಾತ್ಯ ದೇಶಗಳಿಗೆ ವಲಸೆ ಹೋಗುವುದು ಸುಲಭವಾಯಿತು ಎಂದು ತನ್ನ ಪುಸ್ತಕ ‘ಕಾಸ್ಟ್ ಆಫ್ ಮೆರಿಟ್’ನಲ್ಲಿ ಹಾರ್ವರ್ಡ್ ಪ್ರೊಫೆಸರ್ ಅಜಂತಾ ಸುಬ್ರಮಣಿಯನ್ ಬರೆಯುತ್ತಾರೆ. ‘‘ಕ್ರೈಸ್ತ ಮಿಶನರಿ ಸೊಸೈಟಿಗಳ ಮೂಲಕ ಭಾರತಕ್ಕೆ ಬಂದ ಇಂಗ್ಲಿಷ್ ಸಾಹಿತ್ಯ ಮತ್ತು ಆಧುನಿಕ ಶಿಕ್ಷಣಕ್ಕೆ ಬ್ರಾಹ್ಮಣರು ಮೊದಲು ತೆರೆದುಕೊಂಡರು. ಜಗತ್ತು ನಗರೀಕರಣಗೊಳ್ಳುತ್ತಿರುವಾಗ ಇದು ಬ್ರಾಹ್ಮಣರಿಗೆ ಗಣನೀಯ ಪ್ರಮಾಣದಲ್ಲಿ ಲಾಭದಾಯಕವಾಯಿತು. ದಕ್ಷಿಣ ಭಾರತದ ಜನಸಂಖ್ಯೆಯಲ್ಲಿ ಕೇವಲ ೪ ಶೇಕಡಾದಷ್ಟಿದ್ದರೂ ಬ್ರಾಹ್ಮಣರು ಉನ್ನತ ಶಿಕ್ಷಣ ಮತ್ತು ಸರಕಾರಿ ಸೇವೆಗಳಲ್ಲಿ ಅತ್ಯಧಿಕ ಪ್ರಾತಿನಿಧ್ಯ ಪಡೆದುಕೊಂಡರು. ಪದವೀಧರರು ಮತ್ತು ದೇಶೀ ಉದ್ಯೋಗಿಗಳ ಪೈಕಿ ಬ್ರಾಹ್ಮಣರ ಪ್ರಮಾಣ ೭೦-೮೦ ಶೇಕಡಾದಷ್ಟಿತ್ತು’’ ಎಂಬುದಾಗಿ ಅವರು ಬರೆಯುತ್ತಾರೆ. ‘‘೧೯೬೦ರ ದಶಕದ ಕೊನೆಯಲ್ಲಿ ಭಾರೀ ಪ್ರಮಾಣದಲ್ಲಿ ಅವಕಾಶಗಳು ತೆರೆದುಕೊಂಡಾಗ, ಉನ್ನತ ಜಾತಿಯ ಕುಲೀನರು ಅವಕಾಶಗಳನ್ನು ಬಾಚಿಕೊಳ್ಳಲು ಸರಿಯಾದ ಸ್ಥಳದಲ್ಲಿ ನೆಲೆಗೊಂಡಿದ್ದರು. ಸಹಜವಾಗಿಯೇ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಜನರು ಹಿಂದೆ ಬಿದ್ದರು. ಒಬಿಸಿಗಳೂ ಕನಸುಗಳು ಮತ್ತು ಅವಕಾಶಗಳ ನೆಲಕ್ಕೆ ಹೋಗುವ ಸ್ಥಿತಿಯಲ್ಲಿರಲಿಲ್ಲ.

ಆದರೆ, ಪರಿಸ್ಥಿತಿ ಬದಲಾಗುತ್ತಿದೆ. ಇದಕ್ಕೆ ಐದು ಮುಖ್ಯ ಕಾರಣಗಳಿವೆ:

ಶೋಷಿತ ಸಮುದಾಯಗಳಿಗೆ ಕೇಂದ್ರ ಮತ್ತು ಹಲವು ರಾಜ್ಯ ಸರಕಾರಗಳು ವಿದೇಶಿ ಸ್ಕಾಲರ್‌ಶಿಪ್‌ಗಳನ್ನು ನೀಡುತ್ತಿವೆ. ಈ ಎಲ್ಲಾ ಸ್ಕಾಲರ್‌ಶಿಪ್ ಯೋಜನೆಗಳು ಯಶಸ್ವಿಯಾಗಿದೆ ಎನ್ನುವಂತಿಲ್ಲ. ಕೇಂದ್ರ ಮತ್ತು ತಮಿಳುನಾಡು, ಮಹಾರಾಷ್ಟ್ರ ಮತ್ತು ಜಾರ್ಖಂಡ್ ಮುಂತಾದ ರಾಜ್ಯ ಸರಕಾರಗಳ ಯೋಜನೆಗಳು ಇತರ ರಾಜ್ಯಗಳಿಗೆ ಹೋಲಿಸಿದರೆ ಶೋಷಿತ ಸಮುದಾಯಗಳ ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ವಿದೇಶಗಳಿಗೆ ಕಳುಹಿಸಿದರೆ, ದಿಲ್ಲಿಯ ಓವರ್‌ಸೀಸ್ ಸ್ಕಾಲರ್‌ಶಿಪ್ ಯೋಜನೆಯು ಅದರ ಸಂಕೀರ್ಣ ಮತ್ತು ದೋಷಪೂರಿತ ಪೂರ್ವಶರತ್ತುಗಳಿಂದಾಗಿ ಸಂಪೂರ್ಣ ವಿಫಲವಾಗಿದೆ.

ಭಾರತೀಯ ನಗರ ಮಧ್ಯಮ ವರ್ಗದ ರಚನೆಯಲ್ಲೂ ವರ್ಷಗಳ ಅವಧಿಯಲ್ಲಿ ಬದಲಾವಣೆಯಾಗಿದೆ. ಸರಕಾರಿ ನೌಕರಿಗಳು ಮತ್ತು ಶಿಕ್ಷಣದಲ್ಲಿ ಮೀಸಲಾತಿ ಹಾಗೂ ಆರ್ಥಿಕತೆಯ ವಿಕಸನ ಇದಕ್ಕೆ ಮುಖ್ಯ ಕಾರಣವಾಗಿದೆ. ಇವು ವಿವಿಧ ಸಾಮಾಜಿಕ ವರ್ಗಗಳಿಗೆ ಅವಕಾಶಗಳನ್ನು ಒದಗಿಸಿವೆ. ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಒಬಿಸಿಗಳಿಗೆ ಸೇರಿದ ಜನರು ಸಾಕಷ್ಟು ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆದು ಜೀವನದಲ್ಲಿ ಯಶಸ್ಸು ಸಾಧಿಸಿದ್ದಾರೆ ಹಾಗೂ ಈಗ ಅವರ ಪೈಕಿ ಕೆಲವರು ತಮ್ಮ ಮಕ್ಕಳನ್ನು ಅಧ್ಯಯನಕ್ಕಾಗಿ ವಿದೇಶಗಳಿಗೆ ಕಳುಹಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಈಗ ಪಾಶ್ಚಿಮಾತ್ಯ ಜಗತ್ತಿನಲ್ಲಿ, ಅದರಲ್ಲೂ ಮುಖ್ಯವಾಗಿ ಶಿಕ್ಷಣ ವಲಯದಲ್ಲಿ ಜಾತಿ ತಾರತಮ್ಯದ ಬಗ್ಗೆ ಅರಿವು ಹೆಚ್ಚಿದೆ. ಪಶ್ಚಿಮದ ದೇಶಗಳ ಹೆಚ್ಚೆಚ್ಚು ವಿಶ್ವವಿದ್ಯಾನಿಲಯಗಳು ಮತ್ತು ಶೈಕ್ಷಣಿಕ ವ್ಯವಸ್ಥೆಗಳು ದಕ್ಷಿಣ ಏಶ್ಯ ಸಮುದಾಯದಲ್ಲಿರುವ ಜಾತೀಯತೆಯ ಅಂಶಗಳನ್ನು ಗುರುತಿಸುತ್ತಿವೆ. ಅಮೆರಿಕದಲ್ಲಿ 23 ಕ್ಯಾಂಪಸ್‌ಗಳನ್ನು ಹೊಂದಿರುವ ದೇಶದ ಅತ್ಯಂತ ದೊಡ್ಡ ವಿಶ್ವವಿದ್ಯಾನಿಲಯವಾಗಿರುವ ಕ್ಯಾಲಿಫೋರ್ನಿಯ ಸರಕಾರಿ ವಿಶ್ವವಿದ್ಯಾನಿಲಯವು ಜಾತಿಯನ್ನು ತನ್ನ ತಾರತಮ್ಯ ನಿಷೇಧ ನೀತಿಗೆ ಸೇರ್ಪಡೆಗೊಳಿಸಿದೆ.

ಹಾರ್ವರ್ಡ್ ವಿಶ್ವವಿದ್ಯಾನಿಲಯ, ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯ (ಡೇವಿಸ್), ಕೋಲ್ಬಿ ಕಾಲೇಜು ಮತ್ತು ಬ್ರಾಂಡೀಸ್ ವಿಶ್ವವಿದ್ಯಾನಿಲಯ ಸೇರಿದಂತೆ ಇತರ ಅಮೆರಿಕನ್ ವಿಶ್ವವಿದ್ಯಾನಿಲಯ ಗಳೂ ಭಾರತದಲ್ಲಿರುವ ಜಾತಿ ಆಧಾರಿತ ತಾರತಮ್ಯವನ್ನು ಈಗಾಗಲೇ ಗುರುತಿಸಿವೆ. ಅಮೆರಿಕದ ಶೈಕ್ಷಣಿಕ ಸಂಸ್ಥೆಗಳು ಜಾತಿಯನ್ನು ಒಂದು ತಾರತಮ್ಯಕರ ಅಂಶವಾಗಿ ಗುರುತಿಸಿರುವುದು ಭಾರತದ ಶೋಷಿತ ಗುಂಪುಗಳ ವಿದ್ಯಾರ್ಥಿಗಳಿಗೆ ಆಶಾದಾಯಕವಾಗಿದೆ ಹಾಗೂ ಮುಂದಿನ ವರ್ಷಗಳಲ್ಲಿ ಅದು ಅವರಿಗೆ ಅವಕಾಶಗಳನ್ನು ತೆರೆಯಬಹುದಾಗಿದೆ.

ಇಸಾಬೆಲ್ ವಿಲ್ಕರ್‌ಸನ್‌ರಂಥ ಖ್ಯಾತ ಸಾಹಿತಿಗಳು ಭಾರತದಲ್ಲಿನ ಜಾತಿ ವ್ಯವಸ್ಥೆಯ ಬಗ್ಗೆ ಬರೆದಿರುವುದರಿಂದ ಆ ದೇಶದಲ್ಲಿ ಭಾರತದ ಜಾತಿ ವ್ಯವಸ್ಥೆಯ ಬಗ್ಗೆ ಅರಿವು ಮೂಡಿದೆ. ಮುಂದಿನ ವರ್ಷಗಳಲ್ಲಿ ಇದು ಯಾವ ಪರಿಣಾಮವನ್ನು ಬೀರುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಅಮೆರಿಕದಲ್ಲಿ ನಡೆದಿರುವ ಕೆಲವೊಂದು ಘಟನೆಗಳು ಮತ್ತು ವಿವಾದಗಳು ಭಾರತದಲ್ಲಿನ ಜಾತಿ ತಾರತಮ್ಯದ ಬಗ್ಗೆ ಅಲ್ಲಿ ಅರಿವು ಮೂಡಿಸಿವೆ. ಅದರಲ್ಲಿ ಮುಖ್ಯವಾದದ್ದು, ಉನ್ನತ ತಂತ್ರಜ್ಞಾನ ಕಂಪೆನಿಗಳಲ್ಲಿ ಒಂದಾಗಿರುವ ಸಿಸ್ಕೊದಲ್ಲಿ ನಡೆದ ಜಾತಿ ತಾರತಮ್ಯದ ಪ್ರಕರಣ. ಕಂಪೆನಿಯ ಮೇಲ್ಜಾತಿಯ ಇಬ್ಬರು ಮ್ಯಾನೇಜರ್‌ಗಳು ತನ್ನ ವಿರುದ್ಧ ತಾರತಮ್ಯ ಮಾಡಿ ತನ್ನ ವೃತ್ತಿಜೀವನವನ್ನು ಸ್ಥಗಿತಗೊಳಿಸಿದ್ದಾರೆ ಎಂಬುದಾಗಿ ಸಿಸ್ಕೊ ಕಂಪೆನಿಯ ಉದ್ಯೋಗಿಯೊಬ್ಬರು ಆರೋಪಿಸಿದ್ದರು. ಈಗ ಕ್ಯಾಲಿಫೋರ್ನಿಯದ ಉದ್ಯೋಗ ನಿಯಂತ್ರಕರು ಉದ್ಯೋಗಿಯ ಪರವಾಗಿ ಸಿಸ್ಕೊ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ಇದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಬಳಿಕ, ನ್ಯೂಜರ್ಸಿಯಲ್ಲಿರುವ ದೇವಾಲಯವೊಂದು ಕೆಳ ಜಾತಿಗಳ ಜನರಿಂದ ‘ಅಜಲು’ ಸೇವೆ ಮಾಡಿಸುತ್ತಿದೆ ಎಂಬುದಾಗಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿತು. ಇತ್ತೀಚಿನ ಪ್ರಕರಣವು ತಂತ್ರಜ್ಞಾನ ದೈತ್ಯ ಗೂಗಲ್‌ಗೆ ಸಂಬಂಧಿಸಿದ್ದು. ದಲಿತ ಹಕ್ಕುಗಳ ಕಾರ್ಯಕರ್ತೆ ತೇನ್‌ಮೋಳಿ ಸೌಂದರ್‌ರಾಜನ್‌ಗೆ ಕಂಪೆನಿ ವತಿಯಿಂದ ಏರ್ಪಡಿಸಲಾದ ಸಮಾರಂಭವೊಂದರಲ್ಲಿ ಮಾತನಾಡಲು ಅವಕಾಶ ನಿರಕಾರಿಸಲಾಗಿತ್ತು.

ಕೃಪೆ: theprint.in

Writer - ದಿಲೀಪ್ ಮಂಡಲ್

contributor

Editor - ದಿಲೀಪ್ ಮಂಡಲ್

contributor

Similar News