ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರಕ್ಕಾಗಿ KPCC ಮುಖ್ಯ ವಕ್ತಾರರ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿ. ಅರ್ ಸುದರ್ಶನ್

Update: 2022-10-05 12:10 GMT

ಬೆಂಗಳೂರು, ಅ. 5: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪರ ಪ್ರಚಾರ ಕೈಗೊಳ್ಳಲು ಕೆಪಿಸಿಸಿ ಮುಖ್ಯ ವಕ್ತಾರ ಸ್ಥಾನಕ್ಕೆ ವಿ.ಆರ್.ಸುದರ್ಶನ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಸುದರ್ಶನ್ ತಮ್ಮ ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ರವಾನಿಸಿದ್ದಾರೆ. ಅಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳು ಸೇರಿದಂತೆ ಪಕ್ಷದ ಜವಾಬ್ದಾರಿ ಸ್ಥಾನದಲ್ಲಿರುವವರು ಅಭ್ಯರ್ಥಿಗಳ ಪರ ಪ್ರಚಾರ ಮಾಡುವಂತಿಲ್ಲ. ಒಂದು ವೇಳೆ ಪ್ರಚಾರ ಮಾಡಬೇಕೆಂದಿದ್ದರೆ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ ಪ್ರಚಾರದಲ್ಲಿ ಪಾಲ್ಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಶಶಿತರೂರ್ ಸ್ಪರ್ಧಿಸಿದ್ದಾರೆ. ಹೀಗಾಗಿ ಪಕ್ಷದ ಹುದ್ದೆಯಲ್ಲಿದ್ದುಕೊಂಡು ಓರ್ವ ಅಭ್ಯರ್ಥಿ ಪರ ಕೆಲಸ ಅಥವಾ ಪ್ರಚಾರ ಮಾಡುವಂತಿಲ್ಲ. ಆದುದರಿಂದ ಸುದರ್ಶನ್ ಖರ್ಗೆ ಪರ ಪ್ರಚಾರ ಕೈಗೊಳ್ಳಲು ತಮ್ಮ ಮುಖ್ಯ ವಕ್ತಾರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆಂದು ಗೊತ್ತಾಗಿದೆ.

ಅ.17ಕ್ಕೆ ಚುನಾವಣೆ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ನಾಮಪ ಪತ್ರ ಸಲ್ಲಿಸಿದ್ದು, ನಾಮಪತ್ರ ಹಿಂದಕ್ಕೆ ಪಡೆಯಲು ಅ.8ರವರೆಗೆ ಅವಕಾಶ ಕಲ್ಪಿಸಲಾಗಿದೆ. ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಅಂದು ಸಂಜೆ 5 ಗಂಟೆಗೆ ಪ್ರಕಟಿಸಲಾಗುತ್ತದೆ. ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ ಅ.17ರಂದು ಚುನಾವಣೆ ನಡೆಯಲಿದ್ದು, ಅ.19ರಂದು ಫಲಿತಾಂಶ ಪ್ರಕಟವಾಗಲಿದೆ' ಎಂದು ಪಕ್ಷ ತಿಳಿಸಿದೆ.

ಚುನಾವಣೆ ಸ್ವಾಗತಾರ್ಹ: ‘ಎಐಸಿಸಿ ಪರಂಪರೆ, ಪ್ರಯತ್ನ, ಸಾಧನೆಗಳ ಈ ಹಿನ್ನೆಲೆಯಲ್ಲಿ 24 ವರ್ಷಗಳ ನಂತರ ಆಂತರಿಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಸಲುವಾಗಿ ಅಧ್ಯಕ್ಷ ಪದವಿಗೆ ಚುನಾವಣೆ ನಡೆಸುತ್ತಿರುವುದು ಸ್ವಾಗತಾರ್ಹ. ಈ ಸಂದರ್ಭದಲ್ಲಿ ಭವಿಷ್ಯದಲ್ಲಿ ಭರವಸೆ ಮೂಡಿಸಿರುವ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರಗೆ ಪಾದಯಾತ್ರೆ ಮಾಡುತ್ತಿರುವುದು ಉತ್ತಮ ಪ್ರಯತ್ನ ಹಾಗೂ ಬೆಳವಣಿಗೆ' ಎಂದು ಸುದರ್ಶನ್ ಉಲ್ಲೇಖಿಸಿದ್ದಾರೆ.

‘ಎಐಸಿಸಿ ಅಧ್ಯಕ್ಷ ಪದವಿಗೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಹಿರಿಯ, ಅನುಭವಿ ನಾಯಕ ಅವರಿಗೆ ಅಭಿನಂಧನೆಗಳು. ಕರ್ನಾಟಕ ಸರಕಾರದ ವಿವಿಧ ಇಲಾಖೆಗಳಲ್ಲಿ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ಎಐಸಿಸಿ ಪ್ರಧಾನಕಾರ್ಯದರ್ಶಿಯಾಗಿ, ಸಿಡಬ್ಲ್ಯೂಸಿ ಸದಸ್ಯರಾಗಿ, ಕೇಂದ್ರ ಸರಕಾರದ ವಿವಿಧ ಇಲಾಖೆಗಳ ಸಚಿವರಾಗಿ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ, ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿ ಪರಿಣಾಮಕಾರಿಯಾಗಿ ಮತ್ತು ಜವಾಬ್ದಾರಿಯಾಗಿ ಕರ್ತವ್ಯ ನಿರ್ವಹಿಸಿ, ಅಪಾರ ಅನುಭವ ಹೊಂದಿದ್ದಾರೆ.

ಈ ಅನುಭವ ಮತ್ತು ಹಿರಿತನ ಪಕ್ಷಕ್ಕೆ ಭವಿಷ್ಯದಲ್ಯದಲ್ಲಿ ಸಂಘಟನೆಗೆ ಪ್ರಯೋಜನೆಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ  ದೇಶದ ಎಲ್ಲಾ ಕಾಂಗ್ರೆಸ್  ಸದಸ್ಯರು ಅವರ ಅಭ್ಯರ್ಥಿ ಆಯ್ಕೆ ಬೆಂಬಲಿಸಬೇಕೆಂದು ಮನವಿ ಮಾಡುತ್ತೇನೆ. ಹಾಗೇಯೆ ಎಐಸಿಸಿ ಕೇಂದ್ರ ಚುನಾವಣಾ ಮಂಡಳಿ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ಚುನಾವಣಾ ಹಿನ್ನೆಲೆಯಲ್ಲಿ ಉತ್ತಮ ನಿಯಮಗಳನ್ನು ಪಾಲನೆ ಮಾಡಲು ತಿಳಿಸಿರುತ್ತಾರೆ. ಅದು ಸ್ವಾಗತಾರ್ಹ ಮತ್ತು ಅವರಿಗೆ ಅಭಿನಂದನೆಗಳು. ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸುವ ಮತ್ತು ಪ್ರಚಾರ ಮಾಡುವ ಹಿನ್ನೆಲೆಯಲ್ಲಿ ನಾನು ಕೆಪಿಸಿಸಿ ಮುಖ್ಯ ವಕ್ತಾರರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ' ಎಂದು ಸುದರ್ಶನ್ ತಲ್ಲ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News