ದ್ವೇಷ, ಹಿಂಸಾತ್ಮಕ ಶಕ್ತಿಗಳನ್ನು ಭಾರತ ಸಹಿಸುವುದಿಲ್ಲ: ರಾಹುಲ್ ಗಾಂಧಿ
ನಾಗಮಂಗಲ, ಅ.6: ಭಾರತ ದೇಶ ಹಿಂಸೆ, ದ್ವೇಷವನ್ನು ಹರಡುವಂತಹ ಶಕ್ತಿಯನ್ನು ಸಹಿಸುವುದಿಲ್ಲ. ಪಾದಯಾತ್ರೆಯೆಂಬ ಮಹಾನದಿಯಲ್ಲಿ ಎಲ್ಲಾ ಧರ್ಮದವರು, ಮಹಿಳೆಯರು, ಪುರುಷರು ಯಾವುದೇ ಬೇಧ ಭಾವವಿಲ್ಲದೆ ಸಮಾನವಾಗಿ ಹೆಜ್ಜೆ ಹಾಕುತ್ತಿದ್ದಾರೆ. ಇಂತಹ ಭಾರತವನ್ನು ಮತ್ತೆ ಕಟ್ಟಲು ನಾನು ಕಟಿಬದ್ಧನಾಗಿ ಐಕ್ಯತಾ ಯಾತ್ರೆ ಆರಂಭಿಸಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ತಾಲೂಕಿನ ಹೊಣಕೆರೆ ಹೋಬಳಿಯ ಬ್ರಹ್ಮದೇವರಹಳ್ಳಿಯಲ್ಲಿ ರಾಜ್ಯದ 5ನೇ ದಿನದ ಭಾರತ್ ಜೋಡೋ ಪಾದಯಾತ್ರೆ ಅಂತ್ಯಗೊಂಡ ಸಂದರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ನಿಮ್ಮೆಲ್ಲರ ಸ್ಫೂರ್ತಿ ಮತ್ತು ಚೈತನ್ಯ ತನ್ನಲ್ಲಿ ಮತ್ತಷ್ಟು ಶಕ್ತಿ ತುಂಬಿದೆ ಎಂದರು.
ಈ ಯಾತ್ರೆಯಲ್ಲಿ ಆಕಸ್ಮಿಕವಾಗಿ ನಡೆದುಬರುವಾಗ ಎಡವಿ ಬಿದ್ದರೆ ಎಲ್ಲರೂ ಕೈಕೊಟ್ಟಿ ಮೇಲೆತ್ತುವುದಿದೆಯಲ್ಲ, ಇದೇ ನಿಜವಾದ ಭಾರತ. ಇಂತಹ ಪ್ರೀತಿ, ಸಂಪ್ರದಾಯ ಬಸವಣ್ಣ ಇರುವ ನಾಡಿನ ವೈಭವವಾಗಿದೆ. ನಾನು ಇಲ್ಲಿ ಬಂದಿರುವುದು ವೇದಿಕೆ ಮೇಲೆ ನಿಂತು ಬೋಧನೆ ಮಾಡುವುದಕ್ಕಲ್ಲ. ದಿನಕ್ಕೆ ಸುಮಾರು 7-8 ಗಂಟೆ ಮೌನವಾಗಿ ಪಾದಯಾತ್ರೆ ಮಾಡುತ್ತಿದ್ದೇನೆ. ನಿಮ್ಮನೋವಿನ ಕೂಗನ್ನು ಕೇಳಿಸಿಕೊಳ್ಳುತ್ತಿದ್ದೇನೆ. ಇದಕ್ಕೆಲ್ಲ ಮುಂದಿನ ದಿನಗಳಲ್ಲಿ ಪರಿಹಾರ ಸಿಗಲಿದೆ. ಮತ್ತೆ ಒಂದೇ ಭಾರತವನ್ನು ಕಟ್ಟುತ್ತೇನೆ ಎಂದರು.
ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಜತೆ ಜತೆಗೆ ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುವ ಮೂಲಕ ಬಿಜೆಪಿ ಸರಕಾರದ ಆಡಳಿತದ ನಡೆ ರೈತರ ಆತ್ಮಹತ್ಯೆಗೆ ಕಾರಣವಾಗಿದ್ದು, ಸಾವಿರಾರು ಮಹಿಳೆಯನ್ನು ವಿಧವೆಯರನ್ನಾಗಿ ಮಾಡುವಂತಿದೆ ಎಂದು ಅವರು ಆರೋಪಿಸಿದರು.
ಮೂವರು ತಾಯಂದಿರು ಮಾರ್ಗಮಧ್ಯೆ ನನ್ನನ್ನು ಭೇಟಿಯಾಗಿ ಅವರ ಗಂಡನ ಸಾವಿನ ಬಗ್ಗೆ ವಿವರಿಸಿ ಕಣ್ಣೀರು ಹಾಕಿದರು. ಮಹಿಳೆಯ ಪತಿ ರೈತನಾಗಿದ್ದು ಶೇ.24 ಬಡ್ಡಿದರದಲ್ಲಿ ಸಾಲ ಪಡೆದು ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿಸಿದರು. ಬಿಜೆಪಿ ಸರಕಾರ ಕಾರ್ಪೋರೇಟ್ ಕಂಪನಿಗಳಿಗೆ ಶೆ.5ರ ಬಡ್ಡಿದರದಲ್ಲಿ ಸಾಲ ನೀಡಿ ಪೋಷಿಸುತ್ತಿದೆ. ಇದು ರೈತರ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.
ಕಾಯ್ದೆಗಳು ಯಾವ ರೀತಿ ಇದೆ ಎಂದರೆ ರಾಜ್ಯದಲ್ಲಿ ಸಾವಿರಾರು ಜನರನ್ನು ವಿಧವೆ ಮಾಡುವ ರೀತಿಯಲ್ಲಿವೆ. ಕರ್ನಾಟಕ ರಾಜ್ಯ ಮೂಲತಃ ರೈತಾಪಿ ಹಾಗೂ ಬಡ ಜನರಿಂದ ಕೂಡಿದ್ದು ಜಿಎಸ್ಟಿ ಎಂಬುದು ಅವರೆಲ್ಲರನ್ನೂ ಬೀದಿಗೆ ತಂದಿದೆ. ನನ್ನ ದೇಶದ ಅಣ್ಣತಮ್ಮಂದಿರೆ ಬಿಜೆಪಿ ಪಕ್ಷ ನಮ್ಮ ಕಣ್ಣ ಮುಂದೆ ಎರಡು ಭಾರತವನ್ನು ಸೃಷ್ಟಿ ಮಾಡಲು ಹೊರಟಿದೆ. ಆದ್ದರಿಂದ ನಾನು ಈ ಪಾದಯಾತ್ರೆ ಮಾಡುತ್ತಿದ್ದೇನೆ.
ಪಕ್ಷದ ನಾಯಕರಾದ ಕೆ.ಸಿ.ವೇಣುಗೋಪಾಲ್, ರಣದೀಪ್‍ಸಿಂಗ್ ಸುರ್ಜೆವಾಲ, ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್,ಎನ್.ಚಲುವರಾಯಸ್ವಾಮಿ, ಹ್ಯಾರೀಸ್, ಪ್ರಿಯಾಂಕ ಖರ್ಗೆ, ಶರತ್ ಬಚ್ಚೇಗೌಡ, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
“ಭ್ರಾತೃತ್ವವನ್ನು ಒಡೆದು ದ್ವೇಷ, ಅಸೂಯೆಯನ್ನು ತುಂಬುವುದು ಕೂಡ ದೇಶದ್ರೋಹವಾಗಿದೆ. ಶಾಂತಿಯಿಂದ ಇದ್ದಂತಹ ದೇಶವೆಂಬ ಕುಟುಂಬದಲ್ಲಿ ಜಗಳ ತಂದು ವಿಷಬೀಜ ಬಿತ್ತನೆ ಮಾಡುವವರು ಕೂಡ ದೇಶದ್ರೋಹಿಗಳಿದ್ದಂತೆ. ಅವರನ್ನು ನಿಯಂತ್ರಿಸುವುದೇ ಭಾರತ ಐಕ್ಯತಾ ಯಾತ್ರೆಯ ಉದ್ದೇಶವಾಗಿದೆ.”
- ರಾಹುಲ್ ಗಾಂಧಿ.