ಅ.11ರಿಂದ ಬಳ್ಳಾರಿ ಗಣಿ ಕಾರ್ಮಿಕರ ಪುನರ್ವಸತಿಗಾಗಿ ಒತ್ತಾಯಿಸಿ ಪಾದಯಾತ್ರೆ: ಎಐಸಿಸಿಟಿಯು
ಬಳ್ಳಾರಿ, ಅ. 7: ಗಣಿ ಕಾರ್ಮಿಕರ ಪುನರ್ವಸತಿಗಾಗಿ ಒತ್ತಾಯಿಸಿ ಅ.11, 12 ಮತ್ತು 13ರಂದು ಸಂಡೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (AICCTU) ತಿಳಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳ್ಳಾರಿ ಗಣಿ ಕಾರ್ಮಿಕರ ಸಂಘದ ಪದಾಧಿಕಾರಿಗಳು, 2011ರಲ್ಲಿ ಉದ್ಯೋಗ ಕಳೆದುಕೊಂಡ ಗಣಿ ಕಾರ್ಮಿಕರ ಕುಟುಂಬಕ್ಕೆ ರೂ. 5 ಲಕ್ಷ ಪರಿಹಾರ, ಗಣಿ ಕಾರ್ಮಿಕರ ಕುಟುಂಬಕ್ಕೆ ನೀರಾವರಿ ಸೌಲಭ್ಯದೊಂದಿಗೆ 5 ಎಕರೆ ಭೂಮಿ, ಕೆಲಸ ಪುನರಾರಂಭಗೊಂಡಿರುವ "ಎ" ಮತ್ತು "ಬಿ" ವರ್ಗದ ಗಣಿಗಳಲ್ಲಿ ಕೆಲಸ ಕಳೆದುಕೊಂಡ ಕಾರ್ಮಿರಿಗೆ ಮರು ಉದ್ಯೋಗ, ನಿವೃತ್ತಿ ವಯಸ್ಸನ್ನು ತಲುಪಿರುವ ಗಣಿ ಕಾರ್ಮಿಕರಿಗೆ ಮಾಸಿಕ 5,000 ರೂ. ಪಿಂಚಣಿ, ಗಣಿ ಕಾರ್ಮಿಕರಿಗೆ ನಿವೇಶನ ಮತ್ತು ವಸತಿ ನೀಡಲು ಒತ್ತಾಯಿಸಲಾಗಿದೆ.
ಅಂಗನವಾಡಿ, ಸಮುದಾಯ ಭವನಗಳು, ಗ್ರಂಥಾಲಯ, ಕಾರ್ಮಿಕರ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ, ಗಣಿ ಕಾರ್ಮಿರಿಗೆ ಉಚಿತ ವೈದ್ಯಕೀಯ ಸೇವೆ, ಗಣಿ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವು, ಬಳ್ಳಾರಿ ಜಿಲ್ಲೆಯ ಕಬ್ಬಿಣದ ಅದಿರು ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಮಾಡುತ್ತಿರುವ ಕಾರ್ಮಿಕರ ಸ್ಥಿತಿ ಪ್ರಾರಂಭದ ದಿನಗಳಿಂದಲೂ ಶೋಚನೀಯವಾಗಿದ್ದು ಇವರಿಗೆ ಸೂಕ್ತ ರೀತಿಯಲ್ಲಿ ಬೆಂಬಲ ನೀಡಲು ಒತ್ತಾಯ ಮಾಡಲಾಗಿದೆ.
ಜುಲೈ, 2011ರಲ್ಲಿ ಸರ್ವೋಚ್ಛ ನ್ಯಾಯಾಲಯವು ಅಕ್ರಮವಾಗಿ ನಡೆಯುತ್ತಿದ್ದಂತ ಗಣಿಗಾರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ಎಲ್ಲಾ ಗಣಿಗಳನ್ನು ಮುಚ್ಚುವಂತೆ ಆದೇಶ ಮಾಡಿತ್ತು. ಇದರಿಂದಾಗಿ 25,000ಕ್ಕೂ ಹೆಚ್ಚು ಗಣಿ ಕಾರ್ಮಿಕರು ಕೆಲಸ ಕಳೆದುಕೊಂಡರು ಮತ್ತು ಇವರಿಗೆ ಯಾವುದೇ ಪರಿಹಾರ ನೀಡದೆ ಬೀದಿಪಾಲು ಮಾಡಲಾಯಿತು. ಗಣಿ ಮಾಲಕರು ಸರ್ವೋಚ್ಛ ನ್ಯಾಯಾಲಯದ ಆದೇಶವನ್ನೇ ನೆಪವನ್ನಾಗಿ ಮಾಡಿಕೊಂಡು ಕಾರ್ಮಿಕರಿಗೆ ನೀಡಬೇಕಾಗಿದ್ದ ಪರಿಹಾರ ಸೇರಿದಂತೆ ಇತರೆ ಶಾಸನಬದ್ಧ ಹಕ್ಕುಗಳನ್ನು ನಿರಾಕರಿಸಿದರು. ಇದರಿಂದಾಗಿ ಕಾರ್ಮಿಕರ ಕುಟುಂಬಗಳು ಭಾರಿ ಪ್ರಮಾಣದಲ್ಲಿ ಸಂಕಷ್ಟವನ್ನು ಎದುರಿಸಬೇಕಾಯಿತು ಮತ್ತು ಪ್ರಸ್ತುತ ಯಾವುದೇ ಜೀವನೋಪಾಯವಿಲ್ಲದೆ ಬೀದಿಪಾಲಾಗಿದ್ದಾರೆ.
ಗಣಿಭಾದಿತ ಪ್ರದೇಶಗಳ ಸಮಗ್ರ ಪರಿಸರ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರವು ‘ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ನಿಗಮ (KMERC)ವನ್ನು ಸ್ಥಾಪಿಸಿದೆ. ಈ ಯೋಜನೆಯಡಿ ಬರುವ ಸಾಮಾಜಿಕ ಮೂಲ ಸೌಕರ್ಯ ಅಭಿವೃದ್ಧಿ ಘಟಕದಲ್ಲಿ ಕಾರ್ಮಿಕರಿಗೆ ಜೀವನೋಪಾಯವನ್ನು ಒದಗಿಸಿಕೊಡುವ ಯೋಜನೆಯನ್ನು ಸಹ ಒಳಗೊಂಡಿರುತ್ತದೆ ಎಂಬುದನ್ನು ಸರ್ವೋಚ್ಛ ನ್ಯಾಯಾಲವು ಸ್ಪಷ್ಟಪಡಿಸಿದೆ. ಆದರೂ ಸದರಿ ನಿಗಮ ಇಲ್ಲಿಯ ತನಕ ಗಣಿ ಕಾರ್ಮಿಕರ ಕಲ್ಯಾಣಕ್ಕಾಗಿ ಒಂದೇ ಒಂದು ಯೋಜನೆಯನ್ನು ಜಾರಿ ಮಾಡಿರುವುದಿಲ್ಲ. ಹೀಗಾಗಿ ಬಳ್ಳಾರಿ ಗಣಿ ಕಾರ್ಮಿಕರ ಸಂಘಟನೆಯು 2011ರಲ್ಲಿ ಕೆಲಸ ಕಳೆದುಕೊಂಡ ಬಳ್ಳಾರಿ ಗಣಿ ಕಾರ್ಮಿಕರ ಪುನರ್ವಸತಿ, ಪರಿಹಾರ ಮತ್ತು ಮರು ಉದ್ಯೋಗ ಕೋರಿ ರಿಟ್ ಅರ್ಜಿ (ಸಿವಿಲ್) ಸಂ. 448/2018 ಅನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲು ಮಾಡಲಾಗಿದೆ. ಇಲ್ಲಿಯವರೆಗೆ ಸರ್ಕಾರವು ಗಣಿ ಕಂಪನಿಗಳಿಂದ ದಂಡವಾಗಿ 19,000 ಕೋಟಿ ರೂ. ವಸೂಲಿ ಮಾಡಿದೆ. ಆದರೆ, ಕಾರ್ಮಿಕರ ಕಲ್ಯಾಣಕ್ಕೆ ಯಾವುದೇ ಹಣ ಮಂಜೂರು ಮಾಡಿಲ್ಲ. ಕಾರ್ಮಿಕರ ಪುನರ್ವಸತಿಗಾಗಿ ಯೋಜನೆ ರೂಪಿಸುವಂತೆ ಕೋರಿ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಸಂಘವು ಸಂಪರ್ಕಿಸಿದೆ ಮತ್ತು KMERC ಬಳ್ಳಾರಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಪುನರ್ವಸತಿ ಯೋಜನೆ ಸಿದ್ಧಪಡಿಸುವಂತೆ ಕೋರಿದೆ. ಆದಾಗ್ಯೂ ಸಹ ಇನ್ನೂ ಮಾಡಲಾಗಿಲ್ಲ. ಆದ್ದರಿಂದ, ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘ (ಎಐಸಿಸಿಟಿಯು ನೊಂದಿಗೆ ಸಂಯೋಜಿತವಾಗಿದೆ)ವು ಅ. 11 ರಿಂದ 13 ರವರೆಗೆ ಸಂಡೂರಿನಿಂದ ಬಳ್ಳಾರಿಯವರೆಗೆ ನೊಂದ ಗಣಿ ಕಾರ್ಮಿಕರೊಂದಿಗೆ ಪಾದಯಾತ್ರೆಯನ್ನು ಆಯೋಜಿಸಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಳ್ಳಾರಿ ಗಣಿ ಕಾರ್ಮಿಕರ ಸಂಘದ ಲೊಕೇಶ್, AICCTU ಇದರ ಪದಾಧಿಕಾರಿಗಳಾದ ಪಿಪಿ ಅಪ್ಪಣ್ಣ, ಮೈತ್ರೇಯಿ ಕೃಷ್ಣನ್, AIPWA ಇದರ ನಿರ್ಮಲಾ ಎಂ., ಬಳ್ಳಾರಿ ಗಣಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಯರಿಸ್ವಾಮಿ ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ಮೈತ್ರೇಯಿ (9243190014), ಗೋಪಿ. ವೈ (9483382822) ಯರ್ರಿಸ್ವಾಮಿ (9448841919) ಅವರನ್ನು ಸಂಪರ್ಕಿಸಲು ತಿಳಿಸಲಾಗಿದೆ.