ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಶಿಕ್ಷಣಕ್ಕೆ ಆದ್ಯತೆ: ರಾಹುಲ್ ಗಾಂಧಿ ಭರವಸೆ
ಮಂಡ್ಯ/ನಾಗಮಂಗಲ, ಅ.7: ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಲಿದೆ. ಈ ಪ್ರಣಾಳಿಕೆ ಜನರ ಅಭಿಪ್ರಾಯ ಆಗಿರಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಭಾರತ್ ಜೋಡೋ ಯಾತ್ರೆಯ ವೇಳೆ ನಾಗಮಂಗಲ ತಾಲೂಕು ಅಂಚೆಬೂವನಹಳ್ಳಿ ಗ್ರಾಮದ ಬಳಿ ಆಯೋಜಿಸಿದ್ದ ಶೈಕ್ಷಣಿಕ ಸಂವಾದದಲ್ಲಿ ವಿದ್ಯಾರ್ಥಿಗಳಿಗೆ ಈ ಭರವಸೆ ನೀಡಿದ ಅವರು, ಆಯಾ ಕ್ಷೇತ್ರಗಳ ತಜ್ಞರ ಸಲಹೆ ಸೂಚನೆ ಪಡೆದು ಪ್ರಣಾಳಿಕೆ ಸಿದ್ಧಪಡಿಸಲಾಗುವುದು ಎಂದರು.
ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಸಮರ್ಪಕ ಸೌಲಭ್ಯಗಳು ಸಿಗದ ಕಾರಣ ಜನರು ಖಾಸಗಿ ಶಾಳೆಗಳತ್ತ ಮುಖ ಮಾಡಿದ್ದಾರೆ. ಇದರಿಂದ ಬಡವರಿಗೆ ಕಷ್ಟವಾಗಿದೆ. ಸರಕಾರಿ ಶಾಲೆಗಳಲ್ಲಿ ಉತ್ತಮ ಸೌಕರ್ಯ ಕಲ್ಪಿಸುವುದು ಯಾವಾಗ ಎಂದು ಶಿಕ್ಷಕಿ ಪೂರ್ಣಿಮಾ ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ಶೇ.6ರಷ್ಟು ಹಣವನ್ನು ಶಿಕ್ಷಣ, ಆರೋಗ್ಯಕ್ಕೆ ಮೀಸಲಿಡುವುದಾಗಿ ಸರಕಾಗಳು ಭರವಸೆ ನೀಡುತ್ತವೆ. ಆದರೆ, ಅನುದಾನ ನೀಡುವುದಿಲ್ಲ. ಸರಕಾರ ಮನಸ್ಸು ಮಾಡಿದರೆ ಸರಕಾರಿ ಶಾಲೆಗಳನ್ನು ಚೆನ್ನಾಗಿ ಮಾಡಬಹುದು. ಭಾರತೀಯ ವಿಜ್ಞಾನ ಸಂಸ್ಥೆ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಇದಕ್ಕೆ ಉದಾಹರಣೆ ಎಂದರು.
ರಾಜ್ಯಸಭೆ ಮಾಜಿ ಸದಸ್ಯ ಪ್ರೊ.ರಾಜೀವ್‍ಗೌಡ ಮಾತನಾಡಿ, ಹೊಸ ಶಿಕ್ಷಣ ನೀತಿಯಿಂದ ಶಿಕ್ಷಣದ ಅಡಿಪಾಯ ಕುಸಿದಿದೆ. ದೇಶದಲ್ಲಿ ಶೈಕ್ಷಣಿಕ ತುರ್ತುಪರಿಸ್ಥಿತಿ ವಾತಾವರಣ ನಿರ್ಮಾಣವಾಗಿದೆ.. ಪಠ್ಯಪುಸ್ತಕವನ್ನು ಕೇಸರೀಕರಣಗೊಳಿಸುವ ಮೂಲಕ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತರಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೋಮುವಾದವೆ ತುಂಬಿರುವ, ನಾಗಮಪುರದ ವಿವಿಯಿಂದ ಬಂದಿರುವ ನೂತನ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಪೂರ್ಣವಾಗಿ ರದ್ದು ಮಾಡಲಾಗುವುದು. ಹಾಗೂ ಸಂವಿಧಾನದ ಮೌಲ್ಯಗಳಿಗೆ ಆಧಾರಿತ ಶಿಕ್ಷಣ ನೀತಿ ರೂಪಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಹೇಳಿದರು.
ಸಂವಾದದಲ್ಲಿ ಶಿಕ್ಷಕರು, ಅಧ್ಯಾಪಕರು, ಶಿಕ್ಷಣ ತಜ್ಞರು ಹಾಗೂ ವಿವಿಧ ಸಂಘಸಂಸ್ಥೆಗಳ ಮುಖಂಟರು ಭಾಗವಹಿಸಿದ್ದರು. ಬಿ.ಕೆ.ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ, ಇತರ ಮುಖಂಡರು ಉಪಸ್ಥಿತರಿದ್ದರು.