ಮೈಸೂರು; ದಸರಾದಲ್ಲಿ ಭಾಗವಹಿಸಿದ್ದ ಆನೆಗಳಿಗೆ ಅರಮನೆಯಿಂದ ಬೀಳ್ಕೊಡುಗೆ

Update: 2022-10-07 16:31 GMT

ಮೈಸೂರು,ಅ.8: ದಸರಾ ಜಂಬೂ ಸವಾರಿ ಯಶಸ್ವಿಗೆ ಕಾರಣರಾದ ಗಜಪಡೆಯ ಕಾವಾಡಿ ಮತ್ತು ಮಾವುತರಿಗೆ ಅರಮನೆ ಆಡಳಿತ ಮಂಡಳಿ ವತಿಯಿಂದ ಗೌರವ ಧನ ನೀಡಿ ಸನ್ಮಾನಿಸಲಾಯಿತು.

ಯಶಸ್ವಿ ದಸರಾ ಮಹೋತ್ಸವದ ಬಳಿಕ ಗಜಪಡೆ ಮತ್ತು ಕಾವಾಡಿ,ಮಾವುತ  ಕುಟುಂಬ ತವರಿಗೆ ಹಿಂದಿರುಗುತ್ತಿದ್ದು, ಶುಕ್ರವಾರ  ಮಾವುತ ಮತ್ತು ಕಾವಾಡಿಗಳಿಗೆ ತಲಾ 10 ಸಾವಿರ ನೀಡಿ  ಜಿಲ್ಲಾಡಳಿತದ ವತಿಯಿಂದ ಸನ್ಮಾನ ಮಾಡಲಾಯಿತು. ಎರಡು ತಿಂಗಳಿಂದ ನಾಡಿಗೆ ಹೊಂದಿಕೊಂಡಿದ್ದ ಮಾವುತ ಕಾವಾಡಿ ಕುಟುಂಬ ಭಾರವಾದ ಮನಸ್ಸಿನಲ್ಲಿ ತವರಿಗೆ ಪಯಣ ಬೆಳೆಸಿದರು.

ಯಶಸ್ವಿ ದಸರಾ ಆಚರಣೆಗೆ ಕಾರಣರಾದ ಎಲ್ಲರಿಗೂ ಡಿಸಿಎಫ್ ಕರಿಕಾಳನ್ ಧನ್ಯವಾದ ತಿಳಿಸಿದರು.  ಶ್ರೀ ಚಾಮುಂಡಿ ತಾಯಿಯ ಆಶೀರ್ವಾದದಿಂದ ಈ ಬಾರಿ ಅದ್ದೂರಿ ದಸರಾ ನಡೆಯಿತು. ನಾನು ಆರೇಳು ವರ್ಷಗಳಿಂದ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಈ ಬಾರಿಯ ದಸರಾ ಮಹೋತ್ಸವದ ಜಂಬೂಸವಾರಿಗೆ ಭಾರಿ ಜನಸ್ತೋಮ ಸೇರಿತ್ತು. ಅದ್ದೂರಿಯಾಗಿ ದಸರಾ ಜಂಬೂಸವಾರಿ ಜರುಗಿತು. ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಧನ್ಯವಾದಗಳು ಎಂದರು.

ದಸರಾ ಗಜಪಡೆಗೆ ಇಂದು ಬೀಳ್ಕೊಟ್ಟ ಬಳಿಕ ಆನೆಗಳನ್ನ ಲಾರಿಗೆ ಏರಿಸಲು ಮುಂದಾದ ವೇಳೆ ಲಾರಿ ಏರಲು ಭೀಮ ಮತ್ತು ಶ್ರೀರಾಮ ಆನೆ ಹಿಂದೇಟು ಹಾಕಿದ ಘಟನೆ ನಡೆಯಿತು. ಕಳೆದ ಎರಡು ತಿಂಗಳಿಂದ ನಾಡಿನಲ್ಲೇ ಇದ್ದು  ಈಗ ಕಾಡಿಗೆ ಹೋಗಲು ಭೀಮ ಮತ್ತು ಶ್ರೀರಾಮ ಆನೆಗಳು ಹಿಂದೇಟು ಹಾಕಿದವು. ಈ ವೇಳೆ ಲಾರಿಗೆ ಏರಿಸಲು ಮಾವುತರು ಹರಸಾಹಸಪಟ್ಟರು.

ಅಭಿಮನ್ಯುವಿನ ಮೂಲಕ ನೂಕಿಸಿದರೂ ಶ್ರೀರಾಮ ಆನೆ ಲಾರಿ ಏರದೇ ನಿಂತಲ್ಲೇ ಮಲಗಿತು. ಶ್ರೀರಾಮ ಆನೆ ಒಡೆದು ಬಡಿದರೂ ಲಾರಿ ಏರಲಿಲ್ಲ. ಕೊನೆಗೂ ಲಾರಿ ಏರದೆ ವಾಪಸ್ಸಾಯಿತು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಒಟ್ಟು 12 ಆನೆಗಳು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಂಡು ಇಂದು ತವರಿಗೆ ಪಯಣ ಬೆಳೆಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News