ತುಮಕೂರು ಜಿಲ್ಲೆ ಪ್ರವೇಶಿಸಿದ ಭಾರತ್ ಜೋಡೊ ಯಾತ್ರೆ; JDS ಉಚ್ಚಾಟಿತ ಶಾಸಕ ಎಸ್.ಆರ್.ಶ್ರೀನಿವಾಸ್ ಭಾಗಿ
ತುಮಕೂರು: 'ಭಾರತ ಐಕ್ಯತಾ' ಯಾತ್ರೆ ತುಮಕೂರು ಜಿಲ್ಲೆಯನ್ನು ಪ್ರವೇಶಿಸಿದ್ದು, ರಾಹುಲ್ ಗಾಂಧಿ ಅವರಿಗೆ ಮಾಯಸಂದ್ರದಲ್ಲಿ ಅದ್ದೂರಿ ಸ್ವಾಗತವನ್ನು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ , ಬೆಮಲ್ ಕಾಂತರಾಜು, ರಫೀಕ್ ಅಹ್ಮದ್, ಷಡಕ್ಷರಿ ಸೇರಿದಂತೆ ಹಲವು ಮುಖಂಡರು ಸ್ವಾಗತ ಕೋರಿ ಹೆಜ್ಜೆ ಹಾಕಿದರು.
ನಿನ್ನೆ ಆದಿಚುಂಚನಗಿರಿ ಮಠದಲ್ಲಿ ವಾಸ್ತವ್ಯ ಹೂಡಿದ್ದ ರಾಹುಲ್ ಗಾಂಧಿ ಮತ್ತು ಪಾದಯಾತ್ರಿಗಳ ತಂಡ ಇಂದು ಬೆಳಿಗ್ಗೆ ಟಿ.ಬಿ.ಕ್ರಾಸ್ ನಿಂದ ಪಾದಯಾತ್ರೆಯನ್ನು ಪುನಾರಂಭಿಸಿದರು. ರಾಹುಲ್ ಗಾಂಧಿ ಪಾದಯಾತ್ರೆ ಆರಂಭಿಸುವ ಮುಂಚೆಯೇ ಸಾವಿರಾರು ಸಂಖ್ಯೆಯಲ್ಲಿ ಮುಖಂಡರು, ಯುವ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದರು. ನಿನ್ನೆ ರಾತ್ರಿಯೇ ತುರುವೇಕೆರೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ವಾಸ್ತವ್ಯ ಹೂಡಿ, ಕಾಂಗ್ರೆಸ್ ಅಧಿನಾಯಕನಿಗೆ ಭವ್ಯ ಸ್ವಾಗತ ಕೋರಿದರು.
ಜೆಡಿಎಸ್ ಶಾಸಕ ಭಾಗಿ: ಜೆಡಿಎಸ್ ಉಚ್ಚಾಟಿತ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ರಾಹುಲ್ ಗಾಂಧಿಯವರೊಂದಿಗೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದು, ಪಾದಯಾತ್ರೆಯಲ್ಲಿ ರಾಹುಲ್ ಅವರೊಂದಿಗೆ ಕೆಲಕಾಲ ಮಾತನಾಡಿದ್ದು, ಕಾಂಗ್ರೆಸ್ ಸೇರ್ಪಡೆ ಖಚಿತ ಎನ್ನಲಾಗುತ್ತಿದೆ.
ಬಾಣಸಂದ್ರದಲ್ಲಿ ವಾಸ್ತವ್ಯ: ಇಂದು ಭಾರತ್ ಯಾತ್ರೆಯಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಸೇರಿದ್ದಾರೆನ್ನಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಯಾತ್ರೆ ನಡೆಯಲಿದೆ. ಇಂದು ಮೊದಲನೇ ದಿನದ ಯಾತ್ರೆ ಮಾಯಸಂದ್ರದಿಂದ ಪ್ರಾರಂಭವಾಗಿ ಟಿಬಿ ಕ್ರಾಸ್, ಅರಳಿಕೆರೆಪಾಳ್ಯ, ತುರುವೇಕೆರೆ, ಹರಿದಾಸನಹಳ್ಳಿಯಲ್ಲಿ ಅಂತ್ಯವಾಗಲಿದೆ. ರಾಹುಲ್ ಸೇರಿದಂತೆ ಯಾತ್ರಿಗಳು ಬಾಣಸಂದ್ರದಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.