ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿ ಬಂಧನಕ್ಕೆ ಡಿವೈಎಫ್ಐ ಖಂಡನೆ
ಮಂಗಳೂರು, ಅ.8: ಮಂಗಳೂರಿನಲ್ಲಿ ರಾಜಾರೋಷವಾಗಿ ನಡೆಯುವ ಅಕ್ರಮ, ಅನ್ಯಾಯಗಳ ವಿರುದ್ಧ, ಬಿಜೆಪಿ ಸರಕಾರಗಳ ಜನವಿರೋಧಿ ನೀತಿಗಳ ವಿರುಧ್ದ ನಿರಂತರ ಮತ್ತು ನಿರ್ಭೀತವಾಗಿ ಧ್ವನಿ ಎತ್ತುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿಯವರನ್ನು ಬಜ್ಪೆ ಠಾಣಾ ಪೊಲೀಸರು ವಿನಾಃ ಕಾರಣ ಬಂಧಿಸಿರುವುದು ಖಂಡನೀಯ. ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು ಎಂದು ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ಆಗ್ರಹಿಸಿದ್ದಾರೆ.
ರಾಜ್ಯ ಬಿಜೆಪಿ ಸರಕಾರದ ದುರಾಡಳಿತದ ವಿರುದ್ಧ, ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ , ಭರತ್ ಶೆಟ್ಟಿಯವರ ಅಕ್ರಮ, ಅನ್ಯಾಯಗಳನ್ನು ಪ್ರಶ್ನಿಸಿ ಸುನೀಲ್ ಬಜಿಲಕೇರಿ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಬರಹಗಳ ಮತ್ತು ವ್ಯಂಗ್ಯ ಚಿತ್ರಗಳ ಮೂಲಕ ಪ್ರತಿರೋಧ ದಾಖಲಿಸಿ ಜನರ ಗಮನವನ್ನು ಸೆಳೆಯುತ್ತಿದ್ದರು. ಇದರಿಂದ ಮುಜುಗರಕ್ಕೊಳಗಾಗುತ್ತಿದ್ದ ಸ್ಥಳೀಯ ಶಾಸಕರು ತಮ್ಮ ಅಧಿಕಾರ ಪ್ರಯೋಗಿಸಿ ಪೊಲೀಸರ ಮೂಲಕ ಅವರನ್ನು ಹತ್ತಿಕ್ಕಲು ಯತ್ನಿಸಿದ್ದಾರೆ. ಈ ಹಿಂದೆಯೂ ಇದೇ ರೀತಿ ಸುನೀಲ್ ಬಜಿಲಕೇರಿಯನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಅದರ ನೆನಪು ಮಾಸುವ ಮುನ್ನವೇ ಮತ್ತೊಮ್ಮೆ ಈ ರೀತಿ ಬಂಧಿಸುತ್ತಿರುವುದು ತೀರಾ ಖಂಡನೀಯ ಎಂದಿದ್ದಾರೆ.
ಸುನೀಲ್ ಅವರ ಬಂಧನ ಬಿಜೆಪಿ ಸರಕಾರ ಜನಪ್ರತಿನಿಧಿಗಳ ವಿರುದ್ದ ಧ್ವನಿ ಎತ್ತಿದ್ದರೆ ಅಂತಹ ಧ್ವನಿಗಳನ್ನು ಆಧಾರರಹಿತ ದೂರಿನಡಿ ಬಂಧಿಸಿ ಜೈಲಿಗಟ್ಟುವ ಮೂಲಕ ಕುಗ್ಗಿಸುವ ಪ್ರಯತ್ನಗಳ ಭಾಗವಾಗಿದೆ. ಇಂತಹ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಆಧಾರರಹಿತ ದೂರಿನಡಿಯಲ್ಲಿ ಬಂಧಿಸಿದ ಸುನೀಲ್ ಬಜಿಲಕೇರಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.