ವಿಧಾನಸಭೆ ಚುನಾವಣೆ | ಸಿಎಂ ಅಭ್ಯರ್ಥಿ ಘೋಷಣೆ, JDS ಜೊತೆ ಮೈತ್ರಿ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?

Update: 2022-10-08 13:03 GMT

ತುಮಕೂರು: 'ಮುಂಬರುವ 2024ರ ಚುನಾವಣೆಯನ್ನು ಮುಂದಿಟ್ಟುಕೊಂಡು ಭಾರತ್ ಜೋಡೊ ಯಾತ್ರೆ ನಡೆಸುತ್ತಿಲ್ಲ. ದೇಶದಲ್ಲಿ ಬಿಜೆಪಿಯ ನಡೆಯನ್ನು ವಿರೋಧಿಸಿ ಈ ಯಾತ್ರೆ ನಡೆಸಲಾಗುತ್ತಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. 

ಭಾರತ ಜೋಡೊ ಯಾತ್ರೆ ಶನಿವಾರ ತುಮಕೂರು ತಲುಪಿದ್ದು, ಯಾತ್ರೆಯ ನಡುವೆ ತುರುವೇಕೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

''ಚುನಾವಣೆಗೆ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಪದ್ಧತಿ  ನಮ್ಮ ಪಕ್ಷದಲ್ಲಿ ಇಲ್ಲ. ಪಕ್ಷದಲ್ಲಿ ತನ್ನದೇ ಆದ ಆಂತರಿಕ ವ್ಯವಸ್ಥೆ ಇದೆ. ಆ ವ್ಯವಸ್ಥೆ ಮೂಲಕ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಕರ್ನಾಟಕದಲ್ಲಿ ಪಕ್ಷ ಚುನಾವಣೆಯಲ್ಲಿ ಗೆದ್ದ ಬಳಿಕ  ಸ್ಥಳೀಯ ನಾಯಕರು ಚರ್ಚಿಸಿ ಸಿಎಂ ಅಭ್ಯರ್ಥಿ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ'' ಎಂದು ಹೇಳಿದರು.  

''ಕರ್ನಾಟಕದಲ್ಲಿ ಜೆಡಿಎಸ್ ಜತೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ರಾಜ್ಯ ನಾಯಕರು ಚರ್ಚಿಸಬೇಕು. ಕರ್ನಾಟಕದಲ್ಲಿ ನನ್ನ ಪ್ರಕಾರ ಜೆಡಿಎಸ್ ಜತೆ ಒಪ್ಪಂದದ ಅಗತ್ಯತೇ ಬೀಳುವುದಿಲ್ಲ. ಯಾರ ಸಹಾಯವೂ ಇಲ್ಲದೆ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ'' ಎಂದು ಭವಿಷ್ಯ ನುಡಿದರು.

''ಕಾಂಗ್ರೆಸ್ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ಹಾಗಾಗಿ ಪತ್ರಕರ್ತರಿಗೆ ಪ್ರಶ್ನೆ ಕೇಳಲು ಅವಕಾಶ ನೀಡಲಾಗಿದೆ. ಆದರೆ ಕಳೆದ 8 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದುವರೆಗೂ ಒಂದೇ ಒಂದು ಸುದ್ದಿಗೋಷ್ಠಿ ಮಾಡಿಲ್ಲ'' ಎಂದು ದೂರಿದರು. 

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News