ಶೋಭಾ‌, ನಳಿನ್ ಕುಮಾರ್, ಅನಂತ್ ಕುಮಾರ್ ಹೆಗಡೆ, ಈಶ್ವರಪ್ಪ ಸಾಮೂಹಿಕ ರಾಜೀನಾಮೆ ನೀಡಬೇಕು: ಬೇಳೂರು ಗೋಪಾಲಕೃಷ್ಣ

Update: 2022-10-09 10:24 GMT

ಶಿವಮೊಗ್ಗ: ಪರೇಶ್ ಮೇಸ್ತಾ ಕೊಲೆಯಾಗಿದ್ದಲ್ಲ ಎಂದು ಸಿಬಿಐ ರಿಪೋರ್ಟ್ ಕೊಟ್ಟಿದೆ. ಆ ಕೇಸ್ ನಲ್ಲಿ ಶೋಭಾ ಕರಂದ್ಲಾಜೆ, ನಳೀನ್ ಕುಮಾರ್ ಕಟೀಲ್, ಅನಂತ್ ಕುಮಾರ್ ಹೆಗಡೆ, ಈಶ್ವರಪ್ಪ ಸೇರಿ ಈಡೀ ರಾಜ್ಯಕ್ಕೆ ಬೆಂಕಿ ಹಚ್ಚಿದ್ದರು. ಸಿಬಿಐ ರಿಪೋರ್ಟ್‌ಗೆ ಇವರೆಲ್ಲಾ ಏನು ಉತ್ತರ ಕೊಡುತ್ತಾರೆ? ಸಾಮೂಹಿಕ ರಾಜೀನಾಮೆ ಕೊಡಬೇಕು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರೇಶ್ ಮೆಸ್ತಾ ಕೇಸ್ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಘಟನೆಯನ್ನು ಬಿಜೆಪಿ ದೊಡ್ಡ ಪ್ರಚಾರ ಮಾಡಿತ್ತು. ಆರೇಳು ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲುವಂತೆ ಮಾಡಿದ್ದರು. ಆದರೆ ಇದೀಗ ಪರೇಶ್ ಮೇಸ್ತಾ ಕೊಲೆಯಾಗಿದ್ದಲ್ಲ ಎಂದು ಸಿಬಿಐ ರಿಪೋರ್ಟ್ ಕೊಟ್ಟಿದೆ. ಸಿಬಿಐ ರಿಪೋರ್ಟ್ ಗೆ ಇವರೆಲ್ಲಾ ಎನು ಉತ್ತರ ಕೊಡುತ್ತಾರೆ  ಎಂದು ಪ್ರಶ್ನಿಸಿದರು.

ಇವರ ಸರ್ಕಾರದ ಅವಧಿಯಲ್ಲಿ ಹರ್ಷ, ಪ್ರವೀಣ್ ನೆಟ್ಟಾರು ಹತ್ಯೆಯಾಗಿದೆ. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಕೊಟ್ಟರು. ಶಿವಮೊಗ್ಗದಲ್ಲಿ ಹರ್ಷನ ಕುಟುಂಬಕ್ಕೆ ಯಾಕೇ ಉದ್ಯೋಗ ಕೊಡಲಿಲ್ಲ? ದಕ್ಷಿಣ ಕನ್ನಡದಲ್ಲಿ ಪೂಜಾರಿ ಸಮುದಾಯದ ವೋಟ್ ಬ್ಯಾಂಕ್ ಬೇಕು ಅದಕ್ಕೆ ಕೊಟ್ಟಿದ್ದಾರೆ. ಇವರದ್ದೇ ಸರ್ಕಾರ ಇದ್ದರೂ ಕೊಲೆ ತಡಿಯಲು ಇವರಿಗೆ ಆಗಲಿಲ್ಲ. ಪಿಎಫ್ಐ ಕಾರ್ಯಕರ್ತರು, ಶಂಕಿತ ಉಗ್ರರನ್ನು ಬಂಧಿಸುವ ಕೆಲಸ ಎಸ್ಪಿ ಮಾಡಿದ್ದರು. ದಕ್ಷ ಎಸ್ಪಿಯನ್ನು ಟ್ರಾನ್ಸಫರ್ ಮಾಡಿ ಬೇರೆ ಎಸ್ಪಿ ತಂದು ಹಾಕಿದ್ದಾರೆ. ಎಸ್ಪಿ ಅವರ ಕ್ರಮದಿಂದ ಶಾಂತಿಯತ್ತ ಶಿವಮೊಗ್ಗ ಸಾಗುತ್ತಿತ್ತು. ಶಿವಮೊಗ್ಗ ಮತ್ತೆ ಹೊತ್ತಿ ಉರಿಯಬೇಕು ಹಾಗಾಗಿ ಎಸ್‌ಪಿ ವರ್ಗಾವಣೆ ಮಾಡಿ ಹೊಸಬರನ್ನು ತಂದಿದ್ದಾರೆ. ರಾಜ್ಯದ ಜನರಿಗೆ ಬಿಜೆಪಿ ನಾಯಕರು ಉತ್ತರ ಕೊಡಬೇಕು. ರಾಜಕೀಯಕೋಸ್ಕರ ರಾಜ್ಯದ ಜನರನ್ನು ಮರಳು ಮಾಡುವುದು ಬೇಡ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News