ಪಡುಬಿದ್ರೆ: ನವ ವಿವಾಹಿತೆಯ ಮೃತದೇಹ ಪಾಳು ಬಾವಿಯಲ್ಲಿ ಪತ್ತೆ

Update: 2022-10-09 17:28 GMT
ರಕ್ಷಿತಾ

ಪಡುಬಿದ್ರೆ: ಪ್ರೀತಿಸಿ ಮದುವೆಯಾದ ನವವಿವಾಹಿತೆಯ ಮೃತದೇಹ ಪಾಳು ಬಾವಿಯಲ್ಲಿ ಪತ್ತೆಯಾದ ಘಟನೆ ಎಲ್ಲೂರಿನಲ್ಲಿ ನಡೆದಿದೆ. ಈ ಬಗ್ಗೆ ಆಕೆಯ ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಎಲ್ಲೂರು ನಿವಾಸಿ ರಕ್ಷಿತಾ ಪೂಜಾರಿ (24) ಅವರು ಪಾಂಗಾಳ ನಿವಾಸಿ ಸಂಜಯ್ ಆಚಾರಿ ಎಂಬಾತನನ್ನು ವಿವಾಹವಾಗಿದ್ದರು.  ಈಕೆ ಗಂಡ ಹಾಗೂ ತನ್ನ ತಂದೆಯೊಂದಿಗೆ ಎಲ್ಲೂರಿನ ಮನೆಯಲ್ಲಿ ವಾಸವಿದ್ದರು, ಕಾಪುವಿನ ಪ್ಯಾನ್ಸಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಈಕೆ ಅ.3ರಂದು ಅಂಗಡಿಯಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡು ನಂತರ ನಾಪತ್ತೆಯಾಗಿದ್ದರು.

ಇದಕ್ಕೂ ಮೊದಲು ರಕ್ಷಿತಾ ಪೂಜಾರಿ ಉಡುಪಿಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು,  ಅದೇ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂಜಯ್ ಆಚಾರಿಯನ್ನು ಪ್ರೀತಿಸಿ, ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದರು. ಬಳಿಕ ರಕ್ಷಿತಾಳ ತಾಯಿ ಮೃತಪಟ್ಟ ಬಳಿಕ ತಂದೆ ಹಾಗೂ ಗಂಡನೊಂದಿಗೆ ಮನೆಯಲ್ಲಿದ್ದರು. ಅ. 3ರಂದು ನಾಪತ್ತೆಯಾಗಿದ್ದ ರಕ್ಷಿತಾಳ ಮೃತದೇಹ ಶನಿವಾರ ಮನೆ ಪಕ್ಕದ ಹಾಡಿಯೊಂದರ ಪಾಳು ಬಾವಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಸಂಜಯ್ ಆಚಾರಿ ಮೇಲೆ ಸಂಶಯವಿದೆ ಎಂದು ಆಕೆಯ ಕುಟುಂಬಿಕರು ಪಡುಬಿದ್ರೆ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನಾಪತ್ತೆಯಾದರೂ ದೂರು ನೀಡಿಲ್ಲ: ರಕ್ಷಿತಾ ಅಕ್ಟೋಬರ್ 3ರಂದು ನಾಪತ್ತೆಯಾಗಿದ್ದರೂ ಇದುವರೆಗೂ ನಾಪತ್ತೆ ದೂರು ದಾಖಲಾಗಿರಲಿಲ್ಲ. ಆದರೆ ಶನಿವಾರ ಪಾಳುಬಿದ್ದ ಕೆಸರು ನೀರು ತುಂಬಿರುವ ದೊಡ್ಡ ಬಾವಿಯಲ್ಲಿ ರಕ್ಷಿತಾಳ ಮೃತದೇಹ ಪತ್ತೆಯಾಗಿದೆ.  ಪಾಳು ಬಾವಿಗೆ ಬಿದ್ದಿರುವ ಅಥವಾ ಅವಳನ್ನು ಇನ್ಯಾರೋ ದೂಡಿಹಾಕಿರುವ ಕಾರಣದಿಂದ ಆಕೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆ ಇದೆ. ರಕ್ಷಿತಾಳ ಮರಣದ ಬಗ್ಗೆ ಅವಳ ಗಂಡ ಸಂಜಯ್ ಆಚಾರಿಯ ಮೇಲೆ ಸಂಶಯವಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News