ವಸತಿ ಶಾಲೆಗಳಲ್ಲಿ ಆರೆಸ್ಸೆಸ್ ತಾಲೀಮು ಶಿಬಿರಗಳನ್ನು ನಿಲ್ಲಿಸಲು ಎಸ್‍ಎಫ್‍ಐ ಆಗ್ರಹ

Update: 2022-10-09 17:44 GMT

ಬೆಂಗಳೂರು: ರಾಜ್ಯ ಸರಕಾರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘಕ್ಕೆ (ಆರೆಸ್ಸೆಸ್) ತಾಲೀಮು ಶಿಬಿರ ನಡೆಸಲು ಅನುಮತಿ ನೀಡಿರುವುದನ್ನು ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‍ಎಫ್‍ಐ)ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ.

‘ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕೂತಾಂಡ್ಲಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅ.9 ರಿಂದ ಅ.17ರವರೆಗೆ ಒಟ್ಟು 9 ದಿನಗಳ ಕಾಲ ಸಂಘ ಪರಿವಾರದ ತಾಲೀಮು ಶಿಬಿರ ನಡೆಸಲು ಅನುಮತಿ ನೀಡಿದೆ. ವಸತಿ ಶಾಲೆಗಳನ್ನು ಹಿಂದುತ್ವ ಕಾರ್ಯಗಳಿಗೆ ಬಿಟ್ಟು ಕೊಡಲು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಮ್ಮ ಅಧಿಕಾರ ಪ್ರಭಾವ ಬಳಸಿ, ಶಿಫಾರಸ್ಸು ಮಾಡಿರುವುದು ಅಪಾಯಕಾರಿ ನಡೆಯಾಗಿದೆ’ ಎಂದು ಟೀಕಿಸಿದೆ.

‘ರಾಜ್ಯ ಬಿಜೆಪಿ ಸರಕಾರ ಮತ್ತು ಆರೆಸ್ಸೆಸ್ ಶಾಲೆಗಳಲ್ಲಿ ಹಿಜಾಬ್ ವಿವಾದವನ್ನು ಸೃಷ್ಟಿಸಿ ಹಾಗೂ ಪಠ್ಯ ಪರಿಷ್ಕರಣೆಯಲ್ಲಿ ಕೋಮುವಾದಿ ವಿಚಾರಗಳನ್ನು ಸೇರ್ಪಡೆ ಮಾಡಿ ಎಳೆಯ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿದೆ. ಅದರ ಮುಂದುವರೆದ ಭಾಗವಾಗಿ ಇದೀಗ ಶಿಕ್ಷಣ ಸಂಸ್ಥೆಗಳನ್ನೇ ಕೋಮುವಾದಿ ಸಂಘಟನೆಯ ತರಬೇತಿ ಶಿಬಿರಗಳಿಗೆ ಬಳಸುತ್ತಿದೆ. ಇಂತಹ ಕೋಮುವಾದಿ ನೀತಿಗಳನ್ನು ಕೂಡಲೇ ಬಿಜೆಪಿ ಸರಕಾರ ನಿಲ್ಲಿಸಬೇಕು. ಇಲ್ಲದಿದ್ದರೆ ಶಿಬಿರ ನಡೆಯುವ ವಸತಿ ಶಾಲೆ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

‘ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಸಂಘ ಸಂಸ್ಥೆಗಳ ಪ್ರವೇಶ, ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದೆಂದು ಶಿಕ್ಷಣ ಇಲಾಖೆಯ ಆದೇಶವಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸಂವಿಧಾನದ ಆಶಯದಂತೆ ಧರ್ಮ ನಿರಪೇಕ್ಷತೆಯನ್ನು ಕಾಪಾಡಬೇಕು. ಆದರೆ ರಾಜ್ಯ ಬಿಜೆಪಿ ಸರಕಾರ ತನ್ನ ಕೋಮುವಾದಿ, ಮತೀಯವಾದಿ ಹಿಡನ್ ಅಜೆಂಡಾ ಜಾರಿ ಮಾಡುತ್ತಿದೆ. ಆ ಮೂಲಕ ಕೋಮು ಗಲಭೆ, ಜನಾಂಗೀಯ  ಹಿಂಸೆಗಳಲ್ಲಿ ತೊಡಗಿರುವ ಆರೆಸ್ಸೆಸ್‍ನಂತಹ ಕೋಮು ವಿಷಕಾರಿ ಸಂಘಟನೆಯ ಶಸ್ತ್ರಾಸ್ತ್ರ ತಾಲೀಮು, ದೈಹಿಕ ಕಸರತ್ತು, ಹಾಗೂ ಮತೀಯವಾದ ತುಂಬುವ ಒಂದು ರೀತಿಯ ಸಮಾಜ ಘಾತುಕ ಕೃತ್ಯಗಳಿಗೆ ಪ್ರೇರಣೆ ನೀಡುವ ಶಿಬಿರಕ್ಕೆ ಸರಕಾರಿ ವಸತಿ ಶಾಲೆಯನ್ನು ಬಳಸಿಕೊಳ್ಳುತ್ತಿರುವುದು ಸಂವಿಧಾನ ಬಾಹಿರ ಮತ್ತು ಕಾನೂನು ರೀತ್ಯಾ ಅಪರಾಧ ಕೃತ್ಯವಾಗಿದೆ'
-ಅಮರೇಶ ಕಡಗದ, ಎಸ್‍ಎಫ್‍ಐ ರಾಜಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News