ಇಂದು ದೇಶದಲ್ಲಿ ಕಲಾವಿದನಲ್ಲೂ ಧರ್ಮ ಹುಡುಕುತ್ತಾರೆ: ದಿನೇಶ್ ಗುಂಡೂರಾವ್

Update: 2022-10-11 08:27 GMT

ಬೆಂಗಳೂರು: ''ದ್ವೇಷ ಭಾಷಣ ದೇಶದ ವಾತಾವರಣ ಹದಗೆಡಿಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ವಿಪರ್ಯಾಸವೆಂದರೆ ದ್ವೇಷ ಭಾಷಣಕ್ಕೆ ಕಡಿವಾಣ ಹಾಕಬೇಕಿರುವ ಕೇಂದ್ರ ಸರ್ಕಾರವೇ ಈ ಭಾಷಣಗಳ ಪ್ರಾಯೋಜಕತ್ವ ವಹಿಸಿಕೊಂಡಿದೆ. ಸರ್ಕಾರದ ಭಾಗವಾಗಿರುವವರೇ ದೇಶವನ್ನು ದ್ವೇಷ ಭಾಷಣದಿಂದ ಇಬ್ಭಾಗ ಮಾಡುತ್ತಿದ್ದಾರೆ. ಹೀಗಿರುವಾಗ ದ್ವೇಷ ತಡೆಯುವರ್ಯಾರು?'' ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಆತಂಕ ವ್ಯಕ್ತಪಡಿಸಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ''ದೇಶದಲ್ಲಿ ದ್ವೇಷದ ಜನಕರೆ ಪ್ರಧಾನಿ ಮೋದಿ. ಮೋದಿ ಸರ್ಕಾರ ಜನರಲ್ಲಿ‌ ಧರ್ಮದ ವ್ಯಸನ ತುಂಬಿದ್ದೇ ಈ ದ್ವೇಷದ ವಾತಾವರಣಕ್ಕೆ ಕಾರಣ. ಮೋದಿ ಸರ್ಕಾರ ಬಹುತ್ವದ ಆಧಾರದ ಮೇಲೆ ನಿರ್ದಿಷ್ಟ ಸಮುದಾಯವೊಂದನ್ನು ಗುರಿ ಮಾಡಿ ದ್ವೇಷ ಹರಡೋ ಕ್ರಿಮಿಗಳಿಗೆ ನೀರೆರೆಯುತ್ತಿದೆ. ಅದರ ಪ್ರತಿಫಲ ಇಂದು ದೇಶ ದ್ವೇಷದ ಗೂಡಾಗಿದೆ'' ಎಂದು ಹೇಳಿದ್ದಾರೆ. 

''ಇಂದು ದೇಶದಲ್ಲಿ ಕಲಾವಿದನಲ್ಲಿ ಧರ್ಮ ಹುಡುಕುತ್ತಾರೆ, ಕ್ರೀಡಾಳುವಿನಲ್ಲಿ ಧರ್ಮ ಹುಡುಕುತ್ತಾರೆ, ಯಾವುದೇ ಕ್ಷೇತ್ರದ ಸಾಧಕನಲ್ಲಿ ಧರ್ಮ ಹುಡುಕುವ ಪರಿಪಾಠ ಬೆಳೆಯುತ್ತಿದೆ‌. ಈ ಧರ್ಮದ ರೋಗ ದೇಶದಲ್ಲಿ ಅಪಾಯಕಾರಿಯಾಗಿ ಹರಡಿದೆ'' ಎಂದು ಹೇಳಿದ್ದಾರೆ.ಧರ್ಮದ ನಶೆ ಏರಿದಾಗ ದ್ವೇಷ ಕಾರದೆ, ಪ್ರೀತಿ ಹಂಚಲು ಸಾಧ್ಯವೇ? ಜನರಲ್ಲಿ ಈ ಧರ್ಮಾಂಧತೆಯ ಅಮಲು ತುಂಬಿದ್ದು ಯಾರು?'' ಎಂದು ಪ್ರಶ್ನೆ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News